ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸಿಗಾಗಿ ಸುದ್ದಿ ; ಎಚ್ಚರಿಕೆ ವಹಿಸಲು ಮಾಧ್ಯಮಗಳಿಗೆ ಪ್ರಧಾನಿ ಸಲಹೆ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಧ್ಯಮದ ಮೇಲೆ ಯಾವುದೇ ಹೊರಗಿನ ನಿಯಂತ್ರಣವನ್ನು ಅಲ್ಲಗಳೆದಿರುವ ಪ್ರಧಾನಿ ಮನಮೋಹನ್ ಸಿಂಗ್, `ಕಾಸಿಗಾಗಿ ಸುದ್ದಿ~ಯಂಥ `ಅನಿಷ್ಟ~ಗಳ ಬಗೆಗೆ ಸ್ವತಃ ಮಾಧ್ಯಮವೇ ಎಚ್ಚರಿಕೆ ವಹಿಸಬೇಕು ಹಾಗೂ ರೋಚಕ ಸುದ್ದಿಗಳನ್ನು ಆದಷ್ಟೂ ಕಡಿಮೆ ಮಾಡಬೇಕು ಎಂದು ಸೋಮವಾರ ಹೇಳಿದ್ದಾರೆ.

`ಸ್ವಾತಂತ್ರ್ಯಾನಂತರದಲ್ಲಿ ನಮ್ಮ ಮಾಧ್ಯಮವು ಮುಕ್ತವಾಗಿದೆ ಹಾಗೂ ಜೀವಂತವಾಗಿದೆ ಎನ್ನುವುದು ಸಂತೋಷದ ವಿಷಯ. ಮಾಧ್ಯಮದ ಪಾತ್ರ ಹಾಗೂ ಅದರ ಕಾರ್ಯವೈಖರಿ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿರುವುದೂ ಒಳ್ಳೆಯ ಬೆಳವಣಿಗೆ~ ಎಂದು ಹೇಳಿದ್ದಾರೆ.

`ಮಾಧ್ಯಮದ ಮೇಲೆ ಹೊರಗಿನ ನಿಯಂತ್ರಣವನ್ನು ವಿಧಿಸಬಾರದು ಎಂಬ ಸಾಮಾನ್ಯ ಒಮ್ಮತಾಭಿಪ್ರಾಯ ಇದೆ ಎನ್ನುವುದು ನನ್ನ ಭಾವನೆ. ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತ ವರದಿಗೆ ಯಾವ ರೀತಿಯಲ್ಲಿ ಉತ್ತೇಜನ ನೀಡಬೇಕು ಹಾಗೂ ರೋಚಕ ಸುದ್ದಿಗಳಿಗೆ ಹೇಗೆ ಕಡಿವಾಣ ಹಾಕಬೇಕು ಎನ್ನುವುದನ್ನು ಸ್ವತಃ ಮಾಧ್ಯಮ ಪ್ರತಿನಿಧಿಗಳೇ ಯೋಚಿಸಬೇಕು~ ಎಂದು ಪ್ರಧಾನಿ ಹೇಳಿದ್ದಾರೆ.

ಹಿಂದಿ ದಿನಪತ್ರಿಕೆ `ದೈನಿಕ್ ಜಾಗರಣ್~ ಸಂಸ್ಥಾಪಕ ದಿ. ಪೂರ್ಣಚಂದ್ರ ಗುಪ್ತ ಅವರ ಸ್ಮರಣಾರ್ಥ ಅಂಚೆ ಚೀಟಿ ಹಾಗೂ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಹೊಸ ತಂತ್ರಜ್ಞಾನದ ಫಲವಾಗಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಗಣನೀಯವಾಗಿ ಹೆಚ್ಚಿರುವುದು ದೇಶದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದರು.

`ಕಾಸಿಗಾಗಿ ಸುದ್ದಿಯಂಥ ಅನಿಷ್ಟಗಳನ್ನು ತೊಡೆದುಹಾಕಲು ಭಾರತೀಯ ಮಾಧ್ಯಮವು ಸ್ವತಃ ಕ್ರಮಕ್ಕೆ ಮುಂದಾಗುತ್ತದೆ ಎಂಬ ಆತ್ಮವಿಶ್ವಾಸ ನನಗಿದೆ. ದೇಶಕ್ಕೆ ನಿಜವಾಗಿಯೂ ಮಹತ್ವ ಎನಿಸಿಕೊಂಡ ವಿಷಯಗಳ ವರದಿಯನ್ನು ಹೆಚ್ಚಿಸುವುದು ಹೇಗೆ ಎನ್ನುವ ಕುರಿತೂ ನೀವು ಗಮನ ಹರಿಸಬೇಕಾಗುತ್ತದೆ~ ಎಂದೂ ಸಿಂಗ್ ನುಡಿದರು.

ತಮ್ಮ ಜೀವನದುದ್ದಕ್ಕೂ ಸ್ವತಂತ್ರ ಹಾಗೂ ನಿರ್ಭೀತ ವರದಿಗಾರಿಕೆಗೆ ಉತ್ತೇಜನ ನೀಡಿದ ಗುಪ್ತ ಅವರನ್ನು ಶ್ಲಾಘಿಸಿದ ಪ್ರಧಾನಿ, `ಯಾವುದೇ ಪ್ರಜಾಪ್ರಭುತ್ವಕ್ಕೆ ಇಂಥ ಪತ್ರಿಕೋದ್ಯಮವು ತೀರ ಅಗತ್ಯವಾದುದು~ ಎಂದು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ, ಪತ್ರಿಕೋದ್ಯಮಿ, ಉದ್ಯಮಿ... ಹೀಗೆ ಗುಪ್ತ ಬಹುಮುಖ ಪ್ರತಿಭೆಯಾಗಿದ್ದರು ಎಂದು ಸಿಂಗ್ ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವರಾದ ಜೈರಾಂ ರಮೇಶ್, ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧ್ಯಾ, ಉತ್ತರಾಖಂಡ ಮುಖ್ಯಮಂತ್ರಿ ಬಿ.ಸಿ.ಖಂಡೂರಿ, ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT