ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಟ್ಟಪ್ಪನಿಗೆ ಹೊಸ ಅಂಗಿ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಈ ಚಿತ್ರದಿಂದ ಕಿಟ್ಟಪ್ಪ ಕನ್ನಡ ಚಿತ್ರರಂಗದ ಒಳ್ಳೆಯ ಆಕ್ಷನ್ ಹೀರೋ ಆಗುತ್ತಾರೆ. ಸಾಹಸದಲ್ಲಿ ಪುನೀತ್, ದರ್ಶನ್ ಲೆವೆಲ್‌ಗೆ ಏರುತ್ತಾರೆ- ಹೀಗೆಂದು `ಕೋ... ಕೋ~ ನಿರ್ದೇಶಕ ಆರ್.ಚಂದ್ರು ತುಂಬು ವಿಶ್ವಾಸದಿಂದ ಹೇಳುತ್ತಾರೆ.

ನಾಯಕ ಶ್ರೀನಗರ ಕಿಟ್ಟಿಯನ್ನು ಅವರು ಪ್ರೀತಿಯಿಂದ ಕಿಟ್ಟಪ್ಪ ಎಂದೇ ಕರೆಯವುದು. ಇದುವರೆಗೆ ಕಿಟ್ಟಿಗೆ ಇರುವ ಇಮೇಜನ್ನು ಅವರು ಸಂಪೂರ್ಣವಾಗಿ ಉಜ್ಜಿಹಾಕಿ, ಹೊಸ ಅಂಗಿ ತೊಡಿಸಿ ಫಲಿತಾಂಶವನ್ನು ಎದುರುನೋಡುತ್ತಿದ್ದಾರೆ. ಈ ವಾರ ತೆರೆಕಾಣುತ್ತಿರುವ `ಕೋ...ಕೋ~ ಕೇವಲ ಕಿಟ್ಟಿಯ ಇಮೇಜ್ ಬದಲಾದದ್ದಕ್ಕಷ್ಟೇ ಗಮನ ಸೆಳೆಯುತ್ತಿಲ್ಲ, ಖುದ್ದು ಚಂದ್ರು ತಮ್ಮ ಹಿಂದಿನ ಚಿತ್ರಗಳ ಶೈಲಿಯನ್ನು ಇಲ್ಲಿ ಮೀರಿದ್ದಾರಂತೆ.

`ತೆಲುಗಿನವರು ಹಾಗೆ ಸಿನಿಮಾ ತೆಗೆಯುತ್ತಾರೆ ಹೀಗೆ ಸಿನಿಮಾ ತೆಗೆಯುತ್ತಾರೆ ಅಂತ ನಮ್ಮ ಜನ ಮಾತಾಡುತ್ತಾರೆ. ನಾನು ಗಮನಿಸಿರುವಂತೆ ಕನ್ನಡದ ಶೇ 40ರಷ್ಟು ಪ್ರೇಕ್ಷಕರು ತೆಲುಗು ಚಿತ್ರಗಳನ್ನೂ ನೋಡುತ್ತಾರೆ. ಅಲ್ಲಿ 50 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡುತ್ತಾರೆ. ಅವರ ಮಾರುಕಟ್ಟೆ ಅಷ್ಟು ದೊಡ್ಡದಿದೆ. ನಮ್ಮ ಪ್ರೇಕ್ಷಕ ಅದರ ಬಗ್ಗೆ ಯೋಚಿಸದೆ ಕನ್ನಡದವರು ಆ ರೇಂಜ್‌ಗೆ ಸಿನಿಮಾ ಮಾಡುವುದಿಲ್ಲ ಎಂದು ಟೀಕಿಸುತ್ತಾ ಓಡಾಡುತ್ತಾರೆ.  

ಅಂಥ ಪ್ರೇಕ್ಷಕರಿಗೆಲ್ಲಾ ನಮ್ಮ ಬಜೆಟ್‌ನಲ್ಲೇ ಉತ್ತರ ಕೊಡುವ ಪ್ರಯತ್ನವನ್ನು ನಾನು ಕೋ...ಕೋದಲ್ಲಿ ಮಾಡಿದ್ದೇನೆ~ ಎನ್ನುವ ಚಂದ್ರು ಈ ಬಾರಿ ಗೆದ್ದೇಗೆಲ್ಲುವ ಹುಮ್ಮಸ್ಸಿನಲ್ಲಿದ್ದಂತಿದೆ. 
 

ಚಂದ್ರು ಪ್ರಕಾರ ಕೋ...ಕೋ ಸ್ಟೈಲಿಶ್ ಸಿನಿಮಾ. ನಿರೂಪಣೆ, ಪಾತ್ರಗಳ ಪೋಷಾಕು, ಅವುಗಳ ವರ್ತನೆ ಎಲ್ಲವೂ ಹೊಸ ಶೈಲಿಯಲ್ಲಿರುತ್ತದೆ. ಹಾಸ್ಯ ಕೂಡ ಚಿತ್ರದಲ್ಲಿ ಹಾಸುಹೊಕ್ಕಾಗಿ ಬೆರೆಯುವಂತೆ ಮಾಡಿರುವ ಚಂದ್ರು ಚಿತ್ರದ ಕತೆಯ ಗುಟ್ಟನ್ನು ತುಸು ತಡವಾಗಿಯೇ ಬಿಟ್ಟುಕೊಟ್ಟರು.
 
ಪೊಲೀಸ್ ಆಫೀಸರ್ ತನ್ನ ಮಗಳಿಗೆ ಗಂಡನ್ನು ಹುಡುಕಲು ನಡೆಸುವ `ಮೈಂಡ್ ಗೇಮ್~ ಚಿತ್ರದ ವಸ್ತು. ಚೀನಾದಲ್ಲಿ ಕೋತಿಯನ್ನು ಪಳಗಿಸಲು ಕೋಳಿಯನ್ನು ಉಪಯೋಗಿಸುತ್ತಾರಂತೆ. ನಿರ್ಮಾಪಕ ಭಾಸ್ಕರ್ ಹೇಳಿದ ಆ ಎಳೆಯನ್ನೇ ಚಿತ್ರಕಥೆಯಾಗಿ ಹಿಗ್ಗಿಸಿ ಚಂದ್ರು ಈ ಸಿನಿಮಾ ನಿರ್ದೇಶಿಸಿದ್ದಾರೆ.

`ಯುವರಾಜ~ ಚಿತ್ರದ ನಂತರ ಕನ್ನಡದಲ್ಲಿ ರಮಣ ಗೋಗುಲ ಸಂಗೀತ ಸಂಯೋಜನೆ ಮಾಡಿರುವ ಸಿನಿಮಾ ಎಂಬ ಕಾರಣಕ್ಕೂ `ಕೋ...ಕೋ~ ಸುದ್ದಿಯಾಗಿತ್ತು. ಚಿತ್ರದ ಹಾಡುಗಳು ನೋಡಲು ಹೇಗಿವೆ ಎಂಬುದು ಕೂಡ ಇನ್ನೂ ಕುತೂಹಲವಾಗಿಯೇ ಉಳಿದಿದೆ. ಟೀವಿ ವಾಹಿನಿಗಳಲ್ಲಿ ಹಾಡುಗಳನ್ನು ನೋಡುವ ಅವಕಾಶವನ್ನು ಚಂದ್ರು ಇನ್ನೂ ಕಲ್ಪಿಸಿಲ್ಲ. ಚಿತ್ರ ಬಿಡುಗಡೆಯಾದ ನಂತರ ಸಹಜವಾಗಿಯೇ ಜನ ನೋಡಲು ಬರುತ್ತಾರೆಂಬ ವಿಶ್ವಾಸ ಅವರದ್ದು.

ನಟನೆಯಲ್ಲಿ ಪಳಗಿರುವ ಪ್ರಿಯಾಮಣಿಯಿಂದ ಅಭಿನಯ ತೆಗೆಸುವುದು ಸುಲಭವಾಗಿದೆ. ಒಂದು ಪ್ರತಿಕ್ರಿಯೆ ಕೇಳಿದರೆ, ಅದನ್ನು ಎರಡು ರೀತಿಯಲ್ಲಿ ವ್ಯಕ್ತಪಡಿಸುವ ಮೂಲಕ ಪ್ರಿಯಾಮಣಿ ತಮ್ಮ ಸಾಮರ್ಥ್ಯ ಅನಾವರಣಗೊಳಿಸಿದ್ದು ಕಂಡು ಚಂದ್ರು ಚಕಿತರಾದದ್ದೂ ಉಂಟು.

ತೆಲುಗಿನಲ್ಲಿ ರಾಜಮೌಳಿ ತರಹದ ನಿರ್ದೇಶಕರು ಅನುಸರಿಸುವ ಸಿನಿಮಾ ಶೈಲಿಯನ್ನು `ಕೋ...ಕೋ~ದಲ್ಲಿ ಕಾಣಬಹುದೆನ್ನುವ ಚಂದ್ರು ಅದಾಗಲೇ ಇನ್ನೂ ಎರಡು ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡು ಕೂತಿದ್ದಾರೆ. ಅವುಗಳು ಕೂಡ ಆಕ್ಷನ್ ಚಿತ್ರಗಳೇ. ಪುನೀತ್, ದರ್ಶನ್ ತರಹದ ನಾಯಕರಿಗೆ ಹೊಂದುವಂಥ ವಸ್ತುಗಳು ಅವುಗಳಲ್ಲಿವೆ ಎನ್ನುವ ಚಂದ್ರು ಭವಿತವ್ಯದ ಕುರಿತು ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. `ಕೋ... ಕೋ~ ಕೋಳಿ ಇಂದು ಹೇಗೆ ಕೂಗುತ್ತದೆಂಬುದನ್ನು ಅವರ ಮುಂದಿನ ನಡೆಗಳು ಅವಲಂಬಿಸಿವೆ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT