ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚದಿಂದಿಳಿದ ಭಾವಗಳು

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ಕಲೆ ನನ್ನ ಉಸಿರು. ಕಣಕಣದಲ್ಲೂ ಅದು ನನ್ನನ್ನು ಆವರಿಸಿಕೊಂಡಿದೆ. ಕಲೆ ನನ್ನ ಜೀವನದ ಅವಿಭಾಜ್ಯ ಅಂಗ~ ಎನ್ನುವಾಗ ಕಲಾವಿದೆ ಮೋನಿಕಾ ಅವರ ಕಣ್ಣುಗಳಲ್ಲಿ ಕೋಲ್ಮಿಂಚು ಸರಿದು ಹೋಗುತ್ತದೆ.

ನನ್ನೊಳಗಿನ ಭಾವನೆಗಳ ಅನಾವರಣಕ್ಕೆ ಕಲೆಯೇ ರಹದಾರಿ. ಕುಂಚ ಕೈಯಲ್ಲಿದ್ದಾಗ ನನ್ನ ಎಲ್ಲ ಬಗೆಯ ಭಾವನೆಗಳು ಲೀಲಾಜಾಲವಾಗಿ ಕ್ಯಾನ್ವಾಸ್‌ನ ಮೇಲೆ ಪಡಿಯಚ್ಚುಗೊಳ್ಳುತ್ತವೆ. ನನ್ನೊಳಗಿನ ಹಸಿಬಿಸಿ ಲಹರಿಗಳೆಲ್ಲವೂ ರಂಗುರಂಗಿನ ಬಣ್ಣದಲ್ಲಿ ಕೋರೈಸುತ್ತವೆ.
 
ಪ್ರಕೃತಿ ಸೌಂದರ್ಯ ಹಾಗೂ ಒಳ್ಳೆಯ ವಿಚಾರ ಕಂಡಾಗ ನನ್ನ ಮನಸ್ಸು ಅರಳುತ್ತದೆ. ನನ್ನ ಸಂತಸದ ಕ್ಷಣಗಳು, ಮನಸ್ಸು ದುಃಖಿತಗೊಂಡಾಗ ಕಾಡುವ ಮಾನಸಿಕ ತೊಳಲಾಟ ಇವೆಲ್ಲವನ್ನೂ ಹೊರಹಾಕುವುದು ಕಲೆಯ ಮೂಲಕವೇ.

ನನ್ನ ಹೃದಯದೊಳಗೆ ಅಡಗಿರುವ ಬೆಚ್ಚನೆಯ ಭಾವಗಳೆಲ್ಲವೂ ಕುಂಚದಲ್ಲಿ ಧಾರಾಕಾರವಾಗಿ ಸುರಿಯುತ್ತವೆ. ನಾನು ನನ್ನ ಸುತ್ತಲಿನ ಜಗತ್ತನ್ನು ಸೂಕ್ಷ್ಮವಾಗಿ ದಿಟ್ಟಿಸುತ್ತೇನೆ, ನಿಸರ್ಗದ ಚೆಲುವನ್ನು ಮನಸಾರೆ ಆಸ್ವಾದಿಸುತ್ತೇನೆ. ಮಗುವಿನ ಮುಗ್ಧತೆ ಹಾಗೂ ಅದರ ಸ್ನಿಗ್ಧ ನಗು ಅಂದರೆ ನಂಗೆ ತುಂಬಾ ಇಷ್ಟ.

ಹಾಗೆಯೇ ಸುರಿವ ಮಂಜಿಗೆ ಮೈಯೊಡ್ಡಿ ಆಸ್ವಾದಿಸುವುದು, ಏಕಾಂಗಿಯಾಗಿ ಕಿಟಕಿ ಬಳಿ ನಿಂತು ದಿಗಂತವನ್ನು ದಿಟ್ಟಿಸುತ್ತಾ ಮನಸ್ಸನ್ನು ಅನ್ವೇಷಣೆಗೆ ಅಣಿಗೊಳಿಸುವುದು ಕೂಡ ಅಷ್ಟೇ ಇಷ್ಟ. ಜಗತ್ತಿನಲ್ಲಿರುವ ಒಳ್ಳೆಯದೆಲ್ಲವನ್ನೂ ಪ್ರೀತಿಸುವ ಕಲೆ ನನಗೆ ಗೊತ್ತು. ಅದೇ ನನ್ನ ಕಲೆಯ ಆತ್ಮ.

ಹೀಗೆ ಅಗಣಿತ ಭಾವಗಳ ಮೊತ್ತದಂತಿರುವ ಖ್ಯಾತ ಕಲಾವಿದೆ ಮೋನಿಕಾ ಕ್ರಿಸ್ಪ್ ಇಟಲಿಯವರು. ಕಳೆದ 28 ವರ್ಷಗಳಿಂದ ಸಾಗುತ್ತಿರುವ ಇವರ ಕಲಾ ಪ್ರಯಾಣದಲ್ಲಿ ಸೃಜಿಸಿದ್ದು ಸಾವಿರಾರು ಅಮೂರ್ತ ಹಾಗೂ ಮಾಡರ್ನ್ ಕಲಾಕೃತಿಗಳು.

ಬೋನಿ ಥಾಮಸ್ ಚೆನ್ನೈ ಮೂಲದ ಹವ್ಯಾಸಿ ಕಲಾವಿದೆ. ಆತ್ಮವಿಲಾಸಕ್ಕೆ ಇವರು ಆಯ್ದುಕೊಂಡದ್ದು ಕಲೆಯನ್ನು. ಇವರ ಕೈಗೆ ಕುಂಚ ಸಿಕ್ಕರೆ ಸಾಕು; ಭಾವನೆಗಳು ಮಡುಗಟ್ಟುತ್ತದೆ. ಇವರು ಕ್ಯಾನ್ವಾಸ್‌ನ ಮೇಲೆ ಕಲಾಕೃತಿಗಳನ್ನು ರಚಿಸುವ ಪರಿ ಬೆರಗು ಹುಟ್ಟಿಸುತ್ತದೆ. ಇವರ ಕಲಾಕೃತಿಗಳೆಲ್ಲವೂ ಅಮೂರ್ತ ಭಾವ ಹಾಗೂ ಫ್ಯಾಂಟಸಿ ಅಡಗಿಸಿಟ್ಟುಕೊಂಡಂಥವು.
 
ಹೆಣ್ಣಿನ ಭಾವನೆಗಳನ್ನು ಪ್ರಧಾನವಾಗಿಟ್ಟುಕೊಂಡು ಇವರು ಅನೇಕ ಕಲಾಕೃತಿಗಳನ್ನು ರಚಿಸಿದ್ದಾರೆ. ಜತೆಗೆ ಪ್ರಕೃತಿ ಹಾಗೂ ಶಿಲ್ಪಕಲೆ ಕೂಡ ಇವರ ಕಲಾಕೃತಿ ರಚನೆಗೆ ಪ್ರೇರಣೆ ನೀಡಿದೆ. ಇವರು ಜೀವನದ ವಿವಿಧ ಮುಖಗಳನ್ನು, ಮನುಷ್ಯನ ಭಾವನೆಗಳನ್ನು ತಮ್ಮ ಕಲಾಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಬೋನಿ ಮೊದಲಿಗೆ ತಮ್ಮ ಕಲಾಕೃತಿಗಳ ಪ್ರದರ್ಶನ ಮಾಡಿದ್ದು ಚೆನ್ನೈನ ಲಲಿತಕಲಾ ಅಕಾಡೆಮಿಯಲ್ಲಿ. ಇವರ ಕಲಾಪ್ರತಿಭೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಕಲೆಯ ಜತೆಗೆ ಇವರು ಗ್ರಾಫಿಕ್, ಜ್ಯುವೆಲರಿ ಹಾಗೂ ವಸ್ತ್ರ ವಿನ್ಯಾಸ ಕೂಡ ಮಾಡುತ್ತಾರೆ.
ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿರುವ ವಿದ್ಯಾಮಣಿಗೆ ಕಲೆಯ ಮೇಲೆ ಇನ್ನಿಲ್ಲದ ಆಸಕ್ತಿ. ಚಿಕ್ಕಂದಿನಲ್ಲಿ ತಾವು ರಚಿಸಿದ ಕಲಾಕೃತಿಗಳು ಲಲಿತಕಲಾ ಅಕಾಡೆಮಿಯಲ್ಲಿ ಪ್ರದರ್ಶಿನಗೊಂಡದ್ದು ಇವರ ಆಸಕ್ತಿಯನ್ನು ಕಲೆಯತ್ತ ಹೊರಳಿಸಿತು. ಅಮೂರ್ತ ಕಲಾಕೃತಿ ಹಾಗೂ ವಾಸ್ತವಿಕ ನೆಲೆಗಟ್ಟಿನಲ್ಲಿ ಇವರ ಕಲಾಕೃತಿಗಳು ರಚನೆಗೊಂಡಿವೆ. 

`ಆಶಾ ನನ್ನಲ್ಲಿ ಹೊಸ ಕನಸು, ಭರವಸೆಗಳನ್ನು ಹುಟ್ಟುಹಾಕಿದಾಕೆ. ಆಕೆ ಅಪ್ರತಿಮ ಕಲಾವಿದೆ ಕೂಡ ಹೌದು. ಕೆಲವು ದಿನಗಳ ಹಿಂದೆ ನನ್ನನ್ನು ಒಂಟಿಯಾಗಿ ಬಿಟ್ಟು ಹೋದಳು. ನನ್ನ ಎಲ್ಲ ಕಲಾಕೃತಿಗಳನ್ನು ಅವಳಿಗೆ ಅರ್ಪಿಸುತ್ತೇನೆ. ಅವಳ ಕಲಾಪರಂಪರೆಯನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ. ಅಂದಹಾಗೆ, ಆಶಾ ನನ್ನ ತಾಯಿ~ ಎನ್ನುವ ಕಲಾವಿದ ಅಮಿತ್ ಯಾದವ್ ತಾಯಿಯ ವಾತ್ಸಲ್ಯವನ್ನು ಕಳೆದುಕೊಂಡ ಭಾವನಾ ಜೀವಿ.

ಸೂರ್ಯೋದಯ ತಮ್ಮ ಕಲೆಗೆ ಸ್ಫೂರ್ತಿ ನೀಡುತ್ತದೆ ಎನ್ನುವ ಇವರು, ಅದು ಸ್ವರ್ಗಕ್ಕೆ ದಾರಿ ತೋರುವ ರಹದಾರಿಯೂ ಹೌದೆನ್ನುತ್ತಾರೆ. ಸೂರ್ಯ ಜೀವನ ಪ್ರೀತಿ, ಉಲ್ಲಾಸವನ್ನು ಉಕ್ಕಿಸುತ್ತಾನಂತೆ.

ಈ ನಾಲ್ಕು ಜನ ಕಲಾವಿದರ ಅಪರೂಪದ ಕಲಾಕೃತಿಗಳು ಫೆಬ್ರುವರಿ 11ರವರೆಗೆ ಪ್ರದರ್ಶನಗೊಳ್ಳಲಿವೆ.
ಸ್ಥಳ: ರಿನೈಸೆನ್ಸ್ ಗ್ಯಾಲರಿ, 109, ವೆಸ್ಟ್ ಮಿನಿಸ್ಟರ್ 13, ಕನ್ನಿಂಗ್‌ಹ್ಯಾಂ ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 7. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT