ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗಿಲ್ಲಿ ಒಂದೇ ಬೋರ್‌ವೆಲ್!

Last Updated 24 ಅಕ್ಟೋಬರ್ 2011, 10:25 IST
ಅಕ್ಷರ ಗಾತ್ರ

ಹರಪನಹಳ್ಳಿ: ಮೂಡಣದಲ್ಲಿ ಸೂರ್ಯೋದಯವಾಗುತ್ತಿದ್ದಂತಿಯೇ ಬೈಸಿಕಲ್‌ಗೆ ಕೊಡಪಾನ ತೂಗು ಹಾಕಿಕೊಂಡು, ಕುಡಿಯುವ ನೀರು ಸಂಗ್ರಹಕ್ಕಾಗಿ ಊರ ಅಕ್ಕಪಕ್ಕದ ತೋಟದ ಹಾದಿ ತುಳಿಯಬೇಕು. ಸ್ವಲ್ಪ ತಡವಾದರೆ, ವಿದ್ಯುತ್ ಕೈಕೊಡುವ ಆತಂಕ.
 
ಇಲ್ಲವೇ; ಇಡೀ ಊರಿನ ಜನ ಸಾಲುಗಟ್ಟಿ ನಿಂತರೇ ಸರದಿ ಸಿಗುವುದು ಅದೆಷ್ಟೊತ್ತಿಗೊ ಎಂಬ ಚಿಂತೆ!. ಕೆಲಸ ಬಿಟ್ಟು ನೀರು ಸಂಗ್ರಹಕ್ಕಾಗಿ ಮನೆಗೊಬ್ಬರಂತೆ ಮನೆಯಲ್ಲಿರಬೇಕಾದ ಪರಿಸ್ಥಿತಿ ಈ ಗ್ರಾಮಸ್ಥರಿಗೆ ಬಂದೊದಗಿದೆ.

ಅಂದಹಾಗೆ, ಈ ಗ್ರಾಮದ ಹೆಸರು ಉದ್ದಗಟ್ಟಿ. ಸುಮಾರು 100 ಮನೆಗಳಿರುವ, 500ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಉದ್ದಗಟ್ಟಿ ಎಂಬ ಪುಟ್ಟಗ್ರಾಮ ತೊಗರಿಕಟ್ಟೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುತ್ತದೆ. ವಿಚಿತ್ರವೆಂದರೆ ಉ್ದ್ದದಗಟ್ಟಿ ಹಾಗೂ ಉದ್ದಗಟ್ಟಿ ಸಣ್ಣತಾಂಡಾ ಎಂಬ ಎರಡು ಗ್ರಾಮಗಳ ಗ್ರಾಮಸ್ಥರ ಬಾಯಾರಿಕೆ ತಣಿಸಲು ಇರುವುದು ಏಕೈಕ ಬೋರ್‌ವೆಲ್ ಮಾತ್ರ!.

ಇದೇ ಬೋರ್‌ವೆಲ್ ಈ ಮೊದಲು ಮೂರು ಗ್ರಾಮಗಳಿಗೆ ಅಂದರೆ, ಉದ್ದಗಟ್ಟಿ, ಉದ್ದಗಟ್ಟಿ ಸಣ್ಣತಾಂಡಾ ಹಾಗೂ ದೊಡ್ಡತಾಂಡಾ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಜೀವಜಲವಾಗಿತ್ತು. ಆದರೆ, ಇತ್ತೀಚೆಗೆ ದೊಡ್ಡತಾಂಡಾ ಗ್ರಾಮದ ಸಂಪರ್ಕವನ್ನು ಕಡಿತಗೊಳಿಸಿ, ಸದ್ಯಕ್ಕೆ ಎರಡು ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಒಂದೇ ಬೋರ್‌ವೆಲ್ ಸಾವಿರಾರು ಜನಸಂಖ್ಯೆಗೆ ನೀರು ಪೂರೈಸಬೇಕಾಗಿದೆ.

24x7ರಂತೆ ಪುರುಸೊತ್ತಿಲ್ಲದೇ ಕಾರ್ಯಭಾರ ಮಾಡುತ್ತಿರುವುದರಿಂದ ಈ ಕೊಳವೆಬಾವಿಯಲ್ಲಿನ ಮೋಟಾರ್ ಆಗಾಗ್ಗೆ ಕೈಕೊಡುವ ಮೂಲಕ `ಅಸಹಕಾರ ಚಳವಳಿ~ಗೆ ಇಳಿಯುತ್ತದೆ. ಅದರ ರಿಪೇರಿ ಆಗುವ ವೇಳೆಗೆ ಗ್ರಾಮಸ್ಥರ ಗೋಳು ಮುಗಿಲು ಮುಟ್ಟಿರುತ್ತದೆ.

ಎರಡು ಗ್ರಾಮಗಳಿಗೆ ಇದೊಂದೆ ಸಿಹಿ ನೀರಿನ ಜಲಮೂಲವಾಗಿರುವುದರಿಂದ ಈ ಕೊಳವೆಬಾವಿಯ ನೀರನ್ನು ಊರೊಳಗಿರುವ ಹಳೆಯ ಬಾವಿಯಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಕಳೆದ ಆರೆಂಟು ತಿಂಗಳಿನಿಂದಲೂ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಕಾರಣದಿಂದ ಬಾವಿಗೆ ನಾಲ್ಕಾರು ಕೊಡದಷ್ಟು ಮಾತ್ರ ನೀರು ಸಂಗ್ರಹವಾಗುತ್ತದೆ. ಇಡೀ ಗ್ರಾಮಕ್ಕೆ ಇದು ಸಾಲುತ್ತಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡ ಧನಂಜಯಪ್ಪ.

ಇತ್ತೀಚೆಗೆ ಕಿರು ನೀರು ಸರಬರಾಜು ಯೋಜನೆ ಅಡಿಯಲ್ಲಿ ಉದ್ದಗಟ್ಟಿ ಗ್ರಾಮಕ್ಕೆ ಪ್ರತ್ಯೇಕವಾಗಿ ಕೊಳವೆಬಾವಿ ಕೊರೆಸಿ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ, ಅದರ ನೀರು ಕುಡಿಯಲು ಬಾರದಷ್ಟು ವಿಷಕಾರಿಯಾಗಿದೆ.
 
ನೀರು ಸಂಗ್ರಹಿಸುವ ಹಂಡೆ, ಕೊಡಪಾನ, ಕೊಳಗ ಸೇರಿದಂತೆ ವಿವಿಧ ಪಾತ್ರೆ ಪಗಡಗಳಲ್ಲಿ ಬಿಳಿಬಣ್ಣದ ಪುಡಿ ಮೆತ್ತಿಕೊಂಡಿರುತ್ತದೆ. ಆರಂಭದಲ್ಲಿ ಈ ನೀರು ಕುಡಿದ ಗ್ರಾಮಸ್ಥರು ಮೂಳೆ ಸಂಬಂಧಿತ ಅನೇಕ ಕಾಯಿಲೆಗಳಿಗೆ ತುತ್ತಾದರು. ಫ್ಲೋರೈಡ್ ಅಂಶಗಳು ಗಣನೀಯ ಪ್ರಮಾಣದಲ್ಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಕೊಳವೆಬಾವಿ ನೀರು ಕುಡಿಯುವುದನ್ನು ನಿಲ್ಲಿಸಿದ್ದಾರೆ.

ಅತ್ತ ಸಿಹಿ ನೀರಿನ ಕೊಳವೆಬಾವಿಯಿಂದ ಪೂರೈಕೆಯಾಗುವ ನೀರು ಊರಿನ ಬಾವಿಗೂ ತುಂಬಿಕೊಳ್ಳದೆ; ಇತ್ತ ಹೊಸ ಕೊಳವೆಬಾವಿ ನೀರು ವಿಷಕಾರಿ ಆಗಿರುವುದು ಗ್ರಾಮಸ್ಥರನ್ನು ನೀರಿಗೆ ಪರದಾಟ ನಡೆಸಬೇಕಾದಸ್ಥಿತಿಗೆ ತಂದು ನಿಲ್ಲಿಸಿದೆ. ನಿತ್ಯವೂ ಅಕ್ಕಪಕ್ಕದ ತೋಟಗಳಿಂದ ನೀರು ಸಂಗ್ರಹಿಸಲು ಅಲೆದಾಡಬೇಕಾಗಿದೆ.

ಉಲ್ಬಣಿಸಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ಗ್ರಾ.ಪಂ. ಆಡಳಿತ ದಿವ್ಯ ನಿರ್ಲಕ್ಷ್ಯದಲ್ಲಿ ಮುಳುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT