ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಯೋಸ್ಕ್ ವೈದ್ಯ!

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಎಟಿಎಂ ಕೇಂದ್ರಕ್ಕೆ ಹೋಗಿ ಹಣ ಪಡೆಯುವುದು ಈಗ ಮಕ್ಕಳಿಗೂ ಗೊತ್ತಿರುವ ಸಂಗತಿ. ವಿವಿಧ ಬಿಲ್ ಪಾವತಿಗೆ ಬಗೆಬಗೆ ಕಿಯೋಸ್ಕ್‌ಗಳಿವೆ. ಯಾವುದೋ ಒಂದು ಬಗೆಯ ಅನಾರೋಗ್ಯಕ್ಕೆ ಅಂತಹುದೇ `ಕಿಂಡಿ'ಯ ಮುಂದೆ ನಿಂತು `ನನಗೆ ಇಂತಹುದೊಂದು ಸಮಸ್ಯೆಯಿದೆ. ಪರಿಹಾರ, ಚಿಕಿತ್ಸೆ, ಔಷಧಿ ಬಗ್ಗೆ ತಿಳಿಸಿ' ಅಂತ ಹೇಳಿಕೊಳ್ಳುವಂತಿದ್ದರೆ?

ಹೌದು, ಇಂತಹ ಕನಸು ನನಸಾಗುವ ದಿನ ಬಂದೇಬಿಟ್ಟಿದೆ. ಅದೂ, ದೇಶದಲ್ಲಿ  ಮೊದಲ ಬಾರಿಗೆ ಬೆಂಗಳೂರಿನಲ್ಲಿಯೇಹೆಲ್ತ್ ಕಿಯೋಸ್ಕ್‌ಗಳು ಸದ್ಯದಲ್ಲೇ ಕಾರ್ಯಾರಂಭ ಮಾಡಲಿವೆ. `ಇ-ಹೆಲ್ತ್ ಆಕ್ಸೆಸ್' ಸಂಸ್ಥೆ `ವರ್ಚುವಲ್ ಮೆಡಿಕಲ್ ಕಿಯೋಸ್ಕ್'ಗಳನ್ನು ಪರಿಚಯಿಸಲಿದೆ. ನಗರದ ಒಬೆರಾಯ್ ಹೋಟೆಲ್‌ನಲ್ಲಿ ಈ ಕಿಯೋಸ್ಕ್‌ಗಳ ಕಾರ್ಯನಿರ್ವಹಣೆ ಕುರಿತು ಮೊನ್ನೆ ನಡೆದ ಪ್ರಾತ್ಯಕ್ಷಿಕೆ ವೇಳೆ ಈ ವಿಷಯವನ್ನು ಪ್ರಕಟಿಸಲಾಯಿತು.

`ಸುರಕ್ಷಿತ ವಾತಾವರಣದಲ್ಲಿ ರೋಗಿ ಮತ್ತು ವೈದ್ಯರ ನಡುವೆ ಸಂವಹನಕ್ಕೆ ಕಾರಣವಾಗುವ ಒಂದು ವಿನೂತನ ತಂತ್ರಜ್ಞಾನ ಪ್ರಯೋಗ ಇದಾಗಿದೆ. ರೋಗಿಗಳು ಮತ್ತು ವೈದ್ಯರು ಫೋನ್, ವೆಬ್ ಕ್ಯಾಮೆರಾ, ವಿಡಿಯೋ ಕಾನ್ಫರೆನ್ಸಿಂಗ್, ಮೆಸೇಜ್ ಅಥವಾ ಚಾಟ್ ಮಾಡುವ ಮೂಲಕ ಪರಸ್ಪರ ಮಾತುಕತೆ ನಡೆಸಬಹುದು. ಕಿಯೋಸ್ಕ್‌ಗಳಲ್ಲಿ ಟಚ್ ಸ್ಕ್ರೀನ್ ವ್ಯವಸ್ಥೆ, ಆಡಿಯೊ ವೀಡಿಯೊ ಸಾಮರ್ಥ್ಯ, ತಪಾಸಣಾ ಉಪಕರಣಗಳು, ಸ್ಕ್ಯಾನರ್ ಮತ್ತು ವೈಯಕ್ತಿಕ ಆರೋಗ್ಯ ಮಾಹಿತಿಗಳನ್ನು ನೀಡುವ ವೈದ್ಯಕೀಯ ನಿರ್ವಹಣೆ ಸಾಫ್ಟ್‌ವೇರ್‌ಗಳು ಇವೆ. ಯಾವುದೇ ಸಮಯದಲ್ಲಾದರೂ ವೈದ್ಯಕೀಯ ತಜ್ಞರ ಸಲಹೆ ಪಡೆದುಕೊಳ್ಳಬಹುದು' ಎಂದು ಮಾಹಿತಿ ನೀಡಿದರು `ಇ-ಹೆಲ್ತ್ ಆಕ್ಸೆಸ್'ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೈದೀಪ್ ರೆಡ್ಡಿ.

ಇ ಹೆಲ್ತ್ ಆಕ್ಸೆಸ್ ವೆಬ್‌ಸೈಟ್ (https://ehealthaccess.com)ನಲ್ಲಿ ಹೆಸರು ನೋಂದಾಯಿಸುವ ಮೂಲಕ ಈ ಸೌಲಭ್ಯಕ್ಕೆ ಸದಸ್ಯರಾಗಬೇಕು. ಹೀಗೆ ಸದಸ್ಯರಾಗುತ್ತಿದ್ದಂತೆ ನಿಮ್ಮ ಕೋಡ್ ನಂಬರ್ ಪರದೆಯಲ್ಲಿ ಮೂಡುತ್ತದೆ. ಪ್ರತಿಬಾರಿ ಕಿಯೋಸ್ಕ್ ಬಳಸುವಾಗ ಈ ಕೋಡ್ ನಂಬರ್ ಒತ್ತಬೇಕು. ಸಂವಹನಕ್ಕೆ ಬೇಕಾದ ಭಾಷೆಯನ್ನು ಆಯ್ಕೆ ಮಾಡುವುದು ಎರಡನೇ ಹಂತ. ಅಷ್ಟರಲ್ಲಿ ವೈದ್ಯರೊಬ್ಬರು ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರಲ್ಲಿ ವೀಡಿಯೊ ಕಾನ್ಫರೆನ್ಸಿಂಗ್, ಚಾಟ್ ಅಥವಾ ಸಂದೇಶ ರವಾನಿಸುವ ಮೂಲಕ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬೇಕು. ಕಂಪ್ಯೂಟರ್ ಬಳಸಲು ಗೊತ್ತಿಲ್ಲದವರಿಗೆ ಕಿಯೋಸ್ಕ್‌ನಲ್ಲಿರುವ ಸಹಾಯಕರು ನೆರವಾಗುತ್ತಾರೆ.

ಜತೆಗೆ ರಕ್ತದೊತ್ತಡ ತಪಾಸಣೆ, ಸ್ಕ್ಯಾನಿಂಗ್‌ನಂತಹ ವೈದ್ಯಕೀಯ ನೆರವನ್ನೂ ಅವರೇ ನೀಡುತ್ತಾರೆ. ಕೊನೆಯಲ್ಲಿ ವೈದ್ಯಕೀಯ ತಪಾಸಣೆಯ ವರದಿ ಮತ್ತು ಔಷಧಿಯ ಪ್ರಿಸ್ಕ್ರಿಪ್ಷನ್ ಸಿಗುತ್ತದೆ. ಕಿಯೋಸ್ಕ್‌ನ ಬಳಕೆಗೆ ವಾರ್ಷಿಕ 99ರಿಂದ 999 ರೂಪಾಯಿ ಮೊತ್ತದ ಪ್ರಿಪೇಯ್ಡ ಕಾರ್ಡ್ ಪಡೆಯಬೇಕು. ಇದನ್ನು ಪ್ರತಿಬಾರಿ ಎಟಿಎಂ/ಕ್ರೆಡಿಟ್ ಕಾರ್ಡ್‌ನಂತೆ ಬಳಸಿದರಾಯಿತು ಎಂಬುದು  ಸಂಸ್ಥೆಯ ಸಹ ಸ್ಥಾಪಕರಾದ ಟಿ.ಕೆ. ರಾಮ್‌ಪ್ರಭು ಅವರ ವಿವರಣೆ.
ಈ ತಂತ್ರಜ್ಞಾನವನ್ನು ಎಲ್ಲರು ಬಳಸಲು ಸಾಧ್ಯವಾಗುವಂತೆ ಕಾರ್ಪೊರೇಟ್‌ಗಳು, ಮಾರಾಟ ಮಳಿಗೆಗಳಲ್ಲಿ, ವೃದ್ಧಾಶ್ರಮಗಳಲ್ಲಿ ಅಳವಡಿಸಬಹುದಂತೆ. ಕಿಯೋಸ್ಕ್ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ ನಂತರ ಪೋಸ್ಟ್‌ಪೇಯ್ಡ ಮತ್ತು ಕಾರ್ಪೊರೇಟ್ ವಲಯಕ್ಕೆ ಮೀಸಲಾದ ಕಾರ್ಡ್‌ಗಳನ್ನೂ ಪರಿಚಯಿಸಲಾಗುವುದಂತೆ. ಹೆಚ್ಚಿನ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT