ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೆಸೆಯಬಹುದಾದ ಜಾತಿ ಬೇರು

Last Updated 12 ಮೇ 2013, 19:59 IST
ಅಕ್ಷರ ಗಾತ್ರ

ಈಗ ವರ್ಷದ ಹಿಂದೊಮ್ಮೆ ಸಿಟಿಬಸ್‌ನಲ್ಲಿ ನನ್ನ ಮುಂದಿದ್ದ ಇಬ್ಬರು ಕಾಲೇಜು ಹುಡುಗಿಯರ ಮಾತನ್ನು ಕೇಳಿಸಿಕೊಳ್ಳುತ್ತ ಕೂತಿದ್ದೆ. ಯಾವುದೋ ಕ್ಲಾಸ್ ವಿಚಾರ ಮಾತನಾಡುತ್ತಿದ್ದ  ಅವರ ಮಾತು ಯಾವುದೋ ಹುಡುಗಿಯತ್ತ ಹೊರಳಿತು. ಒಬ್ಬಳು ಇನ್ನೊಬ್ಬಳಿಗೆ `ಅವ್ಳ ಗೌಡ್ರಾ?'' ಎಂದು ಕೇಳಿದಳು. `ಅಲ್ಲ, ಎಸ್‌ಸಿಯಂತೆ' ಎನ್ನುತ್ತಲೇ ಈ ಹುಡುಗಿ ಮೊದಲು ಕೇಳಿದವಳಿಗೆ `ನೀವು' ಎಂದು ಕೇಳಿದಳು. `ನಾವು ಬ್ರಾಹ್ಮಣರು, ನೀವು' ಎಂದು ಪುನಃ ಕೇಳಿದಳು ಅವಳು. ಎದುರಿನವಳು `ನಾವು ಬ್ರಾಹ್ಮಣರಲ್ಲ, ಆದ್ರೆ ಜನರಲ್ ಕೆಟಗರಿನೇ' ಎಂದಳು.

ನಂತರ ಇಬ್ಬರೂ ಸೇರಿ, ಆ ಎಸ್‌ಸಿ ಹುಡುಗಿ ಸೆಕೆಂಡ್ ಪಿಯುಸಿಯಲ್ಲಿ ಶೇ. 35ರಷ್ಟೇ ಅಂಕ ತೆಗೆದರೂ ಹ್ಯಾಗೆ ಇಂಜಿನಿಯರಿಂಗ್ ಅಥವಾ ಮೆಡಿಕಲ್‌ಗೆ ಸೀಟು ಗಿಟ್ಟಿಸುತ್ತಾರೆ, ತಾವು ಜನರಲ್ ಕೆಟಗರಿಯವರು ಎಷ್ಟು ಓದಬೇಕಾಗುತ್ತದೆ ಎಂದು ಮಾತಾಡತೊಡಗಿದರು. ನಾನು ನಿಜಕ್ಕೂ ಬೆಚ್ಚಿಬಿದ್ದೆ.

ನಾನು ಕಾಲೇಜು ಓದುವಾಗ 80ರ ದಶಕದ ಕೊನೆಯಲ್ಲಿ ನಾನಿದ್ದ ಚಿಕ್ಕ ಪಟ್ಟಣದಲ್ಲಿಯೂ ನಾವು ಇಷ್ಟು ನೇರಾನೇರ ಜಾತಿ ಕೇಳುತ್ತಿದ್ದುದ್ದು ನನಗಂತೂ ನೆನಪಿಲ್ಲ. ಈಗಿನ ಇಂಟರ್‌ನೆಟ್-ಮೊಬೈಲ್ ಯುಗದಲ್ಲಿ, ಉಡುಗೆ ತೊಡುಗೆಯಲ್ಲಿ ಇಷ್ಟು ಮಾಡ್ ಆಗಿರುವಂತೆ ಕಾಣುವ ಕಾಲೇಜು ಮಕ್ಕಳು ಹೀಗೆ ಜಾತಿ ಕೇಳುತ್ತಾ ಚರ್ಚಿಸುವುದು ನನಗೆ ಆತಂಕವನ್ನೂ ಹುಟ್ಟುಹಾಕಿತು.

ಸದ್ಯ ನನ್ನ ಮಗ ಇಂತಹ ಜಾತಿ ಚರ್ಚೆಯಿಂದ ಹೊರಗುಳಿದಿದ್ದಾನೆ ಎಂದುಕೊಂಡೆ. ಇದರ ಮೂಲವೆಲ್ಲಿ ಎಂದು ಕಂಡುಕೊಳ್ಳಲು ಹೆಚ್ಚೇನೂ ಕಷ್ಟವಿಲ್ಲ, ಇಂತಹ ಚರ್ಚೆಗಳ ಬೀಜವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವುದೇ ಮನೆಯಲ್ಲಿ ನಡೆಯುವ ಜಾತಿ ಮಾತುಕತೆಗಳು. ಮಕ್ಕಳ ಮನಸ್ಸಿನಲ್ಲಿ ಜಾತಿಯ ವಿಷಬೀಜ ಬಿತ್ತದಂತೆ ತಾಯಂದಿರು ನೋಡಿಕೊಳ್ಳಬಹುದು ಎಂಬುದನ್ನು ನನ್ನ ಅನುಭವದಿಂದ ಹೇಳಬಲ್ಲೆ.

ಮನೆಗೆಲಸದ ಸಹಾಯಕಿಯನ್ನು ಗೌರವ ಘನತೆಯಿಂದ ನಡೆಸಿಕೊಳ್ಳುವುದರಿಂದ ಹಿಡಿದು ನನ್ನ ಮತ್ತು ಮಗನ ಗೆಳೆಯ, ಗೆಳತಿಯರ ವಿಚಾರದಲ್ಲಿ ಜಾತಿಯ ಕಾರಣಕ್ಕಾಗಿ ಭೇದಭಾವ ಮಾಡದೇ, ಜಾತಿಯ ಹಂಗಿಲ್ಲದ ಗೆಳೆತನ, ಬಾಂಧವ್ಯ ಇಟ್ಟುಕೊಳ್ಳುವುದಕ್ಕೆ ತಾಯಂದಿರು ಮಾದರಿಯಾಗಬಹುದು. ಇದು ನನ್ನ ಅನುಭವದ ಮಾತು.

ಅಂತರ್ಜಾತಿ  ಮದುವೆಗಳಿಂದ ಜಾತಿ ವಿನಾಶ ಸಾಧ್ಯವೆಂಬುದೂ ಕೂಡ ಭ್ರಮೆಯೇ. ನಮ್ಮಲ್ಲಿ ಮದುವೆಯಾಗಿ ಬಂದ ಹೆಣ್ಣಿಗೆ  ಗಂಡನ ಮನೆಯ ಜಾತಿ ಮತ್ತು ಜಾತಿ ಸಂಬಂಧಿತ ಪದ್ಧತಿಗಳನ್ನು ಅನುಸರಿಸುವ ಅನಿವಾರ್ಯತೆ ಇರುವುದರಿಂದ  ಮತ್ತು ಮಕ್ಕಳಿಗೂ ಜಾತಿ ಕಾಲಂನಲ್ಲಿ ತಂದೆಯ ಜಾತಿ ಬರುವುದರಿಂದ ಜಾತಿ ವಿನಾಶವೇನೂ ಆಗುವುದಿಲ್ಲ. ಹೀಗೆ ಮದುವೆಯ ನಂತರ ಎರಡೂ ಬೀಗರ ನಡುವೆ ಸಂಬಂಧ ಉತ್ತಮವಾಗಿದ್ದು, ಎರಡೂ ಕಡೆಗಳಲ್ಲಿ  ಕೊಡು-ಕೊಳ್ಳುವ ವ್ಯವಹಾರಗಳಿದ್ದರೆ ಜಾತಿಯ ಕುರಿತು ಒಂದು ಬಗೆಯ ಸಹಿಷ್ಣುತಾ ಮನೋಭಾವ, ಗೌರವಿಸುವ ಮನೋಭಾವ ಬೆಳೆಯಬಹುದೇನೋ.

ಆದರ್ಶವೆಂದು ನಾನು ಭ್ರಮಿಸಿದ್ದ ನನ್ನ ಅಂತರ್ಜಾತಿ ಮದುವೆ ಮತ್ತು ಈಗ ಬೇರ್ಪಟ್ಟಿರುವುದರಿಂದ ನನಗೆ ಮತ್ತು ಮಗನಿಗಾದ ಒಂದು ಬಹುದೊಡ್ಡ ಲಾಭ ಎಂದರೆ ಆ ಎರಡೂ ಜಾತಿಗಳಿಂದ ನಾವಿಬ್ಬರೂ ಹೊರಗುಳಿದಿದ್ದು, ಆ ಅರ್ಥದಲ್ಲಿ ನಾವಿಬ್ಬರೂ ಬಹಳ ಸುರಕ್ಷಿತವಾಗಿದ್ದೇವೆ ಎಂದು ನಾನು ತಮಾಷೆ ಮಾಡುತ್ತಿರುತ್ತೇನೆ. ಇದು ನಿಜ ಕೂಡ.

ಬ್ರಾಹ್ಮಣರಲ್ಲಿ ಋತುಚಕ್ರದ ಅವಧಿಯಲ್ಲಿ ಮತ್ತು ಶ್ರಾದ್ಧ  ಇನ್ನಿತರ ಸಂದರ್ಭಗಳಲ್ಲಿ ಮಡಿಮೈಲಿಗೆ ಪಾಲಿಸುವ ವಿಚಾರದಲ್ಲಿ ಮನೆಯ ಹಿರಿಯ ಹೆಂಗಸರು ತುಂಬ ಕಠೋರವಾಗಿ ನಡೆದುಕೊಳ್ಳುತ್ತಾರೆ. ಇಂತಹ ಅಂಧಶ್ರದ್ಧೆಯ ಆಚರಣೆಗಳನ್ನು ಹಿರಿಯ ಹೆಂಗಸರ ಜೀನ್‌ನಲ್ಲಿಯೇ ಸೇರಿಸಿಬಿಟ್ಟಿರುವ ಗಂಡಸರು ಮನೆ ಜಗುಲಿಯ ಮೇಲೆ ಕುಳಿತು ಯಾವ ಹೆಂಗಸರು ಇಂಥದನ್ನೆಲ್ಲ ಪಾಲಿಸುವುದಿಲ್ಲವೋ ಅವರ ಕುರಿತು ಪಟ್ಟಾಂಗ ಹೊಡೆಯುವುದರಲ್ಲಿ ಅಚ್ಚರಿಯೇನಿಲ್ಲ.

ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರದಿಂದ ಹಿಡಿದು, ಮನೆಯಲ್ಲಿ ಪೂಜೆ, ಶ್ರಾದ್ಧಕರ್ಮಾದಿಯವರೆಗೆ ಬ್ರಾಹ್ಮಣ ಪುರುಷರು ಮಹಿಳೆಯರನ್ನು ಹೊರಗಿಟ್ಟಿದ್ದಾರೆ ನಿಜ. ಆದರೆ ಇವುಗಳಲ್ಲಿ ನಂಬಿಕೆಯಿಲ್ಲದ ನನಗೆ ಇಂತಹ ಆಚರಣೆಗಳಲ್ಲಿ ಕಟ್ಟಿಹಾಕದೇ ಹೊರಗಿಟ್ಟಿದ್ದೇ ಒಳ್ಳೆಯದಾಯ್ತು ಎಂದೂ ಅನ್ನಿಸುತ್ತದೆ. ನಮಗೆ ಸಮಾನತೆ, ಸಮತೆ ಬೇಕು ನಿಜ, ಆದರೆ ಅಂಧಶ್ರದ್ಧೆ, ಕುರುಡು ಆಚರಣೆಗಳಲ್ಲಿ ಸಮಪಾಲು ಬೇಡ. 

ನಮಗೆ ಜಾತಿ ರಹಿತ ಸಮಾಜ ಬೇಕು ಎಂದರೆ ಮೊದಲು ಮನೆಗಳಿಂದ ಜಾತಿ ಹೊರಗೋಡಿಸಬೇಕಿದೆ. ಮಕ್ಕಳು ಬೆಳೆಯುತ್ತಿದ್ದಂತೆ ಅವರ ಸುತ್ತ ಜಾತಿಯ ಬೇಲಿ ಹಾಕುವ ಅಪ್ಪ, ಅಮ್ಮಂದಿರಾದ ನಾವು ಮೊದಲು ಬದಲಾಗಬೇಕಿದೆ. ಜೊತೆಗೆ ಮೀಸಲಾತಿ ಎನ್ನುವುದನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನೆಲೆಯಲ್ಲಿ  ನೋಡಬೇಕಾದ ಅಗತ್ಯವನ್ನು ನಾವೂ ಅರಿತು, ನಮ್ಮ ಮಕ್ಕಳಲ್ಲಿಯೂ ಈ ವಿಚಾರಶೀಲತೆ ಬೆಳೆಸಬೇಕಿದೆ.

ಜಾತಿ ಎಲ್ಲೆ ಮೀರುವತ್ತ ಒಂದು ಪ್ರಾಥಮಿಕ ಹೆಜ್ಜೆ ಎಂದರೆ ಮಹಿಳೆಯರು ತಮ್ಮ ಮನೆಗೆಲಸದ ಸಹಾಯಕರಿಗೆ ನೀರು/ಟೀ/ಕಾಫಿ ಕುಡಿಯಲು ಪ್ರತ್ಯೇಕ ಲೋಟ, ತಿನ್ನಲು ತಟ್ಟೆಗಳನ್ನು ಇಡುವುದನ್ನು ಕೈಬಿಟ್ಟು, ಅವರು ನಮ್ಮಷ್ಟೇ ಮನುಷ್ಯರು ಎಂಬುದನ್ನು ಕೃತಿಯಲ್ಲಿ ಆಚರಣೆಗೆ ತರುವುದು. ನನ್ನ ಈ ಸಲಹೆ ತೀರಾ ಕ್ಷುಲ್ಲಕ ಎನ್ನಿಸಬಹುದು.

ಆದರೆ ವೈಚಾರಿಕವಾಗಿ ಮುಂದುವರೆದವರು ಎನ್ನುವವರು, ಬುದ್ಧಿಜೀವಿಗಳು ಎನ್ನುವವರೂ ಕೂಡ ತಮ್ಮ ಮನೆಗೆಲಸದ ಸಹಾಯಕರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ಎಂಬ ವಿಚಾರದಲ್ಲಿ ನಾನು ಕೆಲವರನ್ನು ಹತ್ತಿರದಿಂದ ನೋಡಿರುವೆ ಮತ್ತು ಕಾಸ್ಮೋಪಾಲಿಟನ್ ಸಂಸ್ಕತಿಯಲ್ಲಿಯೂ ಮನೆಗೆಲಸದ ಸಹಾಯಕರಿಗೆ ಪ್ರತ್ಯೇಕ ತಟ್ಟೆಲೋಟ ಇಡುವುದು ತೀರಾ ಸಾಮಾನ್ಯ. ತನ್ನ ತಾಯಿ ಇಂತಹ ವಿಚಾರಗಳಲ್ಲಿ ಹೇಗೆ ನಡೆದುಕೊಳ್ಳುತ್ತಾಳೆ ಎನ್ನುವುದು ಮಕ್ಕಳ ಮನಸ್ಸಿನ ಮೇಲೆ ತುಂಬ ಪ್ರಭಾವ ಬೀರುತ್ತದೆ. ಜಾತಿಬೇರಿನ ಬುಡ ಸಡಿಲುಗೊಳಿಸುವ ಪ್ರಕ್ರಿಯೆ ಮನೆಯಿಂದಲೇ ಮತ್ತು ಚಿಕ್ಕಪುಟ್ಟ ವಿಚಾರಗಳಿಂದಲೇ ಪ್ರಾರಂಭಗೊಳ್ಳಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT