ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್ಸ್ ಇಲೆವೆನ್‌ಗೆ ರೋಚಕ ಜಯ

ಸುನಿಲ್ ನಾರಾಯಣ್ ಹ್ಯಾಟ್ರಿಕ್ ಸಾಧನೆ ವ್ಯರ್ಥ
Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೊಹಾಲಿ (ಪಿಟಿಐ): ಮನ್‌ಪ್ರೀತ್ ಗೋನಿ ಅವರ ಆಲ್‌ರೌಂಡ್ ಆಟ ಮತ್ತು ಕೊನೆಯ ಓವರ್‌ಗಳಲ್ಲಿ ಬೌಲರ್‌ಗಳು ನಡೆಸಿದ ಬಿಗುವಾದ ದಾಳಿಯ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದವರು ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ನಾಲ್ಕು ರನ್‌ಗಳ ರೋಚಕ ಗೆಲುವು ಪಡೆದರು.

ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 157 ರನ್ ಪೇರಿಸಿತು. ಗೌತಮ್ ಗಂಭೀರ್ ಬಳಗ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 153 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ರೈಡರ್ಸ್ ಸೋಲು ಅನುಭವಿಸಿದ ಕಾರಣ ಗಂಭೀರ್ ತೋರಿದ ಸೊಗಸಾದ ಬ್ಯಾಟಿಂಗ್ (60, 39 ಎಸೆತ, 9 ಬೌಂ) ಮತ್ತು ಸುನಿಲ್ ನಾರಾಯಣ್ (33ಕ್ಕೆ 3) ಅವರ ಹ್ಯಾಟ್ರಿಕ್ ಸಾಧನೆಗೆ ಬೆಲೆಯಿಲ್ಲದಾಯಿತು.

ಸವಾಲಿನ ಗುರಿ ಬೆನ್ನಟ್ಟಿದ ರೈಡರ್ಸ್ ಎರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು. ಗಂಭೀರ್ ಮತ್ತು ಎಯೊನ್ ಮಾರ್ಗನ್ (47, 38 ಎಸೆತ, 6 ಬೌಂ) ಮೂರನೇ ವಿಕೆಟ್‌ಗೆ 105 ರನ್ ಸೇರಿಸಿದರು. ಇದರಿಂದ ತಂಡದ ಗೆಲುವಿಗೆ ಕೊನೆಯ ಏಳು ಓವರ್‌ಗಳಲ್ಲಿ ಎಂಟು ವಿಕೆಟ್ ಕೈಯಲ್ಲಿರುವಂತೆ 52 ರನ್‌ಗಳು ಬೇಕಿದ್ದವು.

ಆದರೆ ಗಂಭೀರ್ ಮತ್ತು ಮಾರ್ಗನ್ ಸತತ ಎರಡು ಓವರ್‌ಗಳಲ್ಲಿ ಔಟಾದ ಕಾರಣ ರೈಡರ್ಸ್ ಒತ್ತಡಕ್ಕೆ ಒಳಗಾಯಿತು. ಆ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು. ಕೊನೆಯ ಓವರ್‌ನಲ್ಲಿ ಗೆಲುವಿಗೆ ಅಗತ್ಯವಿದ್ದ 11 ರನ್ ಗಳಿಸಲು ವಿಫಲವಾಯಿತು. ಗೋನಿ ಅಬ್ಬರ: ಮೊದಲು ಬ್ಯಾಟ್ ಮಾಡಿದ ಆ್ಯಡಮ್ ಗಿಲ್‌ಕ್ರಿಸ್ಟ್ ಬಳಗ ಜಾಕ್ ಕಾಲಿಸ್ (24ಕ್ಕೆ 3) ಮತ್ತು ಸುನಿಲ್ ನಾರಾಯಣ್ ಅವರ ಸಮರ್ಥ ಬೌಲಿಂಗ್ ದಾಳಿಗೆ ಸಿಲುಕಿ ಆರಂಭದಲ್ಲಿ ಪರದಾಟ ನಡೆಸಿತ್ತು. ಆದರೆ ಮನ್‌ಪ್ರೀತ್ ಗೋನಿ (42, 18 ಎಸೆತ, 4ಬೌಂ, 3 ಸಿಕ್ಸರ್) ಕೊನೆಯಲ್ಲಿ ಅಬ್ಬರಿಸಿದ ಕಾರಣ ಸವಾಲಿನ ಮೊತ್ತ ಪೇರಿಸಿತು. ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ ಗೋನಿ `ಪಂದ್ಯಶ್ರೇಷ್ಠ' ಗೌರವ ಪಡೆದರು.

ಹ್ಯಾಟ್ರಿಕ್: ವೆಸ್ಟ್‌ಇಂಡೀಸ್‌ನ ಸ್ಪಿನ್ನರ್ ಸುನಿಲ್ ನಾರಾಯಣ್ ಐಪಿಎಲ್‌ನ ಆರನೇ ಆವೃತ್ತಿಯ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಗೌರವ ತಮ್ಮದಾಗಿಸಿಕೊಂಡರು. ಅವರು ಸತತ ಮೂರು ಎಸೆತಗಳಲ್ಲಿ ಡೇವಿಡ್ ಹಸ್ಸಿ, ಅಜರ್ ಮಹಮೂದ್ ಮತ್ತು ಗುರುಕೀರತ್ ಸಿಂಗ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಐಪಿಎಲ್ ಟೂರ್ನಿಗಳಲ್ಲಿ ದಾಖಲಾದ 10ನೇ ಹ್ಯಾಟ್ರಿಕ್ ಸಾಧನೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT