ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು ಬಂದ್ ಯಶಸ್ವಿ

Last Updated 4 ಅಕ್ಟೋಬರ್ 2012, 9:05 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕೋಳಿ ಫಾರ್ಮ್ ಸ್ಥಾಪನೆಯಿಂದಾಗಿ ನೋಣಗಳ ಹಾವಳಿ ಹೆಚ್ಚಾಗಿರುವುದನ್ನು ಪ್ರತಿಭಟಿಸಿದ ಇಲ್ಲಿಯ ನಾಗರಿಕರು ಅಂಗಡಿ-ಮುಂಗಟ್ಟುಗಳನ್ನು ಬುಧವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಮುಂಜಾನೆ ಗ್ರಾಮ ಪಂಚಾಯಿತಿ ಸಭಾಭವನಕ್ಕೆ ಸಾರ್ವಜನಿಕರು ಆಗಮಿಸಿ ಕುಲವಳ್ಳಿ ರಸ್ತೆಯಲ್ಲಿರುವ ಫಾರ್ಮ್ ಸ್ಥಳಕ್ಕೆ ಹೋಗಿ ಧರಣಿ ಮಾಡುವುದಾಗಿಯೂ ಘೋಷಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸುದ್ಧಿ ಅರಿತ ಉಪವಿಭಾಗಾಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹಾಗೂ ತಹಸೀಲ್ದಾರ ಲೋಕೇಶ್ ಪಿ. ಎನ್. ಅವರು ಬೈಲಹೊಂಗಲದಿಂದ ಧಾವಿಸಿ ಬಂದರು. ಅನಂತರ ಫಾರ್ಮ್ ಇರುವ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಜೊತೆಗೆ ತೆರಳಿ ಪರಿಶೀಲನೆ ನಡೆಸಿದರು.

ಬಾಲ ಕಾರ್ಮಿಕರ ಬಳಸುತ್ತಿರುವುದು, ತಹಶೀಲ್ದಾರ ಅವರು ಆದೇಶದಲ್ಲಿ ನೀಡಿರುವ ಕೆಲ ನಿಯಮಗಳನ್ನು ಪಾಲಿಸದಿರುವುದು, ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಅಧಿಕಾರಿಗಳ ಗಮನಕ್ಕೆ ಬಂತು. ಒಂದು ಹಂತದಲ್ಲಿ ಉಪವಿಭಾಗಾಧಿಕಾರಿ ಹಿರೇಮಠ ಅವರು ತಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯದಿದ್ದರಿಂದ ಆಕ್ರೋಶಗೊಂಡರು.

ಪ್ರತಿ ಸ್ಥಳಗಳಿಗೆ ಖುದ್ದಾಗಿ ತೆರಳಿ ಪರಿಶೀಲನೆ ನಡೆಸಿದರು.
ಮುಖ್ಯದ್ವಾರದ ಹೊರಗಡೆ ಜಮಾಯಿಸಿದ್ದ ಜನರ ಸಹನೆಯ ಕಟ್ಟೆ ಒಡೆಯಲು ಪ್ರಾರಂಭಿಸಿತ್ತು. ಈಗಲೇ ಫಾರ್ಮ್ ವಿರುದ್ಧ ಕ್ರಮಕೈಗೊಂಡು ಅದನ್ನು ಮುಚ್ಚಿಸಬೇಕು ಎಂದೂ ಕೂಗಾಡಿದರು.

ನಿಯಮ ಬಾಹಿರವಾಗಿ ನಡೆಸುತ್ತಿರುವ ಫಾರ್ಮ್ ಮೇಲೆ ಎರಡು ದಿನದಲ್ಲಿ ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕರಿಗೆ ಹಿರೇಮಠ ಭರವಸೆ ನೀಡಿದರು.

ಜಿ. ಪಂ. ಸದಸ್ಯ ಯಲ್ಲಪ್ಪ ಒಕ್ಕುಂದ, ತಾ. ಪಂ. ಸದಸ್ಯ ದಿನೇಶ ವಳಸಂಗ, ಸುರೇಶ ದೇವರಮನಿ, ಬಸವರಾಜ ಸಂಗೊಳ್ಳಿ, ಗ್ರಾ. ಪಂ. ಉಪಾಧ್ಯಕ್ಷ ಮಹಾಂತೇಶ ಗಿರನಟ್ಟಿ, ಅಟೋ ರಿಕ್ಷಾ ಸಂಘಟನೆ ಅಧ್ಯಕ್ಷ ವಿಜಯಕುಮಾರ ಶಿಂಧೆ, ಕಿತ್ತೂರು, ಹೊನ್ನಾಪುರ, ಡೊಂಬರಕೊಪ್ಪ ಗ್ರಾಮದ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನೋಣಗಳ ಹಾವಳಿಗೆ ಬೇಸತ್ತು `ಕಿತ್ತೂರು ಬಂದ್~ ಘೋಷಿಸಿದ್ದರಿಂದ ಶಾಲೆ, ಕಾಲೇಜಿಗೂ ರಜೆ ಘೋಷಿಸಲಾಗಿತ್ತು. ಫಾರ್ಮ್ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT