ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸಿಗಾಗಿ ಸುದ್ದಿ– 368 ನೋಟಿಸ್‌

ಚುನಾವಣಾ ಚುಟುಕು
Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಣದಲ್ಲಿರುವ ವಿವಿಧ ಪಕ್ಷಗಳ ಅಭ್ಯರ್ಥಿ­ಗಳಿಗೆ ಕಾಸಿಗಾಗಿ ಸುದ್ದಿ ಪ್ರಕಟಿಸಿದ್ದಕ್ಕೆ ಚುನಾವಣಾ ಆಯೋಗವು 368ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಿದೆ.

ಇದಲ್ಲದೆ ರೂ. 216 ಕೋಟಿ ಹಾಗೂ ಒಂದು ಕೋಟಿ ಲೀಟರಿಗೂ ಅಧಿಕ ಅಕ್ರಮ ಮದ್ಯವನ್ನು ವಶಪಡಿಸಿ­ಕೊಳ್ಳ­ಲಾಗಿದೆ ಎಂದು ಚುನಾವಣೆ ಆಯೋಗದ ಮಹಾನಿರ್ದೇಶಕ ಅಕ್ಷಯ್‌ ರಾವುತ್‌ ತಿಳಿಸಿದರು.

368 ನೋಟಿಸ್‌ಗಳ ಪೈಕಿ ಇದುವರೆಗೆ 198 ಪ್ರಕರಣಗಳು ಕಾಸಿಗಾಗಿ ಪ್ರಕಟಿಸಿದ ಸುದ್ದಿಗಳು ಎಂಬುದು ಖಚಿತವಾಗಿದೆ ಎಂದರು. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಎಂದರೆ 66 ನೋಟಿಸ್‌ಗಳನ್ನು ಜಾರಿ ಮಾಡಲಾಗಿದ್ದು, ವಿಚಾರಣೆಯ ನಂತರ ನಾಲ್ಕು ಪ್ರಕರಣಗಳು ಖಚಿತವಾಗಿವೆ ಎಂದು ಹೇಳಿ­ದರು. ದೆಹಲಿಯಲ್ಲಿ 9, ಉತ್ತರಪ್ರದೇಶದಲ್ಲಿ 60, ಹರಿಯಾಣ­­ದಲ್ಲಿ 41 ಕಾಸಿಗಾಗಿ ಸುದ್ದಿ ಪ್ರಕರಣಗಳು ಖಚಿತವಾಗಿವೆ.

ದೇಶದ ವಿವಿಧೆಡೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ರೂ. 216 ಕೋಟಿ ವಶಪಡಿಸಿಕೊಳ್ಳಲಾಗಿದ್ದು, ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ರೂ. 92 ಕೋಟಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಾವುತ್‌ ತಿಳಿಸಿದರು. ಮಹಾರಾಷ್ಟ್ರದಲ್ಲಿ ರೂ. 24 ಕೋಟಿ ವಶಪಡಿಸಿಕೊಳ್ಳಲಾಗಿದ್ದು, ಅಕ್ರಮ ಹಣ ಸಾಗಣೆಯಲ್ಲಿ ಎರಡನೇ ಸ್ಥಾನದಲ್ಲಿ ಇದೆ ಎಂದರು.

ಮೋದಿ– ನಟ ವಿಜಯ್‌ ಭೇಟಿ
ಕೊಯಮತ್ತೂರು  (ಐಎಎನ್‌ಎಸ್‌):
ಇತ್ತೀಚಿಗೆ  ರಜನೀಕಾಂತ್‌ ಅವರನ್ನು ಭೇಟಿ­­­ಯಾ­ಗಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮಿಳಿನ ಮತ್ತೊಬ್ಬ ನಟ ವಿಜಯ್‌ ಅವರನ್ನು ಭೇಟಿ ಮಾಡಿದ್ದಾರೆ.

ಮೋದಿ ಅವರು ಬುಧವಾರದಿಂದ ತಮಿಳುನಾಡು ಪ್ರವಾಸದಲ್ಲಿದ್ದಾರೆ. ಕೃಷ್ಣಗಿರಿ ಮತ್ತು ಸೇಲಂನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿರುವ ಅವರು ಈ ಮಧ್ಯೆ ಚೆನ್ನೈನ ಹೋಟೆಲ್‌­ವೊಂದರಲ್ಲಿ ಸುಮಾರು 15 ನಿಮಿಷಗಳ  ಕಾಲ ವಿಜಯ್‌ ಅವರೊಂದಿಗೆ ಮಾತುಕತೆ ನಡೆಸಿದರು. ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದು ವಿಜಯ್‌ ಸ್ಪಷ್ಟಪಡಿಸಿದ್ದಾರೆ.

ಇರೋಮ್‌ಗೆ ಮತ ಹಕ್ಕು ನಕಾರ
ಇಂಫಾಲ (ಐಎಎನ್‌ಎಸ್‌):
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಕಳೆದ 13 ವರ್ಷಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ ಚಾನು ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಗುರು­ವಾರ ಮತದಾನ ಮಾಡಲು ಅಧಿಕಾರಿಗಳು  ಅವಕಾಶ ನೀಡಲಿಲ್ಲ.

‘ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್‌ 62(5) ಪ್ರಕಾರ, ಜೈಲಿನಲ್ಲಿರುವ ವ್ಯಕ್ತಿ ಮತ ಚಲಾಯಿಸು­ವಂತಿಲ್ಲ’ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಣದಲ್ಲಿರುವ ತಾರೆಯರ ಸಿನಿಮಾ ನಿಷೇಧ
ಲಖನೌ (ಐಎಎನ್‌ಎಸ್‌):
ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಸಿನಿಮಾ ತಾರೆಯರ ಚಲನಚಿತ್ರಗಳನ್ನು ದೂರದರ್ಶನ ರಾಷ್ಟ್ರೀಯ ಚಾನೆಲ್‌ನಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ.

ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಮಾದರಿ ಚುನಾವಣಾ ನೀತಿ ಸಂಹಿತೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಅಭಿನಯಿಸುವ ತಾರೆಯರಿಂದ ಮತದಾರರು ಪ್ರಭಾವಕ್ಕೊಳಗಾಗುವ ಸಾಧ್ಯತೆ ಇದೆ ಎಂಬ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೇಮಾ ಮಾಲಿನಿ, ಜಯಪ್ರದಾ, ನಗ್ಮಾ, ಸ್ಮೃತಿ ಇರಾನಿ, ಜಾವೇದ್‌ ಜಾಫ್ರಿ, ರಾಜ್‌ ಬಬ್ಬರ್‌ ಮುಂತಾದವರ ಸಿನಿಮಾಗಳನ್ನು ನಿಷೇಧಿಸಲಾಗಿದೆ.

ಅಂತಿಮ ಹಂತದ ಅಧಿಸೂಚನೆ ಪ್ರಕಟ
ನವದೆಹಲಿ (ಪಿಟಿಐ):
ಮೇ 12ರಂದು ನಡೆಯಲಿರುವ ಒಂಬ­ತ್ತನೇ ಹಾಗೂ ಅಂತಿಮ ಸುತ್ತಿನ ಮತದಾನಕ್ಕೆ ಚುನಾವಣಾ ಆಯೋಗವು ಗುರುವಾರ ಅಧಿಸೂಚನೆ ಹೊರಡಿಸಿದೆ.

ಈ ಹಂತದಲ್ಲಿ, ಉತ್ತರ ಪ್ರದೇಶದ 18, ಪಶ್ಚಿಮ ಬಂಗಾಳದ 17 ಹಾಗೂ ಬಿಹಾರದ 6 ಕ್ಷೇತ್ರಗಳು ಸೇರಿ  41 ಕ್ಷೇತ್ರಗಳಲ್ಲಿ  ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಸಲು ಏಪ್ರಿಲ್‌ 24 ಕೊನೆಯ ದಿನ­ವಾಗಿದ್ದು, 25ರಂದು ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಏಪ್ರಿಲ್‌ 28 ಅಂತಿಮ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT