ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ

Last Updated 25 ಫೆಬ್ರುವರಿ 2012, 5:45 IST
ಅಕ್ಷರ ಗಾತ್ರ

ಕುಶಾಲನಗರ: ಇಲ್ಲಿನ ನಂಜರಾಯಪಟ್ಟಣದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ತಕ್ಷಣ ಪರಿಸಹರಿಸಬೇಕು ಎಂದು ಗ್ರಾಮಸ್ಥರು ಜಿ.ಪಂ.ಅಧ್ಯಕ್ಷರನ್ನು ಒತ್ತಾಯಿಸಿದರು.

ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯ್ತಿ ವತಿಯಿಂದ ನಂಜರಾಯಪಟ್ಟಣ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ವಿಜುಚಂಗಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಅಧ್ಯಕ್ಷರಿಗೆ ತಾಕೀತು ಮಾಡಿದರು.

ಗ್ರಾಮದಲ್ಲಿ ಒಂದೇ ಕೊಳವೆ ಬಾವಿ ಇದ್ದು, ಗ್ರಾಮಸ್ಥರು ಇದನ್ನು ಅವಲಂಬಿಸಿದ್ದಾರೆ. ಒಂದು ವೇಳೆ ಇದು ಕೆಟ್ಟರೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಲಿದೆ. ಈ ದಿಸೆಯಲ್ಲಿ ಜಿ.ಪಂ.ವತಿಯಿಂದ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಆರ್ಥಿಕವಾಗಿ ಹಿಂದುಳಿದ ಗಿರಿಜನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತೆ ಹಿಂದುಳಿದ ವರ್ಗದ ವಿದ್ಯಾರ್ಥಿನಿಲಯ ಸ್ಥಾಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಭಿಕರು ಒತ್ತಾಯಿಸಿದರು.

ಜಿ.ಪಂ.ವತಿಯಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಎರಡು ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ ಪೈಫ್ ಲೈನ್ ಅಳವಡಿಸಿ ಐದು ವರ್ಷ ಕಳೆದರೂ ಇದುವರೆಗೆ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪ್ರೇಮಾನಂದ್ ಆರೋಪಿಸಿದರು.
 
ಈ ಕುರಿತು ಸಹಾಯಕ ಎಂಜಿನಿಯರ್ ಸುಬ್ಬಯ್ಯ ಅವರಿಂದ ಮಾಹಿತಿ ಬಯಸಿದಾಗ, ಈ ಯೋಜನೆ ಅನುಷ್ಠಾನಕ್ಕೆ ತರಲು ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕಿದೆ ಎಂದು ತಿಳಿಸಿದರು.

ಸಮಗ್ರ ಗ್ರಾಮೀಣ ಯೋಜನೆಯಡಿ ಈ ಯೋಜನೆಯನ್ನು ರೂಪಿಸದೆ ರೂ.10 ಲಕ್ಷ ವೆಚ್ಚದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ ಸರ್ಕಾರದ ಅನುದಾನವನ್ನು ಪೋಲು ಮಾಡುತ್ತಿದ್ದಾರೆ ಎಂದು ಜಿ.ಪಂ.ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ರಾಜೀವ್‌ಗಾಂಧಿ ವಿದ್ಯುದ್ದೀಕರಣ ಯೋಜನೆಯಡಿ 144 ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದ್ದು, ಉಳಿದ ಕುಟುಂಬಗಳಿಗೂ ಕೂಡಲೇ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು ಎಂದು ಕುಶಾಲಪ್ಪ ಸೂಚಿಸಿದರು.

ದುಬಾರೆಗೆ ಆಗಮಿಸುವ ಪ್ರವಾಸಿಗರಿಗೆ ಸೂಕ್ತ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಸೌಲಭ್ಯ ಒದಗಿಸಬೇಕು. ದುಬಾರೆ ರಸ್ತೆ ಅಭಿವೃದ್ಧಿ ಮಾಡಬೇಕು ಎಂದು ಗ್ರಾಂ.ಪ.ಮಾಜಿ ಅಧ್ಯಕ್ಷ ಎ.ಎಂ.ಲೋಕನಾಥ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಹಾಯಕ ಎಂಜಿನಿಯರ್ ಫಯಾಜ್ ಅಹ್ಮದ್ ದುಬಾರೆ ರಸ್ತೆ ಅಭಿವೃದ್ಧಿಗೆ ನಬಾರ್ಡ್ ಯೋಜನೆಯಡಿ ರೂ.20 ಲಕ್ಷ ಹಣ ಮಂಜೂರಾಗಿದೆ ಎಂದರು.

ಜನಸಮಾನ್ಯರ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು. ಜಿ.ಪಂ.ಸದಸ್ಯೆ ಬಿ.ಸಿ.ಸುಲೋಚನಾ, ತಾ.ಪಂ.ಸದಸ್ಯರಾದ ಬಿ.ವಿ.ಸತೀಶ್, ಕೆ.ಆರ್.ರಾಣಿ, ಗ್ರಾ.ಪಂ. ಉಪಾಧ್ಯಕ್ಷ ಟಿ.ಈ.ಭಾಗ್ಯ, ಸದಸ್ಯರಾದ ರವಿಕುಮಾರ್, ಕೆ.ಎಸ್.ಸುರೇಶ್,ಎಂ.ಎಂ.ರಯೀಮಾಭಿ, ಪಾರ್ವತಿ, ಜಾಜಿ ತಮ್ಮಯ್ಯ, ತಾ.ಪಂ.ಇ.ಓ. ಚಂದ್ರಶೇಖರ್ , ಪಿಡಿಓ ವೀಣಾ ಮತ್ತಿತರರು ಉಪಸ್ಥಿತರಿದ್ದರು. ಸದಸ್ಯೆ ಚಿತ್ರಾ ರಮೇಶ್ ಸ್ವಾಗತಿಸಿದರು. ಶಿಕ್ಷಕ ಮೂರ್ತಿ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT