ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು, ಬಿತ್ತನೆಬೀಜ ಒದಗಿಸಲು ಆಗ್ರಹ

Last Updated 4 ಜುಲೈ 2012, 8:55 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಪಂಚಾಯ್ತಿಯ ವಿವಿಧ ಖಾತೆಗಳಲ್ಲಿರುವ ಮೊತ್ತ ಎಷ್ಟು, ರೈತರಿಗೆ ಸರಿಯಾಗಿ ಬಿತ್ತನೆ ಬೀಜ ಯಾಕೆ ವಿತರಿಸಿಲ್ಲ? ಕುಡಿಯುವ ನೀರಿನ ಕಾಮಗಾರಿಗಳು ಸರಿಯಾಗಿ ಅನುಷ್ಠಾನಗೊಂಡಿಲ್ಲ. ಅಧಿಕಾರಿಗಳು ತಮಗೆ ತೋಚಿದಂತೆ ಕಾಮಗಾರಿ ನಡೆಸುತ್ತಾರೆ, ತಮಗೆ ಮಾಹಿತಿ ನೀಡುತ್ತಿಲ್ಲ...

- ಹೀಗೇ ಚರ್ಚೆ, ದೋಷಾರೋಪ, ಟೀಕೆ, ಕ್ರಮಕ್ಕೆ ಒತ್ತಾಯ... ಹೀಗೆ ತೀವ್ರ ಚರ್ಚೆಗಳು, ಮಾಮೂಲು ವರಸೆಗಳು ಕಂಡುಬಂದದ್ದು ಮಂಗಳವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ.

ಈ ಬಾರಿ ಕಾಡಜ್ಜಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸಭೆ ನಡೆಯಿತು.
ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಗೈರು ಹಾಜರಾದದ್ದಕ್ಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ಸರ್ಕಾರಕ್ಕೆ ವರದಿ ಮಾಡಬೇಕು ಎಂದು ಒತ್ತಾಯಿಸಿದರು. ಅವರು ಯಾರು ಎಂದುನೋಡಿಯೇ ಇಲ್ಲ. ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹಲವಾರು ಯೋಜನೆಗಳು ಆ ಇಲಾಖೆ ಮೂಲಕ ಅನುಷ್ಠಾನಗೊಳ್ಳುತ್ತದೆ. ಹೀಗೆ ಗೈರಾದರೆ ಹೇಗೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯರ ಬೇಸರಕ್ಕೆ ಸಮಜಾಯಿಷಿ ನೀಡಿದ ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ, ಅವರ ಗೈರು ಹಾಜರಿಗೆ ಷೋಕಾಸ್ ನೋಟಿಸ್ ಕೊಡೋಣ. ಅದಕ್ಕೂ ಸ್ಪಂದಿಸದಿದ್ದರೆ ಸರ್ಕಾರಕ್ಕೆ ಬರೆಯಬಹುದು ಎಂದರು
ಬಿಳಿಚೋಡು, ಹಾಲೇಕಲ್ಲು, ತುಪ್ಪದಹಳ್ಳಿ ಕೆರೆಗಳ ಹೂಳು ಎತ್ತಿಲ್ಲ. ಕೆರೆಗಳ ಪುನರುಜ್ಜೀವನ ಯೋಜನೆ ಅಡಿ ಕಾಮಗಾರಿ ನಡೆಸಬೇಕು ಎಂದು ಸದಸ್ಯರು ಕೋರಿದರು.

ಜಿ.ಪಂ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಭಾನುವಳ್ಳಿಯಲ್ಲಿ ರಾಜೀವಗಾಂಧಿ ಸಬ್‌ಮಿಷನ್ ಯೋಜನೆ ಅಡಿ ನಡೆದ ಕಾಮಗಾರಿಗಳು ಸರಿಯಿಲ್ಲ. ಆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆದಾರರನ್ನು ಎರಡುದಿನದಲ್ಲಿ ಕರೆಸಿ ಚರ್ಚೆ ಮಾಡಿ ಬಳಿಕ ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ತೀರ್ಮಾನಿಸಬಹದು ಎಂದರು.

ಬಿಕ್ಷೆ ಬೇಡಬೇಕೇ?
ತಿಮ್ಲಾಪುರದಲ್ಲಿ  ಕುಡಿಯುವ ನೀರು ಬಿಡುಗಡೆಯಾಗಿಲ್ಲ. ಕೆರೆಗಳ ಹೂಳು ಸರಿಯಾಗಿ ತೆಗೆದಿಲ್ಲ ಎಂದು ಗುರುಮೂರ್ತಿ ಅವರು ಆಕ್ಷೇಪಿಸಿದರೆ, ಬಸವನಗೌಡ ಅವರು ಜಿ.ಪಂ.ನಲ್ಲಿರುವ ಹಣಕಾಸಿನ ಬಗ್ಗೆ ಯಾವ ಅಧಿಕಾರಿಯೂ ವಾಸ್ತವ ತಿಳಿಸುತ್ತಿಲ್ಲ. ನಾವೇನು ಅಧಿಕಾರಿಗಳ ಬಳಿ ಬಿಕ್ಷೆ ಬೇಡಬೇಕೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹನಾ ರವಿ ಮಾತನಾಡಿ, ಕೃಷಿ ಇಲಾಖೆಯ ಸೌಲಭ್ಯದ ಬಗ್ಗೆ ರೈತರಿಗೆ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ ಎಂದರು. ರೈತರಿಗೆ ಶೇ 25 ರಷ್ಟು ಮಾತ್ರ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಸದಸ್ಯೆಯೊಬ್ಬರು ಸಭೆಯ ಗಮನಕ್ಕೆ ತಂದರು.

ಜಂಟಿ ಕೃಷಿ ನಿರ್ದೇಶಕ ಡಾ.ಆರ್.ಜಿ. ಗೊಲ್ಲರ್ ಪ್ರತಿಕ್ರಿಯಿಸಿ, ಕೃಷಿ ಯಂತ್ರೋಪಕರಣ ವಿತರಣೆ ಸಬ್ಸಿಡಿ ಬಗ್ಗೆ ಸ್ಪಷ್ಟ ಆದೇಶವಿದೆ. ಆದರೆ, ಪೂರಕ ಉಪಕರಣಗಳನ್ನು ಮರುಬಳಕೆ ಮೂಲಕ ಬಣ್ಣ ಬಳಿದು ರೈತರಿಗೆ ಮಾರಾಟ ಮಾಡಿದ ಪ್ರಕರಣಗಳು ನಡೆದಿವೆ. ಅದಕ್ಕಾಗಿ ಅವುಗಳಿಗೆ ನೀಡಬಹುದಾದ ಸಬ್ಸಿಡಿ ನಿಲ್ಲಿಸಲಾಗಿದೆ. ಜಿಲ್ಲೆಗೆ 4 ಸಾವಿರ ಕ್ವಿಂಟಲ್ ಬತ್ತದ ಬಿತ್ತನೆ ಬೀಜ ಬಂದಿದೆ. ಈಗಾಗಲೆ 3,500 ಕ್ವಿಂಟಲ್ ಬಿತ್ತನೆ ಆಗಿದೆ. ಮಳೆ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ವಿತರಣೆಗೂ ಆತಂಕ ಎದುರಾಗಿದೆ ಎಂದರು.

ವೀರೇಶ್ ಹನಗವಾಡಿ ಪ್ರತಿಕ್ರಿಯಿಸಿ, ಮಳೆ ಬರುತ್ತದೆ. ಅಣೆಕಟ್ಟು ತುಂಬುತ್ತದೆ ಎಂಬ ಆಶಾಭಾವ ಇರಲಿ. ಕೊರತೆಯಾಗಿರುವ ಬಿತ್ತನೆ ಬೀಜ ಕೂಡಲೇ ತರಿಸುವ ವ್ಯವಸ್ಥೆ ಮಾಡಿ ಎಂದರು. ಈಶ್ವರಪ್ಪ ಅವರು,  ಮೆಕ್ಕೆಜೋಳ ಬಿತ್ತನೆಬೀಜ ವಿತರಿಸಿದ್ದು ಕಡಿಮೆಯಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚಿದಾನಂದ ಐಗೂರು, ಉಪಾಧ್ಯಕ್ಷೆ ಯಶೋದಮ್ಮ ಹಾಲೇಶಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ವೀರೇಂದ್ರಪಾಟೀಲ್, ಅಂಬಿಕಾ ರಾಜಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT