ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದುಕೊರತೆಗೆ ಸೀಮಿತವಾದ ಬಜೆಟ್‌ ಸಭೆ

Last Updated 10 ಜನವರಿ 2014, 8:34 IST
ಅಕ್ಷರ ಗಾತ್ರ

ತುಮಕೂರು: ನಗರದ ಅಭಿವೃದ್ಧಿ ಬಗ್ಗೆ ನಗರ ಪಾಲಿಕೆ ಅಧಿಕಾರಿಗಳು ಯೋಜನೆ ರೂಪಿಸದೆ ಕೇವಲ ಸಲಹೆ ಕೇಳುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ನಗರಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಆಯವ್ಯಯ ಕುರಿತ ಸಲಹಾ ಸಭೆಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬದ್ಧತೆ ಪ್ರದರ್ಶನ ಮಾಡದಿದ್ದರೆ ಸಲಹೆಗಳಿಂದ ಪ್ರಯೋ­ಜನ­ವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಯಿತು.

ಆಯುಕ್ತ ಅಷದ್‌ಷರೀಪ್‌ ಮಾತನಾಡಿ, ಹಿಂದೆ ಆಗಿರುವ ತಪ್ಪುಗಳನ್ನು ಮತ್ತೆ ಚರ್ಚಿಸುವುದು ಬೇಡ. ಈಗ ಮುಂದೆ ಏನಾಗಬೇಕೆಂದು ಸಲಹೆ ಕೊಡಿ. ಕೇವಲ ಕುಂದುಕೊರತೆ ಹೇಳುವುದು ಬೇಡ ಎಂದರು. ಆದರೂ ಸಭೆಯಲ್ಲಿದ್ದ ಕೆಲವರು ತಮ್ಮ ಬಡಾವಣೆಗಳ ಸಮಸ್ಯೆಗಳನ್ನು ಹೇಳಿದರು.

ಬಿಜೆಪಿ ಮುಖಂಡ ಕೆ.ಪಿ.ಮಹೇಶ್‌ ಮಾತನಾಡಿ, ಸರ್ಕಾರ ನೀಡಿದ ರೂ. 100 ಕೋಟಿ ಅನುದಾನದ ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ. ನಗರವನ್ನು ಯೋಜನಾ ಬದ್ಧವಾಗಿ ಅಭಿವೃದ್ಧಿಪಡಿಸುತ್ತಿಲ್ಲ. ಕುಡಿ­ಯುವ ನೀರಿನ ಸಮಸ್ಯೆ ಮತ್ತು ಕಸ ವಿಲೇವಾರಿಗೆ ಸೂಕ್ತ ಕ್ರಮಕೈಗೊಂಡಿಲ್ಲ. ನಗರದ ಅಭಿವೃದ್ಧಿಗೆ ಸಮಗ್ರ ಅಧ್ಯಯನ ನಡೆಸಿ, ಮಾಸ್ಟರ್‌ ಪ್ಲಾನ್‌ ತಯಾರಿಸಬೇಕು ಎಂದು ಆಗ್ರಹಿಸಿದರು.

ಚಿಂತಕ ಸಿ.ಯತಿರಾಜ್‌ ಮಾತನಾಡಿ, ದಿನದ 24 ಗಂಟೆ ಕುಡಿಯುವ ನೀರು ನೀಡುವ ಹೆಸರಿನಲ್ಲಿ ಖಾಸಗೀಕರಣಕ್ಕೆ ಮುಂದಾಗಬೇಡಿ. ಇದರಿಂದ ನಿವಾಸಿಗಳ ಮೇಲೆ ತೆರಿಗೆ ಭಾರ ಹೆಚ್ಚುತ್ತದೆ. ನಗರದ ಉದ್ಯಾನಗಳನ್ನು ಗುರುತಿಸಿ ಅಭಿವೃದ್ಧಿ ಮಾಡಬೇಕು. ನಗರ ಪಾಲಿಕೆ ಅಭಿವೃದ್ಧಿ ಆದ್ಯತೆ­ಯನ್ನು ಗುರುತಿಸಿ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಸೈಯದ್‌ ಅಲ್ತಾಫ್‌, ನಗರದ ಕೊಳೆಗೇರಿ­ಗಳನ್ನು ಅಭಿವೃದ್ಧಿಪಡಿಸಬೇಕು. ಇಲ್ಲವೆ ನಗರದ ಹೊರಗೆ 25 ಎಕರೆ ಜಾಗ ಗುರುತಿಸಿ ಪುನರ್ವಸತಿ ಕಲ್ಪಿಸ­ಬೇಕು. ಕೊಳೆಗೇರಿ ನಿವಾಸಿಗಳಿಗೆ ಸಮು­ದಾಯ ಭವನ ನಿರ್ಮಿಸಬೇಕು ಎಂದರು.

ದಲಿತ ಮುಖಂಡ ಪಿ.ಎನ್‌.ರಾಮಯ್ಯ, ನಗರದ ಸ್ಮಶಾನಗಳನ್ನು ಅಭಿವೃದ್ಧಿಪಡಿಸಬೇಕು. ಪೌರ­ಕಾರ್ಮಿಕರನ್ನು ಕಾಯಂ ಮಾಡಬೇಕು. ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಸರಿಪಡಿಸಲು ಕ್ರಮ­ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಗರದ ರಸ್ತೆ, ಒಳಚರಂಡಿ, ಕುಡಿಯುವ ನೀರು, ಸ್ವಚ್ಛತೆ ಮುಂತಾದ ಸಮಸ್ಯೆ ಬಗೆಹರಿಸುವಂತೆ ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಆಗ್ರಹಿಸಿ­ದರು. ಬಜೆಟ್‌ ಸಲಹಾ ಸಭೆ ಕುಂದು–ಕೊರತೆ ಸಭೆಯಾಗಿ ಮಾರ್ಪಟ್ಟಿತು. ಮೇಯರ್‌ ಗೀತಾ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT