ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು: ಅನುದಾನಕ್ಕೆ ಜಿ.ಪಂ ಮನವಿ

Last Updated 13 ಅಕ್ಟೋಬರ್ 2011, 9:40 IST
ಅಕ್ಷರ ಗಾತ್ರ

ಬೆಳಗಾವಿ: “ಜಿಲ್ಲೆಯ ಕುಡಿಯುವ ನೀರಿನ ಸರಬರಾಜು ಯೋಜನೆಯಡಿ ಕುಡಿಯುವ ನೀರಿನ ಪುನಶ್ಚೇತನ ಹಾಗೂ ಭೂಸ್ವಾಧೀನ ಪರಿಹಾರ ಧನ ವಿತರಿಸಲು ಸಲ್ಲಿಸಿರುವ 1.15 ಕೋಟಿ ರೂಪಾಯಿ ಪ್ರಸ್ತಾವವನ್ನು ಪರಿಗಣಿಸಿ ಕೂಡಲೇ ಅನುದಾನವನ್ನು ಬಿಡುಗಡೆ ಮಾಡಬೇಕು” ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಈರಣ್ಣ ಕಡಾಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಿಲ್ಲಾ ಪಂಚಾಯಿತಿಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ನಡೆಸಿದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮನವಿ ಸಲ್ಲಿಸಿದ ಅವರು, “ಜಿಲ್ಲೆಯಲ್ಲಿ ಬರ ಬಿದ್ದಿದೆ. ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಕುಡಿಯುವ ನೀರಿನ ಪುನಶ್ಚೇತನಕ್ಕೆ ರೂ. 1,15,28,000 ಪ್ರಸ್ತಾವವನ್ನು ಸಲ್ಲಿಸಲಾಗಿದೆ. ತಕ್ಷಣ ಅನುದಾನವನ್ನು ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯ ಕುಡಿಯುವ ನೀರಿನ ಜಲ ಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಜಲಮೂಲಗಳ ಪುನಶ್ಚೇತನಗೊಳಿಸಲು ರೂ. 18.42 ಕೋಟಿ ಅನುದಾನ ಅವಶ್ಯಕತೆ ಇದೆ. ಈ ಕುರಿತ ಪ್ರಸ್ತಾವಕ್ಕೆ ಕೂಡಲೇ ಅನುಮೋದನೆ ಸೂಚಿಸಿ, ಅನುದಾನ ಬಿಡುಗಡೆ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಕಡಾಡಿ ಮನವಿ ಮಾಡಿದ್ದಾರೆ.

“ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರ ಕಟ್ಟಡಗಳ ದುರಸ್ತಿ ಹಾಗೂ ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣ ಮತ್ತು ಸಾಧನ- ಸಲಕರಣೆಗಳಿಗೆ ಒಟ್ಟು ರೂ. 31.10 ಕೋಟಿ ಅನುದಾನ ಅವಶ್ಯಕತೆಯಿದ್ದು, ಇದನ್ನು ಮಂಜೂರು ಮಾಡಬೇಕು. ಜಿಲ್ಲೆಯಲ್ಲಿ ಖಾಲಿ ಇರುವ ಆರೋಗ್ಯ ಇಲಾಖೆಯ ವೈದ್ಯರ ಹಾಗೂ ಸಿಬ್ಬಂದಿ ನೇಮಕಾತಿಗೆ ಜಿಲ್ಲಾ ಮಟ್ಟದಲ್ಲೇ ಮಾಡಿಕೊಳ್ಳಲು ಅವಕಾಶ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

“ಆರ್.ಐ.ಡಿ.ಎಫ್-12 ಪ್ರೌಢಶಾಲಾ ಕಟ್ಟಡಗಳ ಟೆಂಡರ್‌ನಲ್ಲಿ ಹೆಚ್ಚುವರಿಯಾದ ಅನುದಾನ 181.29 ಲಕ್ಷ ರೂಪಾಯಿಯನ್ನು ಸರ್ಕಾರದಿಂದ ಬಿಡುಗಡೆ ಮಾಡಬೇಕು.

ವಿಶೇಷ ಅಭಿವೃದ್ಧಿ ಯೋಜನೆಯಿಲ್ಲದ ತಾಲ್ಲೂಕುಗಳಾದ ಬೆಳಗಾವಿ ಹಾಗೂ ಖಾನಾಪುರದಲ್ಲಿ ಅತಿವೃಷ್ಟಿಯಿಂದ ಹಾಗೂ ಚಿಕ್ಕೋಡಿ ತಾಲ್ಲೂಕಿನಲ್ಲಿ ಪ್ರವಾಹದಿಂದ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಹೀಗಾಗಿ ವಿಶೇಷ ಅಭಿವೃದ್ಧಿ ಯೋಜನೆಯಿಲ್ಲದ ತಾಲ್ಲೂಕುಗಳ ರಸ್ತೆ ದುರಸ್ತಿಗಾಗಿ ರೂ. 572.46 ಲಕ್ಷ ಬಿಡುಗಡೆ ಮಾಡಬೇಕು” ಎಂದು ಈರಣ್ಣ ಕಡಾಡಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಉಪಮೇಯರ್ ಚುಣಾವಣೆ ಘೋಷಣೆ
ಬೆಳಗಾವಿ ಮಹಾನಗರಪಾಲಿಕೆ ಉಪಮೇಯರ್ ಸ್ಥಾನಕ್ಕೆ ಇದೇ 20 ರಂದು ಚುನಾವಣೆ ನಡೆಯಲಿದ್ದು, ಉಪಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

20 ರಂದು ಬೆಳಿಗ್ಗೆ 11 ಕ್ಕೆ ನಾಮಪತ್ರ ಸ್ವೀಕರಿಸಲಾಗುವುದು. ಮಧ್ಯಾಹ್ನ 1 ಕ್ಕೆ ಚುನಾವಣೆ ನಡೆಯಲಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಆಡಳಿತ ಹಾಗೂ ಪ್ರತಿಪಕ್ಷ ಗುಂಪುಗಳೆರಡಲ್ಲೂ ಸಂಚಲನ ಮೂಡಿಸಿದೆ. ಉಪಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಡುವ ಎಲ್ಲ ಲಕ್ಷಣಗಳು ಇವೆ. ಎರಡು ಗುಂಪುಗಳಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಇದಕ್ಕಾಗಿ ಈಗಾಗಲೇ ಲಾಬಿ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT