ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದ ಕೆಲಸಕ್ಕೂ ಸಂಚಕಾರ...

Last Updated 1 ಏಪ್ರಿಲ್ 2013, 10:27 IST
ಅಕ್ಷರ ಗಾತ್ರ

ಕೊಪ್ಪಳ: ಚುನಾವಣೆಯ ಕಾವು ನಿಧಾನಕ್ಕೆ ಏರುತ್ತಿದೆ. ಅಭ್ಯರ್ಥಿಗಳ ಎದೆ ಢವಗುಟ್ಟುತ್ತಿದ್ದರೆ, ಹಿಂಬಾಲಕರಿಗೆ ಹಬ್ಬ. ಮತಕ್ಷೇತ್ರದ ತುಂಬಾ ಇನ್ನು ಧೂಳೆಬ್ಬಿಸುವ ಕಾರು. ಜೀಪುಗಳ ಓಡಾಟ. ಕಿವಿಗಡಚಿಕ್ಕುವ ರೀತಿಯಲ್ಲಿ ಪ್ರಚಾರವೂ ನಡೆಯಬಹುದು.

ಚುನಾವಣೆಯ ಈ ಅಬ್ಬರದ ನಡುವೆ ನಮ್ಮ ಕಲಾವಿದರ ಕುಂಚ ಕೆಲಸವಿಲ್ಲದೇ ಬಣ್ಣಗಳಿಂದ ದೂರವಾಗಿರುವ ವಿಷಾದದ ಸಂಗತಿಯೂ ಇದೆ. ಹೌದು, ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಪ್ರಚಾರ ವೈಖರಿಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು. ತಂತ್ರಜ್ಞಾನದ ಫಲವಾಗಿ ಪ್ರಚಾರ ಕಾರ್ಯಕ್ಕೆ ಆಧುನಿಕ ಸ್ಪರ್ಶವೂ ಸಿಕ್ಕಿದೆ. ಈ ಬೆಳವಣಿಗೆ ಗೋಡೆ ಬರಹ, ಬ್ಯಾನರ್‌ಗಳು ಮತ್ತು ಕಟೌಟ್‌ಗಳ ತಯಾರಿಸುವ ಮೂಲಕ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕಿನಲ್ಲಿಯೂ ಬದಲಾವಣೆ ತಂದಿದೆ. ಆದರೆ, ಈ ಬದಲಾವಣೆ ಕೆಲ ಕಲಾವಿದರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

`ಈ ಹಿಂದಿನ ಚುನಾವಣೆಗಳಲ್ಲಿ ನಮಗೆ ಕೈ ತುಂಬ ಕೆಲಸ ಇರುತ್ತಿತ್ತು. ಕೆಲಸ ಹೆಚ್ಚಾಗುತ್ತಿದ್ದರಿಂದ ನಮ್ಮ ಸ್ನೇಹಿತರಿಗೆ ಒಂದಿಷ್ಟು ಹಂಚಿಕೆ ಮಾಡಿ, ಅವರ ಉಪಜೀವನಕ್ಕೂ ಅನುಕೂಲ ಮಾಡಿ ಕೊಡುತ್ತಿದ್ದೆವು. ಆದರೆ, ಈಗ ನಮಗೇ ಕೆಲಸ ಇಲ್ಲದಂತಾಗಿದೆ' ಎಂದು ಕಲಾವಿದ ಮಾಜೀದ್ ಖಾನ್ ವಿಷಾದದಿಂದ ಹೇಳುತ್ತಾರೆ.

`ಈಗ ಏನಿದ್ದರೂ ಫ್ಲೆಕ್ಸ್‌ಗಳ ಭರಾಟೆ. ಕಡಿಮೆ ಹಣದಲ್ಲಿ ದೊಡ್ಡ ಫ್ಲೆಕ್ಸ್ ಸಿದ್ಧವಾಗುತ್ತದೆ. ಅದೂ ಅಲ್ಲದೇ, ಫ್ಲೆಕ್ಸ್‌ನಲ್ಲಿ ನಾಯಕರ, ಅವರ ಬೆಂಬಲಿಗರ ಮುಖಗಳು ಸಹ ಅಚ್ಚಾಗುವುದರಿಂದ ಅವುಗಳಿಗೇ ಈಗ ಬೇಡಿಕೆ ಹೆಚ್ಚು' ಎಂದು ತಮ್ಮ ಈಗಿನ ಸ್ಥಿತಿಗೆ ಕಾರಣವನ್ನು ವಿಶ್ಲೇಷಿಸುತ್ತಾರೆ.

1983ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಿಂದ ಈ ಕಾರ್ಯ ಆರಂಭಿಸಿದೆ. ಗೋಡೆಗಳ ಮೇಲೆ ಘೋಷಣಾ ವಾಕ್ಯ ಬರೆಯುವುದು. ಬಟ್ಟೆಗಳ ಬ್ಯಾನರ್ ತಯಾರಿಸುವುದು ಹಾಗೂ ಪ್ರಮುಖ ನಾಯಕರ ಕಟೌಟ್‌ಗಳನ್ನು ಸಿದ್ಧಪಡಿಸುವ ಕೆಲಸ ಇರುತ್ತಿತ್ತು. ಆದರೆ, 2007ರಲ್ಲಿ ನಡೆದ ನಗರಸಭೆ ಚುನಾವಣೆ ವೇಳೆಗೆ ಪರಿಸ್ಥಿತಿ ಬದಲಾಗಿತ್ತು ಎಂದು ಅವರು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. 2007ರಿಂದ ಈಚೆಗೆ ಫ್ಲೆಕ್ಸ್‌ಗಳಿಗೆ ಬೇಡಿಕೆ ಹೆಚ್ಚಾಯಿತು. ಹೀಗಾಗಿ ನಗರದಲ್ಲಿರುವ 10ಕ್ಕೂ ಹೆಚ್ಚು ಕಲಾವಿದರು ಅನಿವಾರ್ಯವಾಗಿ ಬೇರೆ ಕೆಲಸ ಹುಡುಕುವುದು ಇಲ್ಲವೇ ಆಧುನಿಕ ತಂತ್ರಜ್ಞಾನ ಬಯಸುವ ಕೌಶಲಗಳನ್ನು ಕಲಿಯುವಂತಾಗಿದೆ. ಆದರೆ, ಹೊಸ ಕಾರ್ಯಶೈಲಿಗೆ ಒಗ್ಗುವುದು ಸಹ ಅಷ್ಟೇ ಕಷ್ಟದ ವಿಷಯ ಎಂದೂ ಅಭಿಪ್ರಾಯಪಡುತ್ತಾರೆ.

ಫ್ಲೆಕ್ಸ್‌ಗಳಿಗೆ ಬೇಡಿಕೆ ಇದ್ದರೂ ಕುಂಚ ಹಿಡಿದು ಕಲೆ ಅರಳಿಸುವ ನಮ್ಮಂತಹ ವೃತ್ತಿಪರ ಕಲಾವಿದರಿಗೂ ಬೇಡಿಕೆ ಇದೆ. ಮೊದಲಿನಂತೆ ಬ್ಯಾನರ್, ಕಟೌಟ್‌ಗಳ ತಯಾರಿಕೆಯ ಕೆಲಸ ಸಿಗುವುದಿಲ್ಲ. ಗೋಡೆ ಬರಹದಂತಹ ಕೆಲಸವೂ ಇಲ್ಲ. ಆದರೆ, ಇದೇ ತಿಂಗಳು ಜರುಗಿದ ನಗರಸಭಾ ಚುನಾವಣೆ ಸಂದರ್ಭದಲ್ಲಿ ವಾರ್ಡ್ ನಂ. 25ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಜಯಾ ಹಿರೇಮಠ ಅವರ ಚಿಹ್ನೆ ಕಿರೀಟ ಆಗಿತ್ತು. ಹೀಗಾಗಿ ಪ್ರಚಾರ ಕಾರ್ಯಕ್ಕಾಗಿ 250 ಕಿರೀಟಗಳನ್ನು ತಯಾರಿಸಿ ಕೊಟ್ಟಿದ್ದೆ ಎನ್ನುವ ಅವರು, ಈಗಲೂ ಕಲೆಗೆ ಪ್ರೋತ್ಸಾಹ ಇದ್ದೇ ಇದೆ ಎಂದು ಸಮಾಧಾನಪಟ್ಟುಕೊಳ್ಳುತ್ತಾರೆ.ಆದರೆ, ಈಗ ಚುನಾವಣಾ ಆಯೋಗದ ಕಠಿಣ ಕ್ರಮಗಳಿಂದಾಗಿ ಈ ಬಾರಿ ಫ್ಲೆಕ್ಸ್‌ಗಳ ಹಾವಳಿಗೂ ಕಡಿವಾಣ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT