ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಕಾಮಗಾರಿ ಶೀಘ್ರ ಪೂರ್ಣಕ್ಕೆ ಸೂಚನೆ

ಜಿಲ್ಲಾ ಪಂಚಾಯ್ತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
Last Updated 17 ಸೆಪ್ಟೆಂಬರ್ 2013, 9:03 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕುಡಿಯುವ ನೀರಿನ ಸೌಲಭ್ಯಕ್ಕಾಗಿ ನಿರ್ಮಾಣ ಮಾಡುವ ಟ್ಯಾಂಕ್, ಕಿರುನೀರು ಸರಬರಾಜು ಟ್ಯಾಂಕ್ ಹಾಗೂ ಪೈಪ್‌ಲೈನ್ ಅಳವಡಿಕೆಯಂತಹ ಕಾಮಗಾರಿಗಳನ್ನು ಏಕಕಾಲದಲ್ಲೇ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೨೦೧೩-–೧೪ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮೊದಲನೇ ತ್ರೈಮಾಸಿಕ ಹಾಗೂ ಆಗಸ್ಟ್-೨೦೧೩ರ ಅಂತ್ಯದವರೆಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಮಗಾರಿ ಶೀಘ್ರ ಮುಗಿಸಿ’
’ಒಂದೊಂದು ಟ್ಯಾಂಕ್ ನಿರ್ಮಾಣಕ್ಕೆ ನಾಲ್ಕೈದು ವರ್ಷ ತೆಗೆದುಕೊಳ್ಳುತ್ತೀರಿ. ಒಂದೊಂದು ಕಾಮಗಾರಿ ಪೂರ್ಣಗೊಳ್ಳುವುದರ ಒಳಗೆ ಒಂದೊಂದು ಕುಸಿದಿರುತ್ತವೆ.  ಇನ್ನು ಮುಂದೆ ಅಂಥ ಘಟನೆಗಳು ನಡೆಯಕೂಡದು. ಶಾಲಾಕಟ್ಟಡ, ಸರ್ಕಾರಿ ಕಚೇರಿ, ಯಾವುದೇ ಕಾಮಗಾರಿಯಾಗಲಿ ಆರು ತಿಂಗಳೊಳಗೆ ಪೂರ್ಣಗೊಳ್ಳಬೇಕು. ಅದಕ್ಕೆ ಎಷ್ಟು ಬೇಕಾದರೂ ಹಣ ಖರ್ಚಾಗಲಿ’ ಎಂದು ಸಚಿವರು ತಿಳಿಸಿದರು.

‘ಕಾಮಗಾರಿಗಳಲ್ಲಿ ಗುಣಮಟ್ಟದ ಕೊರತೆ ಇದೆ. ನಾವೇನು ನಿಮ್ಮಿಂದಾಗಲಿ, ಗುತ್ತಿಗೆ ದಾರರಿಂದ ಪರ್ಸೆಂಟೇಜ್ ಕೇಳುತ್ತಿಲ್ಲ. ಮಾಡುವ ಕೆಲಸ ಪರಿಶುದ್ಧವಾಗಿರಲಿ. ನೀವೇನಾದರೂ ಗುಣಮಟ್ಟದ ಕಾಮಗಾರಿ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಉತ್ತಮ ಕಂಪೆನಿಗಳಿಂದ ಟೆಂಡರ್ ಕರೆದು ಅವರಿಗೆ ಗುತ್ತಿಗೆ ಕೊಡುತ್ತೇವೆ’ ಎಂದು ಭೂ ಸೇನೆ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರತ್ಯೇಕ ವರದಿ ನೀಡಿ
ಮೂರು ತಿಂಗಳಿಂದ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮುರು, ಹೊಸದುರ್ಗ ಮತ್ತು ಚಿತ್ರದುರ್ಗದ ಕೆಲ ಹೋಬಳಿಗಳಲ್ಲಿ ಮಳೆಯ ಕೊರತೆಯಿಂದಾಗಿ ೨೮೨ ಹಳ್ಳಿಗಳಲ್ಲಿ ೧೭,೫೦೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್.ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿದರು.

ಶಾಸಕ ಬಿ.ಜಿ.ಗೋವಿಂದಪ್ಪ, ‘ಮೂರು ತಿಂಗಳು ಒಣಗಿದ ಫಸಲಿಂದ ಯಾವುದೇ ರೀತಿಯ ಫಲ ರೈತರಿಗೆ ಲಭ್ಯವಾಗುವುದಿಲ್ಲ. ಮಳೆ ಬಂದ ತಕ್ಷಣ ಬರ ಪರಿಸ್ಥಿತಿ ಹೇಗೆ ಕಡಿಮೆಯಾಗುತ್ತದೆ. ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ ಸತ್ಯಕ್ಕೆ ದೂರವಾಗಿದೆ. ಬರ ಪೀಡಿತ ಪ್ರದೇಶಗಳಲ್ಲಿನ ರೈತರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡುವ ಕೆಲಸ ಮಾಡಬೇಕು ಎಂದು ಸಚಿವರಲ್ಲಿ ಅವರು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಎರಡರಿಂದಲೂ ಬೆಳೆ ಹಾನಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವರದಿ ಸಿದ್ಧಪಡಿಸಿ. ಸರ್ಕಾರದೊಂದಿಗೆ ಚರ್ಚಿಸಿ ಪರಿಹಾರದ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ನಿಯಮ ಸಡಿಲಿಕೆಗೆ ಚಿಂತನೆ
‘ಒಂದು ಲಕ್ಷದ ಮೇಲಿನ ಎಲ್ಲ ಕಾಮಗಾರಿಗಳಿಗೆ ಟೆಂಡರ್ ಕರೆದು ಕೆಲಸ ಮಾಡಬೇಕೆಂದು ನಿಯಮವಿದೆ. ಇದನ್ನು ೫ ಲಕ್ಷದವರೆಗೆ ಸಡಿಲಿಕೆ ಮಾಡುವ ಅಗತ್ಯವಿದೆ’ ಎಂದು ಶಾಸಕ ಗೋವಿಂದಪ್ಪ ಸಚಿವರನ್ನು ಕುಟುಕಿದರು.

ಇದಕ್ಕೆ ಉತ್ತರ ನೀಡಿದ ಸಚಿವರು, ‘ಈಗಿನ ನಿಯಮಗಳು, ಹಿಂದಿನ ನಿಯಮಗಳ ಬಗ್ಗೆ ಮಾಹಿತಿ ಕೊಡಿ. ಈ ಬಗ್ಗೆ ಅಧ್ಯಯನ ಮಾಡಿ, ಸಚಿವ ಸಂಪುಟದ ಸಹದ್ಯೋಗಿಗಳೊಂದಿಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುವುದಾಗಿ’ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಮಾತನಾಡಿ, ಮೊಳಕಾಲ್ಮುರು ತಾಲೂಕಿನಲ್ಲಿ ಫ್ಲೋರೈಡ್ ಪ್ರಮಾಣ ಎಷ್ಟರ ಮಟ್ಟಿಗೆ ಇದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಎಂ.ನಾರಾಯಣಸ್ವಾಮಿ, ಕುಡಿಯುವ ನೀರಿನಲ್ಲಿನ ಫ್ಲೋರೈಡ್ ಅಂಶದ ಪರೀಕ್ಷೆ ಮಾಡಿಸಿ ಬಹಳ ದಿನಗಳಾಗಿವೆ. ಮಳೆ ಬಂದ ನಂತರ ನೀರಿನಲ್ಲಿನ ರಾಸಾಯನಿಕ ಅಂಶಗಳು ಕಡಿಮೆಯಾಗಿರುತ್ತವೆ. ಇನ್ನೂ ತೋಟಗಾರಿಕೆ ಹೆಚ್ಚಾಗಿರುವ ಹೊಸದುರ್ಗ ಭಾಗಗಳಲ್ಲಿ ನೈಟ್ರೇಟ್ ಅಂಶವೂ ಸೇರಿಕೊಂಡಿರುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಾಲ್ಲೂಕು ಕೇಂದ್ರದಲ್ಲೇ ಸಭೆ
ಜಿಲ್ಲಾ ಕೇಂದ್ರದಲ್ಲಿ ಸಭೆ ಮಾಡುವುದರಿಂದ ಸಮಗ್ರವಾಗಿ ವಿಚಾರಗಳನ್ನು ಚರ್ಚಿಸಲು ಸಾಧ್ಯವಿಲ್ಲ.  ಬದಲಾಗಿ ತಾಲ್ಲೂಕು ಮಟ್ಟದಲ್ಲಿ ಸಭೆ ಕರೆದು ಅಲ್ಲಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ಬರುವಂತೆ ನೋಡಿಕೊಳ್ಳಿ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಜಿಲ್ಲಾಧಿಕಾರಿ, ಹಾಗೂ ಸಿಇಒ ಅವರಿಗೆ ಸೂಚನೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಡಿಸಿ ಇಕ್ಕೇರಿ, ಮುಂದಿನ ದಿನಗಳಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ತಾಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ನಡೆಸಲಾಗುವುದು. ಅಲ್ಲಿ ನಡೆಯುವ ಸಭೆಗೆ ಅಧಿಕಾರಿಗಳು ಮಾಹಿತಿಯೊಂದಿಗೆ ಬರಬೇಕು ಎಂದು ಆದೇಶಿಸಿದರು.

ಸಬ್ಸಿಡಿಯಲ್ಲಿ ಭ್ರಷ್ಟಾಚಾರ
‘ತೋಟಗಾರಿಕೆ ಇಲಾಖೆಯಲ್ಲಿ ಎಲ್ಲ ಏಜೆನ್ಸಿಗಳ ಮೂಲಕ ಕೆಲಸವಾಗುತ್ತಿದೆ. ಹನಿ ನೀರಾವರಿ, ದಾಳಿಂಬೆ, ಬಾಳೆ ಇತ್ಯಾದಿ ಬೆಳೆಗಳಿಗೆ ನೀಡುವ ಸಬ್ಸಿಡಿಯಲ್ಲಿ ಭ್ರಷ್ಟಾಚಾರವಾಗುತ್ತಿದೆ. ಪರಿಣಾಮವಾಗಿ ರೈತರು ನೇರವಾಗಿ ಇಲಾಖೆಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಶಾಸಕ ಗೋವಿಂದಪ್ಪ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ದೇವರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಹಾಲು ಪ್ಯಾಕಿಂಗ್ ಘಟಕ ಸ್ಥಾಪನೆಗೆ ಚಿಂತನೆ
ಜಿಲ್ಲೆಯಲ್ಲಿ ೬೦ ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ೨೭ ಸಾವಿರ ಲೀ. ಬೇಡಿಕೆ ಇದೆ. ಇಲ್ಲಿಂದ ಶಿವಮೊಗ್ಗಕ್ಕೆ ಹಾಲು ಕಳುಹಿಸಿ ಅಲ್ಲಿ ಪ್ಯಾಕಿಂಗ್ ಆದ ನಂತರ ಇಲ್ಲಿಗೆ ಬರುತ್ತಿದೆ ಎಂದು ಕೆಎಂಎಫ್ ಚಿತ್ರದುರ್ಗ ವ್ಯವಸ್ಥಾಪಕರು ಸಭೆಗೆ ಮಾಹಿತಿ ನೀಡಿದರು. ಇದನ್ನು ಕೇಳಿದ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಹಾಗೂ ಗೋವಿಂದಪ್ಪ, ನಮ್ಮ ಜಿಲ್ಲೆಯಲ್ಲಿಯೇ ಯಾಕೆ ಪ್ಯಾಕಿಂಗ್ ಘಟಕ ಸ್ಥಾಪಿಸಬಾರದು ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಸಚಿವ ಎಚ್.ಆಂಜನೇಯ ಜಿಲ್ಲೆಯಲ್ಲಿ ಪ್ಯಾಕಿಂಗ್ ಘಟಕ ಸ್ಥಾಪಿಸಲು ಎಷ್ಟು ಭೂಮಿ ಬೇಕು, ಎಷ್ಟು ವೆಚ್ಚವಾಗುತ್ತದೆ ಇತ್ಯಾದಿ ಮಾಹಿತಿಗಳನ್ನು ೨ ದಿನಗಳ ಒಳಗೆ ಸಲ್ಲಿಸುವಂತೆ ತಿಳಿಸಿದರು.

ಜಿಲ್ಲೆ 27ನೇ ಸ್ಥಾನದಲ್ಲಿದೆ
ಪಂಚತಂತ್ರದಲ್ಲಿ ಚಿತ್ರದುರ್ಗದ ಮಾಹಿತಿಗಳು ಸರಿಯಾಗಿ ಅಪ್ ಡೇಟ್ ಆಗುತ್ತಿಲ್ಲ. ಎಲ್ಲಾ ತಾಲ್ಲೂಕುಗಳಲ್ಲಿಯೂ ಇದೇ ಸಮಸ್ಯೆಯಿದೆ.  ಜಿಲ್ಲೆ ಅಭಿವೃದ್ಧಿಯಲ್ಲಿ ೨೭ನೇ ಸ್ಥಾನದಲ್ಲಿದೆ ಎಂದು ಶಾಸಕ ಗೋವಿಂದಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಬಡವರ ಉದ್ಧಾರಕ್ಕಾಗಿ ಅನುದಾನಗಳನ್ನು ನೀಡುತ್ತದೆ. ಆದರೆ, ನೀವು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದೀರಿ, ಜಿಲ್ಲೆಯ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಿಇಒ ವಿರುದ್ಧ ಹರಿ ಹಾಯ್ದರು.

ಇದಕ್ಕೆ ದನಿಗೂಡಿಸಿದ ಜಿಲ್ಲಾಧಿಕಾರಿ ಇಕ್ಕೇರಿ ‘ಸಾಮರ್ಥ್ಯವಿದ್ದರೆ ಸರ್ಕಾರಿ ಉದ್ಯೋಗದಲ್ಲಿದ್ದು ಕೆಲಸ ಮಾಡಿ. ಇಲ್ಲದಿದ್ದರೆ, ಮನೆಗೆ ಹೋಗಿ. ತಪ್ಪು ಮಾಹಿತಿ ಗಳನ್ನು ಸರಿಯಾಗಿ ಕೊಡುವ ಪ್ರಯತ್ನ ಮಾಡಬೇಡಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT