ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಡಿಗೇಡಿಗಳತ್ತ ಪೊಲೀಸ್ ದಿವ್ಯದೃಷ್ಟಿ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಿತ್ಯ ನಾವು ಒಂದಿಲ್ಲೊಂದು ಪ್ರತಿಭಟನಾ ಮೆರವಣಿಗೆಗಳನ್ನು ನೋಡುತ್ತಿರುತ್ತೇವೆ.  ಪ್ರಮುಖ ಹಬ್ಬಗಳ ಸಂದರ್ಭಗಳಲ್ಲೂ ಈ ರೀತಿ ಸಾರ್ವಜನಿಕ ಮೆರವಣಿಗೆ ಹೋಗುವುದನ್ನು ಕಾಣಬಹುದು. ಇಂಥ ಸಂದರ್ಭಗಳಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಪೊಲೀಸರು ನಿಗಾ ವಹಿಸುತ್ತಿರುತ್ತಾರೆ.

ಆದರೂ, ಒಮ್ಮಮ್ಮೆ ಕ್ಷುಲ್ಲಕ ಕಾರಣಗಳಿಗೆ ಗುಂಪು ಘರ್ಷಣೆ, ದೊಂಬಿ ನಡೆದೇಬಿಡುತ್ತವೆ. ಇಂಥ ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ದೊಡ್ಡ ಗುಂಪಿನಲ್ಲಿ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲೇ ಸರಿ.

ತಂತ್ರಜ್ಞಾನ  ಇಷ್ಟೊಂದು ಮುಂದುವರೆದಿರುವ ಪ್ರಸ್ತುತ ಸಂದರ್ಭದಲ್ಲಿ ಇಂಥ ಘಟನೆಗಳ ಮೇಲೆ ನಿಗಾ ವಹಿಸಲು ಕಂಪ್ಯೂಟರ್ ಮತ್ತು ಕ್ಯಾಮೆರಾ ಆಧಾರಿತ ತಂತ್ರಜ್ಞಾನವನ್ನು(ಮೊಬೈಲ್ ಮಲ್ಟಿಕ್ಯಾಮ್  ಸರ್ವೆಲೆನ್ಸ್ ಸಿಸ್ಟಂ) ಶಿವಮೊಗ್ಗ ಪೊಲೀಸರು ಅಳವಡಿಸಿಕೊಂಡಿದ್ದು, ಇಡೀ ವ್ಯವಸ್ಥೆಗೆ `ದಿವ್ಯದೃಷ್ಟಿ~ ಎಂದು ನಾಮಕರಣ ಮಾಡಿದ್ದಾರೆ.

ತಂತ್ರಜ್ಞಾನ ಬಳಕೆಯು ಆಡಳಿತ ನಿರ್ವಹಣೆ, ರಕ್ಷಣಾ ವ್ಯವಸ್ಥೆ, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೆ ಎಷ್ಟು ಉಪಯುಕ್ತ ಎಂಬುದಕ್ಕೆ ಇದೊಂದು ಚಿಕ್ಕ ನಿದರ್ಶನ.

ಕಾರ್ಯ ನಿರ್ವಹಣೆ
`ಮೊಬೈಲ್ ಮಲ್ಟಿಕ್ಯಾಮ್  ಸರ್ವೆಲೆನ್ಸ್ ಸಿಸ್ಟಂ~ ಹಲವು ಕ್ಯಾಮೆರಾಗಳನ್ನು ಹೊಂದಿರುವ ಗಸ್ತು ತಿರುಗುವ `ದಿವ್ಯದೃಷ್ಟಿ~ ವಾಹನ. ಪ್ರತಿಭಟನಾ ಮೆರವಣಿಗೆ ಜತೆಯಲ್ಲೇ ಸಂಚರಿಸುವ ಈ ಪೊಲೀಸ್ ವಾಹನದಲ್ಲಿ 400 ಮೀಟರ್‌ವರೆಗಿನ ಆಗುಹೋಗುಗಳನ್ನು ಚಿತ್ರೀಕರಿಸುವಂತೆ ಕ್ಯಾಮೆರಾಗಳನ್ನು  ಅಳವಡಿಸಲಾಗಿದೆ.

ವಾಹನದ ಮೇಲಿರುವ  ಕ್ಯಾಮೆರಾ 360 ಡಿಗ್ರಿ ಕೋನದಲ್ಲಿ ತಿರುಗುತ್ತಾ ಸುತ್ತಮುತ್ತಲ ದೃಶ್ಯಗಳ ಚಿತ್ರೀಕರಣ ನಡೆಸುತ್ತಲೇ ಇರುತ್ತದೆ.  ಜತೆಗೆ, ವಾಹನದ ಮುಂದೆ, ಮೇಲ್ಭಾಗದಲ್ಲಿ, ವಾಹನದ ಒಳಗೆ, ಎಡ-ಬಲದಲ್ಲಿಯೂ ಕ್ಯಾಮೆರಾಗಳಿದ್ದು, 4 ಚಾನೆಲ್ ಡಿ.ವಿ.ಆರ್     ಕಾರ್ಡ್, 2 ಟಿ.ಬಿ ಹಾರ್ಡ್‌ಡಿಸ್ಕ್, 22 ಇಂಚಿನ  ಎಲ್.ಸಿ.ಡಿ  ಮಾನಿಟರ್ ಈ ಇಡೀ ವ್ಯವಸ್ಥೆಯಲ್ಲಿ ಇವೆ.

ಚಿತ್ರೀಕರಿಸಿದ ದೃಶ್ಯಗಳನ್ನು ಕ್ಷಣದಲ್ಲೇ ರವಾನಿಸಬಲ್ಲ ಹೈ ಬ್ಯಾಂಡ್‌ವಿಡ್ತ್ ತಂತ್ರಜ್ಞಾನವೂ ಜತೆಗೂಡಿದೆ. ಈ ಕ್ಯಾಮೆರಾದಲ್ಲಿ ಸೆರೆಯಾಗುವ ಚಿತ್ರಗಳು, ಅತ್ಯಂತ ಸ್ಪಷ್ಟವಾಗಿದ್ದು, ನ್ಯಾಯಾಲಯದಲ್ಲಿ ಪುರಾವೆಯಾಗಿಯೂ ಸಲ್ಲಿಸಬಹುದಾಗಿದೆ ಎನ್ನುತ್ತದೆ ಪೊಲೀಸ್ ಇಲಾಖೆ.

ರಾತ್ರಿ ವೇಳೆಯಲ್ಲೂ ಸಹ ಐ.ಆರ್. ಲೈಟ್ ಬಳಸಿ ಘಟನೆಗಳನ್ನು ಚಿತ್ರೀಕರಿಸುವ ಸೌಲಭ್ಯವೂ ಇದರಲ್ಲಿದೆ.  ಈ ವ್ಯವಸ್ಥೆಯಡಿ ಚಿತ್ರಿತವಾಗುತ್ತಿರುವ ಘಟನೆಗಳನ್ನು, ವ್ಯಕ್ತಿಗಳ ಚಟುವಟಿಕೆಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಕಚೇರಿಯಲ್ಲಿ ಕುಳಿತೇ ಅಂತರ್ಜಾಲ ಸಂಪರ್ಕದ ಮೂಲಕ ನೇರ ವೀಕ್ಷಿಸಬಹುದಾಗಿದೆ. ಹಾಗೂ ಅಲ್ಲಿಂದಲೇ ಪರಿಸ್ಥಿತಿ ನಿಯಂತ್ರಿಸಬಹುದು.

ವಾಹನದಲ್ಲಿ ಅಳವಡಿಸಿರುವ ಡೈನಮೊ, ಸ್ಪೀಡ್ ಮೆಕ್ಯಾನಿಕಲ್ ಎನರ್ಜಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ, ನಂತರ ಅದನ್ನು ಡಿ.ಸಿ ವೋಲ್ಟೇಜ್    (12ವಿ) ಆಗಿಸಿ 12 ಒಎಎಚ್‌ಗಿಂತಲೂ ಹೆಚ್ಚಿನ ಬ್ಯಾಕ್ ಅಫ್ ಸ್ಟೋರೇಜ್ ಒದಗಿಸಬಲ್ಲಷ್ಟು ಶಕ್ತಿಯುತವಾಗಿದೆ.

ಇನ್‌ವರ್ಟರ್ ಯುಪಿಎಸ್‌ನಿಂದ ಇದು ಎಸಿಯಾಗಿ ಪರಿವರ್ತಿಸಿ 1 ಕೆವಿಎ ವಿದ್ಯುತ್ ಪಡೆಯಬಹುದು. ಇದನ್ನು ಇನ್ನಷ್ಟು ಸುಧಾರಿತ ರೀತಿಯಲ್ಲಿ ಬಳಸಲೂ ಅವಕಾಶವಿದೆ.
ಶಿವಮೊಗ್ಗ ಪೊಲೀಸರು ಈ ತಂತ್ರಜ್ಞಾನ ಬಳಸುವಲ್ಲಿ ಪೂರ್ವವಲಯದ ಐ.ಜಿ.ಪಿ ಸಂಜಯ್ ಸಹಾಯ್ ಅವರ ಶ್ರಮ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT