ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ರಾಮದಲ್ಲಿ ಅರಳಿದ ಪ್ರತಿಭೆ,

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತುಮಕೂರಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಕಳೆದ ಡಿಸೆಂಬರ್ 11ರಂದು ನಡೆದ ಪೈಕಾ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟದ  ಕೊಕ್ಕೊ ಫೈನಲ್‌ನಲ್ಲಿ ಅಶ್ವಿನಿ ಎಂಬ ಆಟಗಾರ್ತಿ ಎಲ್ಲರ ಕಣ್ಮಣಿಯಾಗಿದ್ದಳು. ದೆಹಲಿ ಆಟಗಾರ್ತಿಯರ ವೇಗ ಹಾಗೂ ಡೈವ್‌ಗಳನ್ನು ಸಮರ್ಥವಾಗಿ ಎದುರಿಸಿ ಕರ್ನಾಟಕದ ಜಯವನ್ನು ಮತ್ತಷ್ಟು ಸುಲಭಗೊಳಿಸಿದಳು.

ಹಿಂದಿನ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಮೈಕ್ ಹಿಡಿದು `ಈ ಹುಡುಗಿ ಅಶ್ವಿನಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಟಿ.ತಾಂಡ್ಯ ಎಂಬ ಪುಟ್ಟ ಹಳ್ಳಿಯವಳು. ಇವತ್ತು ರಾಷ್ಟ್ರಮಟ್ಟಕ್ಕೆ ಬೆಳೆದಿದ್ದಾಳೆ~ ಎಂದು ಹೇಳಿದ ಕ್ಷಣವೇ ಚಪ್ಪಾಳೆಯ ಸುರಿಮಳೆ. ಬಹುಮಾನ ಘೋಷಣೆಯ ಮಹಾಪೂರ.

ಪೈಕಾ ಕ್ರೀಡಾಕೂಟದ ಅದ್ಭುತ ಪ್ರದರ್ಶನ ಅಶ್ವಿನಿಗೆ `ಬೆಸ್ಟ್ ಡಿಫೆನ್ಸ್~ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಇದೇ ಖುಷಿಯಲ್ಲಿ `ಪ್ರಜಾವಾಣಿ~ಯೊಂದಿಗೆ ಅಶ್ವಿನಿ ತನ್ನ ಬದುಕಿನ ಕನಸುಗಳನ್ನು ಹಂಚಿಕೊಂಡಿದ್ದಾಳೆ.

`ನನ್ನ ಊರಿನಲ್ಲಿರುವುದು ಕೇವಲ 100 ಮನೆ. ಜನಸಂಖ್ಯೆ 300 ದಾಟಿಲ್ಲ. ಮೂಲಸೌಕರ್ಯ ಏನೇನೂ ಇಲ್ಲ. ಭಾರತದ ಇಂಥ ಸಾವಿರಾರು ಗ್ರಾಮಗಳಲ್ಲಿ ಕ್ರೀಡಾ ಪ್ರತಿಭೆಗಳಿವೆ ಎಂಬುದನ್ನು ಸಾಧಿಸುವ ಛಲವೇ ಸ್ಪೂರ್ತಿಯ ಸೆಲೆಯಾಗಿ ನನ್ನನ್ನು ಕಾಪಾಡಿತು.
 
ಚಿಕ್ಕ ವಯಸ್ಸಿನಲ್ಲಿ ಮನರಂಜನೆಗೆಂದು ಅಕ್ಕ, ತಮ್ಮ ಹಾಗೂ ಗೆಳೆತಿಯರೊಂದಿಗೆ ಆಡುತ್ತಿದ್ದ ಆಟ ಈಗ ನನ್ನನ್ನು ರಾಷ್ಟ್ರಮಟ್ಟದ ಆಟಗಾರ್ತಿಯಾಗಿ ಬೆಳೆಯುವಂತೆ ಮಾಡಿದೆ.

ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಕೊಕ್ಕೊ ಟೂರ್ನಿಗಳಲ್ಲಿ ಆಡಿದ್ದೇನೆ. ಸದ್ಯಕ್ಕೆ ತುಮಕೂರಿನ ಸರ್ವೋದಯ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅಂತರ ಶಾಲಾಮಟ್ಟದ ಕ್ರೀಡಾಕೂಟದಲ್ಲಿ ನನ್ನ ನಾಯಕತ್ವದ ತುಮಕೂರು ತಂಡ 3ನೇ ಸ್ಥಾನ ಪಡೆದದ್ದು ಹೆಮ್ಮೆಯ ಸಂಗತಿ.

ಪ್ರಾಥಮಿಕ ಶಾಲೆಯಲ್ಲಿದ್ದಾಗ ದೈಹಿಕ ಶಿಕ್ಷಕ ತ್ಯಾಗರಾಜ ಕೊಕ್ಕೊ ತರಬೇತಿ ನೀಡಿ ಆಸಕ್ತಿ ಬೆಳೆಯುವಂತೆ ಮಾಡಿದರು. 8ನೇ ತರಗತಿಯಲ್ಲಿದ್ದಾಗ ಹಿರಿಯರ ವಿಭಾಗದಲ್ಲಿ ನೀಡಿದ ಪ್ರದರ್ಶನದಿಂದ ಹಲವು ಅವಕಾಶಗಳು ಒಲಿದು ಬಂದವು. ಮಧ್ಯಪ್ರದೇಶ, ಆಂಧ್ರಪ್ರದೇಶ, ಕೋಲ್ಕತ್ತಾ, ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕೊಕ್ಕೊ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇದು ರಾಷ್ಟ್ರಮಟ್ಟದಲ್ಲಿ ಹೆಸರು ತಂದು ಕೊಟ್ಟಿತು.

ನಾನು ಬೇರೆ ಆಟಗಳನ್ನೂ ಆಡುತ್ತೇನೆ. ಆದರೆ ಕೊಕ್ಕೊ ಬಹಳ ಇಷ್ಟ. ಕಾರಣ ಏನು ಅಂತ ಗೊತ್ತಿಲ್ಲ. ಅಟೆಂಡರ್ ಕೆಲಸ ಮಾಡುವ ತಂದೆ ಬಸವರಾಜು ಹಾಗೂ ಮನೆಯಲ್ಲಿ ಕುಟುಂಬ ಪೊರೆಯುವ ತಾಯಿ ತ್ರಿವೇಣಿಗೆ ನನ್ನ ಬಗ್ಗೆ ಹೆಮ್ಮೆ ಇದೆ.

2007ರಲ್ಲಿ ಕೊಕ್ಕೊ ಕೋಚ್ ರಮೇಶ್ ಸರ್, ನನ್ನ ತಂದೆ ತಾಯಿಯ ಮನವೊಲಿಸಿ ಜಿಲ್ಲಾ ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಪ್ರಾರಂಭವಾದ ಕೊಕ್ಕೊ ಓಟ

ರಾಷ್ಟ್ರಮಟ್ಟದವರೆಗೆ ಮುಂದುವರಿದಿದೆ~
`ಪ್ರತಿಭೆ ಇದ್ದವರಿಗೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಅಶ್ವಿನಿ ಅತ್ಯುತ್ತಮ ಉದಾಹರಣೆ. ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಅವರು ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲಾ ತಂಡ ಮೂರನೇ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
 
ಕೊಕ್ಕೊ ಅಂಕಣದಲ್ಲಿ ಅಶ್ವಿನಿ ಭವಿಷ್ಯ ಉಜ್ವಲವಾಗಿದೆ~ ಎಂದು ಕೊಕ್ಕೊ ಕೋಚ್ ಪ್ರದೀಪ್ ಮತ್ತು ರಮೇಶ್ ಅಭಿಪ್ರಾಯ ಪಡುತ್ತಾರೆ.

ಈ ಊರಿನಲ್ಲಿರುವುದು ನೂರು ಮನೆ. ಜನಸಂಖ್ಯೆ 300 ದಾಟಿಲ್ಲ. ಇಂಥಹ ಕುಗ್ರಾಮದಲ್ಲಿದ್ದರೂ ಅಶ್ವಿನಿಯ ಸಾಧನೆಗೆ ಇದ್ಯಾವುದೂ ಅಡ್ಡಿಯಾಗಿಲ್ಲ. ಇದಕ್ಕೆಲ್ಲಾ ಸಾಧಿಸುವ ಛಲವೇ ಸ್ಫೂರ್ತಿ ಸೆಲೆ...!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT