ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವುಡಾದ ಕಿವಿ, ತಿಂಡಿ-ತಿನಿಸಿಗೆ ಮೆತ್ತಿದ ರಕ್ತ...

Last Updated 21 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್: ಕಿವಿ ಕಿವುಡಾಗಿಸುವಂತಹ ಭಾರಿ ಶಬ್ದ, ರಕ್ತಸಿಕ್ತವಾದ ಸ್ಟೀಲ್ ಡಬ್ಬಿ, ಜೀವಪೋಷಕ ಆಹಾರ- ತಿನಿಸುಗಳಿಗೆಲ್ಲಾ ಮೆತ್ತಿಕೊಂಡ ರಕ್ತದ ಕಲೆ, ಆಗಷ್ಟೇ ಅ್ಲ್ಲಲೇ ನಿಂತಿದ್ದ ವ್ಯಕ್ತಿಯೊಬ್ಬ ಕ್ಷಣವಾಗುವಷ್ಟರಲ್ಲಿ ಶವಗಳ ರಾಶಿಯಲ್ಲಿ ಒಬ್ಬನಾಗಿಬಿಟ್ಟಿದ್ದ... ಇಲ್ಲಿನ ದಿಲ್‌ಸುಖ್‌ನಗರದಲ್ಲಿ ಪಾದಚಾರಿ ಮೇಲ್ಸೇತುವೆ ಮೇಲೆ ಆನಂದ್ ಟಿಫಿನ್ ಸೆಂಟರ್ ಮುಂದೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿರುವ ಹಾಗೂ ದುಷ್ಕೃತ್ಯಕ್ಕೆ ಕಣ್ಣಾರೆ ಸಾಕ್ಷಿಯಾದವರ ಅನುಭವಗಳಿವು.

2007ರ ಆಗಸ್ಟ್‌ನಲ್ಲಿ 42 ಜನರ ಸಾವಿಗೆ ಕಾರಣವಾದ ಇಲ್ಲಿನ ಹೆಸರಾಂತ ಗೋಕುಲ್ ಚಾಟ್ ಭಂಡಾರ್ ಸ್ಫೋಟದ ವೇಳೆಯ ಭೀಕರ ಸನ್ನಿವೇಶವನ್ನೇ ಈ ಸ್ಫೋಟ ಕೂಡ ನೆನಪಿಸಿತು.

`ಕಿವಿ ಕಿವುಡಾಗಿಸುವಂತಹ ಶಬ್ದ ಅಪ್ಪಳಿಸುತ್ತಿದ್ದಂತೆ ಅಲ್ಲಿದ್ದ ವಿದ್ಯಾರ್ಥಿ ಜಿತೇಂದ್ರ ಹತ್ತಿರದಲ್ಲೇ ಇದ್ದ ಟ್ರಾನ್ಸ್‌ಫಾರ್ಮರ್‌ಗೆ ಏನೋ ಆಗಿರಬೇಕು ಅಂದುಕೊಳ್ಳುವಷ್ಟರಲ್ಲಿ ಗಾಳಿಯಲ್ಲಿ ಹಾರಿ, ಮೆಟ್ಟಿಲುಗಳ ಮೇಲಿಂದ ಬಿದ್ದು ಹೋಗಿದ್ದ. `ಒಂದು ನಿಮಿಷ ಕಾಲು ನಾನು ಕಿವುಡನಾಗಿ ಹೋಗಿದ್ದೆ. ಭಯಭೀತರಾದ ಪಾದಚಾರಿಗಳು ಸಿಕ್ಕಸಿಕ್ಕ ಕಡೆಗೆ ಓಡಿದರು. ಅದರಲ್ಲಿ ಕೆಲವರು ನನ್ನ ಮೇಲೆಯೇ ಓಡಿ ಹೋದರು' ಎನ್ನುತ್ತಾನೆ ಅವನು. ಈಗ ಈತ ಒಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.

ಹಾರಿಬಂದ ಚೂಪಾದ ತುಣುಕು ಬಡಿದು ಯಾದಯ್ಯ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ದೇಹದ ವಿವಿಧ ಕಡೆಗಳಲ್ಲಿ ರಕ್ತ ದಳದಳನೆ ಒಸರುತ್ತಿತ್ತು. `ಲಘು ಉಪಾಹಾರ ತಿನ್ನಲೆಂದು ಆನಂದ್ ಟಿಫಿನ್ ಸೆಂಟರ್ ಬಳಿ ಆಗಷ್ಟೇ ನಿಂತಿದ್ದೆ. ಸಂಜೆ 7ರ ಸಮಯವಾದ್ದರಿಂದ ಸಮೀಪದ ಸಾಯಿಬಾಬಾ ದೇವಸ್ಥಾನದಿಂದಲೂ ಅತ್ಯಧಿಕ ಜನ ಬಂದಿದ್ದರು. ಸ್ಫೋಟವಾಗುತ್ತಿದ್ದಂತೆಯೇ ಸುತ್ತಲೂ ಶವಗಳು ಬಿದ್ದಿದ್ದವು. ಒಂದು ನಿಮಿಷ ಹಿಂದಷ್ಟೇ ಅಲ್ಲಿ ನಿಂತಿದ್ದ ವ್ಯಕ್ತಿ ಆಗಲೇ ಶವವಾಗಿ ಹೋಗಿದ್ದ' ಎನ್ನುತ್ತಾರೆ ಅವರು.

ಚಲನಚಿತ್ರ ಮಂದಿರದ ಬಳಿ ಸಂಭವಿಸಿದ ಮತ್ತೊಂದು ಸ್ಫೋಟದ ನಂತರ ಅಲ್ಲಿ ವಿದ್ಯುತ್ ವ್ಯತ್ಯಯವಾಗಿ ಇಡೀ ಪ್ರದೇಶ ಪೂರ್ತಿ ಕತ್ತಲಲ್ಲಿ ಮುಳುಗಿತು. ಇದರಿಂದ ಇನ್ನಷ್ಟು ದಿಗಿಲುಬಿದ್ದ ಜನ ದಿಕ್ಕುತೋಚದೆ ಓಡತೊಡಗಿದರು ಎನ್ನುತ್ತಾರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರವಿ ಎಂಬುವವರು. ಹತ್ತಿರದ ಐಟಿ ತರಬೇತಿ ಕೇಂದ್ರದಲ್ಲಿ ತರಗತಿಗೆ ಹಾಜರಾಗಲು ಅವರು ತೆರಳುತ್ತಿದ್ದಾಗ ಈ ದುರ್ಘಟನೆಗೆ ಸಾಕ್ಷಿಯಾದರು.

ಈ ಎರಡು ಸ್ಫೋಟಗಳ ವಿಧ್ವಂಸಕತೆ ಹಲವು ಮೈಲುಗಳ ದೂರದವರೆಗೂ ಹರಡಿದೆ. ದೂರದ ಹಲವಾರು ಕಟ್ಟಡಗಳ ಕಿಟಕಿಗಳು, ಅಂಗಡಿ ಮುಂಗಟ್ಟುಗಳ ಗಾಜುಗಳು ಒಡೆದಿವೆ. ಸ್ಫೋಟ ಸ್ಥಳ ಮುಂಬೈ ಹೆದ್ದಾರಿಯಲ್ಲಿ ಇದ್ದು, ಘಟನೆ ನಡೆಯುತ್ತಿದ್ದಂತೆ ವಾಹನಗಳ ಓಡಾಟ ಸ್ತಬ್ಧವಾಯಿತು. ಶೋಧ ಕಾರ್ಯಕ್ಕೆ ಮುಂದಾದ ಪೊಲೀಸರು ವಾಹನಗಳನ್ನು ಹೊರ ವರ್ತುಲ ರಸ್ತೆ ಮೂಲಕ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT