ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಚರಂಡಿಗೆ...

Last Updated 3 ಜೂನ್ 2011, 5:55 IST
ಅಕ್ಷರ ಗಾತ್ರ

ಹಿರೇಕೆರೂರ: ತಾಲ್ಲೂಕಿನ ವಡೆಯರಹಳ್ಳಿ ಗ್ರಾಮದಲ್ಲಿ ನಿತ್ಯ ಕುಡಿಯುವ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿಯ ದಿವ್ಯ ನಿರ್ಲಕ್ಷ್ಯಕ್ಕೆ ಜೀವಜಲ ಪೋಲಾಗುತ್ತಿದೆ.
ಆಲದಗೇರಿ ಗ್ರಾ.ಪಂ. ವ್ಯಾಪ್ತಿಯ ವಡೆಯರಹಳ್ಳಿ ಗ್ರಾಮವು ಸುಮಾರು 400 ಜನ ಸಂಖ್ಯೆ ಹೊಂದಿದೆ.
 
ಈ ಹಳ್ಳಿಗೆ ಕುಡಿಯುವ ನೀರು ಪೂರೈಸಲು ಸುಮಾರು 2 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ 3 ಕಿ.ಮೀ. ದೂರದಲ್ಲಿ ಕೋಡ ಗ್ರಾಮದ ಸಮೀಪ ಕೊಳವೆ ಬಾವಿ ಕೊರೆದು, ಪೈಪ್‌ಲೈನ್ ಕಾಮಗಾರಿ ನಿರ್ವಹಿಸಿದೆ.

ಇದಕ್ಕೆ ಐದಾರು ಲಕ್ಷ ರೂಪಾಯಿ ಖರ್ಚು ಮಾಡಲಾಗಿದ್ದು, ಅಲ್ಲಿಂದ ನೀರು ಪೂರೈಕೆ ಮಾಡಲಾಗಿದೆ. ಗ್ರಾ.ಪಂ. ಪಂಪ್ ಅಳವಡಿಸಿದೆ. ವಿದ್ಯುತ್ ಸರಬರಾಜು ನಿಂತಾಗ ಮಾತ್ರವೇ ಕೊಳವೆ ಬಾವಿಗೆ ವಿರಾಮ. ಉಳಿದಂತೆ ಸರಬರಾಜು ಇದ್ದಾಗ ನೀರು ಟ್ಯಾಂಕ್ ತುಂಬಿ ನಿರಂತರವಾಗಿ ಹೊರ ಚೆಲ್ಲುತ್ತಾ ಕಾಲುವೆ ಸೇರುತ್ತಿದೆ. ಇದರಿಂದ ಅಂತರ್ಜಲ ಹಾಗೂ ವಿದ್ಯುತ್ ಅನವಶ್ಯಕವಾಗಿ ಪೋಲಾಗುತ್ತಿದ್ದರೂ ಇದನ್ನು ಯಾರೂ ಗಮನಿಸುತ್ತಿಲ್ಲ.

`ಪಂಚಾಯಿತಿ ಸ್ವತ್ತಿನ ಬಗ್ಗೆ ಗ್ರಾಮಸ್ಥರಿಗೆ ಜವಾಬ್ದಾರಿ ಅಗತ್ಯ. ಎಲ್ಲ ಕೆಲಸವನ್ನು ಗ್ರಾ.ಪಂ. ಮಾಡಲು ಸಾಧ್ಯವಿಲ್ಲ; ನೀರು ಪೋಲಾಗುತ್ತಿರುವ ಕುರಿತು ಸ್ಥಳೀಯರಿಗೆ ಅನೇಕ ಬಾರಿ ತಿಳಿವಳಿಕೆ ಹೇಳಿದ್ದರೂ ಯಾವುದೇ ಉಪಯೋಗವಾಗಿಲ್ಲ ಎನ್ನುತ್ತಾರೆ~ ಆಲದಗೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶಗೌಡ ಗೌಡರ.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಈಚೆಗೆ ನಡೆದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೀದಿ ದೀಪ ನಿರ್ವಹಣೆ ಕಾರ‌್ಯಾಗಾರದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಓಲೇಕಾರ, `ಅನೇಕ ಕಡೆಗಳಲ್ಲಿ ರಾತ್ರಿ ವೇಳೆ ಸತತವಾಗಿ ನೀರು ಹರಿದು ಪೋಲಾಗಿ ಹೋಗುತ್ತಿದೆ.

ಅಂತರ್ಜಲಮಟ್ಟ ಕುಸಿತಕ್ಕೆ ಇದು ಕಾರಣವಾಗುತ್ತಿದ್ದು, ಇಂಥ ಪ್ರಕರಣಗಳು ಮತ್ತೆ ಮತ್ತೆ ನಡೆದರೆ ಸಂಬಂಧಪಟ್ಟ ವಾಟರ್‌ಮನ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು~ ಎಂದು ಎಚ್ಚರಿಸಿದ್ದರು.
ಹಿರೇಕೆರೂರು- ರಾಣೇಬೆನ್ನೂರು ಮುಖ್ಯ ರಸ್ತೆಯಲ್ಲಿ ಬರುವ ವಡೆಯರಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ಹೀಗೆ ನೀರು ಪೋಲಾಗುತ್ತಿರುವುದನ್ನು ನಿತ್ಯ ಹಗಲು-ರಾತ್ರಿ ಕಾಣಬಹುದು. ಇದಕ್ಕೆ ಕಡಿವಾಣ ಯಾವಾಗ ಬೀಳಲಿದೆಯೊ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT