ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ಸದಸ್ಯರ ಆಧಾರದಲ್ಲಿ ಎಲ್‌ಪಿಜಿ ಸಂಪರ್ಕ

Last Updated 1 ಅಕ್ಟೋಬರ್ 2011, 10:00 IST
ಅಕ್ಷರ ಗಾತ್ರ

ಮಡಿಕೇರಿ: ಕುಟುಂಬವೊಂದರಲ್ಲಿ ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ ಸಂಪರ್ಕಗಳು ಇರುವುದನ್ನು ಆ ಕುಟುಂಬಗಳ ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಊರ್ಜಿತಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ವ್ಯವಹಾರಗಳ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ  ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.

ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿಯ ದುರುಪಯೋಗ ತಡೆಯಲು ಹಾಗೂ ಅಗತ್ಯ ಇರುವ ಎಲ್ಲ ಜನರಿಗೆ ಅಡುಗೆ ಅನಿಲ ಸಂಪರ್ಕ ನೀಡಲು ನಕಲಿ ಸಂಪರ್ಕಗಳನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗುತ್ತಿದ ಎಂದರು.

ಈ ನಿಟ್ಟಿನಲ್ಲಿ ಹಲವು ಗೊಂದಲಗಳು ಸಾರ್ವಜನಿಕರಲ್ಲಿ ಕಂಡುಬಂದಿವೆ. ಮುಖ್ಯವಾಗಿ ದೊಡ್ಡ ಕುಟುಂಬಗಳಲ್ಲಿ 2-3 ಎಲ್‌ಪಿಜಿ ಸಂಪರ್ಕ ಇರುವಂತಹ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಇದು ಸಹಜ ಕೂಡ. ಅದಕ್ಕಾಗಿ ನಾವು ಜನಸಂಖ್ಯೆ ಆಧಾರದ ಮೇಲೆ ಎಲ್‌ಪಿಜಿ ಸಂಪರ್ಕಗಳನ್ನು ಊರ್ಜಿತಗೊಳಿಸಲು ನಿರ್ಧರಿಸಿದ್ದೇವೆ ಎಂದರು.

ಕೇವಲ 2 ಇರುವಂತಹ ಕುಟುಂಬಕ್ಕೆ ಒಂದೇ ಎಲ್‌ಪಿಜಿ ಸಂಪರ್ಕ ಸಾಕು. ಆದರೆ, 7-8 ಜನರು ಇರುವಂತಹ ಕುಟುಂಬಗಳಿಗೆ ಹೆಚ್ಚಿನ ಸಂಪರ್ಕ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರವೇ ಕ್ರಮಕೈಗೊಳ್ಳಲಾಗುವುದು. ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದರು.

ನಗರದ ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿ ಮೀಟರ್ ಸಂಖ್ಯೆಯೊಂದಿಗೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮನೆ ಸಂಖ್ಯೆಯೊಂದಿಗೆ ತಾಳೆ ಹಾಕಿ ನಕಲಿ ಎಲ್‌ಪಿಜಿ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ. ವಾರಸುದಾರರು ಇಲ್ಲದ ಸುಮಾರು 30 ಲಕ್ಷ ಸಂಪರ್ಕಗಳು ಇದುವರೆಗೆ ಪತ್ತೆಯಾಗಿವೆ ಎಂದರು.

ಇದುವರೆಗೆ ಯಾರು ಎಲ್‌ಪಿಜಿ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ನೀಡಿಲ್ಲವೋ ಅವರು ತಕ್ಷಣ ನೀಡಬೇಕು. ಇಲ್ಲದಿದ್ದರೆ ಒಂದು ವಾರದೊಳಗೆ ಈ ಸಂಪರ್ಕಗಳು ನಕಲಿ ಎಂದು ಘೋಷಿಸಿ, ಅವುಗಳನ್ನು ಕಾಯಂಅಮಾನತುಗೊಳಿಸಲಾಗುವುದು ಎಂದು ಅವರು ಹೇಳಿದರು.

ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಸಚಿವ ಕೃಷ್ಣ ಪಾಲೇಮಾರ್, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ರಾಮಣ್ಣ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಶೋಕ ನಿಜಗಣ್ಣನವರ್, ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ವಕೀಲರ ಸಂಘದ ಅಧ್ಯಕ್ಷ ಸಿ.ಎಂ. ಮೇದಪ್ಪ, ಇತರರು ಉಪಸ್ಥಿತರಿದ್ದರು.

ಗ್ರಾಹಕರ ವ್ಯಾಜ್ಯಗಳ ವೇದಿಕೆಗೆ ಸ್ವಂತ ಕಟ್ಟಡ
ಮಡಿಕೇರಿ:
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಸ್ವಂತ ಕಟ್ಟಡ ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ವ್ಯವಹಾರಗಳ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ, ಕಾಲೇಜುಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಇದನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಸಾಮಾನ್ಯ ಜನರಲ್ಲೂ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಸ್ತ್ರೀ ಶಕ್ತಿ ಸಹಕಾರ ಸಂಘಗಳ ಮೂಲಕವೂ ಗ್ರಾಹಕರ ಹಕ್ಕುಗಳ ಬಗ್ಗೆ ಪ್ರಚಾರ ಪಡಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT