ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಸಮಸ್ಯೆ: ಬಿಬಿಎಂಪಿ ವಿರುದ್ಧ ಟೀಕೆ

Last Updated 26 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆಯಲ್ಲಿ ಯಾವಾಗಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ನಗರದ ಕೆಲ ಬಡಾವಣೆಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಆದರೆ ಇದನ್ನು ಬಗೆಹರಿಸಲು ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ.

ಕೊಳವೆ ಬಾವಿ ತೋಡಲು ಮತ್ತು ಮೋಟಾರ್ ಅಳವಡಿಸಲು ಬಿಬಿಎಂಪಿ ಪ್ರತಿ ವಾರ್ಡ್‌ಗೆ 25 ಲಕ್ಷ ರೂಪಾಯಿ ನೀಡಿದೆ. ಆದರೆ ಈ ಯೋಜನೆ ಬಗ್ಗೆ ಅಧಿಕಾರಿಗಳಲ್ಲಿ ಸರಿಯಾದ ಮಾಹಿತಿಯೇ ಇಲ್ಲ. ನಗರದಲ್ಲಿ ಕೊಳವೆ ಬಾವಿ ತೋಡಿದರೂ ನೀರು ಬರುತ್ತದೆ ಎಂಬ ಖಾತ್ರಿ ಇಲ್ಲದಂತಾಗಿದೆ.

`ಕೊಳವೆ ಬಾವಿ ಕೊರೆಸಲು ಪಾಲಿಕೆ ಟೆಂಡರ್ ಕರೆದಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ~ ಎಂದು ಬೇಗೂರು ವಾರ್ಡ್ ಸದಸ್ಯ ಎಂ.ಶ್ರೀನಿವಾಸ್ ಅವರು ತಿಳಿಸಿದರು.

`ನನ್ನ ವಾರ್ಡ್‌ನಲ್ಲಿ 110 ಗ್ರಾಮಗಳು ಬರುತ್ತವೆ. ಆ ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆಯಾಗಲು ಇನ್ನೂ ಬಹಳ ಕಾಲ ಬೇಕಾಗುತ್ತದೆ. ಒಂದು ಲಕ್ಷ ಜನಸಂಖ್ಯೆ ಇರುವ ವಾರ್ಡ್‌ಗೆ ನೀರು ಪೂರೈಸಲು ಒಂದು ನೀರಿನ ಟ್ಯಾಂಕರ್ ನೀಡಲಾಗಿದೆ~ ಎಂದು ಅವರು ಹೇಳಿದರು.

`ಕೊಳವೆ ಬಾವಿ ಕೊರೆಸಲು ಹಣ ಬಿಡುಗಡೆ ಮಾಡಲಾಗಿದೆ. ಹಲವು ಸದಸ್ಯರು ಈಗಾಗಲೇ ಹಣ ಬಳಸಿಕೊಂಡಿದ್ದಾರೆ. ಎಲ್ಲ ಸದಸ್ಯರೂ ಹಣ ಬಳಸಿಕೊಂಡಿದ್ದಾರೆಯೇ ಎಂಬ ಬಗ್ಗೆ ಗೊತ್ತಿಲ್ಲ. ಗಾಂಧಿನಗರ, ಜಯನಗರ, ವಿಜಯನಗರಕ್ಕೆ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ~ ಎನ್ನುತ್ತಾರೆ ಉಪ ಮೇಯರ್ ಎಸ್.ಹರೀಶ್.

`ಬೇರೆ ಕಾಮಗಾರಿಗಳಂತೆಯೇ ಕೊಳವೆ ಬಾವಿ ತೋಡಲು ಒಪ್ಪಿಗೆ ಸಿಗಬೇಕಿದೆ. ತುರ್ತು ಕಾಮಗಾರಿಗಳ ಅಡಿಯಲ್ಲಿ ಸದಸ್ಯರು ಕಾಮಗಾರಿ ಕೈಗೊಂಡು ಅದರ ಬಿಲ್ ನೀಡಿ ಹಣ ಮಂಜೂರು ಮಾಡಿಸಿಕೊಳ್ಳಬಹುದು~ ಎಂದು ವಾರ್ಡ್ ಕಾಮಗಾರಿ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದರು.

`ಕೆಲ ಬಡಾವಣೆಗಳಲ್ಲಿ ಕೊಳವೆ ಬಾವಿ ಕೊರೆಯಲಾಗಿದೆ. ಮೋಟಾರ್ ಇಳಿಸುವುದು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ. 3 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆ. ಆದರೆ ಗುತ್ತಿಗೆದಾರರು ಕೆಲಸವನ್ನು ಪೂರ್ಣಗೊಳಿಸಿಲ್ಲ. ಇದರಿಂದಾಗಿ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ.

ನಿಯಮದ ಪ್ರಕಾರ ಬಿಬಿಎಂಪಿ ಕೊಳವೆ ಬಾವಿ ತೋಡಿದ ನಂತರ ನಿರ್ವಹಣೆಯನ್ನು ಜಲಮಂಡಳಿಗೆ ವಹಿಸಬೇಕು. ಆದರೆ ಈ ಕೆಲಸವನ್ನೂ ಸರಿಯಾಗಿ ಮಾಡುತ್ತಿಲ್ಲ~ ಎಂದು ರಾಮಮೂರ್ತಿನಗರ ನಿವಾಸಿ ಅಂಜನಪ್ಪ  ಹೇಳುತ್ತಾರೆ.

`ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಕೊಳವೆ ಬಾವಿಗಳು ಕೆಲಸ ಮಾಡುತ್ತಿಲ್ಲ. ಇದನ್ನು ದುರಸ್ತಿ ಮಾಡಲು ಎಂಜಿನಿಯರ್ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ~ ಎಂದು  ಅವರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT