ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬಗಳಿಗೂ ಹಬ್ಬಿದ ಬಿಜೆಪಿ- ಕೆಜೆಪಿ ಕಲಹ

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ಚುನಾವಣೆ ಘೋಷಣೆಯಾದ ನಂತರ ರಾಜ್ಯ ಮಟ್ಟದಲ್ಲಿ ಬಿಜೆಪಿ- ಕೆಜೆಪಿ ನಾಯಕರ ಕಿತ್ತಾಟ ಬೀದಿರಂಪವಾಗಿದ್ದರೆ, ಇತ್ತ ಜಿಲ್ಲೆಯಲ್ಲಿ ಎರಡೂ ಪಕ್ಷಗಳ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಕುಟುಂಬಗಳಲ್ಲೂ ಕಲಹ ಆರಂಭವಾಗಿದೆ.

ಇಂತಹ ಕಲಹ ಪ್ರಮುಖವಾಗಿ ಕಾಣಿಸಿಕೊಂಡಿರುವುದು ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮಹಿಳಾ ಜನಪ್ರತಿನಿಧಿಗಳ ಕುಟುಂಬಗಳಲ್ಲಿ.

ಕೆಜೆಪಿ ಸ್ಥಾಪನೆಯಾದ ನಂತರ ಜಿಲ್ಲೆಯ ಅನೇಕ ಮುಖಂಡರು ಬಿಜೆಪಿ ತೊರೆದು ಕೆಜೆಪಿಯತ್ತ ಹೆಜ್ಜೆ ಹಾಕಿದ್ದರು. ಆದರೆ, ಹರಿಹರ ಶಾಸಕರಾಗಿದ್ದ ಬಿ.ಪಿ. ಹರೀಶ್ ಹೊರತುಪಡಿಸಿ ಉಳಿದವರು ತಕ್ಷಣವೇ ಕೆಜೆಪಿ ಸೇರದ ಕಾರಣ ಬಹುಸಂಖ್ಯೆಯ ಮುಖಂಡರು, ಕಾರ್ಯಕರ್ತರು ಬಿಜೆಪಿಯಲ್ಲೇ ಉಳಿದಿದ್ದರು.

ಇದೀಗ ಚುನಾವಣೆ ಘೋಷಣೆಯಾದ ನಂತರ ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಬಿಜೆಪಿ ತೊರೆದು ಕೆಜೆಪಿ ಸೇರಿದ್ದಾರೆ. ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅವರೂ ಕೆಜೆಪಿ ಸೇರುವ ಸುಳಿವು ನೀಡಿದ್ದಾರೆ. ಹರಿಹರ, ಹೊನ್ನಾಳಿ, ಚನ್ನಗಿರಿ ಕ್ಷೇತ್ರಗಳಲ್ಲಿ ಹರೀಶ್, ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಅನುಸರಿಸಿ ಅವರ ಬೆಂಬಲಿಗರು ಕೆಜೆಪಿಯತ್ತ ಹೆಜ್ಜೆಹಾಕಿದ್ದಾರೆ.

ಆದರೆ, ಅವರ ಕಟ್ಟಾ ಬೆಂಬಲಿಗರಾದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಬಿಜೆಪಿ ಸದಸ್ಯರು ಪಕ್ಷಾಂತರ ಮಾಡಿ ಸ್ಥಾನ ಕಳೆದುಕೊಳ್ಳಲು ಇಚ್ಛಿಸದೇ ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲೇ ಉಳಿದಿದ್ದಾರೆ. ಅವರಲ್ಲಿ ಕೆಲವರು ಕದ್ದುಮುಚ್ಚಿ ಕೆಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ-ಕೆಜೆಪಿಯ ಒಡಕಿನಿಂದ ಪುರುಷ ಸದಸ್ಯರಿಗೆ ಅಂತಹ ಸಮಸ್ಯೆಯಾಗಿಲ್ಲ. ನಿಜವಾದ ಸಮಸ್ಯೆ ಮಹಿಳಾ ಸದಸ್ಯರದ್ದು.

ಮುಂದೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ, ಸೇರಿದಂತೆ ಅಧಿಕಾರದ ಆಮಿಷದಿಂದ ಮಹಿಳಾ ಸದಸ್ಯರು ಬಿಜೆಪಿ ತೊರೆಯಲು ಒಪ್ಪುತ್ತಿಲ್ಲ.  ಇವರೆಲ್ಲ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಸದಸ್ಯೆಯರ ಗಂಡಂದಿರು ಮಾತ್ರ ಕೆಜೆಪಿ ಪರ ಪ್ರಚಾರ ಆರಂಭಿಸಿದ್ದಾರೆ.  ಒಂದೇ ಕುಟುಂಬದ ಇಂತಹ ದ್ವಂದ್ವ ನಿಲುವಿನ ಬಗ್ಗೆ ಪ್ರಶ್ನಿಸಿದರೆ `ನಮ್ಮದು ಬಿಜೆಪಿ-ಕೆಜೆಪಿ ಕುಟುಂಬ. ಚುನಾವಣೆ ಮುಗಿಯುವವರೆಗೆ ಅಷ್ಟೆ ನಮ್ಮ ಕಲಹ' ಎಂದು ಯಾವುದೇ ಮುಜುಗರ ಇಲ್ಲದೇ ಹೇಳುತ್ತಾರೆ.

ಇಂತಹ ಕುಟುಂಬಗಳಲ್ಲಿನ ಕಲಹ ತಾತ್ಕಾಲಿಕ ಎಂದು ಪತಿ-ಪತ್ನಿಯರು ಹೇಳಿದರೂ, ಎರಡೂ ಪಕ್ಷಗಳ ಮುಖಂಡರು ನಿತ್ಯವೂ ಹೇರುವ ಜಗಳ, ಎಷ್ಟೇ ಪ್ರಮಾಣಿಕವಾಗಿ ಕೆಲಸ ಮಾಡಿದರೂ, ಪರಸ್ಪರ ಅನುಮಾನ ಬಹುತೇಕ ಕುಟುಂಬಗಳ ಸಾಮರಸ್ಯವನ್ನೇ ಹಾಳು ಮಾಡಿದೆ.

`ಮೊದಲೆಲ್ಲ ಅವರೇ (ಪತಿ) ಚುನಾವಣೆಯಲ್ಲಿ ಊರೂರು ಸುತ್ತುತ್ತಿದ್ದರು. ಅವರು ಇನ್ನೊಂದು ಪಕ್ಷದ ಪರ (ಕೆಜೆಪಿ) ಪ್ರಚಾರಕ್ಕೆ ಹೋಗುತ್ತಿರುವ ಕಾರಣ, ನಾನೂ ಅನಿವಾರ್ಯವಾಗಿ ನಮ್ಮ ಪಕ್ಷದ ಪರ ಪ್ರಚಾರಕ್ಕೆ ತೆರಳುತ್ತಿದ್ದೇನೆ. ಕುಟುಂಬದಲ್ಲಿ ನೆಮ್ಮದಿಯೇ ಇಲ್ಲವಾಗಿದೆ' ಎನ್ನುತ್ತಾರೆ ಹೆಸರು ಹೇಳಲು ಬಯಸದ ಜಿಲ್ಲಾ ಪಂಚಾಯ್ತಿಯ ಬಿಜೆಪಿ ಸದಸ್ಯೆ.

ದಾವಣಗೆರೆ ಜಿಲ್ಲಾ ಪಂಚಾಯ್ತಿಯ 34 ಸ್ಥಾನಗಳಲ್ಲಿ 18 ಬಿಜೆಪಿ ಸದಸ್ಯರು ಇದ್ದಾರೆ. ಅವರಲ್ಲಿ 11 ಮಹಿಳೆಯರು. ಚನ್ನಗಿರಿ ತಾಲ್ಲೂಕು ಪಂಚಾಯ್ತಿಯಲ್ಲಿ ಬಿಜೆಪಿಯ 9 ಮಹಿಳಾ ಸದಸ್ಯರು, ಹರಿಹರ, ಜಗಳೂರು ಹಾಗೂ ಹೊನ್ನಾಳಿಯಲ್ಲಿ ತಲಾ 5 ಸದಸ್ಯೆಯರು, ದಾವಣಗೆರೆ ತಾಲ್ಲೂಕು ಪಂಚಾಯ್ತಿಯಲ್ಲಿ 12 ಸದಸ್ಯೆಯರು ಇದ್ದಾರೆ. ಅವರಲ್ಲೂ ಬಹುತೇಕ ಸದಸ್ಯೆಯರು ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT