ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿವ ನೀರಿಗಾಗಿ ಪುರಸಭೆಗೆ ಮುತ್ತಿಗೆ

Last Updated 5 ಏಪ್ರಿಲ್ 2013, 5:58 IST
ಅಕ್ಷರ ಗಾತ್ರ

ಚಿಕ್ಕೋಡಿ: ಪಟ್ಟಣದಲ್ಲಿ ನಿಯಮಿತವಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಗುರುವಾರ ಸಾರ್ವಜನಿಕರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಪುರಸಭೆಯ ಕಚೇರಿ ಆವರಣದಲ್ಲಿ ಜಮಾಯಿಸಿದ ನೂರಾರು ಸಾರ್ವಜನಿಕರ, ಸಮರ್ಪಕವಾಗಿ ನೀರು ಪೂರೈಕೆ ಮಾಡದ ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ನೀರು ಪೂರೈಕೆಗೆ ಅಡೆತಡೆ ಉಂಟು ಮಾಡಿದ ಅಧಿಕಾರಿಗಳ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ,  ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ರುದ್ರೇಶ ಘಾಳಿ ಅವರಿಗೆ ಮನವಿ ಸಲ್ಲಿಸಿದರು.

ನಿತ್ಯ ನೀರಿಗಾಗಿ ಪರದಾಡುತ್ತಿರುವ ಪಟ್ಟಣದ ವಿವಿಧ ಬಡಾವಣೆಗಳ ಮಹಿಳೆಯರು ಚಿಕ್ಕೋಡಿ ಪಟ್ಟಣದಲ್ಲಿ 15-20 ದಿವಸಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ಈ ನೀರು ಕೂಡ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಚಾಲನೆ ಸಿಕ್ಕರೂ, ನೀರು ಪೂರೈಸಲು ಅಡ್ಡಿ ಪಡಿಸಲಾಗುತ್ತಿದೆ ಎಂದು ದೂರಿದರು.

ಮಾಂಜರಿ ಬಳಿ ಕೃಷ್ಣಾ ನದಿಯಿಂದ ಚಿಕ್ಕೋಡಿ ಜಲ ಶುದ್ಧೀಕರಣ ಘಟಕಕ್ಕೆ ನೀರು ಪೂರೈಸಲು ಆದೇಶವಿದ್ದರೂ ಚುನಾವಣಾ ನೀತಿ ಸಂಹಿತೆ ಹೆಸರಿ ನಲ್ಲಿ ಇದನ್ನು ತಡೆಹಿಡಿಯಲಾಗಿದೆ. ಇದರಿಂದ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗು ತ್ತಿದೆ ಎಂದು ಅಳಲು ತೋಡಿಕೊಂಡರು.

ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ರುದ್ರೇಶ ಘಾಳಿ, ಸಾರ್ವಜನಿಕರ ಮನವಿಗೆ ಸ್ಪಂದಿಸಲು ಸಿದ್ದ. ಆದರೆ, ಚಿಕ್ಕೋಡಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಹೊಸದಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೈಕೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಕೊಳ್ಳಲಾಗುವುದು. ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಪುರಸಭೆ ಸದಸ್ಯರಾದ ಪ್ರಭಾಕರ ಕೋರೆ, ಎನ್. ಆರ್. ನೇರ್ಲೀಕರ, ರಂಜೀತ ಸಂಗ್ರೋಳೆ, ಪುಟ್ಟು ಕವಟಗಿಮಠ, ಶಾಮ ರೇವಡೆ, ಸಾಗರ ಪಾಮದಿನ್ನಿ, ಆರ್.ಬಿ. ಸಂಗ್ರೋಳ್ಳಿ, ರವಿ ಮಾಳಿ, ಶೇಖರ ಮುಂಡೆ, ರಮೇಶ ಚೌಡನ್ನವರ, ರಾಜು ಮಡಿವಾಳ, ಮುದ್ದುಸರ ಜಮಾದಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT