ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಟು ಬದುಕಿಗೆ ಆತ್ಮವಿಶ್ವಾಸದ ನಂಟು

Last Updated 8 ಜನವರಿ 2013, 19:59 IST
ಅಕ್ಷರ ಗಾತ್ರ

`ತಮ್ಮನ ಕಂಕುಳಲ್ಲಿ ಕುಳಿತ ನಾನು ಎಷ್ಟು ದಿನ ಸುಖಿ ಎಂದು ಯೋಚಿಸಿದಾಗ ಕಣ್ಣಲ್ಲಿ ನೀರು ಮಡುಗಟ್ಟುತ್ತದೆ. ಯಾರಿಗೂ ಕಾಣಬಾರದೆಂದು ಕಣ್ಣೀರು ಕಣ್ಣುಗಳಲ್ಲಿಯೇ ಇಂಗಿ ಹೋಗುತ್ತದೆ.

ಎಲ್ಲರೂ ಅವರವರ ಕಾಲ ಮೇಲೆ ನಿಂತು ಸ್ವತಂತ್ರವಾಗಿ, ಮನಸ್ಸು ಬಯಸಿದ ಕಡೆಗೆ ಹೋಗುವವರನ್ನು ನೋಡಿದಾಗ ಮನಸ್ಸು ಒಳಗೊಳಗೆ ರೋದಿಸುತ್ತದೆ. ನಾನ್ಯಾಕೆ ಎಲ್ಲರಂತಿಲ್ಲ ಎಂಬ ಭಾವ ನನ್ನನ್ನು ಹಿಂಡುತ್ತದೆ. ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬಿತವಾದ ಜೀವನ ನನ್ನದು.

ಮನೆಯಿಂದ ಹೊರಗಡೆ ಹೋಗಬೇಕೆಂದಾಗ ತಮ್ಮ ಚಿಕ್ಕ ಮಗುವಿನಂತೆ, ತನ್ನ ಮಗಳಂತೆ ನನ್ನನ್ನು ಎತ್ತಿಕೊಂಡು ಕಂಕುಳಲ್ಲಿ ಕೂರಿಸಿಕೊಳ್ಳುವಾಗ ನನಗೆ ನಾನೇ ಭಾರವಾದ ಭಾವ ಮನಸ್ಸಿನಲ್ಲಿ... ಏನೋ ವಿಚಿತ್ರವಾದ ಹಿಂಸೆ. ನಾನು ಅವನಿಗೆ ಸಹಾಯ ಮಾಡಬೇಕಿತ್ತು. ಆದರೆ, ಈಗ ನಾನು ಅವನ ಮೇಲೆ ಅವಲಂಬಿತಳು.

ನನಗೆ ಹಿಂಸೆಯಾಗುವುದು ಮನೆಯಿಂದ ಹೊರಗೆ ಹೋದಾಗ. ಏಕೆಂದರೆ ಅಲ್ಲಿ ಎಲ್ಲರ ದೃಷ್ಟಿಯಲ್ಲೂ ನಾನೊಂದು ವಿಚಿತ್ರ. ಆಗಲೇ, ಮನಸ್ಸು ಅಧೀರವಾಗುತ್ತದೆ. ನನ್ನ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುವ ಆ ನೋಟಗಳನ್ನು ಎದುರಿಸಲಾಗದೆ ತಲೆ ತಗ್ಗಿಸುತ್ತೇನೆ.

ನಿಮ್ಮಂತೆಯೇ ಇದ್ದೆ!
ಹುಟ್ಟಿದಾಗ ನಾನು ಎಲ್ಲರಂತೆ ಅಪ್ಪ-ಅಮ್ಮನ ಅಚ್ಚುಮೆಚ್ಚಿನ ಹಿರಿಯ ಮಗಳಾಗಿದ್ದೆ. ಅಪ್ಪ ಅಮ್ಮ ಪ್ರೀತಿಯಿಂದ `ಕಸ್ತೂರಿ' ಎಂದು ಹೆಸರನ್ನಿಟ್ಟರು. ಐದೂವರೆ ವರ್ಷದವರೆಗೆ ಎಲ್ಲ ಮಕ್ಕಳಂತೆ ಆಟವಾಡಿಕೊಂಡು ಇದ್ದ ನನಗೆ ಬಂದ ಸಣ್ಣ ಜ್ವರ ಜೀವನದ ದಿಕ್ಕನ್ನೇ ಬದಲಿಸಿತು. ಅಂದು ಅಪ್ಪ-ಅಮ್ಮನಿಗೆ ಆದ ನೋವು ಇಂದಿಗೂ ಅವರ ಕಣ್ಣಿನಲ್ಲಿ ಕಾಣುತ್ತದೆ. ಅಮ್ಮ ಒಂದು ಕ್ಷಣವಾದರೂ `ಹುಟ್ಟಿದಾಗಲೇ ಸತ್ತು ಹೋಗಿದ್ದರೆ' ಎಂದು ಅಂದುಕೊಂಡಿರಬಹುದಾ? ಗೊತ್ತಿಲ್ಲ. ಅಂದು ಬರಸಿಡಿಲಿನಂತೆ ಎರಗಿದ ಪೋಲಿಯೊ ನನ್ನ ಎರಡೂ ಕಾಲುಗಳನ್ನು ಶಾಶ್ವತವಾಗಿ ಕಿತ್ತುಕೊಂಡಿತು. ನಡೆದಾಡಲು ಆಗದೆ, ತೆವಳಿಕೊಂಡು ಹೋಗುವ ಪರಿಸ್ಥಿತಿ...

ಚಿಕ್ಕವಳಿದ್ದಾಗ ಏನೂ ಅನಿಸುತ್ತಿರಲಿಲ್ಲ. ತೆವಳಿಕೊಂಡು ಹೋಗುವುದು ಕೂಡ ಸಂತಸ ನೀಡುತ್ತಿತ್ತು. ವಿಚಿತ್ರವಾದ ಆನಂದ. ಆದರೆ, ಈ ಆನಂದ ಬಹುಕಾಲ ಉಳಿಯಲಿಲ್ಲ. ತೆವಳುವುದು ನನ್ನ ಬದುಕಿನ ವಾಸ್ತವ ಎಂಬ ಅಂತಿಮ ಸತ್ಯ ಅರಿವಾದಾಗ ಗೊಳೋ ಎಂದು ಅತ್ತಿದ್ದೆ. ಕಾಣದ ದೇವರಿಗೆ ಮನಸಾರೆ ಶಾಪ ಹಾಕಿದ್ದೆ. ನನಗೇಕೆ ಈ ಶಿಕ್ಷೆ ಎಂದು ಕನವರಿಸುತ್ತಿದ್ದೆ.

ಮನೆಯ ಮುಂದೆ ಅನೇಕ ಮಕ್ಕಳು ಕೇಕೆ ಹಾಕಿ ಆಟವಾಡುವುದನ್ನೇ ಕಣ್ಣಿನಲ್ಲಿ ತುಂಬಿಕೊಳ್ಳುತ್ತಿದ್ದೆ. ಅವರ ಆಟವನ್ನೇ ಆಸೆಯಿಂದ ನೋಡುತ್ತಿದ್ದೆ. ನಾನು ಅವರ ಜತೆ ಹೋಗಿ ಆಟವಾಡಬೇಕೆಂಬ ಆಸೆಯನ್ನು ಹಿಡಿದಿಡಲಾಗದೆ, ಆಟ ಆಡುವವರ ಮಧ್ಯೆ ಹೋಗಿ ಹಲವು ಬಾರಿ ಅವಮಾನಿತಳಾಗಿ ಬಂದಿದ್ದೆ. ಆದರೆ, ಆಗ ನನ್ನ ಕಣ್ಣಿನಲ್ಲಿ ಬರುವ ಕಣ್ಣೀರೆ ಉತ್ತರವಾಗದೆ ಪ್ರಶ್ನೆಯಾಗಿ ಉಳಿಯುತ್ತಿತ್ತು.

ಹೀಗೆ ಒಂದು ದಿನ ನನ್ನ ಸ್ನೇಹಿತೆಯ ಮದುವೆಗೆ ಹೋಗಬೇಕೆಂಬ ಆಸೆಯನ್ನು ತಡೆಯದೆ ನನ್ನ ತಮ್ಮನ ಬಳಿ ಹೇಳಿಕೊಂಡೆ. ಸ್ನೇಹಿತೆ ನನ್ನದೇ ವಯಸ್ಸಿನವಳು ಅಪಾರ ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಅವನು ಮೊದಲು ಬೇಡವೆಂದರೂ, ಕೊನೆಗೆ ಒಪ್ಪಿಕೊಂಡ. ತನ್ನ ಕಂಕುಳಲ್ಲಿ ಕೂರಿಸಿಕೊಂಡು ಮದುವೆ ಮನೆಗೆ ಹೋದ. ಆದರೆ, ಅಲ್ಲಿ ಮದುವೆ ಮನೆಯಲ್ಲಿ ಕೆಲವರು ಸಹಾನುಭೂತಿ ತೋರಿಸಿ, ಕಣ್ಣಿನಲ್ಲಿಯೇ ಕರುಣೆಯನ್ನು ತೋರಿಸಿ ಮಾತನಾಡುತ್ತಿದ್ದರು. ಅದು ನನ್ನ ಮನಸ್ಥೈರ್ಯವನ್ನು ಕುಗ್ಗಿಸಿತು. ಏಕೆಂದರೆ, ಬೇರೆಯವರ ಕರುಣೆಯೇ ಮನುಷ್ಯನನ್ನು ಸಾಯಿಸಿ ಬಿಡುತ್ತದೆ. `ಹೋದ ಜನ್ಮದಲ್ಲಿ ಮಾಡಿರುವ ಯಾವುದೋ ಪಾಪದಿಂದ ಆ ದೇವರು ಈ ರೀತಿಯ ಶಿಕ್ಷೆ ನೀಡಿದ್ದಾನೆ. ಯಾವ ಪಾಪದ ಫಲ?' ಎಂದು ಆಡಿಕೊಂಡ ಮಾತು ನನಗೆ ವಿಚಿತ್ರವೆನಿಸಿತು. ಹಿಂಸೆ ಮಾಡಿತು. ತಮ್ಮ ಇನ್ನೆಷ್ಟು ದಿನ? ಇವಳಿಂದ ಅವನ ಜೀವನವೂ ಹಾಳು ಎಂದು ಹೇಳಿದ ಮಾತುಗಳು ಚುಚ್ಚಿದ್ದವು.

ಇನ್ನು ಅಮ್ಮ-ಅಪ್ಪನಿಗೆ ಹೇಳಲಾರದ ಗೋಳು... ನನಗೆ ಪೋಲಿಯೊ ಆಗಿ ಕಾಲು ಕಳೆದುಕೊಂಡಾಗಿನಿಂದ ಅವರಿಗೆ ಕೆಲವರು ಕರುಣೆಯಿಂದ ಮಾತನಾಡಿಸಿದರೆ, ಇನ್ನು ಕೆಲವರು ತಿರಸ್ಕಾರದಿಂದ ನೋಡುತ್ತಾರೆ.

ನನ್ನಿಂದಾಗಿ ನನ್ನ ತಮ್ಮನ ಬಾಳು ಹಾಳಾಗಬಾರದೆಂದು ನಿರ್ಧರಿಸಿ, ಅದಕ್ಕಾಗಿ ಕಷ್ಟವಾದರೂ ಸರಿ ಕುಳಿತು ಬಟ್ಟೆ ಹೊಲಿಯುವುದನ್ನು ಕಲಿತೆ. ಈಗಲಾದರೂ ನಾನು ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ನಡೆಸುತ್ತೇನೆ ಎಂಬ ವಿಶ್ವಾಸವಿದೆ.
(ರೋಟರಿ ಬೆಂಗಳೂರು ಪೀಣ್ಯವು ನಗರದಲ್ಲಿ ಆಯೋಜಿಸಿರುವ ಕೃತಕ ಕಾಲು ಜೋಡಣಾ ಶಿಬಿರಕ್ಕೆ ಆಗಮಿಸಿದ್ದ ತಮಿಳುನಾಡಿನ ಕಸ್ತೂರಿ ಅವರು ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡದ್ದು ಹೀಗೆ.)  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT