ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಶನ್‌ಜಿಗೆ ಒಳಜಗಳವೇ ಮುಳುವಾಯಿತೇ?

Last Updated 25 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ/ ಕೋಲ್ಕತ್ತ(ಪಿಟಿಐ): ಪಶ್ಚಿಮ ಬಂಗಾಳದ ಅರಣ್ಯ ಪ್ರದೇಶದಲ್ಲಿ ಗುರುವಾರ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಮುಖ ನಕ್ಸಲ್ ನಾಯಕ ಕಿಶನ್‌ಜಿ ಬಲಿಯಾಗಲು ಸಂಘಟನೆಯಲ್ಲಿದ್ದ ಆಂತರಿಕ ಕಚ್ಚಾಟವೇ ಕಾರಣ ಎನ್ನಲಾಗಿದೆ.

ನಕ್ಸಲೀಯರ ಒಳಜಗಳದ ಲಾಭ ಪಡೆದ ಭದ್ರತಾ ಪಡೆ ಮತ್ತು ಗುಪ್ತಚರ ಇಲಾಖೆ, ಅರಣ್ಯದಲ್ಲಿದ್ದ ಅವರ ಅಭೇದ್ಯ ಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಯಿತು ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.

 ಸಂಘಟನೆಯಲ್ಲಿದ್ದ ಆಂತರಿಕ ಕಚ್ಚಾಟದ ಸುಳಿವರಿತ ಗುಪ್ತಚರ ಅಧಿಕಾರಿಗಳು ಒಂದೊಂದಾಗಿ ವಿಷಯ ಸಂಗ್ರಹಿಸತೊಡಗಿದರು. ತಮಗೆ ಸಿಕ್ಕ ಸುಳಿವಿನಿಂದ ಈ ಬಾರಿ ಬೇಟೆ ಬಲೆಗೆ ಬೀಳುವುದು ಖಚಿತ ಎಂದು ಅರಿತ ಸಿಬ್ಬಂದಿ, ಚಿಕ್ಕಪುಟ್ಟ ವಿಷಯವನ್ನೂ ನಿರ್ಲಕ್ಷಿಸಲಿಲ್ಲ. ಅನೇಕ ದಿನಗಳಿಂದ ಕಿಶನ್‌ಜಿ ಬೆನ್ನು ಬಿದ್ದು ಅವರ ಪ್ರತಿ ಚಲನವಲನದ ಮೇಲೂ ನಿಗಾ ಇಟ್ಟಿದ್ದರು. ಎಲ್ಲವನ್ನೂ ಖಚಿತಪಡಿಸಿಕೊಂಡ ಬಳಿಕವೇ ಕಾರ್ಯಾಚರಣೆಗೆ ಇಳಿದರು. ಕೊನೆಗೂ ಅದರಲ್ಲಿ ಯಶ ಕಂಡರು ಎನ್ನುತ್ತವೆ ಮೂಲಗಳು.

ಸಂಘಟನೆಯಲ್ಲಿದ್ದ ಮಹಿಳಾ ಹೋರಾಟಗಾರರನ್ನು ಶೋಷಿಸಲಾಗುತ್ತಿದೆ ಎಂಬ ಸುಳಿವು ಕೂಡಾ ಕಾರ್ಯಾಚರಣೆ ಬಳಿಕ ನಿಜವಾಗಿದೆ. ಹತ್ಯೆಯಾದ ವ್ಯಕ್ತಿ ಕಿಶನ್‌ಜಿ ಎಂಬುದು ಪೊಲೀಸರಿಗೆ ನೂರಕ್ಕೆ ನೂರರಷ್ಟು ಖಚಿತವಾಗಿದ್ದರೂ ಅಧಿಕೃತ ಘೋಷಣೆ ಬಾಕಿ ಇದೆ. ಆಂಧ್ರದಿಂದ ಅವರ ಕುಟುಂಬದ ಸದಸ್ಯರು ಬಂದು ಶವ ಗುರುತಿಸುವ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಪೊಲೀಸರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಗೃಹ ಇಲಾಖೆ ಕಳುಹಿಸಿದ ಕಿಶನ್‌ಜಿ ಇತ್ತೀಚಿನ ಭಾವಚಿತ್ರಕ್ಕೂ, ಶವಕ್ಕೂ ಸಾಕಷ್ಟು ಸಾಮ್ಯ ಇದೆ. ಹೀಗಾಗಿ ಶವ ಅವರದೇ ಎಂಬುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ ಎಂದು ಮೂಲಗಳು ಹೇಳುತ್ತವೆ.

ಈ ನಡುವೆ, ಮರಣೋತ್ತರ ಪರೀಕ್ಷೆಗಾಗಿ ಮಿಡ್ನಾಪುರ ಜಿಲ್ಲಾ ಆಸ್ಪತ್ರೆಗೆ ತಂದಿರುವ ಶವವನ್ನು ಗುರುತಿಸಲು ಅವರ ಕುಟುಂಬದ ಸದಸ್ಯರನ್ನು ಪೊಲೀಸರು ಎದುರು ನೋಡುತ್ತಿದ್ದಾರೆ.

ಕಿಶನ್‌ಜಿ ಸಹೋದರಿಯ ಪುತ್ರಿ ದೀಪಾ ಅವರು ನಕ್ಸಲೀಯರ ಬಗ್ಗೆ ಸಹಾನುಭೂತಿ ಹೊಂದಿರುವ ಕವಿ ವರವರರಾವ್ ಅವರೊಂದಿಗೆ ಶುಕ್ರವಾರ ಆಂಧ್ರದಿಂದ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ.

ತೀವ್ರ ಶೋಧ: ಪರಾರಿಯಾಗಿರುವ ನಕ್ಸಲ್ ನಾಯಕಿ ಸುಚಿತ್ರಾ ಮಹತೊ ಅವರಿಗಾಗಿ ಭದ್ರತಾ ಪಡೆ ತೀವ್ರ ಶೋಧ ಆರಂಭಿಸಿದೆ.

ಕಿಶನ್‌ಜಿ ಹತ್ಯೆ ಸಂದರ್ಭದಲ್ಲಿ ಅವರ ಜೊತೆಗೇ ಇದ್ದು ಗಾಯಗೊಂಡಿರುವ ಸುಚಿತ್ರಾ ಮತ್ತು ಸಹಚರರು ಬಳಿಕ ಪರಾರಿಯಾದರು ಎನ್ನಲಾಗಿದೆ. ನಕ್ಸಲ್ ಹೋರಾಟದಲ್ಲಿದ್ದ ಪತಿ ಶಶಿಧರ ಮಹತೊ ಹತ್ಯೆಯಾದ ಬಳಿಕ ಸುಚಿತ್ರಾ ಅವರು ಕಿಶನ್‌ಜಿ ಅವರೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ.

ಅರಣ್ಯ ಪ್ರದೇಶದ ಹೊರವಲಯದಲ್ಲಿ ಈ ತಂಡ ಕಾಣಿಸಿಕೊಂಡಿದೆ ಎಂಬ ಖಚಿತ ಸುಳಿವು ಪಡೆದಿರುವ ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ವ್ಯಾಪಕ ಬಲೆ ಬೀಸಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT