ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ: ರಾಜಧಾನಿಗೆ ಹತ್ತಿರದಲ್ಲಿಯೇ ಇರುವ ರಾಮನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂಗದಂತೆ ಎಚ್ಚರವಹಿಸಿ ಕೆಲಸ ನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸನಾವುಲ್ಲಾ ಅವರು ಜಿಲ್ಲೆಯ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ರಾಮನಗರದ ನೂತನ ಕಂದಾಯ ಭವನದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಯಾವ ಗ್ರಾಮಗಳಲ್ಲೂ ನೀರಿನ ಬವಣೆ ಎದುರಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ನೀರಿಲ್ಲ ಎಂದು ಜನತೆ ನರಳುವಂತಾಗಬಾರದು ಎಂದು ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆಂದು ಜಿಲ್ಲಾಧಿಕಾರಿ ಖಾತೆಗೆ ಐದು ಕೋಟಿ ರೂಪಾಯಿ ಹಾಗೂ ಜಿಲ್ಲಾ ಪಂಚಾಯಿತಿಗೆ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಈಗಲೇ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು. ಬೇಸಿಗೆ ವೇಳೆಯಲ್ಲಿ ನೀರಿನ ಬವಣೆ ಬಾರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ವಿಸ್ತೃತ ಯೋಜನೆ ರೂಪಿಸಿ: ಜಿಲ್ಲೆಯಲ್ಲಿ ಲಭ್ಯ ಇರುವ ಜಲ ಮೂಲಗಳಿಂದ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವಂತಹ ವಿಸ್ತೃತವಾದ ಯೋಜನೆ ರೂಪಿಸಿ. ಯಾವ ಗ್ರಾಮವೂ ಕೊಳವೆ ಬಾವಿಯನ್ನು ಆಧರಿಸಿ ಇರಬಾರದು. ಕಾವೇರಿ, ಶಿಂಷಾ, ಕಣ್ವ, ಅರ್ಕಾವತಿ ನದಿಯಿಂದ ಲಭ್ಯವಾಗುವ ನೀರನ್ನು ಆಯಾ ಭಾಗದ ಸುತ್ತಮುತ್ತಲ ಗ್ರಾಮಗಳಿಗೆ ಪೈಪಿನ ಮೂಲಕ ನೀರು ಪೂರೈಸುವ ವ್ಯವಸ್ಥೆ ಆಗಬೇಕು ಎಂದು ಅವರು ಜಿಲ್ಲಾ ಪಂಚಾಯಿತಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಹಾಸ್ ಅವರು, ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ 16 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಸಮಸ್ಯೆ ಉಲ್ಬಣವಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಕೆಲ ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ ಎಂದರು ಹೇಳಿದರು.

ಮಂಚನಬೆಲೆಯಿಂದ ರಾಮನಗರಕ್ಕೆ ಪೈಪುಗಳ ಮೂಲಕ ನೀರು ತರುವ ಯೋಜನೆ ಕೈಗೊಳ್ಳುವಂತೆ ಇದೇ ಸಂದರ್ಭದಲ್ಲಿ ಸನಾವುಲ್ಲಾ ಅವರು ಸೂಚಿಸಿದರು.

ಫಲಿತಾಂಶ ಹೆಚ್ಚಿಸಿ: ಏಪ್ರಿಲ್ 2ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಎದುರಾಗಲಿವೆ. ಕಳೆದ ಬಾರಿಗಿಂತ ಹೆಚ್ಚಿನ ಫಲಿತಾಂಶ ಈ ಬಾರಿ ಜಿಲ್ಲೆಗೆ ಬರಬೇಕು. ರಾಜ್ಯಮಟ್ಟದಲ್ಲಿ ಜಿಲ್ಲೆಯ ರ‌್ಯಾಂಕ್ ಸುಧಾರಿಸಬೇಕು ಎಂದು ಅವರು ಜಿಲ್ಲಾ ಡಿಡಿಪಿಐಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಇಲಾಖೆಗೆ ಸೇರಿದ ಮೊರಾರ್ಜಿ ವಸತಿ ಶಾಲೆಗಳಲ್ಲಿ ಕಾಯಂ ಶಿಕ್ಷಕರು ನೇಮಕವಾಗುತ್ತಾರೆ ಎಂದು ಗುತ್ತಿಗೆ ಶಿಕ್ಷಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಅವರ ಮೇಲೆ ಯಾವುದೇ ನಿಯಂತ್ರಣ ಇಲ್ಲದ ಕಾರಣ ಕ್ರಮ ತೆಗೆದುಕೊಳ್ಳಲು ಇಲಾಖೆಯಿಂದ ಆಗುತ್ತಿಲ್ಲ. ಈ ಕಾರಣದಿಂದ ಈ ಬಾರಿ ಫಲಿತಾಂಶ ಕುಸಿಯುವ ಸಾಧ್ಯತೆ ಇದೆ ಎಂದು ಡಿಎಸ್‌ಡಬ್ಲು ತಿಮ್ಮಪ್ಪ ಮತ್ತು ಶಿವರಾಂ ಸಭೆಯಲ್ಲಿ ಮಾಹಿತಿ ನೀಡಿದರು. ಪರೀಕ್ಷೆ ಹತ್ತಿರ ಬಂದಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರ್ಯಾಯ ಸೌಕರ್ಯ ಕಲ್ಪಿಸಿಕೊಳ್ಳುವಂತೆ ಸನಾವುಲ್ಲಾ ಅವರು ಹೇಳಿದರು.

ಪಿ.ಪಿ ಪ್ರಸ್ತಾವನೆ: ಮುಂದಿನ ಬಾರಿ ಪ್ರಗತಿ ಪರಿಶೀಲನೆ ನಡೆಸುವಾಗ ಎಲ್ಲ ಇಲಾಖೆಯವರು `ಪವರ್ ಪಾಯಿಂಟ್~ (ಪಿ.ಪಿ) ಮೂಲಕ ತಮ್ಮ ಪ್ರಗತಿಯನ್ನು ತಿಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸನಾವುಲ್ಲಾ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಖ್ಯ ಯೋಜನಾ ಅಧಿಕಾರಿಯಾದವರು ಅಂಕಿ ಅಂಶಗಳ ಸಹಿತ ಎಲ್ಲ ಇಲಾಖೆಗಳ ಮಾಹಿತಿಯನ್ನು ಹೊಂದಿರಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸೂಚಿಸಿದದರು.

ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್, ಜಿ.ಪಂ ಸಿಇಒ ವೆಂಕಟೇಶಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT