ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಡದಲ್ಲಿ ಕಾಳು ಮೆಣಸು

Last Updated 16 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕಾಳು ಮೆಣಸು ನಮ್ಮ ದೇಶದ ಮುಖ್ಯ ವಾಣಿಜ್ಯ ಬೆಳೆ. ಇದನ್ನು ಸಾಂಬಾರ ಪದಾರ್ಥಗಳ ರಾಜ ಎಂದೂ ಕರೆಯುತ್ತಾರೆ. ದೈನಂದಿನ ಅಡುಗೆ ಪದಾರ್ಥಗಳಲ್ಲಿ, ಬೇಕರಿ ತಿನಿಸುಗಳಲ್ಲಿ, ಪಾನೀಯಗಳು ಹಾಗೂ ಔಷಧಗಳ ತಯಾರಿಕೆಯಲ್ಲಿ ಮೆಣಸಿನ ಕಾಳನ್ನು ಬಳಸುತ್ತಾರೆ.

ಕಾಳು ಮೆಣಸಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇದನ್ನು ಎಲ್ಲಾ ವಿಧವಾದ ಮಣ್ಣಿನಲ್ಲಿ ಬೆಳೆಯಬಹುದಾದರೂ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಸಾಮಾನ್ಯವಾಗಿ ಅಡಿಕೆ,ತೆಂಗು ಅಥವಾ ಇನ್ಯಾವುದೇ ಮರಗಳಿಗೆ ಮೆಣಸಿನ ಬಳ್ಳಿ ಹಬ್ಬಿ ಬೆಳೆಯುತ್ತದೆ.

ವೆುಣಸಿನ ಬಳ್ಳಿಗಳನ್ನು ಕುಂಡಗಳಲ್ಲೂ ಬೆಳೆಸಬಹುದು. ನಾಟಿಗೆ  ಫಸಲು ಕೊಡುವ ಮೆಣಸಿನ ಬಳ್ಳಿಯ ಕವಲು ಕತ್ತರಿಸಿ ಬಳಸುತ್ತಾರೆ. ಒಂದು ವರ್ಷದ ಫಸಲು ಕೊಡುವ ಆರೋಗ್ಯವಂತ ಬಳ್ಳಿಯ ಕವಲುಗಳನ್ನು ನಾಲ್ಕು ಗೆಣ್ಣುಗಳಿರುವಂತೆ ಕತ್ತರಿಸಿಕೊಳ್ಳಬೇಕು. ಅವುಗಳನ್ನು ಫಲವತ್ತಾದ ಮಣ್ಣು ತುಂಬಿರುವ ಕುಂಡಗಳಲ್ಲಿ ಎರಡು ಗೆಣ್ಣು ಮಣ್ಣಿನ ಅಡಿಯಲ್ಲಿ ಇರುವಂತೆ ನಾಟಿ ಮಾಡಬೇಕು. ಕುಂಡಗಳನ್ನು ನೆರಳಿನಲ್ಲಿ ಇಟ್ಟು ನಿಯಮಿತವಾಗಿ ನೀರುಣಿಸಬೇಕು. ಸುಮಾರು 45 ದಿನಗಳಲ್ಲಿ ಬಳ್ಳಿಯಲ್ಲಿ ಬೇರು ಬರುತ್ತದೆ. ಕುಂಡದಲ್ಲಿ ನೆಟ್ಟ ಮೆಣಸಿನ ಸಸಿ  ಬಳ್ಳಿಯಾಗದೆ ಪೊದೆಯಂತೆ ಬೆಳೆಯುತ್ತದೆ. 

 ಕುಂಡಗಳಲ್ಲಿ ಬೆಳೆಸಲು ಪಣಿಯೂರು ತಳಿ ಉತ್ತಮ ಎನ್ನುತ್ತಾರೆ ಮಡಿಕೇರಿ ತಾಲ್ಲೂಕಿನ  ಚೆಂಬು ಗ್ರಾಮದ  ರೈತ ಮಹಿಳೆ ಹೊಸೂರು ವನಜಾ ಚಂದ್ರಶೇಖರ್. ವನಜಾ ಹಲವು ವರ್ಷಗಳಿಂದ ತಮ್ಮ ಮನೆಯಂಗಳಲ್ಲಿ ಅಲಂಕಾರಕ್ಕಾಗಿ ಕುಂಡಗಳಲ್ಲಿ ಮೆಣಸಿನ ಬಳ್ಳಿ ನೆಟ್ಟು ಬೆಳೆಸಿ ಇಳುವರಿ ಪಡೆಯುತ್ತಿದ್ದಾರೆ. ಕುಂಡದಲ್ಲಿ ಬೆಳೆದ ಮೆಣಸಿನ ಪೊದೆಯಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಹಸಿರು ಮೆಣಸು ಸಿಗುತ್ತದೆ.

ಇದಕ್ಕೆ  ಪೊದೆ ಮೆಣಸಿಗೆ ಎರಡು ತಿಂಗಳಿಗೊಮ್ಮೆ ನೆಲಗಡಲೆ ಹಿಂಡಿ ಹಾಕುತ್ತಾರೆ. ವರ್ಷಕ್ಕೆ ಒಂದು ಸಲ ಎರೆಹುಳು ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರ ಹಾಕಬಹುದು.ಗೊಬ್ಬರವನ್ನು ಬುಡಕ್ಕೆ ಹಾಕದೆ ಮೂರು ಇಂಚು ಅಂತರ ಬಿಟ್ಟು ಹಾಕಬೇಕು. ಬುಡಕ್ಕೆ ಗೊಬ್ಬರ ತಾಗಿದರೆ ಬಳ್ಳಿ ಸತ್ತು ಹೋಗುತ್ತದೆ. ಚೆನ್ನಾಗಿ ಆರೈಕೆ ಮಾಡಿದರೆ ಒಂದು ಕುಂಡದಲ್ಲಿ ವರ್ಷಕ್ಕೆ ಅರ್ಧ ಕೇಜಿ ಹಸಿರು ಕಾಳು ಮೆಣಸು ಪಡೆಯಬಹುದು.  ಹೆಚ್ಚಿನ ಮಾಹಿತಿ ಬೇಕಿದ್ದರೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್;
9741131401.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT