ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು ಕೊರತೆ

Last Updated 14 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕಸದ ತೊಟ್ಟಿಯಾದ ರಸ್ತೆ
ಬೆಂಗಳೂರಿನಲ್ಲಿ ಮನೆಯ ಬಾಗಿಲಿಗೆ ಬಂದು ಕಸ ಸಂಗ್ರಹಿಸುವ ಯೋಜನೆ ಜಾರಿಗೆ ಬಂದು ಐದಾರು ವರ್ಷಗಳಾಗಿವೆ. ಈ ಯೋಜನೆ ಜಾರಿಗೆ ಬಂದ ಮೇಲೆ ಬೆಂಗಳೂರಿನ  ಬಹುತೇಕ ಬಡಾವಣೆಗಳ ಫುಟ್‌ಪಾತ್‌ಗಳು ಸ್ವಚ್ಛಗೊಂಡಿವೆ. ತುಂಬಿ, ತುಳುಕಾಡುತ್ತ ದುರ್ನಾತ ಬೀರುತ್ತಿದ್ದ ಕಸದ ತೊಟ್ಟಿಗಳು ಇತಿಹಾಸ ಸೇರಿವೆ. ಆದರೆ, ಇತ್ತೀಚೆಗೆ ಸಂಜಯ ನಗರದ ಮುಖಯ ರಸ್ತೆಯಲ್ಲಿ ಮಾತ್ರ ದಶಕಗಳ ಹಿಂದಿನ ದೃಶ್ಯ ಪುನರಾವರ್ತನೆಗೊಂಡಿದೆ.

ಇಲ್ಲಿ ಮನೆ, ಮನೆಗೆ ್ಗಂದು ಕಸ ಸಂಗ್ರಹಿಸುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಸ ವಿಲೇವಾರಿಗೆ ಈ ಪ್ರದೇಶದ ಗುತ್ತಿಗೆ ಹಿಡಿದಿರುವ ಗುತ್ತಿಗೆದಾರರು ಎಲ್ಲಿ ಮಾಯವಾಗಿದ್ದಾರೋ ಗೊತ್ತಿಲ್ಲ. ಕಸ ಹಾಕಲು ತೊಟ್ಟಿಯೂ ಇಲ್ಲದಿರುವುದರಿಂದ ಕಸವನ್ನು ಜನ ರಸ್ತೆಯ ಬದಿಗೇ ಚೆಲ್ಲುತ್ತಿದ್ದಾರೆ. ಹಾಗಾಗಿ ಕಸ ವಾರಗಟ್ಟಲೇ ರಸ್ತೆಯ ಬದಿಯಲ್ಲಿಯೇ ಬಿದ್ದಿರುತ್ತದೆ.                                                                             - ವಿ.  ಸತ್ಯಮೂರ್ತಿ

ಅಂಡರ್‌ಪಾಸ್ ಬೇಕು
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ‘ಅಂಡರ್‌ಪಾಸ್‌ಗಳ’ ನಿರ್ಮಾಣ ಸಮರೋಪಾದಿಯಲ್ಲಿ ಸಾಗಿರುವುದು ಸ್ವಾಗತಾರ್ಹ. ಆದರೆ, ತೀರಾ ಅವಶ್ಯಕವಾಗಿರುವ ಕೆಲವೆಡೆ ಅಂಡರ್‌ಪಾಸ್ ನಿರ್ಮಿಸಲು ಬಿಬಿಎಂಪಿ ಮರೆತಂತಿದೆ.  ನಿತ್ಯ ಹಲವಾರು ಅಪಘಾತ ಸಂಭಿಸುವ ಸ್ಥಳಗಳಲ್ಲಿಯೂ ಅಂಡರ್‌ಪಾಸ್ ಇರುವುದಿಲ್ಲ. ಅಂತಹ ಕೆಲವು ತಾಣಗಳಲ್ಲಿ ಹೊಸೂರು ರಸ್ತೆಯ ಮಡಿವಾಳ ಜಂಕ್ಷನ್ ಸಹಾ ಒಂದು.

ಬಿಬಿಎಂಪಿ ಕಾಂಪ್ಲೆಕ್ಸ್, ಇನ್ನೊಂದು ಬದಿಯಲ್ಲಿ ಪೊಲೀಸು ಠಾಣೆ, ಇಕ್ಕೆಲದಲ್ಲಿ ತಲೆ ಎತ್ತಿ ನಿಂತಿರುವ ಮಸೀದಿ, ದೇವಾಲಯ, ಚರ್ಚುಗಳು ಹಾಗೂ ದಟ್ಟ ಮಾರುಕಟ್ಟೆ ಪ್ರದೇಶವನ್ನು ಹೊಂದಿರುವ ಮಡಿವಾಳ ಜಂಕ್ಷನ್‌ನಲ್ಲಿ ರಸ್ತೆ ದಾಟುವ ಪಾದಚಾರಿಗಳೇ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ.  ಇದೇ ರೀತಿ ಹಡ್ಸನ್ ವೃತ್ತ, ಪುರಭವನದ ನರಸಿಂಹರಾಜಾ ರಸ್ತೆ (ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯ ಮುಂಭಾಗ). ಮೈಸೂರು ಬ್ಯಾಂಕ್ ವೃತ್ತ (ಕೆಂಪೇಗೌಡ ರಸ್ತೆ), ಮಲ್ಲೇಶ್ವರಂನ ಸಂಪಿಗೆ ರಸ್ತೆ (ಮಂತ್ರಿಮಾಲ್ ಮುಂಭಾಗ) ಹೀಗೆ ಇನ್ನೂ ಹಲವು ಕಡೆ ಅಂಡರ್‌ಪಾಸ್‌ಗಳ ಅವಶ್ಯಕತೆ ಇದೆ. ಸರ್ಕಾರ ಇತ್ತ ಗಮನಹರಿಸಲಿ.
-ಬಿ.ಕೆ. ಗೋವಿಂದರಾಜು

ನೆನಪಾದಾಗ ಬರುವ ನೀರು 
 ವಿಜಯನಗರದ ಬಳಿಯ ಬಾಪೂಜಿನಗರ ಮತ್ತು ಹಂಪಿನಗರ ಹಳೆಯ ಬಡಾವಣೆಗಳು. ಆದರೆ, ಬಾಪೂಜಿನಗರ 2ನೇ ಹಂತದ ವ್ಯಾಪ್ತಿಯ ವಾರ್ಡ್ ನಂ. 134 ಮತ್ತು ಹಂಪಿನಗರ ವ್ಯಾಪ್ತಿಯ ವಾರ್ಡ್ ನಂ. 133ರಲ್ಲಿ ಸದಾ ನೀರಿನ ತೊಂದರೆ.

ಈ ವಾರ್ಡ್‌ಗಳಲ್ಲಿ ಕುಡಿಯುವ ನೀರು 3 ದಿವಸಕ್ಕೊಮ್ಮೆ ಬರುತ್ತದೆ. ಅದೂ ರಾತ್ರಿ 12 ಗಂಟೆಯ ನಂತರ ನೀರು ಬರುತ್ತದೆ. ಹಾಗಾಗಿ ಇಲ್ಲಿನ ನಿವಾಸಿಗಳು ಅನಿವಾರ್ಯವಾಗಿ ಜಾಗರಣೆ ಮಾಡಬೇಕಾಗಿದೆ. ಬೆಳಿಗ್ಗೆ ಎದ್ದು ಕಚೇರಿ, ಕಾರ್ಖಾನೆಗಳಿಗೆ ಹೋಗುವವರಿಗೂ ಇದರಿಂದ ತೊಂದರೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಹಾಗಿಲ್ಲ. ಈಗಲಾದರೂ ಜಲಮಂಡಳಿ ಅಧಿಕಾರಿಗಳು ಇತ್ತ ಗಮನ ಹರಿಸುವರೆ ?
-ಮಂಜುನಾಥ ಡಿ.

ಸಮುದಾಯ ಭವನ ಬೇಕು
ಕೂಡ್ಲು ಗ್ರಾಮವೂ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಸಿಂಗಸಂದ್ರ ವಾರ್ಡ್‌ನ (191) ವ್ಯಾಪ್ತಿಗೆ ಬರುತ್ತದೆ. ಈ ಗ್ರಾಮದಲ್ಲಿ  20 ಸಾವಿರ ಜನಸಂಖ್ಯೆ ಇದ್ದು, ಹೆಚ್ಚಾಗಿ ಬಡವರು ವಾಸವಾಗಿದ್ದಾರೆ.

ಆದರೆ, ಗ್ರಾಮದಲ್ಲಿ ಯಾವುದೇ ಸಭಾಂಗಣ, ವಿಶಾಲ ಮೈದಾನವಿಲ್ಲ. ಹಾಗಾಗಿ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಮಾಡಬೇಕಾದರೆ ಭಾರಿ ತೊಂದರೆಯಾಗುತ್ತಿದೆ. ಅದರ ಜೊತೆ ಇಲ್ಲಿ ಗ್ರಂಥಾಲಯವೂ ಇಲ್ಲ. ವಿದ್ಯಾರ್ಥಿಗಳು, ಯುವ ಜನರಿಗೆ ಇದರಿಂದ ನಷ್ಟವಾಗುತ್ತಿದೆ. ಬಿಬಿಎಂಪಿ ಹಿರಿಯ ಅಧಿಕಾರಿಗಳು ಈ ಕಡೆ ಗಮನಹರಿಸಿ, ಸಮುದಾಯ ಭವನ ಮತ್ತು ಗ್ರಂಥಾಲಯ ಪ್ರಾರಂಭಿಸಬೇಕು ಎಂಬುದು ಇಲ್ಲಿನ ನಿವಾಸಿಗಳ ಕಳಕಳಿಯ ಮನವಿ.
-ಮುನಿಕೃಷ್ಣಪ್ಪ

ಹಾಪ್‌ಕಾಮ್ಸ್‌ನಿಂದ ಗ್ರಾಹಕರಿಗೆ ಬರೆ
ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಣ್ಣು, ತರಕಾರಿ ತಲುಪಿಸುವ ಉದ್ದೇಶದಿಂದ ಆರಂಭವಾದ ಹಾಪ್‌ಕಾಮ್ಸ್ ಈಗ ಗ್ರಾಹಕರಿಂದ ಭಾರೀ ದರ ವಸೂಲು ಮಾಡುವ ಸಂಸ್ಥೆಯಾಗಿದೆ. ಇತ್ತೀಚೆಗೆ ಹಾಪ್‌ಕಾಮ್ಸ್ ಮಳಿಗೆಯಲ್ಲಿ ಕಬ್ಬಿನ ಜಲ್ಲೆಯನ್ನು 15 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಅದೇ ದಿನ ಫುಟ್‌ಪಾತ್‌ನಲ್ಲಿ 25 ರೂಪಾಯಿಗೆ ಎರಡು ಕಬ್ಬು ಮಾರುತ್ತಿದ್ದರು. ತರಕಾರಿ, ಹಣ್ಣುಗಳು ಅಷ್ಟೇ. ಹಾಪ್‌ಕಾಮ್ಸ್‌ನಲ್ಲಿ ದುಬಾರಿ ದರವಿರುತ್ತದೆ. ಕೆಲವು ಹಾಪ್‌ಕಾಮ್ಸ್‌ನಲ್ಲಿ ಕೊಳೆತ ಹಣ್ಣುಗಳು ಇರುತ್ತವೆ.
-ನೊಂದ ಗ್ರಾಹಕ

ಪ್ರತಿದಿನವೂ ವಿದ್ಯುತ್ ನಿಲುಗಡೆ...?
ಇನ್ನೂ ಬೇಸಿಗೆ ಪ್ರಾರಂಭವಾಗಿಲ್ಲ. ಜಲಾಶಯಗಳು ಒಣಗಿಲ್ಲ. ಆದರೂ ವಿದ್ಯುತ್ ಅಭಾವ ತಲೆದೋರಿದೆಯೇ? ಮುನ್ಸೂಚನೆ ಇಲ್ಲದೇ ಬೆಸ್ಕಾಂನವರು ವಿದ್ಯುತ್ ನಿಲುಗಡೆ ಮಾಡುವಾಗ ಇಂತಹ ಅನುಮಾನ ಉದ್ಭವಿಸುವುದು ಸಹಜ.

ನಾವು ವಾಸವಾಗಿರುವ ಕತ್ರಿಗುಪ್ಪೆ, ಭುವನೇಶ್ವರಿನಗರ ಇನ್ನಿತರ ಕಡೆಗಳಲ್ಲಿ ಪ್ರತಿದಿನ ವಿದ್ಯುತ್ ನಿಲುಗಡೆ ಸಾಮಾನ್ಯವಾಗಿದೆ. ಈ ಬಗ್ಗೆ ಬೆಸ್ಕಾಂ ಪ್ರಕಟಣೆಯನ್ನೂ ನೀಡಿಲ್ಲ. ಕಾರಣ ಕೇಳಲು ಹೋದರೆ ಬೆಸ್ಕಾಂ ಅಧಿಕಾರಿಗಳು ಪ್ರತಿಕ್ರಿಯಿಸುತ್ತಿಲ್ಲ. ವಿನಾಕಾರಣ ವಿದ್ಯುತ್ ತೆಗೆದು ನಾಗರಿಕರಿಗೆ ತೊಂದರೆ ಕೊಡುವುದು ಸರಿಯೇ?
-ಬೆಳ್ಳಾವೆ ರಮೇಶ್

ಮಿನಿ ಬಸ್ ಓಡಿಸಿ
 ಯಲಹಂಕದ ಪುಟ್ಟೇನಹಳ್ಳಿಯಿಂದ ವಿಧಾನಸೌಧ, ಪಾಲಿಕೆ ವೃತ್ತ, ಮಾರ್ಕೆಟ್‌ಗೆ ಉದ್ಯೋಗ ಹಾಗೂ ವ್ಯವಹಾರ ನಿಮಿತ್ತ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಂದ ಹೋಗುವ ಬಸ್‌ಗಳು ತುಂಬಿ ತುಳುಕುತ್ತಿರುತ್ತವೆ.

ಹಾಗಾಗಿ ಬೆಳಿಗ್ಗೆ 8.30ರ ಸುಮಾರಿಗೆ ವಿಧಾನಸೌಧ ಮುಖೇನ ಮಾರ್ಕೆಟ್‌ಗೆ ಮಿನಿ ಬಸ್ ಸೌಲಭ್ಯ ಕಲ್ಪಿಸಿದಲ್ಲಿ ಅನುಕೂಲವಾಗುತ್ತದೆ. ಸಂಬಂಧಪಟ್ಟ ಬಿಎಂಟಿಸಿ ಅಧಿಕಾರಿಗಳು ಇತ್ತ ಗಮನಹರಿಸಲಿ.
-ಎಂ. ಮಲ್ಲೇಶಯ್ಯ

ಹಗಲು ದರೋಡೆ

ಇತ್ತೀಚೆಗೆ ಗೃಹೋಪಯೋಗಿ ಅನಿಲ ವಿತರಕರು, ದ್ವೈವಾರ್ಷಿಕ ಗೃಹೋಪಯೋಗಿ ಗ್ರಾಹಕ ಪರಿಶೀಲನಾ ಪತ್ರ ನೀಡಲು ಗ್ರಾಹಕರಿಂದ 70 ರೂಪಾಯಿ ವಸೂಲು ಮಾಡುತ್ತಾರೆ. ಹಾಗೆಂದು ಮನೆಗಳಲ್ಲಿ ಅನಿಲ ವ್ಯವಸ್ಥೆ ಪರಿಶೀಲನೆಗೆ ಯಾವುದೇ ಪರಿಣತ ಅಧಿಕಾರಿಗಳು ಬರುತ್ತಿಲ್ಲ. ಪರಿಶೀಲನೆಯನ್ನು ಮಾಡುತ್ತಿಲ್ಲ.

ಈ ಕುರಿತು ಪ್ರಶ್ನಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಅನಿಲ ಉತ್ಪಾದಕರ ಸಂಸ್ಥೆಯಿಂದ ಕಡ್ಡಾಯ ಆದೇಶ ಬಂದಿರುವುದಾಗಿ ಹೇಳುತ್ತಿದ್ದಾರೆ. ಸರ್ಕಾರದ ಪ್ರಕಟಣೆಯನ್ನು ಗ್ರಾಹಕರ ಸೂಚನಾ ಫಲಕದಲ್ಲಿ ಪ್ರಕಟಿಸಿಲ್ಲ. ಆ ಬಗ್ಗೆ ಕೇಳಿದರೆ  ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಸರ್ಕಾರದ ಆದೇಶ ಪ್ರಕಟಗೊಂಡಿರುವುದರಿಂದ ಗ್ರಾಹಕರಿಗೆ ಮುನ್ಸೂಚನೆ ನೀಡುವ ಅಗತ್ಯವಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸುವರೆ?
-ಗಣೇಶ ಪ್ರಸಾದ್

ಬೀದಿ ನಾಯಿ ಕಾಟ
ನಾವು ಗಿರಿನಗರದ 4ನೇ ಹಂತದ ಕಾವೇರಿ ರಸ್ತೆಯ ನಿವಾಸಿಗಳು. ನಮ್ಮ ರಸ್ತೆಯಲ್ಲಿ ಬೀಡಾಡಿ ನಾಯಿಗಳ ಹಾವಳಿ ವಿಪರೀತವಾಗಿದೆ. ಈ ನಾಯಿಗಳ ಕಾಟದಿಂದ ವಯಸ್ಸಾದವರು, ಹೆಂಗಸರು ಮತ್ತು ಮಕ್ಕಳು ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ.

ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಏನಾದರೂ ಅನಾಹುತವಾದ ನಂತರ ಕಾರ್ಯಗತಗೊಳ್ಳುವ ಬದಲು ಮುಂಚಿತವಾಗಿಯೇ ಸೂಕ್ತ ಕ್ರಮ ಕೈಗೊಳ್ಳುವುದು ಉತ್ತಮ. ನಮ್ಮೆಲ್ಲರ ಈ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿ.
-ಕಾವೇರಿ ರಸ್ತೆಯ ನಿವಾಸಿಗಳು

ಮಾರ್ಗ ಬದಲಾಯಿಸಿ
ಬೆಂಗಳೂರು ಹೆದ್ದಾರಿ ನಾಲ್ಕರಲ್ಲಿ ಜಾಲಹಳ್ಳಿ ಕ್ರಾಸ್‌ನಿಂದ ಯಶವಂತಪುರದವರೆವಿಗೆ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ಇಲ್ಲಿ ಪ್ರತಿದಿನ ಎರಡು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ಜಾಮ್ ಆಗುತ್ತಿದೆ. ಇದರಿಂದಾಗಿ ಬೆಂಗಳೂರು ತಲುಪುವ ಶಾಲಾ, ಕಾಲೇಜು ವಿದ್ಯಾರ್ಥಿಗಳು, ನೌಕರರು ಕಾರ್ಮಿಕರು, ನಾಗರಿಕರು ತುಂಬಾ ತೊಂದರೆಪಡುವಂತಾಗಿದೆ.

ಕೃಷ್ಣರಾಜೇಂದ್ರ ಮಾರುಕಟ್ಟೆ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಿಂದ, ಚಿಕ್ಕಬಾಣಾವಾರ ಹಾಗೂ ಹೆಸರಘಟ್ಟ ಕಡೆಗೆ ಹೋಗುವ ಅರ್ಧದಷ್ಟು ಬಿಎಂಟಿಸಿ ಬಸ್‌ಗಳನ್ನು ಬದಲಿ ಮಾರ್ಗವಾಗಿ, ಯಶವಂತಪುರ ಟೋಲ್‌ಗೇಟ್, ಮತ್ತಿಕೆರೆ ಗಂಗಮ್ಮ ಸರ್ಕಲ್, ಅಬ್ಬಿಗೆರೆ, ಚಿಕ್ಕಬಾಣಾವಾರ ಮಾರ್ಗವಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಲು ಕೋರುತ್ತೇನೆ.
-ಎಚ್.ಬಿ. ರಾಮಾಂಜನೇಯ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT