ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದದಲ್ಲಿ ಮಡುಗಟ್ಟಿದ ದುಃಖ

Last Updated 17 ಫೆಬ್ರುವರಿ 2011, 7:30 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸೋಮವಾರ ಸಂಜೆ ಕೋಲ್ಕತ್ತದಲ್ಲಿ ಅನಾರೋಗ್ಯದಿಂದ ನಿಧನರಾದ ಗಡಿಭದ್ರತಾ ಪಡೆಯ ಯೋಧ ಆಟ್ರಂಗಡ ಕಿರಣ ಅವರ ಪಾರ್ಥೀವ ಶರೀರ ಬುಧವಾರ ಮುಂಜಾನೆ ಸ್ವಗ್ರಾಮ ಕುಂದಕ್ಕೆ ಬರುತ್ತಿದಂತೆ ಕುಟುಂಬಸ್ಥರಲ್ಲಿ ಎರಡು ದಿನಗಳಿಂದ ಮಡುಗಟ್ಟಿದ್ದ ದುಃಖ ಒಮ್ಮೆಲೆ ಸ್ಫೋಟಗೊಂಡಿತು. ಬೆಂಗಳೂರಿನ ಗಡಿಭದ್ರತಾ ಪಡೆಯ ಯೋಧರ ಬೆಂಗಾವಲಿನಲ್ಲಿ ಬಂದ ಯೋಧನ ಶವದ ಪೆಟ್ಟಿಗೆಯನ್ನು ಮಿಲಿಟರಿ ವಾಹನದಿಂದ ಕೆಳಗಿಳಿ ಸುತಿದ್ದಂತೆ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತು.

ಪತ್ನಿ ಪ್ರತಿಮಾ ಪತಿಯ ಸಾವಿನ ಸುದ್ದಿ ತಿಳಿದು ದಿಕ್ಕು ತೋಚದವರಾಗಿ  ಕುಳಿತಿದ್ದರು. ಕಳೆದ ಎರಡು ದಿನಗಳಿಂದ ಅತ್ತು ಕಣ್ಣೀರು ಬತ್ತಿ ಹೋಗಿದ್ದವು. ಅಣ್ಣನನ್ನು ಕಳೆದುಕೊಂಡ ತಮ್ಮ ಸುವಿನ್ ಕೂಡ ದುಃಖದ ಮಡುವಿನಲ್ಲಿ ಮುಳುಗಿದ್ದ. ಇತ್ತ ಮಗನ ಸಾವಿನ ಸುದ್ದಿ ತಿಳಿದು ದುಃಖ ತಡೆಯಲಾಗದ ತಾಯಿ ಅಕ್ಕಮ್ಮ ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ. ವಿರಾಜಪೇಟೆಯ ಆತ್ರೇಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮಗನ ಅಂತ್ಯ ಸಂಸ್ಕಾರವನ್ನೂ ನೋಡಲಾಗಲಿಲ್ಲ.

 ಮೃತ ಕಿರಣ್ ಕಳೆದ ಒಂದು ತಿಂಗಳ ಹಿಂದೆ ರಜೆಯಲ್ಲಿ ಮನೆಗೆ ಬಂದು ಕರ್ತವ್ಯಕ್ಕೆ ತೆರಳಿದ್ದರು. ರಜೆಯಲ್ಲಿ ಕಾಫಿ ತೋಟದ ಕೆಲಸ ಮಾಡಿ ಮನೆಯನ್ನು ದುರಸ್ತಿಪಡಿಸಿ ಹೋಗಿದ್ದರು. ಇತ್ತೀಚಿಗೆ ಕಾರೊಂದನ್ನು ಖರೀದಿಸಿದ್ದರು. ಮುಂದಿನ ಎರಡು ತಿಂಗಳಲ್ಲಿ ಮತ್ತೆ ರಜೆ ಹಾಕಿ ಬರುವ ಏರ್ಪಾಡು ಮಾಡಿದ್ದರು ಎಂದು ಯೋಧನ ಬಂಧುಗಳು ದುಃಖದಿಂದ ಹೇಳಿದರು.ಕಳೆದ 13 ವರ್ಷಗಳಿಂದ ಕರ್ತವ್ಯ ನಿರ್ವಹಿಸುತಿದ್ದ ಕಿರಣ್ ಎರಡು ವರ್ಷಗಳ ತರುವಾಯ ನಿವೃತ್ತಿ ಪಡೆಯಲು ಚಿಂತಿಸಿದ್ದರು ಎಂದು ಕುಟುಂಬಸ್ಥರು ನೋವಿನಿಂದ ಹೇಳಿದರು.

ಒಳ್ಳೆಯ ಗುಣ ಸ್ವಭಾವದ ಇವರು ರಜೆಯಲ್ಲಿ ಊರಿಗೆ ಬಂದಾಗ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಜತೆಗೆ ಶ್ರಮಜೀವಿ ಕೂಡ. ಬೆಕ್ಕೆಸೊಡ್ಲೂರಿನ ಮಲ್ಲುಮಾಡ ಕುಟುಂಬದ ಪ್ರತಿಮಾ ಅವರನ್ನು 5 ವರ್ಷಗಳ ಹಿಂದೆ ಮದುವೆಯಾಗಿದ್ದರು ಎಂದು ಹೇಳುವಾಗ ನೆರೆದಿದ್ದ ಗ್ರಾಮಸ್ಥರ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಬಡತನದಲ್ಲಿದ್ದ ಕುಟುಂಬ ಕಿರಣ್ ಅವರನ್ನೇ ಅವಲಂಬಿಸಿತ್ತು. ಕಿರಣ್ ಅವರ ಸಾವಿನಿಂದ ಇದೀಗ ಕುಟುಂಬ ಬಡವಾಗಿದೆ ಎಂದು ಅಕ್ಕಪಕ್ಕದ ಕುಟುಂಬಸ್ಥರು ತಮ್ಮ ದುಃಖ ತೋಡಿಕೊಂಡರು. ಬುಧವಾರ ಮಧ್ಯಾಹ್ನ ನೆರೆದಿದ್ದ ಗ್ರಾಮಸ್ಥರು, ಬಂಧು ಬಳಗದವರು ‘ಯೋಧ ಕಿರಣ್ ಅಮರಹೇ’ ಎಂಬ ಘೋಷಣೆ ಕೂಗಿ ಯೋಧನ ಮೃತ ದೇಹವನ್ನು ಚಿತೆಗೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT