ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬಗಳ ಕರ್ತವ್ಯ

ಚೆಲ್ಲಿದರು ಮಲ್ಲಿಗೆಯ ಭಾಗ 4
Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಮ್ಮ ನೆಲಮೂಲ ಸಂಸ್ಕೃತಿಯಲ್ಲಿ ಹಲಬಗೆಯ ಬದಲಾವಣೆಗಳು ನಡೆಯುತ್ತಲೇ ಬಂದಿವೆ. ಬೆಂಗಳೂರು ನಗರದಲ್ಲಿ ಕಡಲೆಕಾಯಿ ಪರಿಷೆ, ಊರಹಬ್ಬಗಳು, ರಥೋತ್ಸವಗಳು, ಪಲ್ಲಕ್ಕಿ ಉತ್ಸವಗಳು, ಜಾತ್ರೆಗಳು ಕಾಲಕ್ಕೆ ತಕ್ಕಂತೆ ನಿರಂತರ ಬದಲಾವಣೆಗಳನ್ನು ಕಂಡಿವೆ. ಆದರೆ ಬೆಂಗಳೂರು ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುವ ಕರಗ ಉತ್ಸವದ ಆಚರಣೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನೇಮ, ನಿಷ್ಠೆಗಳಲ್ಲೂ ರಾಜಿ ಮಾಡಿಕೊಂಡಿಲ್ಲ ಎನ್ನುತ್ತಾರೆ ದೇವಾಲಯದ ಧರ್ಮದರ್ಶಿಗಳು.

ಜನಮನ್ನಣೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಂಡೇ ಸಾಗಿ ಬಂದಿರುವ ಕರಗ ಶಕ್ತ್ಯೋತ್ಸವ ವಹ್ನಿ ಕುಲದವರ ನೇತತ್ವದಲ್ಲಿ ಆರಂಭಗೊಂಡಿದ್ದು, ಈಗಲೂ ಅವರಿಂದಲೇ ನೆರವೇರುತ್ತಿದೆ. ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಗೆ ಒಳಪಟ್ಟರೂ ಈ ದೇವಾಲಯದ ನಿರ್ವಹಣೆ ನಡೆಯುತ್ತಿರುವುದು ತಿಗಳ ಜನಾಂಗದ ಆಯ್ದ ಧರ್ಮದರ್ಶಿಗಳ ಸಮಿತಿಯಿಂದ.

ಇವತ್ತಿಗೂ ವಹ್ನಿ ಕುಟುಂಬಗಳ ಸದಸ್ಯರೇ ಶ್ರೀ ಧರ್ಮರಾಯಸ್ವಾಮಿ ದೇವಾಲಯ ಹಾಗೂ ಕರಗ ಹಬ್ಬದ ಮೇಲುಸ್ತುವಾರಿಯನ್ನು ನಿರ್ವಹಿಸುತ್ತಿದ್ದಾರೆ. ಕರಗ ಉತ್ಸವಕ್ಕೆ ಹಿರಿಯರು `ಯಜಮಾನರು'. ಇವರ ನೇತೃತ್ವದಲ್ಲೇ ಎಲ್ಲಾ ತೀರ್ಮಾನಗಳೂ ಆಗುತ್ತವೆ. ಜನಾಂಗದ ಎಲ್ಲಾ ಧಾರ್ಮಿಕ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಇವರೇ.

ಯಜಮಾನರ ತೀರ್ಮಾನಗಳನ್ನು ಗೌಡರು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊರುತ್ತಾರೆ. ಕರಗ ಉತ್ಸವದ ಪ್ರತಿ ಧಾರ್ಮಿಕ ಆಚರಣೆಗಳಿಗೆ ಗಣಾಚಾರಿಗಳೇ ಮಾರ್ಗದರ್ಶಿಗಳು. ಘಂಟಾ ಪೂಜಾರಿಗಳು ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ವೀರ ಕುಮಾರರು, ವಿವಿಧ ಪೂಜಾರರು, ಪೋತರಾಜರು ಇವರೆಲ್ಲರಿಗೂ ಘಂಟಾ ಪೂಜಾರಿಗಳು ಗುರುಸ್ಥಾನದಲ್ಲಿ ಇರುತ್ತಾರೆ.

ಕರಗ ಕರ್ತ ಪೂಜಾರಿ ಇಡೀ ಉತ್ಸವದ ಕೇಂದ್ರ ಬಿಂದು. ಇವರೇ ಧರ್ಮರಾಯಸ್ವಾಮಿ ಗುಡಿ ಪೂಜಾರಿಯಾಗಿಯೂ ಕಾರ್ಯನಿರ್ವಹಿಸುವುದು ರೂಢಿ. ಎಲ್ಲಾ ವಿಧಿ ವಿಧಾನಗಳಲ್ಲೂ ಇವರ ಉಪಸ್ಥಿತಿ ಇರಲೇಬೇಕು. ಕರಗವನ್ನು ಹೊರುವ ಪೂಜಾರಿಗಳು ಸರದಿ ಮೇಲೆ ಈ ಜವಾಬ್ದಾರಿ ನಿರ್ವಹಿಸುತ್ತಾರೆ. ಕೆಲವು ವೇಳೆ ಅವರು ಸತತವಾಗಿ ಈ ಹೊಣೆಗಾರಿಕೆಯನ್ನು ನಿರ್ವಹಿಸುವುದುಂಟು. 

ಇವರೊಂದಿಗೆ ಭಾರತ ಪೂಜಾರಿ, ದುರ್ಗಾ ಪೂಜಾರಿ, ಪೋತರಾಜ ಪೂಜಾರಿಗಳೂ ಇಡೀ ಉತ್ಸವದುದ್ದಕ್ಕೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

ಕರಗ ಉತ್ಸವದ ಎಲ್ಲಾ ಹೊಣೆಗಾರಿಕೆಯನ್ನು ಕೆಲವು ಕುಟುಂಬಗಳ ಸದಸ್ಯರೇ ನೋಡಿಕೊಳ್ಳುತ್ತಾರೆ. ಇದು ಆನುವಂಶಿಕವಾಗಿ ಇವರಲ್ಲಿ ನಡೆದುಕೊಂಡು ಬಂದಿದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಮಾಡುವಂತೆಯೂ ಇಲ್ಲ. ಕರಗದ ಆಚರಣೆಗೂ ತಿಗಳ ಕುಲ ಕುಟುಂಬಗಳ ಕಾರ್ಯ ನಿರ್ವಹಣೆಗೂ ಧಾರ್ಮಿಕ ಹಿನ್ನೆಲೆ ತಳಕು ಹಾಕಿಕೊಂಡಿದೆ.

ಮಹಾಭಾರತ ಸ್ವರ್ಗಾರೋಹಣ ಪರ್ವದಲ್ಲಿ ಪಾಂಡವರು ಎಲ್ಲಾ ಇಹ ಬಂಧನಗಳಿಂದ ಕಳಚಿಕೊಂಡು ಸ್ವರ್ಗದೆಡೆಗೆ ಹೆಜ್ಜೆ ಹಾಕುತ್ತಿರುತ್ತಾರೆ. ಇವರೊಂದಿಗೆ ಸಾಗುತ್ತಿದ್ದ ದ್ರೌಪದಿಯು ಭೂಲೋಕದ ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತಾ ರಾಕ್ಷಸರ ಗುಂಪು ನಾಮಾವಶೇಷವಾದರೂ ವನವಾಸ ಸಂದರ್ಭದಲ್ಲಿ ಕಾಣಿಸಿದ ತಿಮಿರಾಸುರನನ್ನು ಸಂಹರಿಸುವುದು ಹೇಗೆಂದು ಚಿಂತಿಸುತ್ತಾ ನಡೆದ ದಾರಿಯಲ್ಲಿಯೇ ಹಿಂತಿರುಗುತ್ತಾಳೆ.

ಇದೇ ಸಮಯಕ್ಕಾಗಿ ಕಾಯುತ್ತಿದ್ದ ತಿಮಿರಾಸುರ ದ್ರೌಪದಿಯನ್ನು ಅಡ್ಡಗಟ್ಟಿ ಆಕೆಯನ್ನು ಉದ್ದೇಶಿಸಿ, `ಸುಂದರಿಯಾದ ನೀನು ಪಾಂಡವರೊಂದಿಗೆ ಇದ್ದಾಗ ಪಟ್ಟ ಸಂಕಷ್ಟಗಳನ್ನು ನೋಡಿದ್ದೇನೆ. ಈಗಲಾದರೂ ನನ್ನೊಡನೆ ಬಂದು ಇಹಲೋಕದ ಸಂತೋಷಗಳನ್ನು ಅನುಭವಿಸು. ನಂತರ ನೀನು ಇಷ್ಟಪಟ್ಟಲ್ಲಿ ನಾನೇ ನಿನ್ನನ್ನು ಪುಷ್ಪಕವಿಮಾನದಲ್ಲಿ ಸ್ವರ್ಗಕ್ಕೆ ಕರೆದೊಯ್ಯುತ್ತೇನೆ' ಎನ್ನುತ್ತಾನೆ. ಅವನಿಗೆ ಬುದ್ಧಿವಾದ ಹೇಳಿದರೂ ಫಲ ಸಿಗದಿದ್ದಾಗ ದ್ರೌಪದಿ ಶ್ರೀ ಕೃಷ್ಣನ ಸ್ಮರಣೆ ಮಾಡುತ್ತಾಳೆ: `ಶ್ರೀ ಕೃಷ್ಣ, ನಾನು ನಿನ್ನಿಂದ ದೂರದಲ್ಲಿದ್ದೇನೆ. ಪಾಂಡವರು ಹಿಂತಿರುಗಿ ಬರಲಾರರು.

ತಿಮಿರಾಸುರನ ಸಂಹಾರ ಮಾಡುವ ಶಕ್ತಿ ನಿನ್ನಲ್ಲಿಯೇ ಇದೆ. ನಿನ್ನ ಹಿಂದಿನ ಶಕ್ತಿ ಸಾಮರ್ಥ್ಯ ನೀನೇ ನೆನಪಿಸಿಕೋ' ಎನ್ನುತ್ತಾನೆ.

ಶ್ರೀ ಕೃಷ್ಣನ ಮಾತುಗಳನ್ನು ಕೇಳಿದ ದ್ರೌಪದಿ ವಿಶ್ವರೂಪ ತಳೆದು ತಲೆಯಿಂದ ಯಜಮಾನರನ್ನು, ಹಣೆಯಿಂದ ಗಣಾಚಾರಿಯನ್ನು, ಬಾಯಿಯಿಂದ ಗಂಟೆ ಪೂಜಾರಿಯನ್ನು, ಕಿವಿಯಿಂದ ಗೌಡರನ್ನು, ತೋಳುಗಳಿಂದ ವೀರಕುಮಾರರನ್ನು ಸೃಷ್ಟಿಸಿ, ವ್ಯೆಹ ರಚಿಸಿ ತಿಮಿರಾಸುರನ ಮೇಲೆ ಯುದ್ಧ ಹೂಡುತ್ತಾಳೆ.  ರಾಕ್ಷಸನ  ಬೆಂಬಲಕ್ಕೆ ಬಂದ ರಕ್ಕಸ ಪಡೆ ಹಾಗೂ ತಿಮಿರಾಸುರನನ್ನು ಸಂಹಾರ ಮಾಡಿ ಮತ್ತೆ ಸ್ವರ್ಗದ ಹಾದಿ ಹಿಡಿಯುತ್ತಾಳೆ.

`ದ್ರೌಪದಿ ದೇಹದಿಂದ ಸೃಷ್ಟಿಯಾಗಿ ಕಾರ್ಯ ನಿರ್ವಹಿಸಿದ್ದ ಗಣಾಚಾರಿ, ವೀರಕುಮಾರ ಮತ್ತಿತರರು ತಮ್ಮ ಮುಂದಿನ ನಡೆ ತಿಳಿಯದೆ ಶ್ರೀ ಕೃಷ್ಣನ ನಾಮಸ್ಮರಣೆ ಮಾಡುತ್ತಾರೆ. ಆಗ ಶ್ರೀ ಕೃಷ್ಣ ಕಾಣಿಸಿಕೊಂಡು, ನಿಮ್ಮನ್ನು ಸಷ್ಟಿಸಿದ. ನಿಮ್ಮ ತಾಯಿಯೇ ನಿಮಗೆ ದಾರಿ ತೋರಿಸಬೇಕು. ಆಕೆಯನ್ನೇ ಸ್ಮರಿಸಿ' ಎನ್ನುತ್ತಾನೆ.

ದಿಕ್ಕು ತೋಚದೆ ಗಂಟೆಪೂಜಾರಿ, ಗಣಾಚಾರಿ ದ್ರೌಪದಿಯನ್ನು ಧ್ಯಾನಿಸಿದರೆ, ವೀರಕುಮಾರರು ತಮ್ಮ ಅಲಗುಗಳನ್ನು ಎದೆಗೆ ಬಡಿದುಕೊಂಡು ಆತ್ಮಾಹುತಿಗೆ ಮುಂದಾಗುತ್ತಾರೆ. ಆಗ ಪ್ರತ್ಯಕ್ಷಳಾದ ದ್ರೌಪದಿ, `ನಾನು ಭೂಮಿಗೆ ಬಂದ ಕಾರ್ಯ ಮುಗಿದಿದೆ. ಇನ್ನು ಇಲ್ಲರಲು ಅಸಾಧ್ಯ. ಕ್ಷತ್ರಿಯರಾದ ನೀವು ಭೂಮಿಯಲ್ಲಿಯೇ ಇದ್ದು ಧರ್ಮ ಸಂರಕ್ಷಣೆ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸುತ್ತಾರೆ. ವರ್ಷಕ್ಕೊಮ್ಮೆ ಭೂಮಿಗೆ ಮೂರು ದಿನ ಬಂದು ನಿಮ್ಮಂದಿಗೆ ಇರುತ್ತೇನೆ' ಎಂಬ ಆಶ್ವಾಸನೆಯನ್ನೂ ಕೊಡುತ್ತಾಳೆ.

ಅದರಂತೆ ಭೂಮಿಗೆ ಬರುವ ದ್ರೌಪದಿದೇವಿಯ ಸೇವೆ ಮಾಡಲು ನಿಶ್ಚಯಿಸಿದ ದ್ರೌಪದಿಯ ಮಾನಸಪುತ್ರರಾದ ವಹ್ನಿ ಕುಲ ಕ್ಷತ್ರಿಯರು ಚೈತ್ರ ಮಾಸದಲ್ಲಿ ಕರಗ ಶಕ್ತಿಯಲ್ಲಿ ಆಕೆಯನ್ನು ಆರಾಧಿಸುತ್ತ ಶ್ರದ್ಧಾಭಕ್ತಿಯಿಂದ ಕರಗ ಶಕ್ತ್ಯೋತ್ಸವವನ್ನು ನಡೆಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT