ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ ಸುಬ್ರಹ್ಮಣ್ಯ: ಬುರ್ಖಾ ವಿವಾದ, ತೆರೆ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ನಡೆಯುತ್ತಿರುವ ಸುಬ್ರಹ್ಮಣ್ಯದ ಪದವಿ ಕಾಲೇಜಿನಲ್ಲಿ ಬುರ್ಖಾ ಧಾರಣೆ ವಿಚಾರದಲ್ಲಿ ಈ ಮೊದಲಿದ್ದ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಮಾಡದಂತೆ ಸೂಚಿಸುವ ಮೂಲಕ ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಅವರು ವಿವಾದಕ್ಕೆ ತೆರೆ ಎಳೆದಿದ್ದಾರೆ.

ಸೆ.22ರಂದು ದೇವಸ್ಥಾನದ ಆಡಳಿತಾಧಿಕಾರಿ ಎಚ್.ಎಂ.ಕಾಳಿ ಅವರು ಪ್ರಾಚಾರ್ಯ ದಿನೇಶ್ ಕಾಮತ್ ಅವರಿಗೆ ಸುತ್ತೋಲೆಯೊಂದನ್ನು ಹೊರಡಿಸಿ, ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ಕಾಂಪೌಂಡ್ ಒಳಗೆ ಬಂದು ತರಗತಿ ಕೊಠಡಿಯಲ್ಲಿ ಬುರ್ಖಾ ಕಳಚುವುದಕ್ಕೆ ಅವಕಾಶ ಕೊಡಬಾರದು, ಕಾಲೇಜಿನ ಕಾಂಪೌಂಡ್ ಪ್ರವೇಶಿಸುವುದಕ್ಕೆ ಮೊದಲೇ ಬುರ್ಖಾ ಕಳಚಿ ಬರಬೇಕು ಎಂದು ಸೂಚಿಸಿದ್ದರು.

ಪ್ರಾಚಾರ್ಯರು ಈ ಆದೇಶವನ್ನು ಪಾಲಿಸುವಂತೆ ಕಾಲೇಜಿನಲ್ಲಿರುವ ಎಲ್ಲಾ 17 ಮಂದಿ ವಿದ್ಯಾರ್ಥಿನಿಯರಿಗೆ ಸೂಚಿಸಿದ್ದರು. ಈ ಆದೇಶ ಪಾಲಿಸುವ ಸಲುವಾಗಿ ವಿದ್ಯಾರ್ಥಿನಿಯರು ಬಸ್ ನಿಲ್ದಾಣದೊಳಗೆ, ಅಂಗಡಿಯೊಳಗೆ ತೆರಳಿ ಬುರ್ಖಾ ಕಳಚಿ ಕಾಲೇಜಿಗೆ ಬರುವ ಅನಿವಾರ್ಯತೆ ಎದುರಾಗಿತ್ತು.

ಈ ಹೊಸ ನಿಯಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತಿರುವ ಜಿಲ್ಲಾಧಿಕಾರಿ ಅವರು ಇಬ್ಬರನ್ನೂ ಸೋಮವಾರ ತಮ್ಮ ಕಚೇರಿಗೆ ಕರೆಸಿ ಹಳೆಯ ಪದ್ಧತಿಯಂತೆ ಕಾಲೇಜಿನ ಒಳಗೆ ಬಂದ ಬಳಿಕ ಬುರ್ಖಾ ಕಳಚಲು ಅವಕಾಶ ಕೊಡಬೇಕೆಂದು ಸೂಚಿಸಿದರು.
 
ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡಿರುವ ನಿರ್ಧಾರದ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಅವರ ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT