ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: `ರೂ 1.23 ಕೋಟಿ ವೆಚ್ಚದಲ್ಲಿ ನಿರ್ಮಾಣ-40 ಹೊಸ ಬಸ್'

Last Updated 6 ಡಿಸೆಂಬರ್ 2012, 6:49 IST
ಅಕ್ಷರ ಗಾತ್ರ

ಕುಕನೂರು: ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಕನೂರಿನ ನೂತನ ಬಸ್ ಘಟಕ ಡಿ.8ರಂದು ಉದ್ಘಾಟನೆ ಆಗಲಿದೆ ಎಂದು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಮಿನುಲ್ಲಾಸಾಹೇಬ ಹೇಳಿದರು.

ಇಲ್ಲಿಯ ಗುದ್ನೆಪ್ಪನಮಠ ರಸ್ತೆಯ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿದ ಸಾರಿಗೆ ಸಂಸ್ಥೆಯ ಬಸ್ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ನಂತರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಘಟಕದಿಂದ 50 ಮಾರ್ಗಸೂಚಿ ಆಚರಿಸಲಾಗುವುದು.

ಪ್ರಾರಂಭದಲ್ಲಿ 15-20 ಮಾರ್ಗಸೂಚಿ ಅಳವಡಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. 40 ಹೊಸ ಬಸ್ ಪೂರೈಸುವಂತೆ ಬೇಡಿಕೆ ಇಟ್ಟಿದ್ದು ಸಚಿವರು ಹಾಗೂ ಮೇಲಧಿಕಾರಿಗಳಿಂದ ಸ್ಪಷ್ಟ ಭರವಸೆ ದೊರೆತಿದೆ. ಬೇರೆ ಬೇರೆ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 200-250 ಸಿಬ್ಬಂದಿಯನ್ನು ಹೊಸ ಘಟಕಕ್ಕೆ ನಿಯೋಜಿಸಲಾಗುವುದು. ಒಟ್ಟಾರೆ ಒಂದು ಬಸ್ ಘಟಕ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಆರ್.ಅಶೋಕ, ಜಿಲ್ಲಾ ಉಸ್ತುವಾರಿ ಸಚಿವ ಮುರಗೇಶ ನಿರಾಣಿ, ಶಾಸಕ ಈಶಣ್ಣ ಗುಳಗಣ್ಣವರ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಸೇರಿದಂತೆ ಎಲ್ಲ ಹಂತದ ಜನಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರ ನೀಡಿದರು.

ಮುಖಂಡ ನವೀನ್‌ಕುಮಾರ ಗುಳಗಣ್ಣವರ ಮಾತನಾಡಿ, ಈ ಭಾಗದ ಜನತೆಯ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಶಾಸಕ ಈಶಣ್ಣ ಗುಳಗಣ್ಣವರ ವಿಶೇಷ ಆಸಕ್ತಿ ವಹಿಸಿ ಆಯ್ಕೆಯಾದ ವರ್ಷವೇ ಕುಕನೂರು ನಗರಕ್ಕೆ ನೂತನ ಬಸ್ ಘಟಕ ಮಂಜೂರು ಮಾಡಿಸಿದ್ದಾರೆ. ಪರಿಣಾಮವಾಗಿ ಜೂನ್-2009ರಲ್ಲಿ ಕಾಮಗಾರಿ ಆರಂಭ ಆಗಿದ್ದು, ಏಪ್ರೀಲ್-2011ರಲ್ಲಿ ಪೂರ್ಣಗೊಂಡಿದೆ.

ಹಲವಾರು ಕಾರಣಗಳಿಂದ ಉದ್ಘಾಟನೆ ತಡವಾಗಿತ್ತು. ತುರ್ತಾಗಿ ಬಸ್ ಘಟಕವನ್ನು ಉದ್ಘಾಟಿಸುವಂತೆ ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಿಸಿದ ಸಚಿವರಲ್ಲಿ ಮನವಿ ಮಾಡಲಾಗಿತ್ತು. ಈ ಭಾಗದ ಜನತೆಯ ಬಹುದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಡಿ.ಎಂ.ಎ ನಾರಾಯಣ ಗೌಡಗೇರಿ, ಮುಖಂಡರಾದ ಡಾ.ಮಲ್ಲಿಕಾರ್ಜುನ ಬಿನ್ನಾಳ, ಭರಮಪ್ಪ ಕಳ್ಳಿಮನಿ, ರಾಮಣ್ಣ ಕಲಾಲ, ಶೇಖಪ್ಪ ಕಂಬಳಿ, ದೊಡ್ಡನಗೌಡ ತೋಟಗಂಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT