ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ನಿತ್ಯವೂ ತತ್ವಾರ...

Last Updated 17 ಸೆಪ್ಟೆಂಬರ್ 2013, 7:54 IST
ಅಕ್ಷರ ಗಾತ್ರ

ಹನುಮಸಾಗರ: ಇಲ್ಲಿಗೆ ಸಮೀಪದ ಹನುಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳೇಕಲ್ ಗ್ರಾಮ ಹಲವು ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

‘ತಾಲ್ಲೂಕು ಕೇಂದ್ರದಿಂದ ಸುಮಾರು 50 ಕಿ.ಮೀ. ದೂರದಲ್ಲಿದ್ದು ಕುಡಿಯುವ ನೀರಿನ ತೀವ್ರ ತೊಂದರೆ, ಮಹಿಳಾ ಶೌಚಾಲಯ, ಸುಸಜ್ಜಿತವಾದ ರಸ್ತೆ ಇಲ್ಲದಿರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ನಮ್ಮೂರು ಐವರು ಗ್ರಾಮ ಪಂಚಾಯತಿ ಸದಸ್ಯರನ್ನು ಒಳಗೊಂಡಿದ್ದರೂ ಅಭಿವೃದ್ದಿ ಕಾರ್ಯ ಮಾತ್ರ ಶೂನ್ಯ’ ಎಂದು ಗ್ರಾಮಸ್ಥರಾದ ರಮೇಶ, ಮಾರುತಿ, ಚಂದಾಲಿಂಪ್ಪ, ಶಿವಪ್ಪ, ಮಲ್ಲು, ಕಾಳಿಂಗಪ್ಪ ದೂರುತ್ತಾರೆ.

‘ಗ್ರಾಮದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಹನುಮನಾಳ ಗ್ರಾಮದಿಂದ ಈ ಗ್ರಾಮದವರೆಗೆ ನೀರಿನ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ. ಆದರೆ, ನೀರು ಸಣ್ಣದಾಗಿ ಬರುತ್ತದೆ. ವಿದ್ಯುತ್‌ ಸರಬರಾಜು ಇದ್ದಾಗ ಮಾತ್ರ ಅಲ್ಪ ಪ್ರಮಾಣದಲ್ಲಿ ನೀರು ಸಿಗುತ್ತದೆ, ಇಲ್ಲದಿದ್ದರೆ ದೂರದ ಪ್ರದೇಶಗಳಿಗೆ ಮಹಿಳೆಯರು, ಮಕ್ಕಳು ವೃದ್ಧರೆನ್ನದೇ ನೀರಿಗಾಗಿ ಕೊಡಗಳನ್ನು ಹಿಡಿದು ಅಲೆದಾಡಬೇಕಾಗುತ್ತದೆ’ ಎಂದು ಕಲ್ಲಪ್ಪ, ಪರಸಪ್ಪ ನೋವು ತೋಡಿಕೊಳ್ಳುತ್ತಾರೆ.

‘ಹನುಮನಾಳದಿಂದ ಪೈಪ್‌ಲೈನ್‌ ಮೂಲಕ ಬರುವ ನೀರಿನಲ್ಲಿ ಕೊಳಚೆ, ಕೋಳಿ ಪುಕ್ಕಗಳಂತಹ ತ್ಯಾಜ್ಯ ಬರುತ್ತಿರುತ್ತವೆ. ಅದೇ ನೀರನ್ನು ಸೋಸಿಕೊಂಡು ಕುಡಿಯಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಗ್ರಾಮದ ಕೆಲವು ಕಡೆ ಹಾಸು ಬಂಡೆಗಳನ್ನು ಹಾಕಿದ್ದು, ಉಳಿದ ಕಡೆ ಹಾಕಿರುವುದಿಲ್ಲ. ಇದರಿಂದ ಚರಂಡಿಯ ನೀರು ರಸ್ತೆಯ ಮೇಲೆ ಹರಿದು ಮುಂದೆ ಸಾಗದೇ ಒಂದೆಡೆ ನಿಲ್ಲುವುದರಿಂದ ದುರ್ನಾತ ಬೀರುತ್ತಿರುತ್ತದೆ. ಮಳೆ ಬಂದಾಗ ನೀರು ರಸ್ತೆ ಮೇಲೆ ಮುಂದೆ ಸಾಗದೆ ನಿಂತಲ್ಲೇ ನಿಲ್ಲುವುದರಿಂದ ಜನರಿಗೆ ನಡೆದಾಡಲು ಕೂಡ ತೊಂದರೆಯಾಗುತ್ತದೆ’ ಎನ್ನುತ್ತಾರೆ. 

ಗ್ರಾಮದಲ್ಲಿ ಅಲ್ಪ ಪ್ರಮಾಣದಲ್ಲಿ ನಿರ್ಮಿಸಿರುವ ಚರಂಡಿಯಲ್ಲಿ ಕೊಳಚೆ ತುಂಬಿದ್ದು, ಅದರ ತಾಜ್ಯವನ್ನು ವರ್ಷ ಕಳೆದರೂ ಇಲ್ಲಿಯವರೆಗೆ ಸ್ವಚ್ಛಗೊಳಿಸಿರುವುದಿಲ್ಲ. ಇದರಿಂದ ಗ್ರಾಮದಲ್ಲಿ ಪರಿಸರ ನೈರ್ಮಲ್ಯ ಹದಗೆಟ್ಟು, ಸೊಳ್ಳೆಗಳು ಹೆಚ್ಚಾಗಿವೆ.

ಗ್ರಾಮದ ಹೊರವಲಯದಲ್ಲಿ ಮಹಿಳಾ ಶೌಚಾಲಯವನ್ನು ಹಲವಾರು ವರ್ಷಗಳ ಹಿಂದೆಯೇ ನಿರ್ಮಿಸಿದ್ದು, ಅದು ಸದ್ಯ ದುರಸ್ತಿಯಲ್ಲಿದೆ. ಮಳೆಗಾಲ ಪ್ರಾರಂಭವಾಗಿದ್ದರಿಂದ ಯಾವ ವೇಳೆಯಲ್ಲಿ ಗೋಡೆ ಕುಸಿಯುತ್ತದೆ ಎಂಬ ಆತಂಕ ಎದುರಾಗಿದೆ.

ಇದರಿಂದ ಮಹಿಳೆಯರು ಶೌಚಾಲಯಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳನ್ನು ಆದಷ್ಟು ಬೇಗನೆ ಕೈಗೊಂಡು ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
–ಕಿಶನ್‌ರಾವ್ ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT