ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಲುಬಾಧೆ: ನೂರು ಶಿಕ್ಷಕರಿಗೆ ಉಚಿತ ಚಿಕಿತ್ಸೆ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸ್ಪರ್ಶ್ ಆಸ್ಪತ್ರೆಯು ಕಳೆದ ವರ್ಷದಂತೆ ಈ ವರ್ಷವೂ ಶಿಕ್ಷಕರ ದಿನಾಚರಣೆಯ ಅಂಗವಾಗಿ, ಕೀಲುಬಾಧೆಯಿಂದ ನರಳುತ್ತಿರುವ 100 ಮಂದಿ ನಿವೃತ್ತ ಶಿಕ್ಷಕ-ಶಿಕ್ಷಕಿಯರಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುವ `ಗುರುನಮನ~ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಸಂಸ್ಥೆಯ ನಿವೃತ್ತ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಅವರು ಸೋಮವಾರ ಚಾಲನೆ ನೀಡಿದರು.

ಸ್ಪರ್ಶ್ ಪ್ರತಿಷ್ಠಾನವು ಜರ್ಮನಿಯ ಹ್ಯಾಂಬರ್ಗ್‌ನ `ಎಂಡೋ ಕ್ಲಿನಿಕ್~ ಸಹಯೋಗದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಜರ್ಮನಿಯಲ್ಲಿ ಕೀಲುನೋವು ಸಂಬಂಧಿ ಶಸ್ತ್ರಚಿಕಿತ್ಸೆಯ ಯಶಸ್ವಿ ಪ್ರಮಾಣ ಶೇ 99.2ರಷ್ಟಿದೆ. ಆದರೆ ಭಾರತದಲ್ಲಿ ಈ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ. ದೇಶದ ಬಡವರಿಗೂ ಇಂಥ ಚಿಕಿತ್ಸೆ ಲಭ್ಯವಾಗಬೇಕು~ ಎಂದರು.

`ಮಕ್ಕಳು ಉತ್ತಮ ನಾಗರಿಕರಾಗಲು ತಂದೆ-ತಾಯಿ ಕಲಿಸಿದ ಶಿಸ್ತು, ಸಂಯಮ, ಸಮಾಜದೊಂದಿಗೆ ಬೆರೆಯುವ ಗುಣವನ್ನು ಅಳವಡಿಸಿಕೊಳ್ಳಬೇಕು. ನಮ್ಮ ಮೌಲ್ಯವರ್ಧನೆಯ ಅರ್ಧ ಪಾಲು ಪೋಷಕರಿಂದ ಬರುತ್ತದೆ. ಉಳಿದರ್ಧ ಶಿಕ್ಷಕರಿಂದ ಬರುತ್ತದೆ~ ಎಂದರು.

ನಿವೃತ್ತ ಶಿಕ್ಷಕರ ಕಾಯಿಲೆಯನ್ನು ಗುಣಪಡಿಸಲು ಮುಂದಾದ ಸ್ಪರ್ಶ್‌ನ ಪ್ರಯತ್ನವನ್ನೂ ಅವರು ಸ್ಮರಿಸಿದರು.
ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಮಾತನಾಡಿ, `ಬರೀ ಶಿಕ್ಷಕರ ದಿನವನ್ನು ಆಚರಿಸುವುದರಿಂದ ಶಿಕ್ಷಕರಿಗೆ ನೈಜ ನಮನ ಸಲ್ಲಿಸಿದಂತೆ ಆಗುವುದಿಲ್ಲ. ನಿವೃತ್ತಿಯ ನಂತರ ಪರಾವಲಂಬಿಯಾಗುವ ಶಿಕ್ಷಕರಿಗೆ ಇಂಥ ಚಿಕಿತ್ಸೆಗಳನ್ನು ಉಚಿತವಾಗಿ ನೆರವೇರಿಸಲು ಇತರ ಆಸ್ಪತ್ರೆಗಳೂ ಮುಂದೆ ಬರಬೇಕು~ ಎಂದರು.

ಸ್ಪರ್ಶ್ ಆಸ್ಪತ್ರೆಯ ಅಧ್ಯಕ್ಷ ಡಾ.ಶರಣ್ ಪಾಟೀಲ್ ಮಾತನಾಡಿ, `ಕಳೆದ ವರ್ಷದಿಂದ ಪ್ರತಿಷ್ಠಾನವು ಈ ಕಾರ್ಯಕ್ರಮ ಏರ್ಪಡಿಸುತ್ತಿದೆ. ಈ ಮೂಲಕ ತನ್ನ ಗುರುನಮನ ಸಲ್ಲಿಸುತ್ತಿದೆ. ಕೀಲುಬಾಧೆ ಶಸ್ತ್ರಚಿಕಿತ್ಸೆಗೆ ಬಳಕೆ ಮಾಡುವ ಉಪಕರಣಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ವಾಸ್ತವವಾಗಿ ಈ ಉಪಕರಣದ ಬೆಲೆ ಐದು ಸಾವಿರ ರೂಪಾಯಿ. ಆದರೆ ವಿದೇಶದಿಂದ ಆಮದು ಮಾಡಿಕೊಳ್ಳುವುದರಿಂದ ಆಮದು ಸುಂಕ, ಮತ್ತಿತರ ಖರ್ಚುಗಳು ಸೇರಿ 70 ಸಾವಿರ ರೂಪಾಯಿಗೆ ತಲುಪುತ್ತದೆ. ಆದ್ದರಿಂದ ಸರ್ಕಾರವೇ ಈ ಉಪಕರಣ ತಯಾರಿಸುವ ಘಟಕವನ್ನು ಸ್ಥಾಪಿಸಬೇಕು~ ಎಂದು ಹೇಳಿದರು.

`ಸರ್ಕಾರ ಜಾರಿಗೆ ತಂದಿರುವ ಯಶಸ್ವಿನಿ ವಿಮಾ ಯೋಜನೆಯ ವ್ಯಾಪ್ತಿಯಲ್ಲಿಯೂ ಕೀಲುಬಾಧೆಯನ್ನು ಸೇರಿಲ್ಲ. ಆದರೆ ಇಂದು ಹಲವಾರು ಮಂದಿಗೆ ಕೀಲುಬಾಧೆ ಉಂಟಾಗುತ್ತಿದೆ. ಆದ್ದರಿಂದ ಸರ್ಕಾರ ಯಶಸ್ವಿನಿಯ ವ್ಯಾಪ್ತಿಯಲ್ಲಿ ಈ ಕಾಯಿಲೆಯನ್ನೂ ಸೇರಿಸಬೇಕು. ಸ್ಪರ್ಶ್‌ನಂತೆ ಇತರೆ ಆಸ್ಪತ್ರೆಗಳು ಬಡವರಿಗೆ ಉಚಿತ ಶಸ್ತ್ರಚಿಕಿತ್ಸೆ ನೆರವೇರಿಸಲು ಮುಂದೆ ಬರಬೇಕು~ ಎಂದು ನುಡಿದರು.

ಇದಕ್ಕೂ ಮುನ್ನ ಕಳೆದ ವರ್ಷ ಉಚಿತ ಶಸ್ತ್ರಚಿಕಿತ್ಸೆಗೆ ಒಳಗಾದ ನಿವೃತ್ತ ಶಿಕ್ಷಕರಾದ ಅಬ್ದುಲ್ ಬೇಗ್, ಕಮಲಾಕ್ಷಿ ಶೆಟ್ಟಿ, ನಳಿನಿಯಮ್ಮ ಅವರು ಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ತೋರಿದ ಕಾಳಜಿಯನ್ನು ಸ್ಮರಿಸಿದರು.

ಈ ಬಾರಿಯ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರು, ಹುಬ್ಬಳ್ಳಿ ಮತ್ತು ರಾಯಚೂರಿನಲ್ಲಿ ಅರ್ಹ ನಿವೃತ್ತ ಶಿಕ್ಷಕ-ಶಿಕ್ಷಕಿಯರನ್ನು ಗುರುತಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT