ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿದಾದ ರಸ್ತೆಗಳ ಎಲೆಪೇಟೆ ಪೂರ್ವ ವಾರ್ಡ್

Last Updated 13 ಸೆಪ್ಟೆಂಬರ್ 2011, 10:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಹಳೆಯ ಬಸ್ ನಿಲ್ದಾಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹೊಂದಿಕೊಂಡಂತಿರುವ ಎಲೆಪೇಟೆ ಪೂರ್ವ ವಾರ್ಡ್‌ನಲ್ಲಿ ವಿಶಾಲವಾದ ರಸ್ತೆಗಳಿಲ್ಲ. ಬಹು ತೇಕ ಕಿರಿದಾದ ರಸ್ತೆಗಳಿಂದ ಕೂಡಿರುವ ಈ ವಾರ್ಡ್‌ನಲ್ಲಿ ದ್ವಿಚಕ್ರ ವಾಹನಗಳಿಗೆ ಮತ್ತು ಆಟೋರಿಕ್ಷಾಗಳಿಗೆ ಮಾತ್ರವೇ ಅವಕಾಶವಿದೆಯೇ ಹೊರತು ಕಾರುಗಳಿಗೆ ಸಂಚರಿಸಲು ಸ್ವಲ್ಪವೂ ಸ್ಥಳಾವಕಾಶವಿಲ್ಲ.

ಬಹುತೇಕ ಹಿಂದುಳಿದವರು, ಅಲ್ಪ ಸಂಖ್ಯಾತರು ಮತ್ತು ಬಡವರು ವಾಸವಿರುವ ಈ ವಾರ್ಡ್‌ನಲ್ಲಿ ಬಹುತೇಕ ಮಂದಿ ಆಯಾ ದಿನದ ಕೂಲಿ ಅಥವಾ ದುಡಿಮೆ ನಂಬಿಕೊಂಡು ಬದುಕುತ್ತಿದ್ದಾರೆ. ಕೆಲವರು ದೂರದ ಊರುಗಳಿಗೆ ಹೋಗಿ ಕೂಲಿ ಮಾಡಿದರೆ, ಇನ್ನೂ ಕೆಲವರು ನಗರದ ಆಸುಪಾಸಿನಲ್ಲೇ ಕೆಲಸ ಮಾಡುತ್ತಾರೆ. ಸರ್ವಧರ್ಮೀಯರು ವಾಸವಿರುವ ಈ ವಾರ್ಡ್‌ನಲ್ಲಿ ದೇವಾಲಯ, ದರ್ಗಾ ಮತ್ತು ಚರ್ಚ್ ಇದೆ.

ವಾರ್ಡ್‌ನ ವ್ಯಾಪ್ತಿ ಕಿರಿದಾಗಿದ್ದರೂ ಮೂಲಸೌಕರ್ಯ ಕೊರತೆಯನ್ನು ಎದುರಿಸುತ್ತಿದೆ. ಬಹುತೇಕ ರಸ್ತೆಗಳು ಕಾಂಕ್ರೀಟ್ ಅಥವಾ ಡಾಂಬರೀಕರಣ ಕಂಡಿಲ್ಲ. ರಸ್ತೆಬದಿಗಳಲ್ಲಿ ಚರಂಡಿಗಳು ಇವೆಯಾದರೂ ಅದರಲ್ಲಿನ ಮಲಿನ ನೀರು ಹರಿಯುವುದಿಲ್ಲ. ಹಲವು ದಿನಗಳಾದರೂ ರಸ್ತೆಬದಿಗಳಲ್ಲಿ ಮತ್ತು ತಿಪ್ಪೆಗುಂಡಿಗಳಲ್ಲಿ ಎಸೆಯಲ್ಪಟ್ಟ ತ್ಯಾಜ್ಯ ವಿಲೇವಾರಿಯಾಗುವುದಿಲ್ಲ. ಈ ವಾರ್ಡ್‌ನಲ್ಲಿ ಕೊರಮರು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ  ವಾಸವಿದ್ದು, ಬಿದಿರು ಕಸುಬುಗಾರಿಕೆಯನ್ನೇ ನಂಬಿಕೊಂಡೇ ಜೀವನ ಸಾಗಿಸುತ್ತಿದ್ದಾರೆ.ಮನೆಗಳು ಚಿಕ್ಕದಾಗಿರುವ ಕಾರಣ ರಸ್ತೆಮಧ್ಯೆದಲ್ಲೇ ಕೂತು ಬಿದಿರಿನ ಕೆಲಸ ಮಾಡುತ್ತಾರೆ.

`ಒಂದಿಡೀ ರಸ್ತೆ ಪೂರ್ತಿ ಕೊರಮರು ಸಮುದಾಯದವರೇ ಇದ್ದೇವೆ. ಆದರೆ ನಮ್ಮ ಸಮಸ್ಯೆ ಮತ್ತು ಸಂಕಷ್ಟಗಳತ್ತ ಈವರೆಗೆ ಯಾರೂ ಗಮನಹರಿಸಿಲ್ಲ. ನಗರಸಭಾ ಸದಸ್ಯರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಯಾರೂ ಸಹ ನಮಗೆ ಸೌಕರ್ಯ ಕಲ್ಪಿಸುವ ಬಗ್ಗೆ ಆಸಕ್ತಿ ತೋರಿಲ್ಲ.

ತಿಂಗಳಿಗೊಮ್ಮೆ ಸಿಹಿನೀರು ಪೂರೈಕೆಯಾಗುತ್ತದೆ. ಬೋರ್‌ವೆಲ್ ನೀರು ಸಾಕಾಗುವುದಿಲ್ಲ. ಬಿದಿರಿನ ಕೆಲಸವನ್ನು ರಸ್ತೆಯಲ್ಲೇ ಮಾಡಬೇಕು. ನಮಗೆ ಬೇರೆ ವ್ಯವಸ್ತೆಯನ್ನು ಕಲ್ಪಿಸಲಾಗಿಲ್ಲ~ ಎಂದು ಕೊರಮರು ಬೀದಿ ನಿವಾಸಿ ಅಣ್ಣಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ಹಲವು ತಿಂಗಳುಗಳಿಂದ ಡಾಂಬರೀಕರಣ ಕಂಡಿಲ್ಲ. ಎಲ್ಲೆಡೆ ಬರೀ ಮಣ್ಣಿನ ರಸ್ತೆಗಳೇ ಇವೆಯೇ ಹೊರತು ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿಲ್ಲ. ರಸ್ತೆ ಬದಿಗಳಲ್ಲಿಯೇ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ. ಏಕಕಾಲಕ್ಕೆ ಎದುರು-ಬದುರಿನಿಂದ ದ್ವಿಚಕ್ರ ವಾಹನಗಳು ಬಂದರೆ, ಅಪಘಾತ ವಾಗುವುದಂತೂ ನಿಶ್ಚಿತ. ಬೈಕ್‌ಗಳ ಸಂಚಾರ ಹೆಚ್ಚಾಗಿರುವುದರಿಂದ ಕಿರಿದಾದ ರಸ್ತೆಗಳಲ್ಲಿ ಪಾದಚಾರಿಗಳು ನಡೆದಾಡುವುದೇ ಕಷ್ಟಕರವಾಗಿದೆ~ ಎಂದು ಇನ್ನೊಬ್ಬ ನಿವಾಸಿ ಕೃಷ್ಣಪ್ಪ ತಿಳಿಸಿದರು.

ವಾರ್ಡ್‌ನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಅದರ ಸುತ್ತಮುತ್ತಲೂ ಆವರಣವಂತೂ ಮಣ್ಣಿನ ರಸ್ತೆಗಳಿಂದ ಕೂಡಿದೆ.  ಸಮೀಪ ದಲ್ಲೇ ಎಲ್ಲಿಯೂ ತಿಪ್ಪೆಗುಂಡಿಯಿಲ್ಲದ ಕಾರಣ ಕೆಲವರು ಅಲ್ಲಿಯೇ ತ್ಯಾಜ್ಯವಸ್ತುಗಳನ್ನು ಎಸೆಯು ತ್ತಾರೆ. ತ್ಯಾಜ್ಯವಸ್ತುಗಳನ್ನು ಪದೇ ಪದೇ ಎಸೆದ ಪರಿಣಾಮ ಚರಂಡಿಯಲ್ಲಿ ಭಾರಿ ಪ್ರಮಾಣದ ತ್ಯಾಜ್ಯ ಶೇಖರಣೆಯಾಗಿದೆ.

`ಒಳಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆ ಗಳನ್ನು ಅಗೆಯಲಾಯಿತು. ನಂತರದ ದಿನಗಳಲ್ಲಿ ಅದನ್ನು ದುರಸ್ತಿಗೊಳಿಸಲಿಲ್ಲ. ಈ ಕಾರಣದಿಂದಾಗಿಯೇ ರಸ್ತೆಯು ದೂಳುಮಯಗೊಂಡಿದೆ. ಮಳೆ ಬಂದಾಗಲಂತೂ ರಸ್ತೆಯು ಕೆಸರುಗದ್ದೆಯ ರೂಪ ಪಡೆದುಕೊಳ್ಳುತ್ತದೆ. ವಾಹನಗಳು ಕೊಚ್ಚೆಯಲ್ಲಿ ಸಿಲುಕಿ ಕೊಳ್ಳು ತ್ತವೆ. ಪಾದಚಾರಿಗಳ ಬಟ್ಟೆಗಳು ಹೊಲಸಾ ಗುತ್ತದೆ. ಆಗ ಮಕ್ಕಳಂತೂ ರಸ್ತೆಯಲ್ಲಿ ನಡೆದಾಡಲು ಭಯಪಡುತ್ತಾರೆ ಎಂದು ನಿವಾಸಿ ಆನಂದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT