ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸೌಲಭ್ಯಕ್ಕೆ ಒತ್ತಾಯ

Last Updated 20 ಏಪ್ರಿಲ್ 2011, 6:15 IST
ಅಕ್ಷರ ಗಾತ್ರ

ಹರಪನಹಳ್ಳಿ: ಕುಡಿಯುವ ನೀರಿನ ಸಮಸ್ಯೆಯ ನಿವಾರಣೆ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ರಾಜ್ಯಾದ್ಯಂತ ತಾಲ್ಲೂಕು ಕಚೇರಿ ಮುತ್ತಿಗೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪಕ್ಷದ ಅಂಗ ಸಂಘಟನೆಯ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಹೊಸಪೇಟೆ ರಸ್ತೆಯ ಮುಖಾಂತರ ಮಿನಿ ವಿಧಾನಸೌಧ ತಲುಪಿತು. ನಂತರ ಬಹಿರಂಗ ಸಭೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆಪಿಆರ್‌ಎಸ್ ಸಂಘಟನೆಯ ಅಧ್ಯಕ್ಷ ಎಚ್. ವೆಂಕಟೇಶ್ ಮಾತನಾಡಿ, ಬಂಜರು, ಗೋಮಾಳ ಸೇರಿದಂತೆ ವಿವಿಧ ಬಗೆಯ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತ, ಜೀವನ ಸಾಗಿಸುತ್ತಿರುವ ಬಡ ಹಾಗೂ ನಿರ್ಗತಿಕ ಕುಟುಂಬಗಳು, ಭೂ ಮಂಜೂರಾತಿಗಾಗಿ ಭೂ ಸುಧಾರಣೆ ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ, ದಶಕಗಳೇ ಕಳೆದರೂ ಸರ್ಕಾರ ಅವರೆಡೆ ತಿರುಗಿಯೂ ನೋಡುತ್ತಿಲ್ಲ. ಬದಲಾಗಿ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಹಾಗೂ ಕೃಷಿ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಲು ಹೊರಟಿರುವ ಯಡಿಯೂರಪ್ಪ ರೈತರ ಫಲವತ್ತಾದ ಭೂಮಿ ಕಿತ್ತುಕೊಂಡು, ರೈತರನ್ನು ದಿವಾಳಿ ಎಬ್ಬಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಕೂಲಿಕಾರರ ಸಂಘದ ಅಧ್ಯಕ್ಷ ಎಲ್.ಬಿ. ಹಾಲೇಶನಾಯ್ಕ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಜನಸಾಮಾನ್ಯರು ಪರಿತಪಿಸುತ್ತಿದ್ದಾರೆ. ನೀರು ಸಂಗ್ರಹಿಸಲೆಂದೇ ದಿನಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಹಳ್ಳಿಯಲ್ಲಿ ಮನೆಮಾಡಿದೆ. ವಿದ್ಯುತ್ ಇದ್ದರೇ ಮಾತ್ರ ನೀರು; ಇಲ್ಲದಿದ್ದರೇ ಬರೀ ಕಣ್ಣೀರು ಎಂಬ ಸ್ಥಿತಿ  ಹಳ್ಳಿಗಳಲ್ಲಿದೆ. ಇದರ ನಿವಾರಣೆಗೆ ಮುಂದಾಗದ ಸರ್ಕಾರ ಬೃಹತ್ ಕಂಪೆನಿಗಳಿಗೆ ಭೂಮಿ, ನೀರು, ವಿದ್ಯುತ್ ಕೊಡಲು ತುದಿಗಾಲ ಮೇಲೆ ನಿಂತಿದೆ. ಸರ್ಕಾರದ ಈ ವಾತ್ಸಲ್ಯದ ಹಿಂದೆ ಸರ್ಕಾರ ಬಂಡವಾಳಶಾಹಿ ಪರ ಎಂಬುದನ್ನು ಸಾಬೀತುಪಡಿಸಿದೆ ಎಂದು ಆರೋಪಿಸಿದರು.

ನೆರೆ ಸಂತ್ರಸ್ತರಿಗೆ ಸೂರು, ನಿವೇಶನ, ಭೂಸಾಗುವಳಿ ಹಕ್ಕುಪತ್ರ, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ, ಬೀಡಿ ಕಾರ್ಮಿಕರ ಕನಿಷ್ಠ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ವಿವಿಧ 14ಬೇಡಿಕೆಗಳ ಮನವಿಯನ್ನು ಜೆಎಂಎಸ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಟಿ. ಪ್ರಜ್ಞಾ  ತಹಶೀಲ್ದಾರ್‌ಗೆ ಸಲ್ಲಿಸಿದರು.ವಿವಿಧ ಸಂಘಟನೆಯ ಮುಖಂಡರಾದ ವೆಂಕಟೇಶ್ ಬೇವಿನಹಳ್ಳಿ, ಹುಲಿಗೇಶ್, ಮುಜಿಬಾಬೀ, ಸೇವಾನಾಯ್ಕ, ಸೋಮ್ಲಾನಾಯ್ಕ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT