ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಿಎಂ ಆದೇಶ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಈಗಲೇ ಕ್ರಿಯಾ ಯೋಜನೆ ರೂಪಿಸುವುದರ ಜೊತೆಗೆ ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕೆಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮತ್ತು ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳ ಜೊತೆ ಶುಕ್ರವಾರ ಇಲ್ಲಿ ವಿಡಿಯೊ ಸಂವಾದ ನಡೆಸಿದ ಸಂದರ್ಭದಲ್ಲಿ ಈ ಸೂಚನೆ ನೀಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಕಡೆ ಈಗಿನಿಂದಲೇ ಕಾರ್ಯಕ್ರಮ ರೂಪಿಸಬೇಕು ಎಂದು ಆದೇಶಿಸಿದರು.

ಪರಿಸ್ಥಿತಿಯನ್ನು ಎದುರಿಸಲು ಆಡಳಿತ ಯಂತ್ರವನ್ನು ಸಜ್ಜುಗೊಳಿಸಬೇಕು. ಸರ್ಕಾರದ ಅನುಮತಿಗಾಗಿ ಕಾಯದೆ ಗೋಶಾಲೆಗಳನ್ನು ತೆರೆಯಬೇಕು. ಶಾಸಕರ ಅಧ್ಯಕ್ಷತೆಯ ಕಾರ್ಯಪಡೆ ಸಭೆಗಳನ್ನು ಕರೆದು ಕುಡಿಯುವ ನೀರಿನ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು ಎಂದು ಸೂಚಿಸಿದರು.

 ಕಡತಗಳ ವಿಲೇವಾರಿಯನ್ನು ಚುರುಕುಗೊಳಿಸುವ ಮೂಲಕ ಆಡಳಿತ ಸುಧಾರಣೆಗೆ ಒತ್ತು ನೀಡಬೇಕು, ಕೆಲ ಜಿಲ್ಲೆಗಳಲ್ಲಿ ಕಡತಗಳ ವಿಲೇವಾರಿ ವೇಗವಾಗಿ ಆಗುತ್ತಿದೆ.ಉಳಿದ ಕಡೆಯೂ ಅದೇ ರೀತಿ ಆಗಬೇಕು.

ನಿಯಮಗಳನ್ನು ಸರಳಗೊಳಿಸಿ ಇ-ಆಡಳಿತ, ಕಂಪ್ಯೂಟರೀಕರಣದತ್ತ ಗಮನಹರಿಸುವುದರ ಜೊತೆಗೆ  ಆಸರೆ ಮನೆಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆದೇಶಿಸಿದರು.ಆಸರೆ ಯೋಜನೆಯಡಿ 58,130 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಈ ಪೈಕಿ 46,335 ಮನೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡು, ಇದುವರೆಗೆ 21 ಸಾವಿರ ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಸ್ಥಳೀಯ ಶಾಸಕರ ಮೂಲಕ ಉಳಿದ ಮನೆಗಳನ್ನು ಆದಷ್ಟು ಬೇಗ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದರು.

 ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ಸಂಧ್ಯಾಸುರಕ್ಷಾ ಇತ್ಯಾದಿ ಫಲಾನುಭವಿಗಳ ಪಟ್ಟಿಯನ್ನು ಪುನರ್‌ಪರಿಶೀಲನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಅರ್ಹರನ್ನು ಕೈಬಿಟ್ಟಿದ್ದರೆ ಪುನಃ ಅವರಿಗೆ ಸೌಲಭ್ಯಗಳು ಸಿಗುವಂತೆ ಮಾಡಬೇಕು. ಅಲ್ಲದೆ ಹೊಸದಾಗಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಬೇಕು ಎಂದು ತಿಳಿಸಿದರು.

 ಬಹಳಷ್ಟು ಕಡೆ ವೈದ್ಯರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು. ಈ ಸಂಬಂಧ ಒಂದೆರಡು ದಿನಗಳಲ್ಲಿ ಸುತ್ತೋಲೆ ಹೊರಡಿಸಲಾಗುವುದು ಎಂದರು.

ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಸಂಪರ್ಕಿಸಿ ಅಲ್ಲಿನ ವೈದ್ಯರ ಸೇವೆ ಪಡೆಯಲು ಮುಂದಾಗಬೇಕು. ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳು ತಾಲ್ಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು. ಕನಿಷ್ಠ ಒಂದು ಆಸ್ಪತ್ರೆ, ಶಾಲೆ, ಅಂಗನವಾಡಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಅರಿಯಬೇಕೆಂದು ಕಟ್ಟಪ್ಪಣೆ ಮಾಡಿದರು.

ಶೌಚಾಲಯ ನಿರ್ಮಾಣ: `ಚೆಂಬು ಹಿಡಿದುಕೊಂಡು ಬಹಿರ್ದೆಸೆಗೆ ಬಯಲಿನತ್ತ ಹೋಗುವುದನ್ನು ಬಾಗಲಕೋಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಣ್ಣಾರೆ ನೋಡಿದ್ದೇನೆ. ಈ ರೀತಿ ಆಗಬಾರದು. ಶೌಚಾಲಯಗಳ ನಿರ್ಮಾಣವನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳುವ ಮೂಲಕ ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು ಯಶಸ್ವಿಗೊಳಿಸಬೇಕು~ ಎಂದು ಸೂಚಿಸಿದರು.

ಸಾಮೂಹಿಕ ವಿವಾಹ ಸಮಾರಂಭಗಳಲ್ಲಿ ನಡೆಯುವ ಬಾಲ್ಯವಿವಾಹವನ್ನು ತಡೆಯಲು ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸಬೇಕು. ನಿಯಮಗಳಿಗೆ ಅಂಟಿಕೊಳ್ಳದೆ ಸಾಧ್ಯವಾದಷ್ಟು ಅಂಗವಿಕಲರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದು ಸಲಹೆ ಮಾಡಿದರು.

ಸರ್ವೇಯರ್‌ಗಳ ಕೊರತೆ ನೀಗಿಸಲು ಸದ್ಯಕ್ಕೆ ನಿವೃತ್ತರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆರು ತಿಂಗಳ ಒಳಗೆ ಕಾಯಂ ಸಿಬ್ಬಂದಿಯ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಜನಪರ ಮತ್ತು ನಾಗರಿಕ ಸ್ನೇಹಿಯಾಗಿ ವರ್ತಿಸುವ ಮೂಲಕ ಒಳ್ಳೆಯ ಆಡಳಿತ ನೀಡಲು ಶ್ರಮಿಸಬೇಕೆಂದು ಸಲಹೆ ಮಾಡಿದರು.

ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಮುಖ್ಯವಾಹಿನಿಗೆ ತರಬೇಕು. ಬಿಡುಗಡೆಯಾಗಿರುವ ಹಣವನ್ನು ಪೂರ್ತಿಯಾಗಿ ಬಳಸಿಕೊಂಡು ಆ ಬಗ್ಗೆ ವರದಿ ನೀಡಬೇಕು. ಅದರ ಆಧಾರದ ಮೇಲೆ ಹೊಸದಾಗಿ ಹಣ ಬಿಡುಗಡೆ ಮಾಡಲಾಗುವುದು. ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾನೂನು ಸಚಿವ ಎಸ್.ಸುರೇಶಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ತರಾಟೆಗೆ
ವಿಡಿಯೊ ಸಂವಾದಕ್ಕೆ ಗೈರುಹಾಜರಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ತೆರಳಿದ್ದ ಚಿತ್ರದುರ್ಗ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಬದಲು ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ವಾಣಪ್ಪ ಭಾಗವಹಿಸಿದ್ದನ್ನು ಕಂಡು ಸಿಟ್ಟಿಗೆದ್ದ ಸದಾನಂದ ಗೌಡ, ಜಿಲ್ಲೆಯ ಹಿತಾಸಕ್ತಿಗಿಂತ ಕಾರ್ಯಕ್ರಮ ಮುಖ್ಯವೊ, ಅವರಿಗೆ ಮುಖ್ಯಕಾರ್ಯದರ್ಶಿಗಳೊಂದಿಗೆ ಮಾತನಾಡಲು ಹೇಳಿ ಎಂದು ನಿರ್ವಾಣಪ್ಪಗೆ ಸೂಚಿಸಿದರು. ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಜಿಲ್ಲಾಧಿಕಾರಿಗಳು ಬಂದು ವಿವರಣೆ ನೀಡಿದರು. 

ಡಿನೋಟಿಫೈ: ಅವಾಕ್ಕಾದ ಡಿವಿಎಸ್
ವಿಡಿಯೊ ಸಂವಾದದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ಪ್ರಸ್ತಾಪಿಸಿದ ಕೆರೆ ಡಿನೋಟಿಫಿಕೇಷನ್ ವಿಷಯ ಕೇಳಿ ಮುಖ್ಯಮಂತ್ರಿ ಸದಾನಂದ ಗೌಡ ಒಂದು ನಿಮಿಷ ಅವಾಕ್ಕಾದರು.
 ಹೊಸ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಕಚೇರಿಗಳಿಗೆ ಸ್ಥಳಾವಕಾಶ ಸೇರಿದಂತೆ ಮೂಲಸೌಕರ್ಯಗಳಿಗೆ ಜಾಗದ ಕೊರತೆ ಇದೆ. ನಗರದ ಪಕ್ಕದಲ್ಲೇ ಕೆರೆ ಇದ್ದು, ಅದನ್ನು ಡಿನೋಟಿಫೈ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಾನಂದ ಗೌಡ, `ಕೆರೆ ಡಿನೋಟಿಫೈ ಮಾಡುವುದರಿಂದ ನಾನು ಸಮಸ್ಯೆಗೆ ಸಿಲುಕುವುದಿಲ್ಲ ತಾನೇ?~ ಎಂದು ಚಟಾಕಿ ಹಾರಿಸಿದರು. ನಂತರ `ಇದಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಿ ಕೊಡಿ, ನೋಡೋಣ~ ಎಂದು ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT