ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡಿಗೇಡಿಗಳ ಅಟ್ಟಹಾಸ; ಮತ್ತೆ ಬೆಂಕಿ

ಭಯಭೀತಗೊಂಡ ನಗರದ ಜನತೆ
Last Updated 19 ಜುಲೈ 2013, 10:16 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಪರಿಸ್ಥಿತಿ ಕಂಡುಬರುತ್ತಿದ್ದು ಬುಧವಾರ ರಾತ್ರಿಯೂ ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಇನ್ನೊಂದು ಮನೆಯ ತೂಗುಯ್ಯಾಲೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಸರಗಳ್ಳತನ ಹೆಚ್ಚುತ್ತಿರುವುದರ ನಡುವೆಯೇ ಮನೆ ಮುಂದೆ ನಿಲ್ಲಿಸುವ ಕಾರುಗಳಿಗೆ ಬೆಂಕಿ ಹಚ್ಚುತ್ತಿರುವ ಹೊಸ ವಿದ್ಯಮಾನಗಳು ಘಟಿಸುತ್ತಿರುವುದು ನಗರದ ಜನರನ್ನು ಭಯಭೀತರನ್ನಾಗಿಸಿದೆ. ಆದರೆ ಯಾತಕ್ಕಾಗಿ ಇಂಥ ಘಟನೆಗಳು ನಡೆಯುತ್ತಿವೆ ಎಂಬುದು ನಿಗೂಢವಾಗಿದೆ.

ಮಂಗಳವಾರ ರಾತ್ರಿ ಅಮರಜ್ಯೋತಿ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರು, ಸ್ಕೂಟರ್‌ಗೆ ಬೆಂಕಿ ಹಚ್ಚಲಾಗಿತ್ತು. ಬುಧವಾರ ಉಪ್ಪಾರಹಳ್ಳಿ ಸಮೀಪದ ಮೂಕಾಂಬಿಕಾ ನಗರದ ಐದನೇ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಇಂಡಿಕಾ ವಿಸ್ತಾ ಕಾರಿನ ಕಿಟಕಿ ಗಾಜು ಕೆಳಗಿಳಿಸಿ ಬೆಂಕಿ ಹಚ್ಚಲಾಗಿದೆ.

ಕಾರಿನ ಹಿಂಬದಿ ಸೀಟು ಸುಟ್ಟು ಕರಕಲಾಗಿದೆ. ಈ ಕಾರು ಎಂ.ಎಸ್.ಅಣ್ಣೇಗೌಡ ಅವರಿಗೆ ಸೇರಿದ್ದು, ಇವರು ಗುತ್ತಿಗೆದಾರರಾಗಿದ್ದಾರೆ. ಎಂದಿನಂತೆ ಮನೆಯ ಮುಂಭಾಗ ಕಾರು ನಿಲ್ಲಿಸಿದ್ದರು. ರಾತ್ರಿ 1.30 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಇದಕ್ಕೂ ಮುನ್ನ ಇದೇ ತಂಡ ಇಲ್ಲಿಗೆ ಸಮೀಪದ ಪೆದ್ದಣ್ಣ ಅವರ ಮನೆಯ ಬಾಗಿಲಿನ ಚಿಲಕ ಹಾಕಿ, ಕಿಟಕಿಯಲ್ಲಿಟ್ಟಿದ್ದ ಮೊಬೈಲ್ ಕಳವು ಮಾಡಿದೆ. ಶೌಚಾಲಯಕ್ಕೆ ಹೋಗಲು ಪೆದ್ದಣ್ಣ ಮನೆ ಬಾಗಿಲು ತೆರೆಯಲು ಹೋದಾಗ ಹೊರಗಿನಿಂದ ಬಾಗಿಲಿಗೆ ಚಿಲಕ ಹಾಕಿರುವುದು ತಿಳಿದುಬಂದಿದೆ. ತಕ್ಷಣ ಕಿಟಕಿ ಪಕ್ಕ ಇದ್ದ ಮೊಬೈಲ್ ಕಾಣಿಯಾಗಿರುವುದು ಗೋಚರಿಸಿದೆ.

ಆತಂಕಗೊಂಡ ಅವರು ತಮ್ಮ ಪತ್ನಿ ಮೊಬೈಲ್‌ನಿಂದ ಮೂಕಾಂಬಿಕಾ ನಗರದ ಐದನೇ ಮುಖ್ಯ ರಸ್ತೆಯಲ್ಲಿದ್ದ ಅಳಿಯನಿಗೆ ಕರೆ ಮಾಡಿದ್ದಾರೆ. ಮಾವನ ಕರೆ ಹಿನ್ನೆಲೆಯಲ್ಲಿ ಮನೆಯ ಬಾಗಿಲ ಚಿಲಕ ತೆಗೆಯಲು ಈಚೆ ಬಂದಾಗ ಅಣ್ಣೇಗೌಡ ಅವರ ಕಾರಿಗೆ ಬೆಂಕಿ ಹತ್ತಿರುವುದು ಬೆಳಕಿಗೆ ಬಂದಿದೆ. ನಂತರ ಮನೆಯವರು ಸೇರಿ ಕಾರಿನ ಬೆಂಕಿ ನಂದಿಸಿದ್ದಾರೆ.

ಅಣ್ಣೇಗೌಡ ಮನೆಗೆ ಸ್ವಲ್ಪ ದೂರದ ಗೀತಾ ನಾಗೇಶ್ ಮನೆ ಮುಂಭಾಗದಲ್ಲಿದ್ದ ಬೆತ್ತದ ತೂಗುಯ್ಯಾಲೆಗೂ ಹೊರಗಡೆಯಿಂದ ಬೆಂಕಿ ಹಚ್ಚಲಾಗಿದೆ. ಈ ವೇಳೆ ಗೀತಾ ನಾಗೇಶ್ ಮನೆಯಲ್ಲಿ ಇರಲಿಲ್ಲ. ನೆರಹೊರೆಯವರು ಸೇರಿ ಬೆಂಕಿ ನಂದಿಸಿದ್ದಾರೆ. ಈ ಮೂರು ಕೃತ್ಯಗಳನ್ನು ಒಂದೇ ತಂಡ ಮಾಡಿರಬಹುದು ಎಂದು ಸಂಶಯಿಸಲಾಗಿದೆ. ಎನ್‌ಇಪಿಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭೆ:  ಘಟನೆಯಿಂದ ಪೊಲೀಸ್ ಇಲಾಖೆ ವಿಚಲಿತಗೊಂಡಿದೆ. ಗುರುವಾರ ನಗರದ ಎಲ್ಲ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್‌ಗುಪ್ತ ಘಟನೆ ಕುರಿತು ಚರ್ಚಿಸಿದರು. ಕೃತ್ಯದ ಹಿಂದೆ ಸಮಾಜದ್ರೋಹಿಗಳ ಕೈವಾಡದ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ. ಕಿಡಿಗೇಡಿಗಳು ಸೇರಿಕೊಂಡು ಈ ಕೃತ್ಯಗಳನ್ನು ಎಸಗಿರಬಹುದು ಎಂದು ಸಭೆಯಲ್ಲಿ ಸಂಶಯ ವ್ಯಕ್ತವಾಗಿದೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ರಾತ್ರಿ ಗಸ್ತು ತೀವ್ರಗೊಳಿಸಲು ಸೂಚಿಸಲಾಯಿತು ಎನ್ನಲಾಗಿದೆ.

ಉಪಯೋಗಕ್ಕೆ ಬಾರದ ಬ್ಯಾರಿಕೇಡ್: ನಗರದ ನಾಕಾ ಮೂಲೆಗಳಲ್ಲೂ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿದೆ. ಎಲ್ಲರ ಮೇಲೂ ಪೊಲೀಸರು ನಿಗಾವಹಿಸಿದ್ದಾರೆ. ನಗರದ ಎಲ್ಲೆಡೆ ಪೊಲೀಸರು ಬೀಡು ಬಿಟ್ಟಿದ್ದರೂ ಇಂಥ ಘಟನೆಗಳು ನಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ.

ಕಳ್ಳತನ ತಡೆಯಲು ನಗರದ ಕೆಲವು ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದರೂ ಅದು ಕೂಡ ಪ್ರಯೋಜನಕ್ಕೆ ಬಂದಂತೆ ಕಾಣುತ್ತಿಲ್ಲ. ಕೆಳ ಅಧಿಕಾಗಳ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೃದು ಧೋರಣೆ ತಾಳಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೃದು ಧೋರಣೆಯನ್ನೇ ಕೆಳ ಹಂತದ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ನಗರದ ಮೇಲೆ ಹದ್ದಿನ ಕಣ್ಣು ಇಟ್ಟಿಲ್ಲ ಎಂಬ ಮಾತುಗಳು ಇಲಾಖೆಯೊಳಗೆ ಕೇಳಿಬಂದಿವೆ. ದಕ್ಷ ಪೊಲೀಸ್ ಅಧಿಕಾರಿಗಳ ಬಳಕೆ ಮಾಡುಕೊಳ್ಳುವಲ್ಲಿ ಇಲಾಖೆ ಎಡವಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಅಸಮಾಧಾನ
ನಗರದಲ್ಲಿ ಸರ ಕಳ್ಳತನ ಹೆಚ್ಚುತ್ತಲೇ ಸಾಗಿದೆ. ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಹೊಸ ಸಂಸ್ಕೃತಿ ಆರಂಭವಾಗಿದೆ. ಕಾನೂನು ಸುವ್ಯವಸ್ಥೆ ಇಲ್ಲವಾಗುತ್ತಿದೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT