ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಿರುಕುಳ ನಿಲ್ಲದಿದ್ದರೆ ದಿನಕ್ಕೊಬ್ಬರ ಸಾವು'

Last Updated 13 ಡಿಸೆಂಬರ್ 2012, 10:21 IST
ಅಕ್ಷರ ಗಾತ್ರ

ಪಾವಗಡ: ತನ್ನ ಮೇಲಧಿಕಾರಿಗಳ ಕಿರುಕುಳದಿಂದ ಮಂಗಳವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೊದಲ್ಲಿಯೇ ವಿಷ ಸೇವಿಸಿದ ಚಾಲಕ ಜಯಪ್ರಕಾಶ್ ಬುಧವಾರ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರು. ಸಹೋದ್ಯೋಗಿ ಸಾವಿನಿಂದ ರೊಚ್ಚಿಗೆದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಬುಧವಾರ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟಿಸಿದರು.

ಜಯಪ್ರಕಾಶ್ ಸಾವಿಗೆ ಕಾರಣರಾದ ಸಾರಿಗೆ ಡಿಪೊದ ಮೂವರು ಆಧಿಕಾರಿಗಳನ್ನು ತಕ್ಷಣ ಅಮಾನತ್ತು ಮಾಡಬೇಕು. ಚಾಲಕ ಮತ್ತು ಕಂಡಕ್ಟರ್‌ಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು. ಮುಕ್ತ ವಾತಾವರಣದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಬೇಕು ಎಂದು ಸಾರಿಗೆ ನಿಗಮದ ಉದ್ಯೋಗಿಗಳು ಒತ್ತಾಯಿಸಿದರು.

ಸಾರಿಗೆ ನಿಗಮಗಳ ನೌಕರರ ಒಕ್ಕೂಟದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮಾತನಾಡಿ ತುಮಕೂರಿನ ವಿಭಾಗೀಯ ನಿಯಂತ್ರಣಾಧಿಕಾರಿ, ಪಾವಗಡ ಡಿಪೊ ಮ್ಯಾನೇಜರ್, ಲೆಕ್ಕಪತ್ರ ಅಧಿಕಾರಿಗಳಿಂದ ಅವರಿಂದ ಆದ ಅವಮಾನ ಹಾಗೂ ಮಾನಸಿಕ ಕಿರುಕುಳವೇ ಜಯಪ್ರಕಾಶ್ ವಿಷಸೇವಿಸಲು ಕಾರಣ ಎಂದು ದೂರಿದರು.

ಪಾವಗಡ ಡಿಪೊದಲ್ಲಿ ಪರಿಸ್ಥಿತಿ ಬದಲಾಗದಿದ್ದರೆ ದಿನಕ್ಕೊಬ್ಬ ನೌಕರ ವಿಷ ಸೇವಿಸಬೇಕಾಗುತ್ತದೆ. ಸಾರಿಗೆ ಸಚಿವರು ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಚಾಲಕ ಶ್ರೀನಿವಾಸ್ ಮಾತನಾಡಿ, ನಿಗಮದ ಅಧಿಕಾರಿಗಳು ಮನಸೋ ಇಚ್ಛೆ ಕೆಲಸ ಮಾಡುತ್ತಿದ್ದಾರೆ. ದಿನಕ್ಕೊಂದು ರೂಟ್ ನೀಡುತ್ತಾರೆ. ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಲಗೇಜು ಕಳೆದು ಕೊಂಡಿದ್ದಕ್ಕೆ ಗೋವಿಂದರೆಡ್ಡಿ ಹೊಂಬಾಳೆ ಎಂಬ ಚಾಲಕನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.

ಸಣ್ಣ ಅಪಘಾತದ ಕಾರಣಕ್ಕೆ ಜನರಿಂದ ಪೆಟ್ಟುತಿಂದ ಚಾಲಕ ಮತ್ತು ಕಂಡಕ್ಟರ್‌ಗಳಿಗೆ ಒಂದು ತಿಂಗಳಿನಿಂದ ಕೆಲಸ ಕೊಡದೆ ಅಲೆದಾಡಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ನೌಕರರು ಸಂಬಳದ ಮೊತ್ತವನ್ನು ಅಧಿಕಾರಿಗಳು ಹಾಕುವ ದಂಡ ಶುಲ್ಕಕ್ಕೆ ಕಟ್ಟಿ ಬರೀಗೈಲಿ ಮನೆಗೆ ಹೋದ ಹಲವು ಉದಾಹರಣೆ ಹೇಳಿಕೊಂಡು ಕಣ್ಣೀರಿಟ್ಟರು.

ಸಿಐಟಿಯು ಒತ್ತಾಯ
ತುಮಕೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ಪಾವಗಡ ಡಿಪೋದ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಕಿರುಕುಳದಿಂದ ಚಾಲಕ ಜಯಪ್ರಕಾಶ್ ವಿಷ ಕುಡಿದು ಸಾವನ್ನಪ್ಪಿದ್ದಾರೆ. ಡಿಪೋ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ಒತ್ತಾಯಿಸಿದೆ.

ಕಿರುಕುಳ ಹಾಗೂ ದಬ್ಬಾಳಿಕೆ, ದೌರ್ಜನ್ಯಕ್ಕೆ ಆತ್ಮಹತ್ಯೆ ಪರಿಹಾರವಲ್ಲ. ಬದಲಿಗೆ ಧೈರ್ಯದಿಂದ ಸಂಘಟಿತರಾಗಿ ಸಮಸ್ಯೆಗಳ ಪರಿಹಾರಕ್ಕೆ ನೌಕರರು ಮುಂದಾಗಬೇಕು ಎಂದು ಇದೇ ವೇಳೆ ಸಿಐಟಿಯು ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT