ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡಿಗೇಡಿಗಳ ಕುಕೃತ್ಯಕ್ಕೆ ನಲುಗುತ್ತಿದೆ ಜ್ಞಾನದೇಗುಲ

Last Updated 5 ಜನವರಿ 2012, 8:10 IST
ಅಕ್ಷರ ಗಾತ್ರ

ಹುಬ್ಬಳ್ಳಿ:  `ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ~, `ಇದು ವಿದ್ಯೆಯ ತಪಸ್ಸಿನ ತಾಣ. ಕೈ ಮುಗಿದು ಒಳಗೆ ಬಾ ಜಾಣ~, `ಶ್ರದ್ಧೆಯುಳ್ಳವನಿಗೆ ಮಾತ್ರ ವಿದ್ಯೆ ಲಭ್ಯವಾಗುವುದು~...

ಇಂಥ ಒಕ್ಕಣೆಗಳು ಸರ್ಕಾರಿ ಶಾಲೆ ಮುಂಭಾಗದಲ್ಲಿ ಕಾಣ ಸಿಗುತ್ತವೆ. ಇಂತಹ ಫಲಕಗಳು ಧಾರವಾಡದ ಪೊಲೀಸ್ ಹೆಡ್ ಕ್ವಾಟರ್ಸ್‌ನಲ್ಲಿರುವ ಶಾಸಕರ ಸರ್ಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆಯಲ್ಲೂ ಇವೆ. ಆದರೆ ಅಲ್ಲಿ ನಡೆಯುತ್ತಿರುವುದು ಮಾತ್ರ ಇದಕ್ಕೆ ಹೊರತಾದ ಅನೈತಿಕ ಚಟುವಟಿಕೆ. ಹಿಂದೆ ಸಾವಿರಾರು ಮಕ್ಕಳಿಗೆ ಪಾಠ ಕಲಿಸಿ, ಅವರ ಭವಿಷ್ಯ ರೂಪಿಸಿದ, ನೂರರ ಸನಿಹದಲ್ಲಿರುವ (ಸ್ಥಾಪನೆ 1915ರಲ್ಲಿ) ಈ ಶಾಲೆ ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ನಲುಗುವಂತಾಗಿದೆ.

ಬ್ರಿಟಿಷರ ಆಡಳಿತ ಅವಧಿಯಲ್ಲಿ ನಿರ್ಮಾಣವಾದ ಈ ಶಾಲೆಯಲ್ಲಿ 22 ಕೊಠಡಿಗಳಿವೆ. ಅವುಗಳಲ್ಲಿ ಕೆಲವು ಈಗ ದುಃಸ್ಥಿತಿಯಲ್ಲಿವೆ. ಇನ್ನು ಕೆಲವು ಆಗಾಗ ದುರಸ್ತಿಯಾಗಿ, ಮಕ್ಕಳ ಪಾಠ ಪ್ರವಚನಕ್ಕೆ ಅವಕಾಶ ಮಾಡಿಕೊಟ್ಟಿವೆ. ಹಗಲು ಮಕ್ಕಳ ಆಟಪಾಠದ ತಾಣವಾದರೆ, ರಾತ್ರಿಯಾಗುತ್ತಿದ್ದಂತೆಯೇ ಅನೈತಿಕ ಚಟುವಟಿಕೆಗೆ ಸುರಕ್ಷಿತ ಕೇಂದ್ರವಾಗಿದೆ. ಇಲ್ಲಿ ನಡೆಯುವ ಕತ್ತಲ ರಾತ್ರಿಯ ಚಟುವಟಿಕೆ ನಿಯಂತ್ರಿಸಿ, ಶಾಲೆಯ ಗೌರವ ಕಾಪಾಡುವಂತೆ ವಿದ್ಯಾರ್ಥಿಗಳ ಪಾಲಕರು ಮನವಿ ಮಾಡಿದರೂ, ಅದಕ್ಕೆ ಈವರೆಗೂ ಮನ್ನಣೆ ಸಿಕ್ಕಿಲ್ಲ.

`ಈ ಬಗ್ಗೆ ಭಾಳ ಸಲಾ ಪೊಲೀಸರಿಗೂ ತಿಳಸೇವ್ರಿ. ಆದ್ರ ಯಾರೂ ಈ ಕಡೆ ಲಕ್ಷ್ಯ ಕೊಡಾಂಗಿಲ್ಲ. ಬಿಇಒ ಸಾಹೇಬ್ರಿಗೂ ಹೇಳೀವಿ. ಆಫೀಸಿನಿಂದ ಲೆಟರ್ ಬರೆದೇವ್ರಿ. ಏನಿದ್ರೂ ಕೆಟ್ಟ ಕೆಲಸ ನಡೆಯೋದನ್ನ ಮಾತ್ರ ತಪ್ಪಸಾಕಾಗಿಲ್ಲ ನೋಡ್ರಿ~ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಎಚ್.ಬಿ. ನಾಗಮ್ಮನವರ.

ಶಾಲೆಗೆ ಕಿಡಿಗೇಡಿಗಳ ಕಾಟ ವಿಪರೀತವಾಗಿವೆ. ಕೊಠಡಿಗಳ ಕೀಲಿ, ಬಾಗಿಲು ಮುರಿಯುವರು. ಬಾಗಿಲು ಚೌಕಟ್ಟು ಕೀಳುವ ಪ್ರಯತ್ನ ನಡೆದಿದೆ. ಛಾವಣಿಯ ಹೆಂಚು ಒಡೆಯುತ್ತಾರೆ. ಕಟ್ಟಡದೊಳಗಿನ ಸಾಗವಾನಿ ತೊಲಿಗಳಷ್ಟೇ ಉಳಿದಿವೆ. ಅದನ್ನೂ ಯಾವಾಗ ಕಳವು ಮಾಡುತ್ತಾರೆ ಎಂಬ ಆತಂಕವನ್ನು ನಾಗಮ್ಮನವರ ವ್ಯಕ್ತಪಡಿಸಿದ್ದಾರೆ.

ಇದೇ ಕಟ್ಟಡದಲ್ಲಿ ಉರ್ದು ಶಾಲೆ ಮತ್ತು ಸಂಗೀತ ಶಾಲೆಯೂ ಇದೆ. ಶಾಲೆಯಲ್ಲಿ ಬಡವರ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿದ್ದಾರೆ. ಮುಂದಿನ ವರ್ಷ 8 ಮತ್ತು 9ನೇ ತರಗತಿ ಆರಂಭಿಸಲು ಮನವಿ ಮಾಡಲಾಗಿದೆ. ಶಾಲೆಗೆ ಶಾಸಕಿ ಸೀಮಾ ಮಸೂತಿ ಅವರು ಸಂಗೀತ ಉಪಕರಣಗಳ ಖರೀದಿಗೆ ರೂ. 80 ಸಾವಿರ ನೀಡಿದ್ದಾರೆ. ಅವುಗಳ ರಕ್ಷಣೆಯೂ ಈಗ ದೊಡ್ಡ ಸಮಸ್ಯೆಯಾಗಿದೆ. ಶಾಲೆ ಆವರಣದಲ್ಲಿ 40 ಸಸಿಗಳನ್ನು ನೆಡಲಾಗಿತ್ತು. ಅವನ್ನೂ ಕಿತ್ತು ಹಾಕಿದ್ದಾರೆ. ಇದನ್ನೆಲ್ಲ ನಿಯಂತ್ರಣ ಮಾಡೋದು ಹೇಗೆ ಎಂಬುದು ದೊಡ್ಡ ತಲೆನೋವಾಗಿದೆ ಎಂದು ಶಿಕ್ಷಕರು ಹೇಳುವರು.

ಎಸ್‌ಡಿಎಂಸಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಅವರು ಶಾಲೆ ದುಃಸ್ಥಿತಿ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸುತ್ತಾ,  `ಇಲ್ಲಿ ಕೆಟ್ಟ ಕೆಲಸಾ ನಡಿತಾವ್ರೀ, ಏನರೆ ಮಾಡ್ರಿ ಅಂತ ಪೊಲೀಸರ‌್ಗಿ ಹೇಳಿದೀವ್ರಿ. ಆದ್ರ ಎಸ್‌ಡಿಎಂಸಿಯವರು ಅಥವಾ ಮಾಸ್ತರಗೋಳ ರಾತ್ರಿ ಪಾಳಿ ಹಾಕ್ಕೊಂಡ ನೋಡಕೋರಿ ಅಂತ ಹೇಳ್ತಾರ.  ಪೊಲೀಸರ ಬಂದ ನಾಕೈದು ಮಂದಿನ ಹಿಡದ ಒಳಗ ಹಾಕಿದ್ರ ಮಾತ್ರ ಈ ಸಾಲಿ ಉಳಿತೈತಿ. ಇಲ್ಲಾಂದ್ರ ನೂರ ವರ್ಷ ಆಗೂದ್ರಾಗ, ಗ್ವಾಡಿನೂ ಒಡಕೊಂಡ ಹೋಗ್ತಾರ‌್ರೀ~ ಎಂದು ನೋವಿನಿಂದ    ಹೇಳಿದರು.

ದೀಪದ ಬುಡದಲ್ಲಿ ಕತ್ತಲು ಎಂಬಂತೆ, ಶಾಲೆಗೆ ಕೂಗಳತೆಯಲ್ಲಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಪೊಲೀಸ್ ವಸತಿ ಗೃಹಗಳಿವೆ. ಅವರ ಸಮ್ಮುಖದಲ್ಲಿರುವ ಶಾಲೆಗೆ ರಕ್ಷಣೆ ಇಲ್ಲದಾಗಿದೆ. `ಮನಸ್ಸ ಮಾಡಿದ್ರ ಎಲ್ಲಾ ಆಗತೈತ್ರಿ. ಪೊಲೀಸ್ರು ಮನಸ್ಸ ಮಾಡಾಕ ತಯಾರ ಇಲ್ಲ. ಎನ್ನುವುದು ಹಲವು ಪಾಲಕರ ವಿಷಾದದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT