ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡು: ಹೊಸ ರಾಜ್ಯದಲ್ಲಿ ಶೋಷಿತರ ಜಯದ ದನಿ!

2ನೇ ಲೋಕಸಭಾ ಚುನಾವಣೆ: ಮುಂದುವರಿದ ಕಮ್ಯೂನಿಸ್ಟ್ ಜೈತ್ರಯಾತ್ರೆ
Last Updated 17 ಮಾರ್ಚ್ 2014, 10:31 IST
ಅಕ್ಷರ ಗಾತ್ರ

ಕಾಸರಗೋಡು: ಭಾಷಾವಾರು ಪ್ರಾಂತ್ಯ ಪುನರ್ವಿಂಗಡಣೆಯ ಪರಿಣಾಮ 1956ರ ನ.1ರಂದು ಕೇರಳ ರಾಜ್ಯ ಅಸ್ತಿತ್ವಕ್ಕೆ ಬಂತು. ಕಾಸರಗೋಡು ರಾಜಕೀಯವಾಗಿ ಕನ್ನಡ ನಾಡಿನ ಸಂಬಂಧವನ್ನು ಕಳಚಿಕೊಂಡ ಕರಾಳ ಸಂದರ್ಭವೂ ಅದಾಗಿತ್ತು. ಕೇರಳ ರಾಜ್ಯ ಉದಯಿಸಿದ ತರುವಾಯ ಮೂರೇ ತಿಂಗಳಲ್ಲಿ 2ನೇ ಲೋಕಸಭಾ ಚುನಾವಣೆ ನಡೆಯಿತು. ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದ ಕಾಸರಗೋಡಿನ ಕರ್ನಾಟಕ ವಿಲೀನೀಕರಣದ ಹೋರಾಟ ಈ ಚುನಾವಣೆಯಲ್ಲಿ ಕಾವು ಪಡೆದರೂ ಕನ್ನಡಿಗರು ವಿಫಲರಾದರು.

ಕನ್ನಡಿಗರ ಪರವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದ ಬಿ.ಅಚ್ಯುತ ಶೆಣೈ 5,145 ಮತಗಳ ಅಂತರದಿಂದ ಸೋತರು. ಈ ಸೋಲಿನಿಂದ ಈಗಲೂ ಕನ್ನಡಿಗರು ಮುಕ್ತರಾಗಿಲ್ಲ ಎನ್ನುವುದು ಬೇಸರದ ವಿಷಯ ಎನ್ನುತ್ತಾರೆ ಹಿರಿಯರು.

ಕೆಂಪು ಸೂರ್ಯ ಉದಯಿಸಿದನೇಕೆ?:
ಬಡ ರೈತರು ಮತ್ತು ಕಾರ್ಮಿಕರ ಮೇಲೆ ಜಮೀನ್ದಾರರ ಶೋಷಣೆ–ಕಿರುಕುಳದ ಮುಂದೆ ‘ಕರ್ನಾಟಕ ವಿಲೀನೀಕರಣ’ದ ಕೂಗನ್ನು ‘ಹಸಿವೆ’ ಮತ್ತು ‘ದಬ್ಬಾಳಿಕೆ’ ನುಂಗಿ ಹಾಕಿತು. ಇದರಿಂದ ಸಹಜವಾಗಿ ‘ಕಮ್ಯೂನಿಸ್ಟ್’ ಗೆದ್ದಿತು. ‘ಕಾಂಗ್ರೆಸ್‌’ ಎಂಬ ಅಂದಿನ ಆದರ್ಶ ಪಕ್ಷವೇ ಈ ಚುನಾವಣೆಯಲ್ಲಿ ಕಣಕ್ಕಿಳಿಯಲಿಲ್ಲ!

ಪ್ರಚಾರದ ವೈಖರಿ ಹೇಗಿತ್ತು?:
ಅಂದಿನ ಚುನಾವಣೆಯೆಂದರೆ ಮನಮುಟ್ಟುವ ಭಾಷಣ. ಎ.ಕೆ.ಗೋಪಾಲನ್ ಸತತ ನಾಲ್ಕೈದು ತಾಸುಗಳ ವರೆಗೆ ಸಾವಧಾನವಾಗಿ ಭಾಷಣ ಮಾಡುತ್ತಿದ್ದರು. ಬಡಜನರನ್ನು ಸೆಳೆಯುವ ಚುಂಬಕ ಶಕ್ತಿ ಅವರಲ್ಲಿತ್ತು.

ಜಾಥಾ ಎರಡನೇ ಬಗೆಯ ಪ್ರಚಾರ ಮಾಧ್ಯಮ ಆಗಿತ್ತು. ಎ.ಕೆ.ಜಿ.ಯನ್ನು ಕಂಡರಾಗದ ಇಲ್ಲಿನ ಜಮೀನ್ದಾರರು ತಮ್ಮ ಮನೆ ಬಳಿ ಆತ ಬಂದರೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಸುತ್ತಿದ್ದರು! ಇದನ್ನು ಕೇಳಿ ತಿಳಿದ ಎ.ಕೆ.ಜಿ. ಆ ಜಮೀನ್ದಾರರ ಮನೆ ಮುಂದೆ ಜಾಥಾ ಏರ್ಪಡಿಸಿ ಭಾಷಣ ಮಾಡುವ ಎದೆಗಾರಿಕೆ ಪ್ರಕಟಿಸಿದರು. ಈ ಮೂಲಕ ಜಮೀನ್ದಾರರ ದಬ್ಬಾಳಿಕೆಯನ್ನು ಬಗ್ಗುಬಡಿದು ಬಡಜನರಲ್ಲಿ ಧೈರ್ಯ–ಆತ್ಮವಿಶ್ವಾಸ ಮೂಡಿಸಿದರು. ಈಗಲೂ ಇಲ್ಲಿನ ಬಡವರ ಮನೆಯ ಗೋಡೆಯ ಮೇಲೆ ಎ.ಕೆ.ಜಿ. ಭಾವಚಿತ್ರ ಇದ್ದು ಆರಾಧ್ಯರಾಗಿ ಉಳಿದಿದ್ದಾರೆ ಎನ್ನುತ್ತಾರೆ ನಿವೃತ್ತ ಇತಿಹಾಸ ಶಿಕ್ಷಕ ನಾರಾಯಣ ಗಟ್ಟಿ ಕುಂಬಳೆ.

ತಲಶ್ಶೇರಿಯಿಂದ ತಲಪಾಡಿ ಹೊಳೆ ಗಡಿಯಾಗಿದ್ದ ಅಂದಿನ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಶಕ್ತಿಯೇ ಇರಲಿಲ್ಲ. ಜನಸಂಘ ಇದ್ದರೂ ರಾಜಕೀಯಕ್ಕೆ ಕಾಲಿಟ್ಟಿರಲಿಲ್ಲ. ಆದರೂ ಕಣ್ಣೂರು ನಿವಾಸಿಯಾಗಿದ್ದ ಎ.ಕೆ.ಜಿ.(ಗೋಪಾಲನ್ ಆಯಿಲ್ಲತ್ ಕುಟ್ಯೇರಿ) ಕಾಸರಗೋಡಿನಲ್ಲಿ ಹಗಲಿರುಳು ಅಲ್ಲಲ್ಲಿ ಸಭೆ ನಡೆಸಿ, ರೈತಾಪಿ ಜನರನ್ನು ಒಗ್ಗೂಡಿಸಿ ‘ಉಳುವವನೇ ಹೊಲದೊಡೆಯ’ ಎಂಬ ಬೀಜ ಮಂತ್ರವನ್ನು ಪಸರಿಸಿದರು. ಇದು ಎ.ಕೆ.ಜಿ. ಅವರನ್ನು ಚಿರಂಜೀವಿ ನಾಯಕನನ್ನಾಗಿ ಮಾಡಿತು ಎಂದು ‘ಗಟ್ಟಿ ಮೇಷ್ಟ್ರು’ ವಿಶ್ಲೇಷಿಸುತ್ತಾರೆ.

‘ಪೆಟ್ಟು’ ಮಾಡುವ ‘ಪ್ರಹಸನ’:
ಎ.ಕೆ.ಜಿ. ಬಂದಲ್ಲಿ ಜನರು ಜಾತ್ರೆಯಂತೆ ಸೇರುತ್ತಿದ್ದರು. ಇಲ್ಲದಿದ್ದರೆ ಇಬ್ಬರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು. ಈ ಸುದ್ದಿ ತಿಳಿದು ಜನರು ಓಡೋಡಿ ಬರುತ್ತಿದ್ದರು. ಜನ ಸೇರಿದ ಬಳಿಕ ಹೊಡೆದಾಡಿದವರು ಹೇಗೋ ತಪ್ಪಿಸಿಕೊಳ್ಳುತ್ತಿದ್ದರು. ಈ ‘ಪ್ರಹಸನ’ ನಿಂತು ಹೋಗಿ ಚುನಾವಣೆಯ ಪ್ರಚಾರ ನಡೆಯುತ್ತಿತ್ತು ಎನ್ನುತ್ತಾರೆ 97ರ ಹರೆಯದ ಹಿರಿಯ ಕಮ್ಯೂನಿಸ್ಟ್ ನೇತಾರ ಸೇರಾಜೆ ಮದನ ಮಾಸ್ಟರ್. ಎ.ಕೆ.ಜಿ. ಭೂಗತರಾದಾಗ, ಜೈಲಿನಿಂದ ಬಿಡುಗಡೆಯಾದಾಗ ಮದನ ಮಾಸ್ಟರ್ ಮನೆಯಲ್ಲಿ ತಂಗುತ್ತಿದ್ದರಂತೆ.

‘2ನೇ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎ.ಕೆ.ಜಿ. ಪೆರ್ಲಕ್ಕೆ ಕಾರಿನಲ್ಲಿ ಬಂದಿದ್ದಾಗ ಅಲ್ಲಿನ ನಿಲ್ದಾಣದ ಆಲದ ಮರ ತುಂಬಾ ನೂರಾರು ಕೆಂಬಾವುಟಗಳು ಪಟಪಟನೇ ಹಾರುತ್ತಿತ್ತು! ಕುತೂಹಲಗೊಂಡ ಎ.ಕೆ.ಜಿ. ಇದರ ರೂವಾರಿ ಯಾರೆಂದು ವಿಚಾರಿಸಿದರು. ಸ್ಥಳೀಯ ಶಾಲೆಯಲ್ಲಿ ಡ್ರಿಲ್‌ ಮಾಸ್ಟರ್ ಆಗಿದ್ದ ನಾನು ಈ ಬಗೆಯ ಪ್ರಚಾರದಲ್ಲಿ ತೊಡಗಿದ್ದೆ. ಈ ಶ್ರಮವನ್ನು ಮೆಚ್ಚಿದ ಎ.ಕೆ.ಜಿ. ಶಾಲೆಯ ಮೈದಾನದಲ್ಲಿ ನನ್ನನ್ನು ಮುಖತಃ ಕಂಡು ಅಭಿನಂದಿಸಿದರು’ ಎಂದು ಮದನ ಮಾಸ್ಟರ್ ಈಗಲೂ ಸ್ಮರಿಸುತ್ತಾರೆ.

‘ಈ ಚುನಾವಣೆಯ ಸಂದರ್ಭದಲ್ಲಿ ಕಮ್ಯೂನಿಸ್ಟರು ಧ್ವಜ ಹಾಕಲು, ಹೊಂಡ ತೋಡಲು ಜಮೀನ್ದಾರರ ಹಿಡಿತದಲ್ಲಿದ್ದ ಕಾಂಗ್ರೆಸ್ಸಿಗರು ಬಿಡುತ್ತಿರಲಿಲ್ಲ. ಪಟೇಲರೂ ಕೂಡಾ ಕಾಂಗ್ರೆಸ್ಸಿಗರ ಪರ ಇದ್ದು, ಕಮ್ಯೂನಿಸ್ಟರನ್ನು ಬೆದರಿಸುತ್ತಿದ್ದರು. ಧೈರ್ಯವೇ ನಮ್ಮ ಅಸ್ತ್ರವಾಗಿತ್ತು. ಚುನಾವಣಾ ಸಭೆ ನಡೆಯುವಾಗ ಪೊಲೀಸರು ಬಂದರೆ ಜನರು ದೂರ ನಿಲ್ಲುತ್ತಿದ್ದರು. ಇಂದಿನಂತೆ ಹಣ ನೀಡಿ ಜನರನ್ನು ಸಭೆಗೆ ತರುವ ಕ್ರಮ ಇರಲಿಲ್ಲ. ಹಿಂದೆ ಸಭೆಗಾಗಿಯೇ ಜನರು ದೂರದ ಊರಿಂದ ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಕಮ್ಯೂನಿಸ್ಟರ ಜನಸಾಗರವನ್ನು ಕಂಡು ವಿರೋಧಿ ಪಕ್ಷಗಳು ‘ಕೂದಲು ತಿನ್ನುವವರು’, ‘ಚೀನಾ ಬೆಂಬಲಿಗರು’ ಎಂದು ಮೂದಲಿಸುತ್ತಿದ್ದರು’ ಎಂದು ಅಂದಿನ ಪ್ರಚಾರದ ವೈಖರಿಯನ್ನು ಮದನ ಮಾಸ್ಟರ್ ನೆನಪಿಸುತ್ತಾರೆ.

ಜನಪ್ರಿಯತೆಯೇ ಗೆಲುವಿನ ದಾಖಲೆ ಬರೆಯಿತು:
ಎ.ಕೆ.ಜಿ.ಯವರ ಜನಪ್ರಿಯತೆಯೇ ಅವರ ಗೆಲುವಿನ  ದಾಖಲೆ ಬರೆಯಿತು. ಸಂಸದನಾಗಿ 2ನೇ ಬಾರಿ ಆಯ್ಕೆಯಾಗಿ ಲೋಕಸಭೆಗೆ ಹೋದ ಎ.ಕೆ.ಜಿ. ಮತ್ತು ಕಮ್ಯೂನಿಸ್ಟ್ ಚಳವಳಿಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸಹಕರಿಸಲಿಲ್ಲ.
ಆಗ ಭ್ರಷ್ಟಾಚಾರ, ವಿರೋಧ ಪಕ್ಷವನ್ನು ದೂಷಿಸುವ ಸಂಸ್ಕೃತಿ ಇರಲಿಲ್ಲ. ಗೆದ್ದರೆ ಪಕ್ಷದ ನೆರವಿನಿಂದ ಭರವಸೆ ಈಡೇರಿಸುವ ಕಾರ್ಯತಂತ್ರ ರೂಪಿಸುತ್ತಿದ್ದರು. ಹಣ ಮಾಡುವುದು, ಸ್ವಹಿತಾಸಕ್ತಿಯೇ ಮುಖ್ಯವಾಗಿರಲಿಲ್ಲ.

1957ರ ಫೆ.28ರಂದು ನಡೆದ 2ನೇ ಲೋಕಸಭಾ ಚುನಾವಣೆಯಲ್ಲಿ 4,49,300 ಮತದಾರರಿದ್ದರು.ಇವರಲ್ಲಿ 2,52,533 ಮಂದಿ ಮತದಾನ ಮಾಡಿದರು. ಶೇ. 56.21ರಷ್ಟು ನಡೆದ ಮತದಾನದಲ್ಲಿ ಸಿಪಿಐ ನಾಯಕ ಎ.ಕೆ.ಗೋಪಾಲನ್  1,28,839(ಶೇ.51.02) ಮತ ಗಳಿಸಿ ಜಯಭೇರಿ ಬಾರಿಸಿದರು. ಪ್ರತಿಸ್ಪರ್ಧಿಯಾಗಿ ಕಣದಲ್ಲಿದ್ದ ಸ್ವತಂತ್ರ ಅಭ್ಯರ್ಥಿ ಅಚ್ಯುತ ಶೆಣೈ ಬಿ. ಅವರಿಗೆ 1,23,694(ಶೇ.48.98) ಮತಗಳು ಲಭಿಸಿತ್ತು.

ರೈತ ಹೋರಾಟ, ಶೋಷಿತರ ಹೋರಾಟ ಕಾಸರಗೋಡಿನ ಭಾಷಾ ಹೋರಾಟವನ್ನು ಶೈಶವದಲ್ಲಿಯೇ ಮಣ್ಣುಮುಕ್ಕಿಸಿತು. ಬದಲಾದ ರಾಜ್ಯದಲ್ಲಿ ಶೋಷಿತರು ಕಲಿಸಿದ ಪಾಠದಿಂದ ಮೇಲ್ವರ್ಗದವರ ವಿಲೀನೀಕರಣದ ಕನಸು ಕನಸಾಗಿಯೇ ಉಳಿಯಿತು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT