ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಕುಮ ಸಂಜೆ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪ್ರಬಂಧ  

....ಸತ್ಯಕ್ಕೆ ಎಷ್ಟು ಮುಖಗಳೋ ತಂದೆ!
-ಎಸ್.ಜಿ.ಸಿದ್ಧರಾಮಯ್ಯ


 

ನನ್ನ ಒರಟು ಮಣ್ಣಿನ ಮಾಳಿಗೆ ಮನೆಯ ಮುಂದೆ ಮುಂಜಾನೆ ಮತ್ತು ಸಂಜೆಗುಂಟ ನಿಂತು, ಸ್ವಪ್ನದಲ್ಲಿ ಮಾತ್ರ ಕಾಣಿಸಿಕೊಳ್ಳಬಹುದಾದ ಈ ದೃಶ್ಯವನ್ನು ದಿನವೂ ಕಣ್ಣುಗಳಿಗೆ ತುಂಬಿಕೊಳ್ಳುತ್ತಿದ್ದೆ. ಹಾಗೆ ನೋಡುವಾಗಲೆಲ್ಲ ಯಾವ ತೀವ್ರವಾದ ಭಾವನೆಗಳೂ ನನ್ನನ್ನು ಎಂದೂ ಕಾಡುತ್ತಿರಲಿಲ್ಲ!

ಆದರೆ ಇಂದೇಕೋ ನನ್ನನ್ನು ಇಡಿಯಾಗಿ ಹಿಡಿದು ನಿಲ್ಲಿಸಿದೆ. ಆಕಾಶ ಮತ್ತು ಭೂಮಿಯನ್ನೆಲ್ಲಾ ಆವರಿಸಿಕೊಂಡಿರುವ ಈ ದೃಶ್ಯ ನನಗೆ ಏನನ್ನೋ ಹೇಳಲು ತವಕಿಸುವಂತೆ ಕಾಣುತ್ತಿದೆ. `...ಆ ಕಥೆಯನೊರೆದು ಮುಂದಕೆ ತೆರಳು~ ಎಂದು ಹೇಳಲೆ! ಇಲ್ಲ ಹಾಗೆ ಹೇಳಲಾಗುತ್ತಿಲ್ಲ...

ಭಾರವಾದ ಹೃದಯದಿಂದ ನನ್ನ ಮನೆ ಮುಂದೆಯೇ ಇಳಿಯುತ್ತಿದೆ, ಸಂಜೆಗೆ ಬಂದ ನೆಂಟರಂತೆ. ನಾನೆ ಮುಂದಾಗಿ ಅದನ್ನು ಇದಿರುಗೊಳ್ಳುತ್ತೇನೆ. ನನ್ನ ಎಳವೆಯ ದಿನಗಳಲ್ಲಿ, ಮನೆಯ ಮುಂದಿದ್ದ ಕೆತ್ತುಗಲ್ಲಿನ ಗೋಡೆಯಂತಹ ಬಂಡೆಯ ಮೇಲೆ ಎಂದಾದರೊಂದು ದಿನ ಅವ್ವನ ಹೆಸರನ್ನು, ಅಪ್ಪನ ಹೆಸರನ್ನು ಅವರ ಘಟದಲ್ಲಿ ಉಸಿರಿದ್ದಾಗಲೆ ಬಂಗಾರದ ಬಣ್ಣದಲ್ಲಿ ಅದ್ದಿಕೊಂಡು ಕುಚ್ಚುಮಟ್ಟೆಯಿಂದ ಬರೆಯಬೇಕೆಂದುಕೊಂಡಿದ್ದೆ.

ನಾನು ದೊಡ್ಡವನಾದ ಮೇಲೆ, ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದುಕೊಂಡಿದ್ದೆ. ನನ್ನಂತಹ ಎಲ್ಲರೂ ಕಾಣಬಹುದಾಗಿದ್ದ ಕನಸು ಇದು. ಆದರೆ ನನ್ನ ಎಳೆತನದ ದಿನಗಳಲ್ಲಿ ಹೃದಯವನ್ನು ಆವರಿಸಿದ್ದ ಆ ಬಯಕೆ ಎಂದೂ ಈಡೇರಲಿಲ್ಲ.

ಬಡತನದ ಮಣ್ಣಿನಿಂದ ಹುಟ್ಟು ಪಡೆದು ಬಂದ ದಿಕ್ಕು ಕಾಣದ ನನ್ನಂಥವರ ಎದೆಯಲ್ಲಿ ಇಂತಹ ಆಸೆ ಮೊಳೆಯಬಾರದಾಗಿತ್ತೇನೋ. ನಮ್ಮ ಕಣ್ಣಮುಂದಿನ ವಾಸ್ತವದ ಬದುಕು ಎಷ್ಟೇ ಕಠೋರವಾಗಿದ್ದರೂ, ವಿರೋಧಾಭಾಸಗಳಿಂದ ಕೂಡಿದ್ದರೂ ಕನಸು ಕಾಣಲು ನಮಗೆ ಎಲ್ಲ ಸ್ವಾತಂತ್ರ್ಯವೂ ಇತ್ತು.

ಮೇದರ ಕಾಳಮ್ಮನ ಕಟ್ಟೆಯ ಮಗ್ಗುಲಿಗೆ ಕುಂಕುಮ ಭೂಮಿಯಂತಿದ್ದ ತನ್ನ ಹೊಲವನ್ನು, ಅಪ್ಪ ಎಲ್ಲಿಂದಲೋ ಬಂದ ಕನ್ನಗಳ್ಳರಂತಿದ್ದ ಮಾಲೀಕರು ಎಣಿಸಿದ ಗರಿಗರಿ ನೋಟಿಗೆ ಮಾರಿಕೊಂಡು ಹೆಂಡದಂಗಡಿ ಪಾಲಾಗಿದ್ದ. ಹಗಲು ರಾತ್ರಿಗಳ ಪರಿವೆಯೆ ಇಲ್ಲದೆ ಮನೆ-ಮಠ ಎಲ್ಲವನ್ನೂ ತೊರೆದು ಊರುದಿರುಗನಾಗಿದ್ದ.

`ಯಾಕೆ ಮಾರಿದೆ?~ ಎಂದು ಅವ್ವ ಕಣ್ಣೀರುಗರೆಯುತ್ತಾ ಕೇಳಿದಾಗ `ಸರೀಕರೆಲ್ಲ ಮಾರಿಲ್ವೆ! ನಮ್ದಿನ್ನಾವ ಮಹಾ ಘನಂದಾರಿ ಹೊಲನೊ!~ ಎಂದು ಏನೂ ಆಗದವನಂತೆ ಉಚಾಯಿಸಿ ಮಾತನಾಡಿದ. `ವರ್ಸೊಂಬತ್ತು ಕಾಲ ಗೇಯ್ದರೂ ಅರ್ಧ ಚೀಲ ಹುಳ್ಳಿನೋ; ಅರ್ಧ ಚೀಲ ರಾಗಿನೋ ಬೆಳೆಯಾಕೆ ಈಟೊಂದುತರ ಕಸ್ಟ ಪಡಬೇಕಾ!~

ಎಂದು ಬೇಸಾಯದ ಬಗ್ಗೆಯೆ ತನಗಿದ್ದ ಎಲ್ಲ ಅಸಹನೆಯನ್ನೂ ಹೊರಹಾಕಿ ಹೊರಟುಹೋದ.  `ಅಯ್ಯೋ, ನನ್ನ ಎದೆ ಬಸ್ದು ಹೊಲ ಮಾಡಿದ್ದನೆಲ್ರಪೋ... ಇದ್ದೊಂದು ಹೊಲನೂ ಹೋಯಿತಲ್ಲಾ ಸಿವನೆ~ ಎಂದು ಅವ್ವ ಕೂಡಲೆ ಸೆಟೆದು ನಿಂತು ಹಟ್ಟಿ ಮುಂದೆ ಬಂದು ಎರಡೂ ಬೊಗಸೆಯಲ್ಲಿ ಹುಡಿಮಣ್ಣನ್ನು ಬಾಚಿಕೊಂಡು ಹೊಲದ ದಿಕ್ಕಿಗೆ ನಿಂತು, `ಈ ಮಣ್ಣು, ಹೆಣ್ಣೆಂಗ್ಸನ್ನು ಉರಿಸ್ದೋರು ಬದುಕೋದನ್ನ ನಾನು ನೋಡದೆ ಹೋದೀನಾ!~

ಎಂದು ಹಿಡಿ ಮಣ್ಣನ್ನು ಗಾಳಿಗೆ ತೂರುತ್ತಾ ಕವಣೆಕಲ್ಲು ಬೀಸಿದಂತೆ ನುಡಿದು ಅಲ್ಲಿಯೇ ಕುಸಿದಳು. ಎದೆಯಲ್ಲಿದ್ದ ಎಲ್ಲ ಆಕ್ರೋಶವೂ ಅವಳ ಸೊಲ್ಲಿನಲ್ಲೇ ವ್ಯಕ್ತವಾಗುತ್ತಿತ್ತು. ಕೊನೆಯ ಬಾರಿಯೋ ಎನ್ನುವಂತೆ, ತನ್ನ ಹಣೆಯ ಕುಂಕುಮದಂತಿದ್ದ ಹೊಲಕ್ಕೆ ಹೋಗಿ, ಇಡೀ ದಿನ ಹೊಲದ ಮಣ್ಣನ್ನು ಎಳೆಮಗುವಿನ ಮೈ ಸವರಿದಂತೆ ಸವರುತ್ತಾ, ಹುಡಿಯಾದ ಕೆಂಪು ಮಣ್ಣನ್ನು ತನ್ನ ಮೈಮೇಲೆ ಸುರಿದುಕೊಳ್ಳುತ್ತಾ ಹೊರಳಾಡಿ ಅತ್ತಳು.

ಇದನ್ನೆಲ್ಲಾ ನೋಡುತ್ತಿದ್ದ ನಾನು ಅವ್ವನ ಸೆರಗಿನಲ್ಲಿ ಮುಖ ಮುಚ್ಚಿಕೊಂಡೆ. ಅವ್ವ ನನ್ನನ್ನು ಬಾಚಿ ಎದೆಗವಿಸಿಕೊಂಡಳು. ಅವಳ ಅಳುವನ್ನು ನಿಲ್ಲಿಸಲು ಯಾರಿಂದಲೂ ಅಂದು ಸಾಧ್ಯವಿರಲಿಲ್ಲ. ಅಪ್ಪ ಆಗಲೇ ಮನೆಬಿಟ್ಟು ಹೋಗಿದ್ದ. ಇಂದಿಗೂ ಆ ದಿನದ ಎಲ್ಲ ವಿವರಗಳೂ ಒಂದು ಅಪೂರ್ಣ ಚಿತ್ರದಂತೆ ನನ್ನೊಳಗೆ ಅಲ್ಲಾಡದಂತೆ ಉಳಿದಿದೆ.

ತವರಿನವರು ಅರಿಶಿನ ಕುಂಕುಮಕ್ಕೆಂದು ತನಗೆ ಕೊಟ್ಟಿದ್ದ ಹೊಲಮಾಳವನ್ನು ಕಳೆದುಕೊಂಡ ಅವ್ವ ಸುತರಾಂ ನೆಲಕಚ್ಚಿದಳು. ತನ್ನ ಕರುಳಬಳ್ಳಿಯನ್ನೇ ಕಳೆದುಕೊಂಡಂತೆ ಎದೆಗುಂದಿದಳು. ಅವಳಲ್ಲಿದ್ದ ಚೈತನ್ಯ, ಎಂದೂ ಬತ್ತದ ಕಣ್ಣಹೊಳಪು ಎಲ್ಲವೂ ಮಣ್ಣಿನ ತಳ ಸೇರಿತು.

ಮಣ್ಣಿನೆದೆಗೆ ಬಿತ್ತಿದ ಬೀಜಗಳು ಮೊಳಕೆಯೊಡೆದು ಚಿಗುರಿ, ತೆನೆಕಟ್ಟುತ್ತಿದ್ದ ಪರಿಯನ್ನು ತನ್ನ ಬಾಳಿನುದ್ದಕ್ಕೂ ನೋಡುತ್ತಿದ್ದ ಅವ್ವ ಈಗ, ಮಣ್ಣು, ಬೀಜ, ಮೊಳಕೆ, ತೆನೆ ಅದರ ಕಂಪು ಎಲ್ಲವನ್ನೂ ನುಂಗಿ ನೀರುಕುಡಿದ ನೆಲದೊಡಲು ಬಗೆಯುವ, ಬಂಡೆಗಳ ಎದೆಯನ್ನು ನಿರ್ದಯದಿಂದ ಸೀಳುವ ರಾಕ್ಷಸಾಕಾರದ ಯಂತ್ರಗಳು ಮರಗಿಡಗಳನ್ನೆಲ್ಲಾ ಸವರಿ ತನ್ನ ಮನೆಯ ಹೊಸ್ತಿಲಿಗೂ ಬಂದದ್ದನ್ನು ನೋಡಲಾರದೆ ಸೆರಗಿನಲ್ಲಿ ಮುಖ ಮುಚ್ಚಿಕೊಂಡಳು.

`ತಾಯಿ ಸಿಂಪೂರದಮ್ಮ, ಇದನ್ನೆಲ್ಲಾ ನೋಡಕ್ಕಾಗಿಯೇ ನನ್ನ ಈಸೊಂದು ದಿನ ಉಳುಸ್ತಾ ತಾಯಿ~ ಎಂದು ಎರೆಹುಳುವಿನಂತೆ ಒದ್ದಾಡುತ್ತಾ ಅವಳಾಡಿದ ಕೊನೆಯ ಮಾತು ನನ್ನೆದೆಯಲ್ಲಿ ಸೋಗೆ ಗರಿಯ ನಡುವೆ ನೆಮ್ಮದಿಯಿಂದಿರದ ಕೆಂಡದುಂಡೆಯಂತೆ ಈಗಲೂ ಉರಿಯುತ್ತಿದೆ. ನನ್ನ ತಿಳಿವಳಿಕೆಗೆ ಬಂದಂತೆ ಈ ಹೊಲದಲ್ಲಿಯೇ ಅವ್ವ ತನ್ನ ಆಯಸ್ಸಿನ ಬಹುಪಾಲು ದಿನಗಳನ್ನು ಕಳೆದಿದ್ದು.

ಹಾಗೆ ನೋಡಿದರೆ ಈ ಹೊಲದಿಂದ ನಮಗೆ ಅಂತಹ ಆದೀಕವೇನೂ ಇರಲಿಲ್ಲ! ಆದರೂ ಈ ಹೊಲವೇ ತನ್ನ ಜೀವನದ ಸರ್ವಸ್ವವೆಂದು ತಿಳಿದಿದ್ದ ಅವ್ವ ಮಾತ್ರ ಭೂಮಿಯ ಸಂಗ ತೊರೆದಿರಲಿಲ್ಲ. ಈ ಹತಾಶೆಯಿಂದಲೆ ಅವ್ವ, ಎಣ್ಣೆ ತೀರಿದ ದೀಪದ ಬೆಳಕು ಕಂದುವಂತೆ ದಿನ ದಿನಕ್ಕೂ ಕೃಶವಾಗತೊಡಗಿದಳು.

ಅವ್ವ ಮಣ್ಣುಗೂಡಿದ ದಿನ ಹೀಗೆಯೇ ಆಕಾಶದಲ್ಲಿ ದಾರಿದೀಪಗಳಂತಿದ್ದ ನಕ್ಷತ್ರಗಳ ಬೆಳಕು ಆರಿಹೋಗಿತ್ತು. ಅವ್ವನಿಗೆ ಮಣ್ಣುಕೊಡಲು ಅಪ್ಪ ಬರಲೇ ಇಲ್ಲ. ಕೊನೆಗೆ ಹೆಚ್ಚು ಹೊತ್ತು ಕಾಯಲಾರದೆ, ಅವಳ ಆತ್ಮದಲ್ಲಿ ಆಳವಾಗಿ ಬೆಸೆದುಕೊಂಡಿದ್ದ ಹೊಲದಲ್ಲೇ ಮನೆಮಾಡಿ, ಅವ್ವನಿಗೆ ಮಣ್ಣುಕೊಟ್ಟು ಮೇಲೆ ತುಂಬೆಗಿಡ ನೆಟ್ಟು ಒಂದು ಕರಮೊಗೆ ನೀರು ಸುರಿದು ಹಿಂದಿರುಗಿ ನೋಡದೆ ಮನೆಗೆ ಬಂದೆ.

ಅವ್ವನ ಆಸೆಯಂತೆ ತಣ್ಣಗೆ ಉರಿಯುತ್ತಿದ್ದ ದೀಪ ನೋಡಿ ಹೊರಗೆ ಬಂದು ನಿಂತೆ. ತೇವವಿಲ್ಲದ ಆಕಾಶ, ಎತ್ತಲೂ ಗಾಳಿ ಬೆಳಕಿನ ಸುಳಿವಿರಲಿಲ್ಲ. ಹಸುರು ಕಣ್ಣಿಗೆ ಕಾಣದಂತೆ ಮಂಗಮಾಯವಾಗಿತ್ತು. ಕಣ್ಣೆದುರಿಗಿದ್ದ ಕೆತ್ತುಗಲ್ಲಿನ ಬಂಡೆ ಕತ್ತಲಿಗೆ ನೀಲಿಗಟ್ಟಿ, ಇನ್ನಷ್ಟು ಆಳಕ್ಕಿಳಿಯುತ್ತಾ ಇಳಿಯುತ್ತಾ ಹಬ್ಬುತ್ತಿರುವಂತೆ ಕಂಡಿತು.

ಅದನ್ನು ನೋಡಿದ ಕೂಡಲೆ ಹೆಸರಿಡಲಾಗದ, ಅರಿಶಿನದ ಬಟ್ಟೆಯಲ್ಲಿ ಗಂಟುಕಟ್ಟಿದಂತೆ ಕಾಣುತ್ತಿದ್ದ ಸೂರ್ಯನೋ ಅಥವಾ ಚಂದ್ರನೋ, ತತ್ತರಿಸುವ ನೀರವತೆಗೆ ಬೆದರಿ ಉರಿಯುವ ಕುಲುಮೆಯಂತಿದ್ದ ಬಾಂದಳದ ಕೂಪಕ್ಕೆ ಕುಸಿಯುತ್ತಿತ್ತು.

ಆದರೂ ಪ್ರಚಂಡವಾಗಿ ಬೀಸುವ ಬಿರುಗಾಳಿಯ ಹಿಂದೆ ಸುಳಿಯುವಮಂದಮಾರುತದಂತೆ, ಪ್ರಳಯದ ಅಶಾಂತತೆಯ ನಂತರ ಶಾಂತವಾಗುವ ಕಡಲಿನಂತೆ, ಈ ಎಲ್ಲ ವಿಷಾದಗಳ ಮೊತ್ತದ ನಡುವೆಯೂ; ಅಗೋಚರ ಪರಿಶುದ್ಧ ಮನಸ್ಸೊಂದು `...ಕತ್ತಲು ಎಲ್ಲವನ್ನೂ ಆವರಿಸದಿರಲಿ ತಂದೆ~ ಎಂದು ಪ್ರಾರ್ಥಿಸುತ್ತಿರುವಂತೆ ಆ ಚಿತ್ರ ನನ್ನ ಬಗೆಗೆ ಗೋಚರವಾಯಿತು.

ಜಗತ್ತಿನಲ್ಲಿ ಸತ್ತವರ ನೆರಳಿನಂತೆ ಎಂದೂ ಚಿಗುರದ, ಕವಲೊಡೆಯದ ಹೆಬ್ಬಂಡೆಗಳಿರುವಂತೆ; ಎಂದೋ ತನ್ನ ಮಡಿಲಿಗೆ ಬಿದ್ದ ಬೀಜವನ್ನು ಒಂದು ಮಳೆಯ ಹನಿ ಸೋಂಕಿದ ಕೂಡಲೆ ಮೊಳೆಯಿಸುವ ತಾಯಿಯ ಚೈತನ್ಯದಂತಹ ಮಣ್ಣೂ ಇದೆ.

ಆ ದೂರದಲ್ಲಿ ಕಾಣುವ ಮಣ್ಣಿನ ಗುಡ್ಡ ನೂರಾರು ಹೊಸ ಸೃಷ್ಟಿಯ ಬೀಜಗಳನ್ನು ತನ್ನೊಳಗೆ ಮಡಗಿಕೊಂಡು, ಮಳೆಯ ಒಂದು ಜೀವಹನಿಗಾಗಿ ಕಾಯುತ್ತಿದೆ. ಎಂದಾದರೊಂದು ದಿನ ಎಲ್ಲವೂ ಹಸುರಿನಿಂದ ನಳನಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT