ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟದ ಕಾಟಕ್ಕೆ ಕೀಟದಿಂದಲೇ ಮುಕ್ತಿ!

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ರೇಷ್ಮೆ ಕೃಷಿಕರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹಿಪ್ಪುನೇರಳೆ ಗಿಡದ ಕುಡಿ ಭಾಗಕ್ಕೆ ಹುಳದ ಕಾಟ ಜಾಸ್ತಿಯಾಗಿದೆ. ಚಿಗುರುತ್ತಿರುವ ಎಲೆಗಳನ್ನು ಸುರುಳಿಯಾಕಾರದಲ್ಲಿ ಸುತ್ತಿ ತಿಂದು ಹಾನಿ ಮಾಡುವ ಇದನ್ನು `ಎಲೆ ಸುರುಳ ಕೀಟ' ಅನ್ನುತ್ತಾರೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಇದರ ಬಾಧೆ ಹೆಚ್ಚು.

ಐದಾರು ವರ್ಷಗಳಿಂದ ಈ ಕೀಟದ ಹಾನಿ ಕಾಣಿಸುತ್ತಿದೆ. ಅಕ್ಟೋಬರ್‌ನಿಂದ ಜನವರಿ ತಿಂಗಳ ಅವಧಿ ಇದರ ಬೆಳವಣಿಕೆಗೆ ಸೂಕ್ತವಾಗಿದೆ. ಮುಖ್ಯವಾಗಿ ತೇವಾಂಶಭರಿತ ತಂಪು ಹವೆ ತುಂಬಾ ಅನುಕೂಲ ವಾತಾವರಣವಾಗಿದೆ. ಕಳೆದ ತಿಂಗಳು ಬೀಸಿದ `ನೀಲಂ' ಚಂಡಮಾರುತದ ಮಳೆಯಿಂದಾಗಿ ಹಿಪ್ಪುನೇರಳೆ ಗಿಡ ಚೆನ್ನಾಗಿ ಬೆಳೆಯಬೇಕಿತ್ತು. ಅದರ ಬದಲು ಕೀಟದ ಸಂತತಿ ದ್ವಿಗುಣಗೊಂಡು ನಿರೀಕ್ಷಿಸಿದ ಮಟ್ಟದ ಸೊಪ್ಪಿನ ಇಳುವರಿ ಸಿಗುತ್ತಿಲ್ಲ.

`ನೂರು ಮೊಟ್ಟೆ ಹುಳು ಸಾಕುವ ತೋಟದಲ್ಲಿ ಐವತ್ತು  ಸಾಕುವುದೂ ಕಷ್ಟ' ಅನ್ನುತ್ತಾರೆ ರಾಮನಗರ ಜಿಲ್ಲೆಯ ಸಾಧೇನಹಳ್ಳಿಯ ಶಿವರಾಜುರವರು. ರೇಷ್ಮೆಗೂಡಿಗೆ ಒಳ್ಳೆ ಧಾರಣೆಯಿದ್ದರೂ ಬೆಳೆಯಲಾಗದ ಪರಿಸ್ಥಿತಿ.

ಕೀಟನಾಶಕದ ಬಳಕೆಗೆ ತೊಡಕು
ಈ ಕೀಟದ ನಿಯಂತ್ರಣಕ್ಕೆ ಕೀಟ ನಾಶಕ ಅನ್ನುವ ಸಲಹೆ ನೀಡುತ್ತಾರೆ ರೇಷ್ಮೆ ಇಲಾಖೆ ಅಧಿಕಾರಿಗಳು. ಆದರೆ ಒಮ್ಮೆ ಔಷಧಿ ಸಿಂಪಡಿಸಿದರೆ ಹದಿನೈದು ದಿವಸ ಆ ತೋಟದ ಸೊಪ್ಪನ್ನು ರೇಷ್ಮೆ ಹುಳು ಸಾಕಾಣೆಗೆ ಬಳಸುವಂತಿಲ್ಲ. ವಿಷದ ಬಾಧೆಯಿಂದ ರೇಷ್ಮೆ ಹುಳುಗಳೇ ಸಾಯುತ್ತವೆ.

ಒಂದು ತೋಟಕ್ಕೆ ಔಷಧಿ ಹೊಡೆಯಬೇಕಾದರೆ ಅಕ್ಕಪಕ್ಕದ ತೋಟದವರು ರೇಷ್ಮೆ ಹುಳು ಸಾಕುತ್ತಿದ್ದರಾ ಅಂತ ನೋಡಬೇಕು. ಗಾಳಿಯ ಮೂಲಕ ಆ ತೋಟಕ್ಕೂ ಔಷಧಿಯ ಹನಿ ಬೀಳುವ ಸಾಧ್ಯತೆಯಿದೆ. ಆಗ ಅವರ ರೇಷ್ಮೆ ಹುಳುವಿನ ಬೆಳೆಗೆ ಅಪಾಯ ಗ್ಯಾರಂಟಿ. ಅವರ ಬೆಳೆ ಮುಗಿಯುವವರೆಗೆ ಕಾಯಬೇಕು. ಅಷ್ಟರಲ್ಲಿ ಇವರ ತೋಟಕ್ಕೆ ಸಾಕಷ್ಟು ಹಾನಿಯಾಗಿರುತ್ತದೆ.ಇನ್ನು ಎಲೆ ಬಿಡಿಸಿ ರೇಷ್ಮೆ ಬೆಳೆಯುವವರ ತೋಟವಂತೂ ಆಳುದ್ದ ಬೆಳೆದು ನಿಂತಿರುತ್ತದೆ. ಅಷ್ಟು ಎತ್ತರಕ್ಕೆ ಔಷಧಿ ಹೊಡೆಯುವಾಗ ಮುಖದ ಮೇಲೆ ಬೀಳುತ್ತದೆ. ಔಷಧಿ ಹೊಡೆಯುವ ಪಂಪ್ ಕೂಡಾ ಎಲ್ಲರ ಬಳಿ ಇರುವುದಿಲ್ಲ. ಅದನ್ನು ಬಾಡಿಗೆಗೆ ತರುವುದು ಕೂಡಾ ಒಂದು ಖರ್ಚಿಗೆ ದಾರಿ.

ಒಬ್ಬ ಬೆಳೆಗಾರನಿಗೆ ಇನ್ನೊಬ್ಬರ ತೋಟದ ಸೊಪ್ಪು ಖರೀದಿಸಲೂ ಭಯ. ಅದಕ್ಕೆ ಔಷಧಿ ಹೊಡೆದು ಎಷ್ಟು ದಿವಸಗಳಾಗಿದೆಯೆಂಬ ಮಾಹಿತಿ ನಿಖರವಾಗಿ ಸಿಕ್ಕದಿರುವ ಸಾಧ್ಯತೆಯಿದೆ. ಎಷ್ಟು ಪ್ರಮಾಣದ ಔಷಧಿ ನೀರಿಗೆ ಸೇರಿಸಬೇಕೆಂಬ ಸರಿಯಾದ ಮಾಹಿತಿ ರೈತರ ಬಳಿ ಇಲ್ಲ. ರಾಸಾಯನಿಕಗಳ ಅತಿಯಾದ ಬಳಕೆ ಕೀಟಗಳ ನಿರೋಧಕ ಶಕ್ತಿ  ಕೂಡಾ ಹೆಚ್ಚಿಸುವ ಅಪಾಯವಿದೆ.

ಜೈವಿಕ ನಿಯಂತ್ರಣಕ್ಕೆ ಜೈ
ಇದಕ್ಕೆ ಪರಿಹಾರವೇ ಜೈವಿಕ ನಿಯಂತ್ರಣ. ಒಂದು ಕೀಟವನ್ನು ಇನ್ನೊಂದು ಕೀಟದ ಮೂಲಕ ನಿಯಂತ್ರಿಸುವ ಪರಿಸರಸ್ನೇಹಿವಿಧಾನವಿದು.  ಟ್ರೈಕೋಗ್ರಾಮಾ ಅನ್ನುವ ಅತಿ ಸಣ್ಣ ಕಣಜ ಹುಳು ಈ ಕೀಟದ ಮೊಟ್ಟೆಯನ್ನು ತಿಂದು ಬದುಕುತ್ತದೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ `ರಾಷ್ಟ್ರೀಯ ಕೃಷಿ ಪ್ರಾಮುಖ್ಯ ಕೀಟಗಳ ಸಂಸ್ಥೆ'ಯಲ್ಲಿ ಟ್ರೈಕೋಗ್ರಾಮಾ ಕೀಟವನ್ನು ಬೆಳೆಸುತ್ತಾರೆ. ಅದನ್ನು ಬಿಳಿ ಹಾಳೆಗಳ ರೂಪದಲ್ಲಿ ರೈತರಿಗೆ ನೀಡುತ್ತಾರೆ. ಅದುವೇ `ಟ್ರೈಕೋ ಕಾರ್ಡ್'

ಟ್ರೈಕೋ ಕಾರ್ಡ್‌ನಿಂದ ಕಣಜ ಹುಳು ಹೊರಗೆ ಬರುವ ಸಮಯದಲ್ಲಿ ಹಿಪ್ಪುನೇರಳೆ ತೋಟಕ್ಕೆ ಕಟ್ಟಬೇಕು. ಒಂದು ಎಕರೆಗೆ ಒಂದು ಕಾರ್ಡ್ ಸಾಕು. ಅದಕ್ಕೆ ಐವತ್ತು ರೂಪಾಯಿ ದರ. ಅದರಲ್ಲಿ ಒಂದು ಲಕ್ಷ ಕಣಜ ಹುಳುಗಳಿರುತ್ತವೆ. ಈ ಕಾರ್ಡನ್ನು ಹದಿನಾರು ಚಿಕ್ಕ ತುಂಡುಗಳಾಗಿ ಕತ್ತರಿಸಿ ತೋಟದ ಎಲ್ಲ ಭಾಗದಲ್ಲೂ ಕಟ್ಟಬೇಕು. ಹಿಪ್ಪು ನೇರಳೆ ಗಿಡ ಕತ್ತರಿಸಿ 15-20 ದಿನ ಕಳೆದ ಮೇಲೆ ಈ ರೀತಿ ಕಟ್ಟುವುದು ಸೂಕ್ತ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾದ ಹರೀಶ್ ಅವರು ಎಲೆ ಸುರುಳಿ ಕೀಟ ನಿಯಂತ್ರಣಕ್ಕೆ ಟ್ರೈಕೋ ಕಾರ್ಡ್ ಬಳಸುವ ಪ್ರಯೋಗ ಮಾಡುತ್ತಿದ್ದಾರೆ. ಅವರು ಶಿವರಾಜುರವರ ತೋಟದಲ್ಲಿ ಹದಿನೈದು ದಿನಗಳ ಹಿಂದೆ ಟ್ರೈಕೋ ಕಾರ್ಡ್ ಕಟ್ಟಿದ್ದರು.

`ನಾನೂ ದಿನಾಲೂ ತೋಟಕ್ಕೆ ಬಂದು ನೋಡ್ತಾ ಇರುತ್ತೇನೆ. ಈ ನಡುವೆ ಒಂದು ಹುಳ ಕೂಡಾ ಕುಡಿಗೆ ಬಿದ್ದಿಲ್ಲ. ಕುಡಿ ಬೆಳೆದುಕೊಂಡು ಮುಂದೆ ಹೋಗ್ತಾ ಇದೆ. ತೋಟ ಪೂರ್ತಿ ಸೊಪ್ಪು ಬರ‌್ತಾ ಇದೆ' ಅನ್ನುವ ಶಿವರಾಜುರವರಿಗೆ ಔಷಧಿ ಹೊಡೆಯುವ ಶ್ರಮ ತಪ್ಪಿದ ಖುಷಿ.ಇದೊಂದು ಯಾವುದೇ ಅಡ್ಡ ಪರಿಣಾಮವಿಲ್ಲದ ಪರಿಸರಸ್ನೇಹಿ ವಿಧಾನ ಅನ್ನುವ ಹರೀಶ್ ಇನ್ನೂ ಇದೇ ರೀತಿಯ ಹಲವು ಪ್ರಯೋಗಗಳಲ್ಲಿ ನಿರತರಾಗಿದ್ದಾರೆ. ಮಾಹಿತಿಗೆ: 93424 54639.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT