ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ತತ್ವಾರ: ಬಿಸಿಯೂಟಕ್ಕೂ ಪರದಾಟ

ಮೂಲ ಸಮಸ್ಯೆಗಳಿಂದ ಬಳಲುತ್ತಿರುವ ಕೃಷ್ಣಪ್ಪ ಬಡಾವಣೆ ಸರ್ಕಾರಿ ಶಾಲೆ
Last Updated 2 ಡಿಸೆಂಬರ್ 2013, 8:12 IST
ಅಕ್ಷರ ಗಾತ್ರ

ಮೂಡಿಗೆರೆ: ಬಾಯಾರಿದರೆ ಕುಡಿಯಲು ನೀರಿಲ್ಲ! ಬಿಸಿಯೂಟಕ್ಕೆ ಎರಡು ಕಿ.ಮೀ ದೂರ­ದಿಂದ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ, ಶೌಚಾಲಯವಿದ್ದರೂ ನೀರಿಲ್ಲದೇ ಬಯಲು ವಿಸರ್ಜನೆ ಇಲ್ಲಿ ಮಾಮೂಲು, ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಳೆನೀರು ಕೊಯ್ಲು ದುಷ್ಕರ್ಮಿಗಳ ಪಾಲು ಇದು ಕೆಳಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಂದಿ ಗ್ರಾಮದ ಕೃಷ್ಣಪ್ಪ­ಬಡಾವಣೆ­ಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ದೈನ್ಯ ಪರಿಸ್ಥಿತಿ.

ಮೂಡಿಗೆರೆಯ ಗಡಿಗ್ರಾಮವಾಗಿ ಚಿಕ್ಕಮಗ­ಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಗೆ ಸೇರಿ­ರುವ ಹಾಂದಿ ಗ್ರಾಮದ ಕೃಷ್ಣಪ್ಪ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 73 ವಿದ್ಯಾರ್ಥಿಗಳಿದ್ದು, ಐದು ಜನ ಶಿಕ್ಷಕರಿದ್ದು, ಅವರೆಲ್ಲರೂ ಮಹಿಳಾ ಶಿಕ್ಷಕರೇ ಆಗಿದ್ದಾರೆ.

ಶಾಲೆಗೆ ಗ್ರಾಮ ಪಂಚಾಯಿತಿ ವತಿಯಿಂದ ಕುಡಿ­ಯುವ ನೀರಿನ ಸಂಪರ್ಕ ಕಲ್ಪಿಸಿದೆಯಾದರೂ, ಸಮರ್ಪಕವಾಗಿ ನೀರು ಪೂರೈಕೆಯಾಗದ ಕಾರಣ, ಶಾಲೆಯಲ್ಲಿ ಕುಡಿಯುವ ನೀರಿಗೂ ಪರೆದಾಡ­ಬೇಕಾದಂತಹ ಪರಿಸ್ಥಿತಿ ನಿರ್ಮಾಣ­ವಾಗಿದೆ. ಇನ್ನು ಶಾಲೆಯಲ್ಲಿ ತಯಾರಿಸುವ ಬಿಸಿಯೂಟಕ್ಕೆ ಎರಡು ಕಿ.ಮೀ. ದೂರದ ಗದ್ದೆ ಬಯಲಿನಿಂದ ನೀರನ್ನು ಹೊತ್ತು ತರಬೇಕಾಗಿದ್ದು, ಮಕ್ಕಳು ಮತ್ತು ಶಿಕ್ಷಕರೇ ನೀರನ್ನು ಹೊತ್ತು ತರುತ್ತಿದ್ದು, ಮಕ್ಕಳ ವಯಸ್ಸಿಗೆ ಅನುಗುಣವಾದ ಕೊಡಗಳನ್ನು ಮಕ್ಕಳೇ ಮನೆಯಿಂದ ತರಬೇಕಾದಂತಹ ಪರಿಸ್ಥಿತಿ ಇದೆ.

ಶಾಲೆಯಲ್ಲಿ ವ್ಯವಸ್ಥಿತ ಶೌಚಾಲಯವನ್ನು ನಿರ್ಮಿಸಲಾಗಿದ್ದರೂ, ನೀರಿನ ಕೊರತೆಯಿಂದಾಗಿ ಹೆಣ್ಣುಮಕ್ಕಳು ಸೇರಿದಂತೆ ಎಲ್ಲ ಮಕ್ಕಳೂ ಬಯಲು ಮೂತ್ರ ವಿಸರ್ಜನೆ ಇಲ್ಲಿ ಮಾಮೂ­ಲಾ­ಗಿದೆ. ಶಾಲೆಗೆ ನೀರಿನ ಸಮಸ್ಯೆಯನ್ನು ನೀಗಿಸಲು ಸುಮಾರು ಲಕ್ಷ ರೂಪಾಯಿ ವೆಚ್ಚದಲ್ಲಿ ಮಳೆನೀರು ಕೊಯ್ಲ ಘಟಕವನ್ನು ನಿರ್ಮಿಸಿ­ದ್ದರೂ, ಘಟಕದ ಮೇಲ್ಭಾಗವನ್ನು ಸೂಕ್ತ ರೀತಿಯಾಗಿ ನಿರ್ವಹಿಸದ ಕಾರಣ ದುಷ್ಕರ್ಮಿಗಳ ಹೀನಾ ಕೃತ್ಯಕ್ಕೆ ಒಳಗಾಗಿ ತ್ಯಾಜ್ಯವಸ್ತುಗಳಿಂದ ತುಂಬಿ ತುಳುಕುತ್ತಿದೆ. ಶಾಲೆ ಊರಿನಿಂದ ಹೊರ ಪ್ರದೇಶದಲ್ಲಿದ್ದು, ಶಾಲೆಯ ಸುತ್ತಲೂ ಕಾಂಪೌಂಡಿನ ಸೂಕ್ತ ಭದ್ರತೆಯಿಲ್ಲದ ಕಾರಣ ಶಾಲಾ ಆವರಣ ರಾತ್ರಿ ದುಷ್ಕರ್ಮಿಗಳ ತಾಣವಾ­ಗಿದ್ದು, ಮದ್ಯ, ಧೂಮಪಾನದ ತ್ಯಾಜ್ಯಗಳನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸ­ಬೇಕಾಗಿದೆ.

‘ಮೊದಲು ಹಾಂದಿ ಶಾಲೆಗೆ ನಡೆದು ಸಾಗಬೆಕಾಗುತ್ತಿತ್ತು ಎಂಬ ಕಾರಣದಿಂದ ಬಹುತೇಕ ಪರಿಶಿಷ್ಟ ಜನಾಂಗದವರೇ ಹೆಚ್ಚಾಗಿ­ರುವ ಕೃಷ್ಣಪ್ಪ ಬಡಾವಣೆಯ ನಾಗರಿಕರು ಹೋರಾಟ ನಡೆಸಿದರ ಫಲವಾಗಿ ಗ್ರಾಮಕ್ಕೆ ಶಾಲೆ ಮಂಜೂರಾಗಿದ್ದು, ಗ್ರಾಮದ 73 ವಿದ್ಯಾರ್ಥಿ­ಗಳು ನಾನಾ ತರಗತಿಗಳಲ್ಲಿ ಕಲಿಯುತ್ತಿ­ದ್ದಾರೆ. ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ಮಾಣವಾಗಿದ್ದು, ಬೆಳಗಿನಿಂದ ಮಧ್ಯಾಹ್ನದ ವರೆಗೂ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಬಿಸಿಯೂಟಕ್ಕೆ ನೀರು ಪೂರೈಕೆ ಮಾಡುವುದೇ  ಕೆಲಸವಾಗುತ್ತದೆ, ಇದರಿಂದ ಮಕ್ಕಳ ಪಾಠದ ಮೇಲೆ ಪರಿಣಾಮ ಬೀರುತ್ತಿದ್ದು, ಅನೇಕ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವ ಚಿಂತನೆಯಲ್ಲಿದ್ದಾರೆ. ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುತ್ತಾರೆ ಗ್ರಾಮದ ಲಕ್ಷ್ಮಣ್‌.
ನೀರಿನ ಸಮಸ್ಯೆಯಿಂದಾಗಿ ಶಾಲೆಗೆ ಬಿಸಿಯೂಟ ತಯಾರಿಗೆ ಕಾರ್ಯಕರ್ತರು ಸಿಗದಂತಹ ಸಂದರ್ಭ ಒದಗಿಬಂದಿದ್ದು, ಪಾಠಪ್ರವಚನಗಳಲ್ಲಿ ಬಾಲ್ಯ ಕಳೆಯ ಬೇಕಿದ್ದ ಮಕ್ಕಳು, ಇಲ್ಲಿ ನೀರು ತುಂಬುವುದರಲ್ಲಿ ತೊಡಗಬೇಕಿರುವುದು ಆಡಳಿತ ವ್ಯವಸ್ಥೆಯ ದೌರ್ಬಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT