ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಟುತ್ತ ಸಾಗಿದೆ ರಂಗಮಂದಿರ ಕಾಮಗಾರಿ

Last Updated 21 ಮೇ 2012, 7:05 IST
ಅಕ್ಷರ ಗಾತ್ರ

ಕಾರವಾರ: ಅಧಿಕಾರಿಗಳ ನಿರ್ಲಕ್ಷ್ಯವೋ ಜನಪ್ರತಿನಿಧಿಗಳ ತಾತ್ಸಾರವೋ ಗೊತ್ತಿಲ್ಲ ಇಲ್ಲಿಯ ಮಾಲಾದೇವಿ ಮೈದಾನದಲ್ಲಿರುವ ಜಿಲ್ಲಾ ರಂಗಮಂದಿರದ ನವೀಕರಣ ಕಾಮಗಾರಿ ಮಾತ್ರ ಕುಂಟುತ್ತ ಸಾಗಿದೆ.
ವರ್ಷದ ಹಿಂದೆ ಆರಂಭವಾದ ಕಾಮಗಾರಿ ಮುಗಿಸಲು ಲೋಕೋಪಯೋಗಿ ಇಲಾಖೆ ಎರಡೆರಡು ಬಾರಿ ಗಡುವು ನೀಡಿತ್ತು.

ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ನವೀಕರಣ ಕಾರ್ಯಕ್ಕೆ ತೆಗೆದುಕೊಂಡ ಸುರ್ದಿರ್ಘ ಅವಧಿಯೊಳಗೆ ಹೊಸ ರಂಗಮಂದಿರವೇ ನಿರ್ಮಾಣವಾಗುತ್ತಿತ್ತು ಎನ್ನುವ ಅಭಿಪ್ರಾಯ, ಕಲಾವಿದರು ಮತ್ತು ಸಾರ್ವಜನಿಕರದ್ದಾಗಿದೆ.

ರಂಗಮಂದಿರದಲ್ಲಿ ಯಾವ ವ್ಯವಸ್ಥೆಯೂ ಸರಿ ಇರದ ಕಾರಣದಿಂದಾಗಿ ಜಿಲ್ಲಾಡಳಿತ ರೂ 97 ಲಕ್ಷ ವೆಚ್ಚದಲ್ಲಿ ನವೀಕರಣ ಕಾಮಗಾರಿಗೆ ಚಾಲನೆ ನೀಡಿತು. ಲೋಕೋಪಯೋಗಿ ಇಲಾಖೆಗೆ ನವೀಕರಣದ ಜವಾಬ್ದಾರಿ ವಹಿಸಿತು. ಇಲಾಖೆಯ ಅಧಿಕಾರಿಗಳು ಆಸಕ್ತಿ ತೋರದ ಕಾರಣ ನವೀಕರಣ ಕಾಮಗಾರಿ ಆರಂಭದಿಂದಲೇ ಆಮೆಗತಿಯಲ್ಲಿ ಪಡೆದುಕೊಂಡಿತು.

ಮಳೆ ನೀರು ಬಿದ್ದು ಹಾನಿಗೊಂಡು ಬೀಳುವ ಸ್ಥಿತಿಯಲ್ಲಿದ್ದ ಪಾಲ್ಸ್ ಸೀಲಿಂಗ್ ಕಾಮಗಾರಿ ಸದ್ಯ ನಡೆಯುತ್ತಿದೆ. ಸೀಲಿಂಗ್‌ಗೆ  ಸಿಮೆಂಟ್ ಮತ್ತು ಗಮ್‌ಗಳನ್ನು ಬಳಸುವುದರಿಂದ ಅವು ಗಟ್ಟಿಯಾಗಬೇಕೆಂದರೆ ಸರಿಯಾಗಿ ಬಿಸಿಲು ಬೀಳಬೇಕು. ಈ ಕಾರಣದಿಂದಾಗಿ ಮಳೆಗಾಲ ಮುಗಿಯುವುದರೊಳಗೆ ಈ ಕಾಮಗಾರಿ ಮುಗಿಸಬೇಕು.

ಈಗ ನಡೆಯುತ್ತಿರುವ ಸೀಲಿಂಗ್ ಕಾಮಗಾರಿಯ ವೇಗ ನೋಡಿದರೆ ಅದು ಈ ತಿಂಗಳಾಂತ್ಯದಲ್ಲಿ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಮುಂದಿರುವುದೇ ಮಳೆಗಾಲ. ಒಮ್ಮೆ ಮಳೆ ಪ್ರಾರಂಭವಾಯಿತೆಂದರೆ ಕಾಮಗಾರಿಗೆ ಸಹಜವಾಗೇ ಹಿನ್ನಡೆ ಆಗಲಿದೆ.

ರಂಗಮಂದಿರದಲ್ಲಿ ಹಿಂದೆ ಅಳವಡಿಸಿದ್ದ ಆಸನಗಳು ಅವೈಜ್ಞಾನಿಕ ವಿನ್ಯಾಸ ಹೊಂದಿದ್ದವು. ಸುಮಾರು 650 ಆಸನಗಳನ್ನು ಬದಲಿಸುವ ಕಾರ್ಯ ಬಾಕಿಯಿದೆ. ಹಳೆಯ ಆಸನಗಳನ್ನು ತೆಗೆದು ಹೊರಗೆ ರಾಶಿ ಹಾಕಲಾಗಿದೆ. ಗ್ರೀನ್ ರೂಮ್ ಮತ್ತು ಕಾರಿಡಾರ್‌ನಲ್ಲಿ ಟೈಲ್ಸ್ ಅಳವಡಿಸುವ ಕಾರ್ಯ ಬಿಟ್ಟರೆ ಉಳಿದೆಲ್ಲವೂ ಅಪೂರ್ಣ.

ರಂಗಮಂದಿರದ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸರ್ಕಾರಿ ಕಾರ್ಯಕ್ರಮಗಳನ್ನು ದುಪ್ಪಟ್ಟು ಬಾಡಿಗೆ ನೀಡಿ ಖಾಸಗಿ ಸಭಾಭವನದ ಅಥವಾ ಮೈದಾನಗಳಲ್ಲಿ ಮಾಡಬೇಕಾಗಿದೆ. ಇದು ಜಿಲ್ಲಾಡಳಿತಕ್ಕೆ  ಹೊರೆಯಾಗಿ ಪರಿಣಮಿಸಿದೆ.

`ಆರ್ಥಿಕ ಸಮಸ್ಯೆಯಿಂದ ಕಾಮಗಾರಿಗೆ ಹಿನ್ನಡೆ ಆಗಬಾರದು ಎನ್ನುವ ದೃಷ್ಟಿಯಿಂದ ಕಾಲಕಾಲಕ್ಕೆ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಈ ತಿಂಗಳಾಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ವಿಧಿಸಲಾಗಿದೆ. ಕಾಮಗಾರಿ ವಿಳಂಬವಾಗಿರುವುದು ನಮಗೂ ಬೇಸರ ತಂದಿದೆ~ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು.

`ರಂಗಮಂದಿರ ನವೀಕರಣ ಕಾಮಗಾರಿ ಅಧಿಕಾರ ಇಷ್ಟೊಂದು ಸುದೀರ್ಘ ಸಮಯ ತೆಗೆದುಕೊಂಡಿರುವುದು ನೋಡಿದರೆ ಸಾರ್ವಜನಿಕರ ಸಹನೆ ಪರೀಕ್ಷೆ ಮಾಡಿದಂತಿದೆ. ಮಳೆಗಾಲ ಆರಂಭವಾಗುವುದರೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಹೋರಾಟ ಕೈಗೊಳ್ಳಲಾಗುವುದು~ ಎನ್ನುತ್ತಾರೆ ಕರವೇಯ ವಿನಾಯಕ ಹರಿಕಂತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT