ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್‌ಫಿಷರ್ ರೆಕ್ಕೆಗೆ ಕತ್ತರಿ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ:  `ಆರ್ಥಿಕ ಪುನಶ್ಚೇತನ ಯೋಜನೆ~ ರೂಪಿಸಲು ವಿಫಲವಾಗಿರುವ ವಿಜಯ ಮಲ್ಯ ಒಡೆತನದ ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆಯ `ಹಾರಾಟ ಪರವಾನಗಿ~ಯನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಶನಿವಾರ ಅಮಾನತುಗೊಳಿಸಿದೆ.

  ಕೆಲವು ತಿಂಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿರುವ ಕಿಂಗ್‌ಫಿಷರ್, ವಿಮಾನ ಸಂಚಾರವನ್ನು ಅ.1ರಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಅದಕ್ಕಾಗಿ ವೈಮಾನಿಕ ಪರವಾನಗಿಯನ್ನು ಏಕೆ ಅಮಾನತು ಮಾಡಬಾರದೆಂದು ವಿವರಣೆ ಕೇಳಿ `ಕಿಂಗ್‌ಫಿಷರ್~ಗೆ ಡಿಜಿಸಿಎ ನೋಟಿಸ್ ನೀಡಿತ್ತು. ಆದರೆ  ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಪರವಾನಗಿ ಸ್ಥಗಿತದಿಂದ ಟಿಕೆಟ್ ಮಾರಾಟ ಬಂದ್ ಆಗಲಿವೆ.
`ನೋಟಿಸ್‌ಗೆ ವಿವರಣೆ ನೀಡಲು ಶನಿವಾರದವರೆಗೆ ಗಡುವು ನೀಡಲಾಗಿತ್ತು. ಕಿಂಗ್‌ಫಿಷರ್ ಸಂಸ್ಥೆ ಇನ್ನಷ್ಟು ಸಮಯ ಕೊಡಬೇಕು ಹಾಗೂ ಖುದ್ದು ವಿವರಣೆಗೆ ಅವಕಾಶ ನೀಡಬೇಕೆಂದು ಕೇಳಿತ್ತು. ಆದರೆ, ಸಂಸ್ಥೆಯನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ~ ಎಂದು ಡಿಜಿಸಿಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಚಿವರ ವಿವರಣೆ: `ಸುರಕ್ಷತಾ ಕಾರಣಗಳಿಗಾಗಿ ಪರವಾನಗಿ ಅಮಾನತು ಮಾಡಲಾಗಿದೆ. ಈ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಸಂಸ್ಥೆಯ ವಿಮಾನಗಳನ್ನು ಅವರ ಎಂಜಿನಿಯರ್‌ಗಳು ಸುಸ್ಥಿಯಲ್ಲಿಡುವ ಕೆಲಸ ಮಾಡುತ್ತಿಲ್ಲ. ಅವರೆಲ್ಲ ಮುಷ್ಕರದಲ್ಲಿದ್ದಾರೆ. ಕಿಂಗ್‌ಫಿಷರ್ ತನ್ನ ಹಣಕಾಸು ಪರಿಸ್ಥಿತಿಯನ್ನು ಉತ್ತಮಪಡಿಸಿಕೊಂಡಿಲ್ಲ. ಅಲ್ಲದೆ, ಉದ್ಯೋಗಿಗಳು ಮುಷ್ಕರ ನಿಲ್ಲಿಸುವ ಲಕ್ಷಣ ಕಾಣುತ್ತಿಲ್ಲ. ಇವೆಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಪರವಾನಗಿ ಅಮಾನತು ಮಾಡಲಾಗಿದೆ~ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್‌ಸಿಂಗ್ ಹೇಳಿದರು.

ಇದರಿಂದಾಗಿ ಸಂಸ್ಥೆ ಅ. 28 ರಿಂದ ಆರಂಭವಾಗಿ ಮಾ.31ಕ್ಕೆ ಮುಗಿಯಲಿರುವ `ಚಳಿಗಾಲದ ಹಾರಾಟ~ವನ್ನು ನಡೆಸುವಂತಿಲ್ಲ. ಈ ಸಂಸ್ಥೆಯ ಚಳಿಗಾಲದ ಹಾರಾಟ ವೇಳಾಪಟ್ಟಿಯನ್ನು ಬೇರೆ ಸಂಸ್ಥೆಗೆ ವಹಿಸುವ ಸಂಭವವಿದೆ ಎಂದು ತಿಳಿಸಿದರು.

ಕಿಂಗ್‌ಫಿಷರ್ ಪುನಃ ಯಾವಾಗ ಬೇಕಾದರೂ `ರಂಗ ಪ್ರವೇಶ~ ಮಾಡಬಹುದು. ಆದರೆ, ಅವರ ಹಣಕಾಸು ಸ್ಥಿತಿ ಉತ್ತಮಪಡಿಸಿಕೊಳ್ಳಬೇಕು. ಉದ್ಯೊಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪುನಶ್ಚೇತನ ಯೋಜನೆಯೊಂದಿಗೆ ಬಂದರೆ ಡಿಜಿಸಿಎ ಮುಂದಿನ ಕ್ರಮ ಕುರಿತು ತೀರ್ಮಾನ ಮಾಡಲಿದ್ದಾರೆ ಎಂದು ಸಚಿವರು ವಿವರಿಸಿದರು.

250 ಎಂಜಿನಿಯರ್‌ಗಳು ಸೆ. 30ರಿಂದ ಮುಷ್ಕರ ಆರಂಭಿಸಿದ ಬಳಿಕ ಕಿಂಗ್‌ಫಿಷರ್ ಲಾಕೌಟ್ (ಬೀಗಮುದ್ರೆ) ಘೋಷಣೆ ಮಾಡಿ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು. ನಂತರ ಪೈಲಟ್‌ಗಳು ಮುಷ್ಕರದಲ್ಲಿ ಸೇರಿಕೊಂಡರು. ವೇತನ ನಿಡದೇ ಇರುವುದರಿಂದ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲು ಬಾಕಿ ವೇತನ ಪಾವತಿಸಿ, ಮುಂದೆ ಸಕಾಲಕ್ಕೆ ವೇತನ ಪಾವತಿಸುವ ಭರವಸೆ ನೀಡಿದರೆ ಮುಷ್ಕರ ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ಆದರೆ ಸಂಸ್ಥೆ ಮಾರ್ಚ್ ನಂತರ ಯಾರಿಗೂ ಸಂಬಳ ನೀಡಿಲ್ಲ.

ಲಾಕೌಟ್ ಅ. 23ರವರೆಗೆ ಮುಂದುವರಿಯಲಿದೆ. ನ.6 ರಿಂದ ವಿಮಾನಗಳ ಹಾರಾಟ ಪುನರಾರಂಭವಾಗುವ ನಿರೀಕ್ಷೆ ಇದೆ ಎಂದು ಸಂಸ್ಥೆ ಶುಕ್ರವಾರ ಹೇಳಿತ್ತು. ನೌಕರರು ಮತ್ತು ಆಡಳಿತ ಮಂಡಳಿ ನಡುವಿನ ಮಾತುಕತೆ ಮುರಿದು ಬಿದ್ದಿರುವುದರಿಂದ ಬಿಕ್ಕಟ್ಟು ಮುಂದುವರಿದಿದೆ. ಆಡಳಿತ ಮಂಡಳಿ ಒಂದು ತಿಂಗಳ ಸಂಬಳ ಪಾವತಿಸುವುದಾಗಿ ಹೇಳಿದೆ. ಆದರೆ, ಇದಕ್ಕೆ ನೌಕರರು ಅಸಮ್ಮತಿ ಸೂಚಿಸಿದ್ದಾರೆ. ದೀಪಾವಳಿಯೊಳಗೆ ನಾಲ್ಕು ತಿಂಗಳ ಸಂಬಳ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಆದರೆ ಅ.17ರಂದು ನೌಕರರ ಜತೆ ನಡೆದ ಮಾತುಕತೆ ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿದೆ. ಮುಂದಿನ ವಾರ ನಡೆಯಲಿರುವ ಚರ್ಚೆಯಲ್ಲಿ ಸಮಸ್ಯೆ ಪರಿಹಾರ ಆಗಬಹುದು ಎಂದು ಸಂಸ್ಥೆ ಉಪಾಧ್ಯಕ್ಷ ಪ್ರಕಾಶ್ ಮಿರಪುರೆ ಹೇಳಿದ್ದಾರೆ.

ಬ್ಯಾಂಕ್‌ಗಳ ಆತಂಕ
ಮುಂಬೈ: ಕಿಂಗ್‌ಫಿಷರ್ ಏರ್‌ಲೈನ್ಸ್ ಅಮಾನತು ಆದೇಶದಿಂದ ಕಳವಳಕ್ಕೆ ಒಳಗಾಗಿರುವ ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸಂಸ್ಥೆಗಳು `ಸಂಸ್ಥೆಗೆ ನೀಡಿದ ಸಾಲ ವಸೂಲಿಗೆ ಅದರ ಆಸ್ತಿಮಾರಾಟ ಮಾಡುವುದೇ ಕೊನೆಯ ಮಾರ್ಗ~ ಎಂದಿವೆ.  ಕಿಂಗ್‌ಫಿಷರ್‌ಗೆ ಸಾಲ ನೀಡಿದ ಬ್ಯಾಂಕ್‌ಗಳಲ್ಲಿ ಎಸ್‌ಬಿಐ ಪ್ರಮುಖವಾಗಿದ್ದು ಸುಮಾರು  ರೂ.1,500 ಕೋಟಿಯಷ್ಟು ಸಾಲ ಇನ್ನೂ ಬಾಕಿ ಇದೆ.

`ಅಮಾನತು ತಾತ್ಕಾಲಿಕ~
ಮುಂಬೈ: ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೊರಡಿಸಿರುವ ಆದೇಶಕ್ಕೆ ಪ್ರತಿಕ್ರಿಯಿಸಿರುವ ಕಿಂಗ್‌ಫಿಷರ್, ಡಿಜಿಸಿಎಯು ಏರ್‌ಲೈನ್ಸ್‌ಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸಿಲ್ಲ, ತಾತ್ಕಾಲಿಕವಾಗಿ ಅಮಾನತಿನಲ್ಲಿ ಇರಿಸಿದೆಯಷ್ಟೆ ಎಂದು ಸ್ಪಷ್ಟ ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT