ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿತದತ್ತ ಹೆಚ್ಚು ವಾಲುತ್ತಿರುವ ವಿದ್ಯಾರ್ಥಿ ಸಮೂಹ: ಆತಂಕ

Last Updated 2 ಜನವರಿ 2012, 9:35 IST
ಅಕ್ಷರ ಗಾತ್ರ

ಉಡುಪಿ: `ರಾಜ್ಯದ 6 ಕೋಟಿ ಜನರಲ್ಲಿ 1 ಕೋಟಿ 20 ಲಕ್ಷ ಜನ ಕುಡಿತಕ್ಕೆ ಒಳಗಾಗಿದ್ದು, ಪ್ರತಿ ವರ್ಷ ಶೇ.20 ರಷ್ಟು ಜನ ಕುಡಿತಕ್ಕೆ ಹೊಸ ಸೇರ್ಪಡೆಯಾಗುತ್ತಿದ್ದಾರೆ~ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಇಲ್ಲಿ ಆತಂಕ ವ್ಯಕ್ತಪಡಿಸಿದರು. 

 ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ನವಜೀವನ ಆಪ್ತಸಲಹಾ ಕೇಂದ್ರ, ದೊಡ್ಡನಗುಡ್ಡೆಯ ಮದ್ಯ ಮತ್ತು ಮಾದಕ ದ್ರವ್ಯ ವ್ಯಸನ ಚಿಕಿತ್ಸಾ ಕೇಂದ್ರ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಶ್ರಯದಲ್ಲಿ ಬಾಳಿಗ ಸ್ಮಾರಕ ಆಸ್ಪತ್ರೆ ಸಭಾಭವನದಲ್ಲಿ ಭಾನುವಾರ ನಡೆದ 15ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಮದ್ಯಪಾನ ಎಂದರೆ ಕೆಟ್ಟ ಕತ್ತಲೆಯಲ್ಲಿ ಮನುಷ್ಯನನ್ನು ಒಳಗೆ ತುಂಬಿಸಿಕೊಳ್ಳುವುದು. ಅಲ್ಲಿ ಅಜ್ಞಾನವೇ ತುಂಬಿದೆ. ಆ ಕತ್ತಲ ಜಗತ್ತಿಗೆ ಬೆಳಕು ತುಂಬಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕಾಗಿದೆ.  ಪ್ರತೀ ವರ್ಷ 24-25 ಲಕ್ಷ ಜನ ಕುಡಿತಕ್ಕೆ ಹೊಸ ಸೇರ್ಪಡೆಯಾಗುವವರು ಯಾರು ಎನ್ನುವುದನ್ನು ಪತ್ತೆ ಹಚ್ಚಿದಾಗ ಮುಖ್ಯವಾಗಿ ವಿದ್ಯಾರ್ಥಿ ಯುವ ಸಮೂಹವೇ ಜಾಸ್ತಿ ಎಂಬ ಆಘಾತಕಾರಿ ಅಂಶ ಬಹಿರಂಗೊಂಡಿದೆ. ಇದರಿಂದ ಇಡೀ ಸಮಾಜವೇ ನೈತಿಕ ಅಧಿಪತನಕ್ಕೆ ಹೋಗುತ್ತಿದೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕುಡಿತಕ್ಕೆ ಎರಡು ಮುಹೂರ್ತ: ವಿದ್ಯಾಭ್ಯಾಸಕ್ಕೆ ವಿಜಯ ದಶಮಿ ಉತ್ತಮ ಮುಹೂರ್ತವಾಗಿದ್ದರೆ ಕುಡಿತದ ಅಭಾಸಕ್ಕೂ ಎರಡು ಮುಹೂರ್ತವಿದೆ. ಡಿ.31ರ ಮಧ್ಯರಾತ್ರಿ ಮೊದಲ ಮುಹೂರ್ತವಾದರೆ ಕಾಲೇಜು ದಿನ ಸಮಾರಂಭ ಎರಡನೇ ಮುಹೂರ್ತವಾಗಿದೆ. ಇದರಲ್ಲಿ ಶೇ.60ರಷ್ಟು ಪುರುಷರು ಕುಡಿತಕ್ಕೆ ಒಳಗಾಗಿದ್ದಾರೆ ಎಂಬ ಅಂಶವನ್ನು ಅಬಕಾರಿ ಇಲಾಖೆ ಪತ್ತೆ ಹಚ್ಚಿದೆ~ ಎಂದರು.

11ವರ್ಷಕ್ಕೆ ಕುಡಿತದ ಮೊದಲ ರುಚಿ: ಕುಡಿತದ ಮೊದಲ ರುಚಿ ನೋಡುವವರ ಸಂಖ್ಯೆ ಹೆಚ್ಚಾಗಿ ವರ್ಷದ ಅಂತ್ಯಕ್ಕೆ ಇರುತ್ತದೆ. ಹಿಂದೆ ಟೇಸ್ಟ್ ನೋಡುವವರ ವಯಸ್ಸು 19ಕ್ಕೆ ಇತ್ತು. ಆದರೆ ಸಮಾಜ ಬದಲಾಗಿದ್ದು,  11ರ ವಯೋಮಿತಿಯಲ್ಲಿಯೇ ಕುಡಿತ ಪ್ರಾರಂಭಿಸುತ್ತಿದ್ದಾರೆ. ಇದು ಸಮಾಜ ತೀರ ಅಧಃಪತನಕ್ಕೆ ತೆರಳುತ್ತಿರುವುದರ ಸಂಕೇತ~ ಎಂದು ಅವರು ಬೇಸರ ವ್ಯಕ್ತ ಪಡಿಸಿದರು.

`ಕುಡಿತವನ್ನು ನಿವಾರಿಸಲು ಸಾರಾಯಿಯನ್ನು ನಿಷೇಧ ಮಾಡಿದ್ದರು. ಆ ಸಂದರ್ಭದಲ್ಲಿ ತಿಂಗಳಿಗೆ ಕೇವಲ 12 ಲಕ್ಷ ಮದ್ಯದ ಪೆಟ್ಟಿಗೆ (ಕೇಸ್) ಖರ್ಚಾಗುತ್ತಿತ್ತು. ಆದರೆ ಅದರ ನಿಷೇಧದ ನಂತರ ಎಲ್ಲರೂ ದೇಶಿ ನಿರ್ಮಾಣದ ವಿದೇಶಿ ಮದ್ಯಕ್ಕೆ ಒಗ್ಗಿ ಹೋಗಿದ್ದು, ತಿಂಗಳಿಗೆ 36 ಲಕ್ಷ ಪೆಟ್ಟಿಗೆ ಖರ್ಚಾಗುತ್ತಿದೆ. ಬೆಂಗಳೂರು ಮಹಾನಗರದಲ್ಲಿ ಕುಡಿತದಿಂದ ದಿನಕ್ಕೆ 24 ಕೋಟಿ ಆದಾಯ ಸೃಷ್ಟಿಯಾಗುತ್ತಿದೆ. ಆದರೆ ಡಿ.31ರಂದು ಒಂದೇ ದಿನ ರೂ.40ಕೋಟಿ ಆದಾಯ ಬರುತ್ತಿದೆ. ದೇಶದಲ್ಲಿ ಮದ್ಯಪಾನದಿಂದ ಶೇ.50ರಷ್ಟು ಕೊಲೆಯಾದರೆ ಶೇ.70ರಷ್ಟು ಮಹಿಳೆಯರ ದೌರ್ಜನ್ಯ ನಡೆಯುತ್ತಿದೆ~ ಎಂದರು.

ಶಿಬಿರದಲ್ಲಿ ಚಿಕಿತ್ಸೆ ಪಡೆದು 3 ವರ್ಷಕ್ಕೂ ಹೆಚ್ಚು ಕಾಲ ಮದ್ಯದಿಂದ ವಿಮುಕ್ತರಾದ 5 ಶಿಬಿರಾರ್ಥಿಗಳನ್ನು  ಸನ್ಮಾನಿಸಲಾಯಿತು.

ಡಾ.ಕೆ.ಎಸ್.ಲತಾ ಅಧ್ಯಕ್ಷತೆ ವಹಿಸ್ದ್ದಿದರು. ಬಾಳಿಗ ಸಮೂಹ ಸಂಸ್ಥೆ ನಿರ್ದೇಶಕ ಡಾ.ಪಿ.ವಿ.ಭಂಡಾರಿ,  ಪ್ರೊ.ಕೆ.ಶಂಕರ್,  ಡಾ.ಪುರಂದರ ಮಲ್ಯ,   ಡಾ.ನಾಗರಾಜ್ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT