ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ ಉಲ್ಬಣ

Last Updated 14 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಕೋಟ್ಯಂತರ ರೂಪಾಯಿ ವಿನಿಯೋಗಿಸುತ್ತಿದ್ದರೂ ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ.

ಅಸಮರ್ಪಕ ಮುಂಗಾರು ಮಳೆ, ಬತ್ತುತ್ತಿರುವ ಕೊಳವೆ ಬಾವಿಗಳು, ಕೊರೆದಿರುವ ಕೊಳವೆ ಬಾವಿಗಳಿಗೆ ಸೂಕ್ತ ಸಮಯದಲ್ಲಿ ವಿದ್ಯುತ್ ಸಂಪರ್ಕ ನೀಡದಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿ ಗಮನ ಸೆಳೆ ಯುತ್ತಿವೆ. ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರಗತಿ ಪರಿಶೀಲನೆ, ಸಾಮಾನ್ಯ ಸಭೆಗಳಲ್ಲಿ ಈ ಸಮಸ್ಯೆಗಳ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆಯುತ್ತಿವೆ.

ಆಗಸ್ಟ್ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿದ್ದ ಹಳ್ಳಿಗಳ ಜೊತೆಗೆ ಈಗ ಇನ್ನಷ್ಟು ಹಳ್ಳಿಗಳಲ್ಲಿಯೂ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಅದನ್ನು ನಿಭಾಯಿಸಲು ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತಗಳು ಸತತ ಪ್ರಯತ್ನದಲ್ಲಿದ್ದರೂ ನೀರಿಗಾಗಿ ಜನರ ಆಗ್ರಹ ಮುಗಿಲು ಮುಟ್ಟುತ್ತಿದೆ.

ಜಿಲ್ಲಾ ಪಂಚಾಯತಿಯು ಗುರುತಿಸಿರುವ ಪ್ರಕಾರ ಜಿಲ್ಲೆಯ 141 ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಅದನ್ನು ನಿಭಾಯಿಸುವ ಸಲುವಾಗಿ ವಿಶೇಷ ಯೋಜನೆ ಕೂಡ ಜಾರಿಗೊಳಿಸಲಾಗುತ್ತಿದೆ.
ಸಮಸ್ಯೆ ಹೆಚ್ಚಳ: ಕಳೆದ ಆ.25ರಂದು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯ ವೇಳೆಗೆ ಜಿಲ್ಲೆಯ 65 ಹಳ್ಳಿಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇತ್ತು. ಸದಸ್ಯ ಎ.ರಾಮಸ್ವಾಮಿ ರೆಡ್ಡಿಯವರು ಮಾಹಿತಿ ಕೇಳಿದ್ದ ಹಿನ್ನೆಲೆಯಲ್ಲಿ ಪಂಚಾಯಿತಿ ಹಳ್ಳಿಗಳ ಮಾಹಿತಿ ನೀಡಿತ್ತು.

ಬಂಗಾರಪೇಟೆ ತಾಲ್ಲೂಕಿನ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ 21, ಶ್ರೀನಿವಾಸಪುರ ತಾಲ್ಲೂಕಿನ 3 ಗ್ರಾಮ ಪಂಚಾಯಿತಿ ವ್ಯಾಪ್ತಿಯ 7, ಮಾಲೂರು ತಾಲ್ಲೂಕಿನ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ 5, ಕೋಲಾರ ತಾಲ್ಲೂಕಿನ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ 32 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇತ್ತು. ಮುದುವತ್ತಿಯಲ್ಲಿ ಸಮಸ್ಯೆ ಉಲ್ಬಣಗೊಂಡಿತ್ತು.

ಇದೀಗ ಸೆಪ್ಟೆಂಬರ್ ಎರಡನೇ ವಾರದ ಹೊತ್ತಿಗೆ ಜಿಲ್ಲೆಯಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಿರುವ ಹಳ್ಳಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಕೋಲಾರ ತಾಲ್ಲೂಕಿನ ಹೆಚ್ಚು ಹಳ್ಳಿಗಳಲ್ಲಿ ಸಮಸ್ಯೆ ಇದೆ. ಬಂಗಾರಪೇಟೆ ತಾಲ್ಲೂಕಿನಲ್ಲೂ ಸಮಸ್ಯೆ ಹೆಚ್ಚಿದೆ. ವಿಶೇವೆಂದರೆ, ಜಲಸಂಪನ್ಮೂಲಗಳ ಸದ್ಬಳಕೆಯ ವಿಚಾರದಲ್ಲಿ ಎಚ್ಚರ ವಹಿಸಿರುವ ಮುಳಬಾಗಲು ತಾಲ್ಲೂಕಿನ ಯಾವುದೇ ಹಳ್ಳಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲ.

ಕೋಟ್ಯಂತರ ವೆಚ್ಚ: ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು 2011-12ನೇ ಸಾಲಿನಲ್ಲಿ ಗ್ರಾಮೀಣ ನೀರು ಸರಬರಾಜು ಯೋಜನೆಗಳ (ಕೇಂದ್ರ ಮತ್ತು ರಾಜ್ಯ ವಲಯ, ವಿಶೇಷ ಘಟಕ ಯೋಜನೆ (ಎಸ್‌ಸಿಪಿ), ಗಿರಿಜನ ಉಪ ಯೋಜನೆ (ಟಿಎಸ್‌ಪಿ), ಟಾಸ್ಕ್‌ಫೋರ್ಸ್) ಅಡಿಯಲ್ಲಿ ಒಟ್ಟು ರೂ 45.85 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ. ಇದುವರೆಗೆ 8.5 ಕೋಟಿ ರೂಪಾಯಿ (ಕೇಂದ್ರದ 6 ಕೋಟಿ, ರಾಜ್ಯದ 2.5 ಕೋಟಿ) ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ಆಗಸ್ಟ್ ತಿಂಗಳ ಕೊನೆ ಹೊತ್ತಿಗೆ 6.10 ಕೋಟಿ ರೂಪಾಯಿ (ಕೇಂದ್ರದ 4.02 ಕೋಟಿ, ರಾಜ್ಯದ 2.07 ಕೋಟಿ)ಯನ್ನು ಖರ್ಚು ಮಾಡಲಾಗಿದೆ. ಆದರೂ ಸಮಸ್ಯೆ ನಿಯಂತ್ರಣಕ್ಕೆ ಬರುವ ಬದಲು ಹೆಚ್ಚಾಗುತ್ತಲೇ ಇದೆ.

ಕಾಮಗಾರಿ ಉಳಿಕೆ: ಗ್ರಾಮೀಣ ನೀರು ಸರಬರಾಜು ಯೋಜನೆ ಅಡಿಯಲ್ಲಿ (ನಳ ನೀರು ಸರಬರಾಜು ಯೋಜನೆ, ಕಿರು ನೀರು ಸರಬರಾಜು ಯೋಜನೆ,  ಪೈಪ್‌ಲೈನ್ ವಿಸ್ತರಣೆ, ಅಂತರ್‌ಜಲ ಅಭಿವೃದ್ಧಿ, ಶಾಲೆಗಳಿಗೆ ಕುಡಿ ಯುವ ನೀರಿನ ಸೌಲಭ್ಯ ಕೊಡುವುದು) 1353 ಕಾಮಗಾರಿಗಳು ಅನುಮೋದ ೆಗೊಂಡಿದ್ದು, ಕೇವಲ 61 ಕಾಮಗಾರಿಗಳು ಪೂರ್ಣಗೊಂಡಿವೆ. 1292 ಕಾಮಗಾರಿಗಳು ಬಾಕಿ ಉಳಿದಿವೆ.

ಪೈಪ್‌ಲೈನ್ ವಿಸ್ತರಣೆಯ 127 ಕಾಮಗಾರಿಗಳ ಪೈಕಿ ಒಂದೂ ಶುರುವಾಗಿಲ್ಲ. ಕಿರುನೀರು ಸರಬರಾಜು ಯೋಜನೆಯ 267 ಅನುಮೋದನೆಗೊಂಡ ಕಾಮಗಾರಿಗಳ ಪೈಕಿ 4 ಮಾತ್ರ ಪೂರ್ಣಗೊಂಡಿವೆ.  ಶಾಲೆಗಳಿಗೆ ಕುಡಿಯುವ ನೀರಿನ ಪೂರೈಸುವ 415 ಕಾಮಗಾರಿಗಳ ಪೈಕಿ ಒಂದೂ ಆರಂಭವಾಗಿಲ್ಲ.

ಕಾರ್ಯಪಡೆ: ಶಾಸಕರ ಅಧ್ಯಕ್ಷತೆಯ ಕಾರ್ಯಪಡೆ ಅಡಿಯಲ್ಲಿಯೂ ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲಾಗಿದೆ. ಕೋಲಾರ ತಾಲ್ಲೂಕಿಗೆ ರೂ 1 ಕೋಟಿ, ಮಾಲೂರಿಗೆ ರೂ 50 ಲಕ್ಷ, ಬಂಗಾರಪೇಟೆಗೆ ರೂ 40 ಲಕ್ಷ, ಕೆಜಿಎಫ್‌ಗೆ ರೂ 50 ಲಕ್ಷ, ಶ್ರೀನಿವಾಸಪುರಕ್ಕೆ ರೂ 50 ಲಕ್ಷ ಬಿಡುಗಡೆಯಾಗಿದೆ. ಒಟ್ಟಾರೆ ರೂ 2.90 ಕೋಟಿಯಲ್ಲಿ ಇದುವರೆಗೆ ರೂ1.75 ಕೋಟಿ ಖರ್ಚು ಮಾಡಲಾಗಿದೆ. ಕೈಗೊಂಡ 187 ಕಾಮಗಾರಿಗಳ ಪೈಕಿ 125 ಪೂರ್ಣಗೊಂಡಿವೆ. 62 ಬಾಕಿ ಉಳಿದಿವೆ. ನೀರಿನ ಸಮಸ್ಯೆಯೂ ಮುಂದುವರಿಯುತ್ತಲೇ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT