ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಚ್ಚು ಹುಚ್ಚು

Last Updated 5 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಸುಗಮ ಬದುಕಿಗೆ ನೆರವಾಗುವ ಮಾನಸಿಕ ಕ್ರಿಯೆ ಎಂದರೆ ಕಲಿಕೆ. ಹೊಂದಾಣಿಕೆಯ ವಿಧಿಗಳೆಲ್ಲವು ಕಲಿಕೆಯ ಮೂಲಕವೇ ಸಾಧ್ಯವಾಗಿರುವುದು. ಇದರಲ್ಲಿ ಪ್ರಾಣಿಗಳು, ಮನುಷ್ಯರು ಎನ್ನುವ ವ್ಯತ್ಯಾಸವಿರುವುದಿಲ್ಲ. ಆದರೆ, ಮನುಷ್ಯರ ಕಲಿಕೆಯ ರೀತಿ ಮತ್ತು ಉದ್ದೇಶಗಳು ವಿಭಿನ್ನವಾಗಿರುತ್ತವೆ. ನಮ್ಮ ತಿಳಿವಳಿಕೆಗಳು ಕಲಿಕೆಯಿಂದಲೇ ಉಂಟಾಗಬೇಕು. ಈ ದೃಷ್ಟಿಯಿಂದಲೇ ವ್ಯಕ್ತಿ ವರ್ತನೆಯ ಆಳವನ್ನು ಗುರುತಿಸುತ್ತಾರೆ ಮನೋವಿಜ್ಞಾನಿಗಳು. ತೃಪ್ತಿ ಸುಲಭವಾಗಿ ಸಿಗುವುದರತ್ತವೆ ಕಲಿಕೆಯ ಮನಸ್ಸು ಉಂಟಾಗುತ್ತದೆ. ವ್ಯಕ್ತಿಯ ಮನಸ್ಸು ಮತ್ತು ದೇಹಕ್ಕೆ ಹಿತಕೊಡುವ ಕಲಿಕೆಗಳೇ ಬಹು ಆಕರ್ಷಣೀಯ. ಆಧುನಿಕ ಮಾಧ್ಯಮಗಳಿಗಂತೂ ಇದೇ ಸೂತ್ರ. ಅದರಲ್ಲಿಯೂ ತನ್ನತನದ ಬಗ್ಗೆ, ಇತರರ ಲೈಂಗಿಕ ವರ್ತನೆಗಳ ಬಗ್ಗೆ ತಿಳಿದುಕೊಳ್ಳುವುದೇ ಅತಿ ತೃಪ್ತಿದಾಯಕ. ಇಂತಹ ತೃಪ್ತಿಯನ್ನು ಬಹಳ ರುಚಿಕರವಾಗಿ ಮಾಧ್ಯಮಗಳು ಒದಗಿಸಬಲ್ಲವು.

ಲೈಂಗಿಕ ವರ್ತನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದರತ್ತ ಜನತೆಯ ಕುತೂಹಲವೂ ಹೆಚ್ಚು. ಮನುಷ್ಯ ಲೈಂಗಿಕ ವರ್ತನೆಗಳಲ್ಲಿ ಅದೆಂತಹದ್ದೋ ನಿಗೂಢ ಶಕ್ತಿ ಇದೆ ಎನ್ನುವ ನಂಬಿಕೆ ನಾಗರೀಕತೆಯ ಆರಂಭದಿಂದಲೂ ಬದಲಾದಂತೆ ಕಂಡುಬಂದಿಲ್ಲ. ಅಂದೆಂದೋ ಇದ್ದ ಕಾಮಸೂತ್ರ ಇಂದಿಗೂ ಆಸಕ್ತಿ ಕೆರಳಿಸುವಂತಹದ್ದೇ. ನಮ್ಮ ಪೂರ್ವಜರು ಗುಡಿ, ಗೋಪುರಗಳಲ್ಲಿ ಲೈಂಗಿಕ ಭಾವಗಳನ್ನು ನೇರವಾಗಿ ಎಲ್ಲರಿಗೂ ಗೋಚರಿಸುವಂತೆ ಮೂಡಿಸುವುದರ ಉದ್ದೇಶವು ಇದೇ ಆಗಿದ್ದಿರಬಹುದು. ಹೀಗಿದ್ದರೂ, ಲೈಂಗಿಕ ವರ್ತನೆಗಳಲ್ಲಿ ಹೊಚ್ಚ ಹೊಸತನಗಳು ಇದ್ದೇ ಇರುತ್ತವೆನ್ನುವ ನಂಬಿಕೆಯನ್ನು ಸಮಕಾಲೀನ ಮಾಧ್ಯಮಗಳು ಸೃಷ್ಟಿಸುತ್ತಿವೆ ಎನ್ನುತ್ತಾರೆ ಸಮಾಜವಿಜ್ಞಾನಿಗಳು.

ಲೈಂಗಿಕ ವರ್ತನೆಗಳನ್ನು ನೇರವಾಗಿ ಬಿತ್ತರಿಸುವ ಮಾಧ್ಯಮಗಳತ್ತ ಇರುವ ಆಸಕ್ತಿಗಿಂತ ನಿಯಂತ್ರಣಗಳಿಗೆ ಒಳಪಟ್ಟಂತಹ ಲೈಂಗಿಕ ಮಾಹಿತಿಗಳತ್ತ ಹೆಚ್ಚು ಆಕರ್ಷಣೆ ಇರುತ್ತದೆ ಎನ್ನುವುದನ್ನು ಅಧ್ಯಯನಗಳು ಸೂಚಿಸುತ್ತವೆ. ಅಮೆರಿಕದಲ್ಲಿ ಕಳೆದ ದಶಕದ ಆರಂಭದಲ್ಲಿ ನಡೆಸಿದ ಅಧ್ಯಯನ ಒಂದರ ಪ್ರಕಾರ ದೃಶ್ಯ ಮಾಧ್ಯಮಗಳಲ್ಲಿ ನೇರವಾಗಿ ಬಿತ್ತರಿಸುವ ಲೈಂಗಿಕ ಚಿತ್ರಗಳನ್ನು ನೋಡಿದ ಹದಿನೈದು ವರ್ಷದ ಮಕ್ಕಳಿಗಿಂತ ಅತಿಕಾಮದ ಚಿತ್ರಗಳನ್ನು ಕದ್ದು ಮುಚ್ಚಿ ನೋಡಿದವರ ಸಂಖ್ಯೆಯೇ ಹೆಚ್ಚಂತೆ! ಅತಿಯಾದ ಕಾಮಭಾವಗಳು, ಕಾಮಾಕ್ರೋಶಗಳು ಮತ್ತು ಕಾಮಕೇಳಿಗಳಿರುವಂತಹ ದೃಶ್ಯಗಳತ್ತ ಯುವ ವಯಸ್ಕರು ಮತ್ತು ಹಿರಿಯ ಹದಿಹರೆಯರ ಗಮನ ತೀವ್ರವೆನ್ನುತ್ತದೆ ಮತ್ತೊಂದು ಅಧ್ಯಯನ.

ಯುವಜನರ ಮನಸ್ಸಿಗೆ ಹತ್ತಿರವಾಗುತ್ತಿರುವ ಮಾಧ್ಯಮಗಳು
ಯುವಜನರ ಮನಸ್ಸು ಹುರುಪು ಸಾಹಸಗಳನ್ನು ಸ್ವೀಕರಿಸುವಷ್ಟೇ ಸುಲಭವಾಗಿ ಹತಾಶೆಗೂ ಶರಣಾಗುವಂತಹದ್ದು. ಈ ಸೂತ್ರವೇ ಆಧುನಿಕ ಪ್ರಚಾರ ಮಾಧ್ಯಮದ ಬೆನ್ನೆಲುಬು. ಇದೇ ಯುವಜನರ ಮನಸ್ಸಿನ ಮೇಲೆ ಅನಾರೋಗ್ಯಕರ ಲೈಂಗಿಕತನವನ್ನು ಪೋಷಿಸುವುದಕ್ಕೂ ಹೆಚ್ಚು ಸಹಕಾರಿಯಾಗಿರುವುದು. ಇದು ಕೇವಲ ಮಡಿವಂತ ಸಾರ್ವಜನಿಕರ ಅಭಿಪ್ರಾಯವಷ್ಟೇ ಅಲ್ಲ; ಮಾಧ್ಯಮ ತಜ್ಞರು, ಮನೋವಿಜ್ಞಾನಿಗಳು ಹಾಗೂ ಸಮಾಜವಿಜ್ಞಾನಿಗಳ ಅನಿಸಿಕೆಯೂ ಹೌದು. ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಹೊರಬರುವ ಲೈಂಗಿಕತೆಯನ್ನು ಒಳಗೊಂಡ ವಿಷಯಗಳು ಹದಿಹರೆಯದವರು ಮತ್ತು ಯುವಜನರಲ್ಲಿ ದೀರ್ಘಾವಧಿಯ ಸಮಸ್ಯೆಗಳನ್ನು ತರುವ ಸಾಧ್ಯತೆಗಳಿವೆ.

ಪ್ರಮುಖವಾಗಿ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರದರ್ಶಿಸಲ್ಪಡುವ ಲೈಂಗಿಕ ಚಿತ್ರಗಳತ್ತ ಎಳೆಯ ವಯಸ್ಕರು ಮತ್ತು ಯುವಜನರು ಆಕರ್ಷಿತರಾಗುವುದಕ್ಕೆ ಮೂಲ ಕಾರಣ ಸಹಜ ಲೈಂಗಿಕ ಆಸಕ್ತಿ ಮತ್ತು ತೀವ್ರ ಕುತೂಹಲ. ಹದಿಹರೆಯದವರು ಮತ್ತು ಯುವಜನರಲ್ಲಿ ಇಂತಹ ಮಾನಸಿಕ ಸ್ಥಿತಿಯು ನಿರ್ಮಾಣವಾಗುವುದಕ್ಕೆ ಲೈಂಗಿಕ ವಿಷಯಗಳ ಬಗ್ಗೆ ಇರುವ ಸಾಂಪ್ರದಾಯಿಕ ಅಭಿಪ್ರಾಯಗಳು ಕಾರಣ.

ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡುಬರುವ ಕುತೂಹಲ ನಿರ್ವಹಣೆಯ ಒಂದು ಮಾರ್ಗವೆಂದರೆ ಕಲಿಕೆ. ಲೈಂಗಿಕ ನಡೆನುಡಿಗಳಿಗೂ ವ್ಯಕ್ತಿಯ ಗೋಪ್ಯತಾಭಾವಕ್ಕೂ ಇದೇ ಕೊಂಡಿ. ಕಾಮತೃಷೆಯನ್ನು ಸಾಂಪ್ರದಾಯಿಕ ನಡೆನುಡಿಗಳಿಗೆ ಸೀಮಿತಗೊಳಿಸುವುದರೊಂದಿಗೆ ಅವು ದುಷ್ಟಗುಣಗಳೆಂದು ಬಿಂಬಿಸದಿರುವ ಸಮುದಾಯಗಳು ಕಡಿಮೆ. ಆದರೆ, ಶಾರೀರಿಕ ಬದಲಾವಣೆಗಳ ಮೇಲೆ ಇಂತಹ ನಿಬಂಧನೆಗಳ ಪರಿಣಾಮ ಉಂಟಾಗದು. ಹೀಗಾಗಿ, ಹದಿಹರೆತನದ ಕುತೂಹಲಗಳನ್ನು ಹತ್ತಿಕ್ಕುವ ಸಂಪ್ರದಾಯವನ್ನು ಮೀರುವಂತಹ ಚುರುಕುತನ ಮನಸ್ಸಿನದು. ಕಲಿಕೆಯೇ ಇದರ ಮಾರ್ಗದರ್ಶಿ. ಲೈಂಗಿಕ ವರ್ತನೆಗಳಿಗೆ ಸಂಬಂಧಿಸಿದ ಕಠಿಣ ನುಡಿ, ಶಿಕ್ಷೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಗೋಪ್ಯತೆಯನ್ನು ಅವಲಂಬಿಸುವುದು ಅನಿವಾರ್ಯ.

ಕಾಮ ತೃಪ್ತಿ, ಗೋಪ್ಯ ಮತ್ತು ಮಾನಸಿಕ ಗೊಂದಲಗಳು
ಗೋಪ್ಯ ಎಂದರೆ ಅತ್ಯಾಪ್ತತೆ ಎಂದೂ ಅರ್ಥಮಾಡಿಕೊಳ್ಳುವುದು ಹದಿಹರೆಯರ ಸಾಮಾನ್ಯ ಸ್ವಭಾವ. ಲೈಂಗಿಕ ವಿಷಯಗಳನ್ನು ಗೋಪ್ಯವಾಗಿ ತಿಳಿಯುವುದರಿಂದ ಕುತೂಹಲ ನಿವಾರಣೆಯಾಗಬಹುದಾದರೂ ಅದರೊಂದಿಗೆ ಆತಂಕ ಮತ್ತು ಚಪಲಗಳೆರಡು ಹೆಚ್ಚಾಗಬಲ್ಲದು. ಆತಂಕ ಮತ್ತು ಚಪಲಗಳು ಹೆಚ್ಚಿದಷ್ಟು ಮಾಹಿತಿ ವೀಕ್ಷಣೆಯ ಬಯಕೆ ಏರುತ್ತದೆ. ಆವೇಶ, ಆಕ್ರೋಶಗಳಿಂದ ತುಂಬಿರುವಂತಹ ಲೈಂಗಿಕ ದೃಶ್ಯಗಳು ಅನೇಕರಿಗೆ ತೃಪ್ತಿ ಕೊಡಬಲ್ಲದು. ಕ್ರೌರ್ಯವೆನ್ನುವಂತಹ ಲೈಂಗಿಕ ಚಟುವಟಿಕೆಗಳನ್ನು ವೀಕ್ಷಿಸುವುದಕ್ಕೂ ಇವೇ ಪ್ರೇರಣೆ ಎಂದು ವಾದಿಸುತ್ತಾರೆ ಕಲಿಕೆ-ಪಂಥದ ಸಾಮಾಜಿಕ ಮನೋವಿಜ್ಞಾನಿಗಳಾದ ಕಿನ್ಸೆ, ಬಂಡೂರ, ವಾಲ್ಟರ್ಸ್‌ ಮುಂತಾದವರು.

ಇವುಗಳನ್ನು ಆಧುನಿಕ ವಿದ್ಯುನ್ಮಾನ ಮಾಧ್ಯಮಗಳು ಅತಿ ಸುಲಭವಾಗಿ ಉಲ್ಲಂಘಿಸಬಲ್ಲದು. ಇದರ ಪರಿಣಾಮವೇ ಆಶ್ಲೀಲ ಚಿತ್ರಗಳತ್ತ ಮನಸ್ಸು ಹರಿಯುವಂತೆ ಮಾಡುತ್ತದೆ. ಆರಂಭದಲ್ಲಿ ಲೈಂಗಿಕ ಸ್ವಚ್ಛಂದತೆಯ ಬಗ್ಗೆ ಭಯಭೀತಿಗಳಿದ್ದರೂ ನಂತರದಲ್ಲಿ ಇದೇ ಅಭ್ಯಾಸವಾಗಿಬಿಡುತ್ತದೆ ಎನ್ನುತ್ತಾರೆ ಮನೋತಜ್ಞರು. ಪಾಪ ಪ್ರಜ್ಞೆ, ಕಳಂಕಭಾವಗಳನ್ನು ಹೊತ್ತುಕೊಂಡೇ, ಲೈಂಗಿಕತೆಯೇ ಪ್ರಧಾನವಾಗಿರುವಂತಹ ಮಾಧ್ಯಮಗಳನ್ನು ಮನಸ್ಸು ಅಪೇಕ್ಷಿಸುತ್ತದೆ. ದುರಂತವೆಂದರೆ, ಇದೊಂದು ಚಟವೆನ್ನುವಷ್ಟರ ಮಟ್ಟಿಗೆ ವ್ಯಕ್ತಿ ಸ್ವಭಾವದ ಮೇಲೆ ಹತೋಟಿ ಸಾಧಿಸಿಬಿಡುತ್ತದೆ. ಇವೆಲ್ಲವು ಕಲಿಕೆಯ ಪರಿಣಾಮವೇ ಎಂದು ಪುನರುಚ್ಚಾರ ಮಾಡುವ ಅಗತ್ಯವಿಲ್ಲ. ಹೀಗೆ ಅವಲಂಬನೆಯ ಸ್ಥಿತಿಯೊಂದು ವ್ಯಕ್ತಿಯ ಮಿಕ್ಕೆಲ್ಲ ಗುಣಗಳನ್ನು ಅಧೀನದಲ್ಲಿರಿಸಿಕೊಳ್ಳುವುದು ಸುಲಭ. ಇದರ ಮೊದಲ ಪ್ರಹಾರ  ಸಾಮಾಜಿಕ ಹೊಂದಾಣಿಕೆಯ ಮೇಲಾಗುತ್ತದೆ. ಸಹಾನುಭೂತಿ, ಕಾಳಜಿ, ಆದರ, ಸಲ್ಲಾಪ, ಸರಸಗಳಂತಹ ಹಿತಕರ ಮಾನಸಿಕ ಸ್ಥಿತಿಗಳು ಕ್ಷೀಣಿಸುವುದರಿಂದ ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತವೆ.

ಲೈಂಗಿಕ ವರ್ತನೆಗಳ ಸಮೀಕ್ಷೆ ಮತ್ತು ಪರಿಣಾಮ
ಲೈಂಗಿಕ ಸಂಶೋಧನೆಗಳು ನೀಡುವ ಫಲಿತಾಂಶಗಳತ್ತ ಮನೋವಿಜ್ಞಾನಿಗಳ ಕುತೂಹಲ ಅನೇಕ ದಶಕಗಳಿಂದಲೂ ಇದ್ದದ್ದೇ.ಆದರೆ, ಇತ್ತೀಚಿನ ದಿನಗಳಲ್ಲಿ ನಗರವಾಸಿಗರ ಲೈಂಗಿಕ ವರ್ತನೆಯತ್ತ ಮಾಧ್ಯಮಗಳು ನಡೆಸುತ್ತಿರುವ ಸಮೀಕ್ಷೆಗಳು ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲುವುದಕ್ಕಿಂತ ಹೊಸ ಆತಂಕಗಳನ್ನು ಸೃಷ್ಟಿಸುವಂತಹದ್ದಾಗಿವೆ. ಮಾಧ್ಯಮಗಳು- ದೃಶ್ಯ ಮತ್ತು ಮುದ್ರಣ ಸೇರಿದಂತೆ- ಲೈಂಗಿಕ ವರ್ತನೆಗಳ ಶೋಧನೆಯತ್ತ ಗಮನಹರಿಸುತ್ತಿರುವ ವಿಧಿಯನ್ನು ಗಮನಿಸಿದರೆ ರೋಚಕತೆಯೇ ಸಮೀಕ್ಷೆಗಳ ಉದ್ದೇಶವೆನಿಸುತ್ತದೆ. ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೆಂದರೆ ಲೈಂಗಿಕ ಸ್ವಭಾವಗಳು ಬದಲಾಗುತ್ತಿವೆ ಎನ್ನುವುದನ್ನು ವಿವರಿಸುವ ಬದಲಿಗೆ ಲೈಂಗಿಕ ವರ್ತನೆಗಳಿಗೇ ಒತ್ತು ನೀಡುತ್ತಿರುವುದು ಸ್ಪಷ್ಟ. ಮೂಲಲೈಂಗಿಕ ಸ್ವಭಾವಗಳಿಗೂ ಸನ್ನಿವೇಶಾತ್ಮಕ ಲೈಂಗಿಕ ವರ್ತನೆಗಳಿಗೂ ಅಂತರವಿದೆ. ಲೈಂಗಿಕ ಸ್ವಭಾವವು ದೀರ್ಘಾವಧಿ ಇರುವಂತಹದ್ದು. ವರ್ತನೆಗಳಾದರೋ ಸನ್ನಿವೇಶ, ಅಗತ್ಯ ಮತ್ತು ಇನ್ನಿತರ ಕ್ಷಣಿಕತೆಯಿಂದ ಹುಟ್ಟುವಂತಹದ್ದು. ಹೀಗಾಗಿ ಎರಡನೆಯ ವಿಷಯವು ಇಡೀ ಸಮುದಾಯದ ವರ್ತನೆಗಳ ಪ್ರತೀಕ ಅಥವಾ ನಮೂನೆ ಎಂದು ಕರೆಯಲಾಗದು. ಆದರೆ, ಮಾಧ್ಯಮಗಳ ಸಮೀಕ್ಷೆಗಳು ಕ್ಷಣಿಕತಾ ವರ್ತನೆಗಳನ್ನೇ ಅಂಕಿಅಂಶ ಮತ್ತು ವರ್ಣರಂಜಿತ ರೇಖಾಚಿತ್ರಗಳ ಮೂಲಕ ಮಾನವನ ಲೈಂಗಿಕ ವರ್ತನಾ ನೆಲೆಗಳೇ ಬದಲಾಗಿಬಿಟ್ಟಿವೆ ಎನ್ನುವಂತಹ ನಿರ್ಣಯಗಳನ್ನು ತೆಗೆದುಕೊಳ್ಳುತ್ತವೆ.

ಒಂದಂತೂ ಸತ್ಯ, ಮಾಧ್ಯಮಗಳಲ್ಲಿ ಉಲ್ಲೇಖಿತಗೊಳ್ಳುವ ಲೈಂಗಿಕ ವಿಷಯಗಳು ಓದುಗರ ಮನಸ್ಸನ್ನು ಅಥವಾ ಗಮನವನ್ನು ಸೆಳೆಯುವಂತಹದ್ದೇ ಆಗಿರುತ್ತದೆ. ಅಂದಮೇಲೆ, ಜನಮನದ ಬಯಕೆಗಳಿಗೆ ಮಾಧ್ಯಮಗಳು ಸ್ಪಂದಿಸುತ್ತವೆ. ಆದರೂ ಸಹ ಜನಮನದ ಬಯಕೆಗಳೆಲ್ಲವು ಸಹಜವೆಂದು ಪರಿಗಣಿಸುವ ಪ್ರವೃತ್ತಿ ಮಾಧ್ಯಮದ ನೀತಿಯಾಗುವುದು ದುರದೃಷ್ಟಕರ. ಈ ದೃಷ್ಟಿಯಲ್ಲಿ ಮಾಧ್ಯಮಗಳ ಪ್ರಚೋದನಾ ಸ್ವಭಾವವು ಮನುಷ್ಯ ಲೈಂಗಿಕ ವರ್ತನೆಗಳ ನಿಜಧಾರೆಯನ್ನು ಅಂದಾಜು ಮಾಡುವಲ್ಲಿ ಉತ್ಪ್ರೇಕ್ಷೆಗೆ ನೀಡುವಷ್ಟು ಮಹತ್ವವನ್ನು ವಾಸ್ತವಿಕ ವರ್ತನೆಗಳತ್ತ ನೀಡುವುದಿಲ್ಲ. ಇದಕ್ಕೆ ಕಾರಣವೂ ಇದೆ. ಈ ಕಾರಣವು ವ್ಯಾವಹಾರಿಕ ರೀತಿಯದ್ದೇ ಆಗಿರುತ್ತದೆ. ಅಂದರೆ, ಹೆಚ್ಚು ರೋಚಕ ವಿಷಯಗಳು, ಅದರಲ್ಲಿಯೂ ವ್ಯಕ್ತಿ ಲೈಂಗಿಕ ವರ್ತನೆಗೆ ಸಂಬಂಧಿಸಿದ್ದು, ಲಾಭದಾಯಕ.

ವೈಜ್ಞಾನಿಕ ಸಂಶೋಧನೆಗಳ ಗುರಿ ಮತ್ತು ಫಲಿತಾಂಶಗಳನ್ನು ಸಂಕುಚಿತ ದೃಷ್ಟಿಯಿಂದ ನೋಡದೇ ಇದ್ದಾಗಲೂ ಸಹ ಮಾಧ್ಯಮಗಳು ಸೃಷ್ಟಿಸುವ ಲೈಂಗಿಕ ವರ್ತನೆಯ ಮಾದರಿಗಳು ನಿಜ ಜೀವನದ ಹೊಂದಾಣಿಕೆಯ ಮೇಲೆ ದುಷ್ಪರಿಣಾಮ ಬೀರಬಲ್ಲದ್ದಾಗಿರುತ್ತದೆ ಎನ್ನುವ ವಿಷಯವನ್ನು ಅನೇಕ ಸಂಶೋಧನೆಗಳು ತೋರಿಸಿಕೊಟ್ಟಿವೆ. ಅಂದರೆ, ನಿತ್ಯ ಜೀವನದಲ್ಲಿಯೂ ಮಾಧ್ಯಮಗಳಲ್ಲಿ ತೋರಿಸುವ ಕೃತಕ ಅಥವಾ ಅಸಹಜವೆನ್ನುವಂತಹ ಲೈಂಗಿಕ ದೃಶ್ಯಗಳು, ಚಟುವಟಿಕೆಗಳು ಅಥವಾ ವರ್ತನೆಗಳು ನೋಡುಗನ ಲೈಂಗಿಕ ಸ್ವಭಾವದಲ್ಲಿ ಗೊಂದಲವನ್ನು ಹುಟ್ಟಿಸಬಹುದು. ಉದಾಹರಣೆಗೆ ಹೇಳುವುದಾದರೆ, ಅಶ್ಲೀಲತೆಯಿಂದಲೇ ತುಂಬಿರುವಂತಹ ದೃಶ್ಯಗಳು ವಾಸ್ತವಿಕ ಜೀವನದಲ್ಲಿಯೂ ಅಶ್ಲೀಲ ಮನಸ್ಸನ್ನು ಅಥವಾ ವರ್ತನೆಯನ್ನು ಯಾವ ಆತಂಕವೇ ಇಲ್ಲದಂತೆ ಹೊರಬರುವುದಕ್ಕೆ ಬೆಂಬಲ ನೀಡಬಹುದು.

ಎಷ್ಟೋ ಹಿರಿಯರು, ಸುಸಂಪನ್ನರು ಅಶ್ಲೀಲ ಮಾತುಗಳ ಅಥವಾ ಸಂಜ್ಞೆಗಳನ್ನು ದಿನ ನಿತ್ಯದ ಸನ್ನಿವೇಶಗಳಲ್ಲಿ ಮಾಡುವುದಕ್ಕೆ ಇದೇ ಕಾರಣವೆನ್ನುತ್ತದೆ ಅಧ್ಯಯನಗಳು. ಸ್ತ್ರೀ-ಪುರುಷರಾದಿಯಾಗಿ ಇಂತಹ ವರ್ತನೆಗಳ ಬಗ್ಗೆ ಸೈರಣೆಯನ್ನು ಮೂಡಿಸಿಕೊಳ್ಳುವುದಕ್ಕೂ ಇದೇ ಕಾರಣ.


ಲೈಂಗಿಕ ನಡೆನುಡಿಗಳ ಸಂಶೋಧನೆಗಳ ಸಾರ
* ವಯಸ್ಕರ ಚಿತ್ರಗಳಲ್ಲಿರುವ ಲೈಂಗಿಕ ದೃಶ್ಯಗಳಿಗಿಂತಲೂ ತೀವ್ರ ಕಾಮಚಟುವಟಿಕೆ (ಎಕ್ಸ್ ರೇಟೆಡ್)ಯ ಸಿ.ಡಿ, ವಿಡಿಯೋಗಳನ್ನು ಹದಿಹರೆಯರು ವೀಕ್ಷಿಸಲು ಬಯಸುತ್ತಾರೆ.

* ಅಶ್ಲೀಲ ಚಿತ್ರಗಳಲ್ಲಿ ನಟಿಸುವವರ ಮೈಮಾಟಗಳು, ಚಟುವಟಿಕೆಗಳನ್ನು ಸಹಜ ಸಂಬಂಧ ಅಥವಾ ಜೀವನದಲ್ಲಿಯೂ ಸಿಗಬೇಕು ಎನ್ನುವ ಮನೋಭಾವವು ಉತ್ಕಟಗೊಳ್ಳುವುದಕ್ಕೂ ಅಶ್ಲೀಲ ಚಿತ್ರಗಳ ಕೊಡುಗೆಯು ಇರುತ್ತದೆ.  

ಮನೆಯ ಹೊರಗಡೆಯಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆಯೇ ಹೆಚ್ಚು.

* ಮುದ್ರಣ ಮಾಧ್ಯಮದಲ್ಲಿ ಬರುವ ಲೈಂಗಿಕ ವರ್ತನೆಯ ಸಮೀಕ್ಷೆಗಳ ಅಂಕಿಅಂಶ ಮತ್ತು ವಿವರಣೆಗಳು ಜನರ ಲೈಂಗಿಕ ಸ್ವಭಾವನ್ನು-ವಿಶೇಷವಾಗಿ ಹದಿಹರೆಯದವರು ಮತ್ತು ಯುವ ವಯಸ್ಕರ- ಬದಲಾಯಿಸಬಲ್ಲದು. ಉದಾಹರಣೆಗೆ, ವಿವಾಹಮುನ್ನ ಸಂಭೋಗ,  ದಾಂಪತ್ಯದ ಹೊರಗಿನ ಪ್ರಣಯ, ಅನೈತಿಕ ಮತ್ತು ಅಸಹಜ ಸಂಬಂಧಗಳು ತಪ್ಪಿಲ್ಲವೆನ್ನುವಂತಹ ಭಾವನೆ.

* ಪೋಷಕರ ನಡೆನುಡಿಗಳು ಕೂಡ ಅಶ್ಲೀಲ ಚಿತ್ರಗಳ ವೀಕ್ಷಣೆಯ ಮೇಲೆ ಪ್ರಭಾವ ಬೀರಬಲ್ಲದು. ಅಂದರೆ, ಹಿತಮಿತವಾದ ಸಲಹೆ ಮಾರ್ಗದರ್ಶನಗಳು ಅಶ್ಲೀಲ ಚಿತ್ರಗಳತ್ತ ಯುವ ಮನಸ್ಸು ಹೋಗದಂತೆ ಮಾಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT