ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿತ: ಸರ್ಕಾರದ ದ್ವಿಪಾತ್ರ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯ ಮತ್ತು ಮಾದಕವಸ್ತುಗಳ ಸೇವನೆಯಂತಹ ಕೆಟ್ಟ ಚಟಗಳನ್ನು ತಡೆಗಟ್ಟಲು ಎರಡು ದಶಕಗಳಿಂದ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ವೇದಿಕೆಯ ಕಾರ್ಯವ್ಯಾಪ್ತಿಯನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಬಸವನಗುಡಿಯ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ~ಯನ್ನು ಉದ್ಘಾಟಿಸಲಾಯಿತು.

ಈವರೆಗೆ ವೇದಿಕೆಯು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾವೇರಿ, ಧಾರವಾಡ, ಗದಗ, ತುಮಕೂರು, ಬೆಳಗಾವಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ರಾಜ್ಯದ ಪ್ರತಿಯೊಂದು ಹಳ್ಳಿಗೂ ವ್ಯಸನಮುಕ್ತಿಯ ಸಂದೇಶವನ್ನು ತಲುಪಿಸುವ ಉದ್ದೇಶದಿಂದ ಇದೀಗ ವೇದಿಕೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. 

`ವೇದಿಕೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಮದ್ಯವರ್ಜನ ಶಿಬಿರ ಒಂದಾಗಿದ್ದು, ಈ ವರೆಗೆ 532 ಮದ್ಯವರ್ಜನ ಶಿಬಿರಗಳ ಮೂಲಕ 32,527 ಮಂದಿಯನ್ನು ಪಾನಮುಕ್ತರನ್ನಾಗಿ ಮಾಡಲಾಗಿದೆ~ ಎಂದು ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್ ಮಾಹಿತಿ ನೀಡಿದರು.

`ಸ್ಥಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ 1,147 ಶಾಲಾ ಕಾಲೇಜಿನ 1,58,999 ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ. 1,747 ನವಜೀವನ ಸಮಿತಿ (ಪಾನಮುಕ್ತರ ಸಂಘಟನೆ)ಗಳ ಮೂಲಕ ಪಾನಮುಕ್ತರು ವಾರಕ್ಕೊಮ್ಮೆ ಸಭೆ ಸೇರಿ ಯೋಗಕ್ಷೇಮ ಚಿಂತನೆ, ಉಳಿತಾಯ ಮಾಡುವಂತೆ ಪ್ರೇರಣೆ ನೀಡಲಾಗುತ್ತಿದೆ~ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಉಪಮುಖ್ಯಮಂತ್ರಿ ಆರ್. ಅಶೋಕ, `ಅಪರಾಧ ಚಟುವಟಿಕೆಗಳಿಗೆ ಮೂಲ ಕಾರಣ ಮದ್ಯಪಾನ. ಅಪರಾಧ ಚಟುವಟಿಕೆಗಳಿಗೆ ಮದ್ಯಪಾನ ಪ್ರೇರಣೆ ನೀಡುತ್ತದೆ~ ಎಂದರು.

ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷ ಕೆ.ದೇವದಾಸ ಹೆಬ್ಬಾರ್, `ರಾಜ್ಯದಲ್ಲಿ 1.75 ಕೋಟಿ ಮದ್ಯವ್ಯಸನಿಗಳು ಇದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 32 ಸಾವಿರ ಮಂದಿಯನ್ನು ಮದ್ಯಮುಕ್ತರನ್ನಾಗಿ ಮಾಡಲಾಗಿದೆ~ ಎಂದರು.

ದಕ್ಷಿಣ ಕನ್ನಡದ ಮಾಣಿಲದ  ಮೋಹನದಾಸ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಅಭಯಚಂದ್ರ ಜೈನ್, ಎಲ್.ಎ.ರವಿಸುಬ್ರಹ್ಮಣ್ಯ, ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಇದ್ದರು.

ಚುನಾವಣೆಯಲ್ಲಿ ಮದ್ಯ ಹಂಚಿಕೆ: ಬೇಸರ

`ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಮದ್ಯಪಾನಕ್ಕೆ ದೊಡ್ಡ ಪ್ರೋತ್ಸಾಹ ನೀಡುತ್ತಿವೆ. ಭವಿಷ್ಯದಲ್ಲಿ ಚುನಾವಣೆ ಕಾಲದಲ್ಲಿ ಪಕ್ಷಗಳು ಮತಕ್ಕಾಗಿ ಮದ್ಯ ಹಂಚುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರೆ ಸಮಾಜದಲ್ಲಿ ಪರಿವರ್ತನೆ ಉಂಟಾಗಲಿದೆ~ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶಯ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, `ಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ರಾತ್ರಿ ಹೊತ್ತಿನಲ್ಲಿ ಮನೆ ಮುಂದೆ ಮದ್ಯದ ಬಾಟಲಿ ಇಟ್ಟು ಹೋಗುವ ಉದಾಹರಣೆಗಳು ಇವೆ~ ಎಂದು ಬೇಸರ ವ್ಯಕ್ತಪಡಿಸಿದರು.

`ಮಹಾನಗರದಲ್ಲಿ ನಡೆಯುವ ಶಿಬಿರದಲ್ಲಿ 50 ಮಂದಿ ಪಾಲ್ಗೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಶಿಬಿರದಲ್ಲಿ 114 ಮಂದಿ ಪಾಲ್ಗೊಂಡಿದ್ದಾರೆ. ವಿಶೇಷವೆಂದರೆ ದಕ್ಷಿಣ ಕನ್ನಡದ ಶಿರ್ತಾಡಿಯ ಶಿಬಿರದಲ್ಲಿ ಮದ್ಯಮುಕ್ತರಾದ ತುಮಕೂರಿನ ವ್ಯಕ್ತಿಯೊಬ್ಬರು ಶಿಬಿರಕ್ಕೆ ತಮ್ಮೂರಿನ ಮೂರು ಮಂದಿಯನ್ನು ಸೇರಿಸಿದ್ದಾರೆ. ಇದು ಶುಭೋದಯ~ ಎಂದರು.

ಹೊಸ ಬಾಳಿನ ಹಾದಿಯಲ್ಲಿ...
`ಕ್ಷಣಿಕ ಸುಖದ ಆಸೆಗಾಗಿ ಹಾಗೂ ನೋವನ್ನು ಮರೆಯಲು ಮದ್ಯಪಾನ ಮಾಡಲಾರಂಭಿಸಿದೆ. ಒಂದು ಬಾರಿಯಂತೂ ಅಮ್ಮನ ಓಲೆಯನ್ನೇ ಅಡವಿಟ್ಟು ಮದ್ಯಪಾನ ಮಾಡಿದ್ದೆ. ಆಗ ಅಮ್ಮ ಬೇಡಿಕೊಂಡರೂ ಮನಸ್ಸು ಕರಗಿರಲಿಲ್ಲ. ಈಗ ತಪ್ಪಿನ ಅರಿವಾಗಿದೆ. ಮದ್ಯವರ್ಜನ ಶಿಬಿರದ ಮೂಲಕ ಹೊಸ ಬಾಳು ದೊರಕಿದೆ~.

-ಹೀಗೆಂದು ನುಡಿದ ಮೈಸೂರು ಕೆ.ಆರ್.ನಗರದ ಯುವಕ ಗಿರೀಶ್ ಒಂದು ಕ್ಷಣ ಮೌನವಾದರು. ಒಂದು ಕಡೆ ಮದ್ಯಪಾನ ಚಟದಿಂದ ಹೊರ ಬಂದ ಸಂತಸ ಕಾಣುತ್ತಿದ್ದರೆ, ಇನ್ನೊಂದೆಡೆ ಮದ್ಯಪಾನ ಚಟದಿಂದ ಏಳು ವರ್ಷಗಳ ಕಾಲ ಕುಟುಂಬ ಸದಸ್ಯರು ಕಣ್ಣೀರು ಹಾಕುವಂತೆ ಮಾಡಿದ ಬಗ್ಗೆ ಪಶ್ಚಾತ್ತಾಪ ಭಾವವಿತ್ತು.

ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದಲ್ಲಿ ಐದು ದಿನಗಳಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಪಾಲ್ಗೊಂಡ ಅವರು ಅನಿಸಿಕೆ ಹಂಚಿಕೊಂಡರು. ರಾಜಧಾನಿಯಲ್ಲಿ ಮೊದಲ ಬಾರಿ ನಡೆಯುತ್ತಿರುವ ಶಿಬಿರದಲ್ಲಿ ಬೆಂಗಳೂರು, ತುಮಕೂರು ಹಾಗೂ ಮೈಸೂರು ಜಿಲ್ಲೆಗಳ ಒಟ್ಟು 114 ಮಂದಿ ಪಾಲ್ಗೊಂಡಿದ್ದಾರೆ.

ಯಲಹಂಕದ ಸುಕೇಶ್ ಅನಿಸಿಕೆ ಹಂಚಿಕೊಂಡು, `ಗೆಳೆಯರ ಒತ್ತಾಯದಿಂದ ತಮಾಷೆಗಾಗಿ ಈ ಚಟ ಶುರುವಾಯಿತು. ಏಳು ವರ್ಷಗಳಿಂದ ಈ ಚಟ ಅಂಟಿಕೊಂಡು ಬಿಟ್ಟಿತ್ತು. 10 ದಿನಗಳ ಕಾಲ ಉದ್ಯೋಗ ಮಾಡಿ ಮತ್ತೆ ವಾರಗಟ್ಟಲೆ ರಜೆ ಹಾಕಿ ಗೆಳೆಯರೊಂದಿಗೆ ಸೇರಿ ಪಾರ್ಟಿ ಮಾಡುತ್ತಿದ್ದೆ. ಮನೆಯವರು ಬುದ್ಧಿ ಹೇಳಿದರೂ ಕೇಳುವ ಸ್ಥಿತಿ ಇರಲಿಲ್ಲ~ ಎಂದರು.

`ಶಿಬಿರದಲ್ಲಿ ಮೊದಲ ಎರಡು ದಿನ ತುಂಬಾ ಹಿಂಸೆಯಾಯಿತು. ಮದ್ಯಪಾನದಿಂದ ಆಗುವ ದುಷ್ಟರಿಣಾಮಗಳ ಬಗ್ಗೆ ಅರಿವಾಗಿದೆ. ಮದ್ಯಪಾನ ತ್ಯಜಿಸುವ ಸಂಕಲ್ಪ ಮಾಡಿದ್ದೇನೆ. ಗೆಳೆಯರನ್ನೂ ಶಿಬಿರಕ್ಕೆ ಸೇರಿಸಿ ಮದ್ಯಮುಕ್ತರನ್ನಾಗಿ ಮಾಡುತ್ತೇನೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT